ದೇಶಕ್ಕೆ ಮರಿಪಾಂಡೆ, ಹರಿಗೆ ಸಿಗದ ಪ್ರಸಾದ
ಲೋಕಸಭಾ ಮಹಾ ಸಮರಕ್ಕೆ ಕಾಂಗ್ರೆಸ್ ಪಕ್ಷ 58 ಹುರಿಯಾಳುಗಳ ಮೂರನೇ ಪಟ್ಟಿ ಬಿಡುಗಡೆ..
ಅಂತೂ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಉತ್ತರ ಕನ್ನಡದಿಂದ ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಿ. ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಕೂಡ ಗಾಜಿಯಾಬಾದ್ನಿಂದ ಜ.ವಿ.ಕೆ. ಸಿಂಗ್ಗೆ ಟಿಕೆಟ್ ನೀಡಿದೆ.
- ದೆಹಲಿ ಪ್ರತಿನಿಧಿಯಿಂದ
ನವದೆಹಲಿ: ಲೋಕಸಭಾ ಮಹಾ ಸಮರಕ್ಕೆ ಕಾಂಗ್ರೆಸ್ ಪಕ್ಷ 58 ಹುರಿಯಾಳುಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉತ್ತರಕನ್ನಡ ಕ್ಷೇತ್ರದಿಂದ ಪ್ರಶಾಂತ್ ದೇಶಪಾಂಡೆ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಿ. ನಾರಾಯಣಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ. ಧಾರವಾಡ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ.
ಈ ನಡುವೆ ಕಳಂಕಿತರಿಗೆ ಟಿಕೆಟ್ ನೀಡದಿರಲು ಕಾಂಗ್ರೆಸ್ ನಿರ್ಧರಿಸಿದ್ದು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವ್ಯವಹಾರ ನಡೆಸಿದ ಆರೋಪ ಹೊತ್ತಿರುವ ಸುರೇಶ್ ಕಲ್ಮಾಡಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಕುತೂಹಲ ಕೆರಳಿಸಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಪುತ್ರನಿಗೆ ಟಿಕೆಟ್ ಗಿಟ್ಟಿಸುವಲ್ಲಿ ಸಚಿವ ಆರ್.ವಿ. ದೇಶಪಾಂಡೆ ಯಶಸ್ವಿಯಾಗಿದ್ದಾರೆ. ಈ ಕ್ಷೇತ್ರದಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಟಿಕೆಟ್ ಬಯಸಿದ್ದರು.
ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ ಕೂಡಾ ಆಕಾಂಕ್ಷಿ. ಮೊದಲ ಹಂತದಲ್ಲಿ ನಿವೇದಿತ್ ಆಳ್ವಾ ಹೆಸರನ್ನು ಚುನಾವಣಾ ಸಮಿತಿ ಅನುಮೋದಿಸಿತ್ತು. ಆದರೆ, ಘೋಷಣೆ ಮಾಡಿರಲಿಲ್ಲ. ಈ ನಡುವೆ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಆರ್.ವಿ. ದೇಶಪಾಂಡೆ ಪ್ರಶಾಂತ್ ದೇಶಪಾಂಡೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಪ್ರಾಥಮಿಕ ಚುನಾವಣೆ ನಡೆದಿದ್ದು, ಸಿ.ನಾರಾಯಣ ಸ್ವಾಮಿ ಗೆದ್ದಿದ್ದರು. ಅವರ ಹೆಸರನ್ನು ಚುನಾವಣಾ ಸಮಿತಿ ಔಪಚಾರಿಕವಾಗಿ ಘೋಷಣೆ ಮಾಡಿದೆ.
ಆದರೆ, ಧಾರವಾಡ ಮತ್ತು ಹಾವೇರಿ ಕ್ಷೇತ್ರಗಳು ಈಗ ಕಾಂಗ್ರೆಸ್ ಹೈಕಮಾಂಡ್ಗೆ ಕಗ್ಗಂಟಾಗಿ ಪರಿಣಮಿಸಿವೆ.
ಮುಖ್ಯವಾಗಿ ಇದುವರೆಗೆ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗುತ್ತಿದ್ದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವುದು ಬೇಡ ಎಂಬ ಬೇಡಿಕೆ ಈ ಭಾಗದ ನಾಯಕರದ್ದು.
ಕ್ಷೇತ್ರ ಪುನಾರಚನೆಯಾದ ನಂತರ ಅಲ್ಪಸಂಖ್ಯಾತರು ಹೆಚ್ಚಿರುವ ಕ್ಷೇತ್ರಗಳು ಈಗ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಆ ಕ್ಷೇತ್ರವನ್ನು ಅಲ್ಪಸಂಖ್ಯಾತರಿಗೆ ನೀಡಬೇಕೆಂಬುದು ಅವರ ಸಲಹೆ.
ಬದಲಾದ ಸಮೀಕರಣಕ್ಕನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ, ಚುನಾವಣೆ ಗೆಲ್ಲಲು ಸಾಧ್ಯ. ಇಲ್ಲದಿದ್ದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬುದನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲಾಗಿದೆ. ಹೀಗಾಗಿ ಪಕ್ಷ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಬಹುತೇಕ ಬುಧವಾರ ಅಥವಾ ಗುರುವಾರ ಈ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮಾಡುವ ನಿರೀಕ್ಷೆ ಇದೆ.
ಆಡ್ವಾಣಿಗೆ ತವರಿನ ಬೆಂಬಲ
ಅಹಮದಾಬಾದ್: ಗುಜರಾತ್ನ ಗಾಂಧಿನಗರದಿಂದಲೇ ಕಣಕ್ಕಿಳಿಯುವ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಒತ್ತಾಸೆಗೆ ಈಗ ಪಕ್ಷದ ರಾಜ್ಯ ಘಟಕದಿಂದಲೂ ಬೆಂಬಲ ವ್ಯಕ್ತವಾಗಿದೆ. ಈ ವಿಚಾರವಾಗಿ ವರಿಷ್ಠರ ಮೇಲೆ ಒತ್ತಡ ಹೇರಲೂ ರಾಜ್ಯ ಘಟಕ ನಿರ್ಧರಿಸಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಿವಾಸದಲ್ಲಿ ಮಂಗಳವಾರ ನಡೆದ ಪಕ್ಷದ ರಾಜ್ಯ ಘಟಕದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗುಜರಾತ್ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ನಿರ್ಧಾರವನ್ನು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಬುಧವಾರ ತೆಗೆದುಕೊಳ್ಳಲಿದೆ. ಮೋದಿ ಅವರನ್ನು ಗಾಂಧಿನಗರದಿಂದ ಕಣಕ್ಕಿಳಿಯುವ ಊಹಾಪೋಹ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಆಡ್ವಾಣಿ ಅವರಿಗೆ ಪರ್ಯಾಯ ಕ್ಷೇತ್ರಗಳಿಗಾಗಿ ಹುಡುಕಾಟ ನಡೆಯುತ್ತಿತ್ತು.
ರಾಮುಲು ಟಿಕೆಟ್
ಕರ್ನಾಟಕದ ಬಳ್ಳಾರಿ, ಹಾಸನ ಮತ್ತು ಬೀದರ್ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ತನ್ನ ಐದನೆ ಪಟ್ಟಿಯಲ್ಲಿ ಬುಧವಾರ ಅಂತಿಮಗೊಳಿಸಲಿದೆ. ಜತೆಗೆ, ಗುಜರಾತ್ ಸೇರಿಬಾಕಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯೂ ಬಿಜೆಪಿ ಅಂತಿಮಗೊಳಿಸಲಿದೆ.
ಇಂದು ಅಧಿಸೂಚನೆ
ಏ.17ರಂದು ನಡೆಯಲಿರುವ ಕರ್ನಾಟಕ ಮತ್ತಿತರ ರಾಜ್ಯಗಳ 5ನೇ ಹಂತದ ಲೋಕ ಸಭಾ ಚುನಾವಣೆ ಅಧಿಸೂಚನೆ ಬುಧವಾರ ಹೊರಬೀಳಲಿದೆ. ಈ ಮೂಲಕ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೂ ಅಧಿಕೃತ ಚಾಲನೆ ಸಿಕ್ಕಂತಾಗಲಿದೆ.
ರೇಖಾ ಆಖೈರು
ಹಾಸನ: ಅಂತೂ ಇಂತೂ ರಾಜ್ಯ ಬಿಜೆಪಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಮಂಗಳವಾರ ಸಂಜೆ ಅಂತಿಮಗೊಳಿಸಿದೆ. ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಹಾಸನ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.
ಬಂಡೆದ್ದ ಕುಮಾರ್
ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಈಗ ಪಕ್ಷದ ವಿರುದ್ಧ ಬಂಡೆದಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿರುವ ಅವರು ಬೆಂಗಳೂರಿಗೆ ಬಂದಿದ್ದಾರೆ.