ಓದೋಕ್ ಬಾ ಅಂದ್ರೆ ಕೊಲ್ಲೋಕ್ ಬಂದ್ಲು ಬಾಲಕಿ!
ಶಿಕ್ಷಕರು 'ಬಾ ಮರಳಿ ಶಾಲೆಗೆ' ಎಂದರೆ..
ಬಂಟ್ವಾಳ: ಶಿಕ್ಷಕರು 'ಬಾ ಮರಳಿ ಶಾಲೆಗೆ' ಎಂದರೆ, ಆಕೆ 'ಕೈತಲ್ ಬತ್ತ್ಂಡ ಕೆರ್ಪೆ' (ಹತ್ತಿರ ಬಂದರೆ ಕೊಲ್ಲುತ್ತೇನೆ) ಎಂದಳು! ಹೌದು, ಈ ವಿದ್ಯಮಾನ ನಡೆದಿರುವುದು ಸುಳ್ಯ ತಾಲೂಕಿನಲ್ಲಿ. ದೀರ್ಘ ಗೈರು ಹಾಜರಿಯ ಬಾಲಕಿಯೊಬ್ಬಳನ್ನು ಬಾ ಮರಳಿ ಶಾಲೆಗೆ ಎಂದು ಕರೆತರಲು ಹೋದ ಶಾಲಾ ಶಿಕ್ಷಕಿಯರು ಬೇಲಿ ಹಾರಿ, ಗುಡ್ಡ, ಕಾಡು ಅಲೆದಾಡಿ ತ್ರಾಸ ಪಡಬೇಕಾಯಿತು.
ಹಲವು ದಿನಗಳಿಂದ ಬಾಲಕಿ ಶಾಲೆಗೆ ಗೈರಾಗಿದ್ದಳು. ಶಾಲೆಗೆ ಬಾರದ ಮಕ್ಕಳ ಬಗ್ಗೆ ನಿಗಾ ವಹಿಸುವಂತೆ ಶಿಕ್ಷಣ ಇಲಾಖೆ ಹಾಗೂ ಹೈಕೋರ್ಟ್ ಶಿಕ್ಷಕರು, ಅಧಿಕಾರಿಗಳ ಕಿವಿ ಹಿಂಡುತ್ತಿರುವುದರಿಂದ, ಆ ಶಾಲೆಯ ಶಿಕ್ಷಕಿಯರು ಕೆಲ ಮಕ್ಕಳ ಸೈನ್ಯದೊಂದಿಗೆ ಬಾಲಕಿಯನ್ನು ಶಾಲೆಗೆ ಕರೆ ತರಲು ಹೋಗಿದ್ದರು. ಮೊದಲ ಬಾರಿ ಆಕೆಯ ಮನೆಯಂಗಳಕ್ಕೆ ಹೋದಾಗ ಆಕೆ ಮನೆ ಹಿಂದಿನ ಗುಡ್ಡದಲ್ಲಿ ಅಡಗಿದ್ದಳು. ಶಿಕ್ಷಕಿಯರು ಹೆತ್ತವರಿಗೆ ಆರ್ಟಿಇ ಕಾಯ್ದೆಯಡಿ ಕಡ್ಡಾಯ ಶಿಕ್ಷಣದ ಮಹತ್ವ ಹಾಗೂ ಶಾಲೆಗೆ ಮಕ್ಕಳು ದೀರ್ಘ ಗೈರಾದರೆ ಪೋಷಕರೇ ಜವಾಬ್ದಾರರು ಎಂದು ತಿಳಿಸಿ, ಮಗಳನ್ನು ಶಾಲೆಗೆ ಕಳಿಸಿ ಎಂದು ವಿನಂತಿಸಿದ್ದರು.
ಎರಡು ದಿನ ಕಳೆದರೂ ಶಾಲೆಯತ್ತ ಹುಡುಗಿಯ ಸುಳಿವೇ ಇಲ್ಲ. ಅಪರೂಪಕ್ಕೊಮ್ಮೆ ಶಾಲೆಗೆ ಬರುವ ಬಾಲಕಿ, ಗೆಳತಿಯೊಬ್ಬಳ ನೋಟ್ ಪುಸ್ತಕವನ್ನೂ ತೆಗೆದುಕೊಂಡು ಹೋಗಿದ್ದಳು. ಅದನ್ನೂ ವಾಪಾಸು ಕೊಡದ ಹಿನ್ನೆಲೆಯಲ್ಲಿ ಗೆಳತಿಗೂ ಕಷ್ಟವಾಗಿತ್ತು. ಈ ಎಲ್ಲ ಕಾರಣಗಳಿಂದ ಇಬ್ಬರು ಮಕ್ಕಳೊಂದಿಗೆ ಶಿಕ್ಷಕಿಯರು ಬಾಲಕಿಯ ಮನೆಯಂಗಳಕ್ಕೆ ಕಾಲಿಡುತ್ತಲೇ, ಪಕ್ಕದಲ್ಲಿ ಉಪಯೋಗಿಸದೇ ಇದ್ದ ಶೌಚಾಲಯ ತೋರಿಸಿದ ಹುಡುಗಿಯ ತಾಯಿ, 'ಟೀಚರ್... ಆಕೆ ಅಲ್ಲಿದ್ದಾಳೆ' ಎಂದರು. ಶಿಕ್ಷಕಿಯರು ಅತ್ತ ತೆರಳಿದಾಗ ಬಾಗಿಲಿನ ಚಿಲಕ ಬಟ್ಟೆಯಿಂದ ಬಿಗಿದು ಕಟ್ಟಲಾಗಿತ್ತು. ಬಾಲಕಿಯ ತಂದೆ ಕಷ್ಟಪಟ್ಟು ಬಾಗಿಲು ತೆರೆದಾಗ ಆಕೆ ಆ ಶೌಚಾಲಯದ ಮೂಲೆಯಲ್ಲಿ ಮುದುರಿ ಕುಳಿತಿದ್ದಳು. ತಂದೆ ಹಾಗೂ ಶಿಕ್ಷಕಿಯರನ್ನು ಕಂಡ ಬಾಲಕಿ 'ಹತ್ತಿರ ಬಂದರೆ ಕೊಲ್ಲುತ್ತೇನೆ' ಎಂದು ಬೆದರಿಸಿದಳು. ಧೈರ್ಯ ಮಾಡಿದ ಶಿಕ್ಷಕಿಯರು ಹತ್ತಿರ ಹೋಗಿ ಸಮಾಧಾನ ಪಡಿಸಿ ಹೊರಗೆ ಕರೆ ತಂದರು.
ಒಳಗೆ ಬ್ಯಾಗಿನಲ್ಲಿ ಪುಸ್ತಕ ಇರಬಹುದಾ ನೋಡು ಎಂದು ಶಿಕ್ಷಕಿಯರು ಅವಳನ್ನು ಮನೆ ಒಳಗೆ ಕಳುಹಿಸಿದರೆ, ಹಿಂಬಾಗಿಲಿನಿಂದ ಗುಡ್ಡಕ್ಕೆ ಓಡಿದಳು.
ನಿಬ್ಬೆರಗಾದ ಶಿಕ್ಷಕಿಯರು ಆಕೆಯ ಬೆನ್ನು ಹತ್ತಲು ಶುರುಮಾಡಿದರು. ಆಕೆ ಅಲ್ಲಿಂದ ತಂತಿ ಬೇಲಿ ಹಾರಿ ಬೇರೊಬ್ಬರ ರಬ್ಬರ್ ತೋಟಕ್ಕೆ ನುಗ್ಗಿದಾಗ ಅಲ್ಲೂ ಬೆಂಬಿಡದ ಶಿಕ್ಷಕಿಯರು ಹಿಂಬಾಲಿಸಿದರು. ಬೇಲಿ ತಂತಿ, ಪೊದೆ ಮುಳ್ಳುಗಳಿಂದಾದ ಶಿಕ್ಷಕಿಯರಿಗೆ ತರಚಿದ ಗಾಯಗಳೂ ಆಯಿತು. ಕೊನೆಗೂ ಆಕೆಯನ್ನು ಹಿಡಿದು ಪ್ರೀತಿಯಿಂದ ಮಾತನಾಡಿಸಿ ಶಾಲೆಗೆ ಕರೆದುಕೊಂಡು ಬಂದರು. ಪ್ರತಿದಿನವೂ ಶಾಲೆಗೆ ಬರಬೇಕು ಎಂದು ಮನದಟ್ಟು ಮಾಡಿದರು.
ಮತ್ತೆ ಗೈರು: ಆದರೂ ಮಾರನೇ ದಿನದಿಂದಲೇ ಬಾಲಕಿ ಶಾಲೆಗೆ ಮತ್ತೆ ಗೈರಾಗಿದ್ದಾಳೆ. ಆಕೆಯನ್ನೊಮ್ಮೆ ಕರೆತಂದು ಸುಸ್ತಾಗಿರುವ ಶಿಕ್ಷಕರು ಇದೀಗ ಆರ್ಟಿಇ ಕಾಯ್ದೆಯಡಿ ಶಾಲೆಗೆ ಮಕ್ಕಳು ಬಾರದಿದ್ದರೆ ಪೋಷಕರನ್ನೇ ಹೊಣೆಗಾರರನ್ನಾಗಿಸುವ ಪ್ರಕ್ರಿಯೆ ಆರಂಭಿಸಿದ್ದು, ಹೆತ್ತವರಿಗೆ ನೋಟಿಸ್ ಜಾರಿಗೆ ಕ್ರಮ ಕೈಗೊಂಡಿದ್ದಾರೆ.
ಒಟ್ಟಿನಲ್ಲಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಕಡ್ಡಾಯಗೊಳಿಸಿ, ಶಿಕ್ಷಕರಿಗೆ ಈ ಬಗೆಯ ಹೆಚ್ಚು'ವರಿ' ಜವಾಬ್ದಾರಿ ಕೊಟ್ಟರೆ ಹೇಗಾಗಬೇಡ? ಪರೀಕ್ಷೆ ಕಾಲದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಕಾರಣಕ್ಕೆ ಶಿಕ್ಷಕರೂ ಶಾಲೆಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಒದಗಿರುವುದು ವಿಪರ್ಯಾಸವೇ ಸರಿ.
'ಹೈ' ಮಹತ್ವದ ಅಧಿಸೂಚನೆ
ಈ ಮಧ್ಯೆ, ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕರೆತರಲು ಹಾಜರಾತಿ ಪ್ರಾಧಿಕಾರ ರಚಿಸಿ ಅಧಿಸೂಚನೆ ಹೊರಡಿಸುವಂತೆ ಹೈಕೋರ್ಟ್ ಸೋಮವಾರ ಸರ್ಕಾರಕ್ಕೆ ಆದೇಶಿಸಿರುವುದೂ ಇಲ್ಲಿ ಗಮನಾರ್ಹ ಸಂಗತಿ. ಪ್ರಾಧಿಕಾರ ಹಾಗೂ ಶಾಲಾಭಿವೃದ್ಧಿ ಸಮಿತಿ ಜಂಟಿಯಾಗಿ ಸತತ ಏಳು ದಿನ ಶಾಲೆಗೆ ಬಾರದ ಮಕ್ಕಳನ್ನು ಗುರುತಿಸಬೇಕು. ಮಗು ಶಾಲೆಗೆ ಬಾರದಿರುವುದಕ್ಕೆ ಕಾರಣ ಕೇಳಿ ಮಗುವಿನ ಪೋಷಕರಿಗೆ ನೋಟಿಸ್ ಕೊಟ್ಟು ಉತ್ತರ ಪಡೆಯಬೇಕು. ಈ ಬಗ್ಗೆ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ನಿಯಮಕ್ಕೆ ತಿದ್ದುಪಡಿ ತುರುವುದು ಅಗತ್ಯ ಎಂದು ಪೀಠ ತಿಳಿಸಿದೆ.
-ಮೌನೇಶ ವಿಶ್ವಕರ್ಮ