'ಲೋಕ'ದರ್ಶನ
ಕಾಂಗ್ರೆಸ್-ಎನ್‌ಸಿಪಿ ಸಮಿತಿ ರಚನೆ
ಮುಂಬೈ: ಆಂತರಿಕ ಕಲಹ ಮತ್ತು ಭಿನ್ನಾಭಿಪ್ರಾಯಗಳನ್ನು ತಡೆಗಟ್ಟಲು ಕಾಂಗ್ರೆಸ್ ಮತ್ತು ಎನ್‌ಸಿಪಿ 10 ಸದಸ್ಯರ ಸಮಿತಿ ರಚಿಸಿದೆ. ಕಾಂಗ್ರೆಸ್ ಅನ್ನು ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್,ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಾಣಿಕ್‌ರಾವ್ ಠಾಕ್ರೆ ಪ್ರತಿನಿಧಿಸುತ್ತಾರೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದರು. ಎನ್‌ಸಿಪಿಯಿಂದ ಅಜಿತ್ ಪವಾರ್, ಮಹಾರಾಷ್ಟ್ರ ಎನ್‌ಸಿಪಿ ಮುಖ್ಯಸ್ಥ ಭಾಸ್ಕರ್ ಜಾಧವ್ ಕಾರ್ಯಾಧ್ಯಕ್ಷ ಜಿತೇಂದ್ರ ಅಹ್ವಾದ್ ಮತ್ತು 2 ಸಚಿವರು ಸಮಿತಿಯ ಸದಸ್ಯರಾಗುತ್ತಾರೆ. 48 ಕ್ಷೇತ್ರಗಳಲ್ಲಿ ಉಂಟಾಗುವ 2 ಪಕ್ಷಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಸಹಾಯವಾಣಿಯೂ ತೆರೆಯಲಾಗಿದೆ.
ಪುತ್ರಿಯರ ನಡುವಿನ ಕದನ
ಮುಂಬೈ: ಉತ್ತರ ಕೇಂದ್ರ ಮುಂಬೈ ಲೋಕಸಭಾ ಚುನಾವಣೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಕುತೂಹಲ ಮೂಡಿಸಿದೆ. ಮಾಜಿ ಸಂಸದ ಸುನಿಲ್‌ದತ್ ಪುತ್ರಿ ಪ್ರಿಯಾದತ್ ಹಾಗೂ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಪೂನಂ ಮಹಾಜನ್ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಈ ಕ್ಷೇತ್ರ ಪುತ್ರಿಯರ ನಡುವಿನ ಕದನಕ್ಕೆ ಸಾಕ್ಷಿಯಾಗಲಿದೆ. ಪ್ರಿಯಾದತ್ ಹಾಲಿ ಸಂಸದೆಯಾಗಿದ್ದರೆ, ಪೂನಂಗಿದು ಮೊದಲ ಚುನಾವಣೆಯಾಗಿದೆ.
ಶಿವಸೇನೆ ವಕ್ತಾರ ಎನ್‌ಸಿಪಿಗೆ
ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಿಂದ ಇತ್ತೀಚೆಗಷ್ಟೇ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದ ಶಿವಸೇನೆ ವಕ್ತಾರ ರಾಹುಲ್ ನಾರ್ವೇಕರ್ ಸೋಮವಾರ ಎನ್‌ಸಿಪಿ ಸೇರಿದ್ದಾರೆ. ನಾರ್ವೇಕರ್ ಮವಾಲ್ ಕ್ಷೇತ್ರದಿಂದ ಎನ್‌ಸಿಪಿ ಟಿಕೆಟ್‌ನಡಿ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ. ನಾರ್ವೇಕರ್ ಅವರು ವಿಧಾನಪರಿಷತ್‌ನಿಂದ ನಾಮಪತ್ರ ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿ ಪಕ್ಷದ ವರಿಷ್ಠರೊಂದಿಗೆ ಮುನಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಎನ್‌ಸಿಪಿ ಸೇರಿದ್ದಾರೆ ಎಂದು ಹೇಳಲಾಗಿದೆ.