ಬೇಸಿಗೆ ಝಳ, ಜನ ಕಳವಳ
ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಬಿಸಿಗಿಂತಲೂ ವಾತಾವರಣದ ಕಾವು ವೇಗವಾಗಿ ಏರುತ್ತಿದೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯ...
ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಬಿಸಿಗಿಂತಲೂ ವಾತಾವರಣದ ಕಾವು ವೇಗವಾಗಿ ಏರುತ್ತಿದೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯ ಭೀಕರ ಬೇಸಿಗೆ ಎದುರಿಸುವ ಅಪಾಯದಲ್ಲಿದೆ. ಕರ್ನಾಟಕದ ತಾಪಮಾನ ನಿತ್ಯ ಸರಾಸರಿ 2 ಡಿಗ್ರಿ ಸೆಲ್ಶಿಯಸ್ ಏರುತ್ತಿದೆ!
ಬೇಸಿಗೆ ಬಿಸಿಯನ್ನು ಇನ್ನಷ್ಟು ಹೆಚ್ಚಿಸುವ ಮಾಹಿತಿಯನ್ನು ಹವಾಮಾನ ಇಲಾಖೆ ಅಧಿಕಾರಿಗಳು ನೀಡಿದ್ದಾರೆ. ಅದು ಮಳೆ ಮಾರುತಗಳು ರಾಜ್ಯದಿಂದ ಪಲಾಯನಗೈದಿದ್ದು ಸದ್ಯಕ್ಕಂತೂ ಇತ್ತ ಮುಖ ಮಾಡುವ ಸಾಧ್ಯತೆಗಳಿಲ್ಲ.
ಆಕಸ್ಮಾತ್ ಮಳೆಯಾದರೂ ತಾಪ ಕೊಂಚ ಕಡಿಮೆಯಾಗುತ್ತದೆ, ಆದರೆ ಬೇಸಿಗೆ ಬಿಸಿಲು ಕಡಿಮೆಯಾಗದು ಎನ್ನುತ್ತಾರೆ ಅಧಿಕಾರಿಗಳು.
ಅಪರೂಪಕ್ಕೆ ಸೆಖೆ ಅನುಭವ ಆಗುವ ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆ ಆರಂಭದಲ್ಲೇ ಉಷ್ಣಾಂಶ 36 ಡಿಗ್ರಿ ಸೆಲ್ಶಿಯಸ್ ಸಮೀಪಿಸುತ್ತಿದೆ. ಗುಲ್ಬರ್ಗ, ರಾಯಚೂರು ಮತ್ತು ಬಳ್ಳಾರಿ ಬಿಸಿಗೂ, ಬೆಂಗಳೂರಿನ ಬಿಸಿಗೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ. ಹವಾನಿಯಂತ್ರಿತ ನಗರ ಎಂಬ ಕಿರೀಟ ಬೆಂಗಳೂ ರಿನ ಮುಕುಟದಿಂದ ಕಳಚುವ ಮುನ್ಸೂಚನೆಗಳು ದೊರೆಯಲಾರಂಭಿಸಿವೆ. ರಾಜ್ಯದ ಕೆಲವೆಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಸಮೀಪಕ್ಕೆ ತಲುಪಿಬಿಟ್ಟಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಇನ್ನೂ 15 ದಿನಗಳವರೆಗೆ ಮಳೆ ಸೂಚನೆ ಇಲ್ಲ. ಉಷ್ಣಾಂಶ ನಿರಂತರಪ ಏರುಗತಿಯಲ್ಲಿದೆ.
ಈ ಬಾರಿ ಬೇಸಿಗೆ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವ ಸಾಧ್ಯತೆ ಕಾಣುತ್ತಿದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.
ಹವಾಮಾನ ಏನಾಗುತ್ತಿದೆ?: ರಾಜ್ಯದಲ್ಲಿ ಎರಡು ವಾರಗಳ ಹಿಂದೆಯೇ ಬೇಸಿಗೆ ಆರಂಭವಾಗಿದ್ದು, ಈಗ ಉತ್ತುಂಗದ ಕಡೆ ಸಾಗುತ್ತಿದೆ. ಹೀಗಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಉಷ್ಣಾಂಶ ಸರಾಸರಿಗಿಂತ 2ರಿಂದ 3ಡಿ.ಸೆ. ಹೆಚ್ಚಾಗಿದೆ. ಇದು ಕಡಿಮೆಯಾಗಿ ವಾತಾವರಣ ಕೊಂಚ ತಂಪಾಗಬೇಕಾದರೆ ತುರ್ತಾಗಿ ಮಳೆಯ ಅಗತ್ಯವಿದೆ.
ಆದರೆ ರಾಜ್ಯದಲ್ಲಿ ಇನ್ನೂ ಎರಡು ವಾರ ಮಳೆಯಾಗುವ ಯಾವ ಸೂಚನೆಯೂ ಇಲ್ಲ. ಏಕೆಂದರೆ, ಯಾವುದೇ ಮಹಾಸಾಗರ ಭಾಗದಿಂದಲೂ ಬಿರುಗಾಳಿ, ಶೀತ ಮಾರುತಗಳು ಸಾಗಿ ಬರುವ ಲಕ್ಷಣವಿಲ್ಲ. ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ತಟ್ಟುತ್ತಿದ್ದು, ಬಿಸಿಲಿನ ತಾಪ ವಿಪರೀತವಾಗಿರುತ್ತದೆ. ಎಲ್ಲಿಯೂ ತೇವಾಂಶವೂ ಇಲ್ಲ. ಇದರಿಂದ ಮೋಡಗಳ ಕೊರತೆ ಉಂಟಾಗಿ ಮಳೆ ಮಾಯವಾಗಲಿದೆ.
ದಾಖಲೆ ಮುಟ್ಟುವ ಆತಂಕ: ಸಾಮಾನ್ಯವಾಗಿ ಮಾರ್ಚ್ನಲ್ಲಿ ಬೆಂಗಳೂರಿನಲ್ಲಿ 32 ಡಿ.ಸೆ.ಇರಬೇಕು. ಆದರೆ ಈಗಲೇ 35.4ಡಿ.ಸೆ.ಗೆ ಏರಿದೆ. ಹಾಗೆ ನೋಡಿದರೆ ಬೆಂಗಳೂರಿನ ಸರ್ವಕಾಲಿಕ ದಾಖಲೆಯೇ 37.3 ಡಿ.ಸೆ. ಇದು 1996ರ ಮಾರ್ಚ್ 29ರಂದು ದಾಖಲಾದದ್ದು. ಈಗಿನ ಉಷ್ಣಾಂಶದ ಏರುಗತಿ ನೋಡಿದರೆ ಬೆಂಗಳೂರಿನ ಉಷ್ಣಾಂಶ ಕೂಡ ತನ್ನ ಹಳೆ ದಾಖಲೆ ಮುರಿಯುವ ಸಾಧ್ಯತೆ ಕಾಣುತ್ತಿದೆ.
ಇನ್ನು ಗುಲ್ಬರ್ಗದಲ್ಲಿ 1996 ಮಾರ್ಚ್ 31ರಂದು ಕಂಡುಬಂದ 43 ಡಿ.ಸೆ. ಉಷ್ಣಾಂಶವೇ ಸಾರ್ವಕಾಲಿಕ ದಾಖಲೆ. ಈಗಲೇ 38 ಡಿ.ಸೆ. ಇದ್ದು, ಇಲ್ಲಿಯೂ ಹೊಸ ದಾಖಲೆಯಾದರೆ ಅಚ್ಚರಿ ಇಲ್ಲ. ರಾಯಚೂರಿನಲ್ಲಿ 2012ರ ಮಾರ್ಚ್ನಲ್ಲಿದ್ದ 44.6 ಡಿ.ಸೆ. ಉಷ್ಣಾಂಶವೇ ದಾಖಲೆ. ಈಗ ಅಲ್ಲಿ ಉಷ್ಣಾಂಶ 38 ಡಿ.ಸೆ.ಗಿಂತ ದಾಟಿದೆ ಎಂದರೆ ಮೇ ಅಂತ್ಯದಲ್ಲಿ ಹೇಗಿರಬಹುದು ಊಹಿಸಿ!
43 ಡಿ.ಸೆ. ದಾಖಲೆ ಉಷ್ಣಾಂಶ ಕಂಡಿರುವ ಬಳ್ಳಾರಿಯಲ್ಲಿ ಈಗ 38 ಡಿ.ಸೆ. ಇದೆ. ಬಿಜಾಪುರ, ಚಿತ್ರದುರ್ಗ, ಮೈಸೂರು ಜಿಲ್ಲೆಗಳಲ್ಲೂ ಉಷ್ಣಾಂಶ ಏರುಮುಖವಾಗಿದೆ.
ಹೆಚ್ಚು ಉಷ್ಣಾಂಶ ಜಿಲ್ಲೆಗಳು (ಮಾ.18ರಂದು)
ಗುಲ್ಬರ್ಗಾ....................... 38
ಬಳ್ಳಾರಿ............................38
ರಾಯಚೂರು...................38
ಬೆಂಗಳೂರು..................35.4
ಮೈಸೂರು.....................35.4
ಗದಗ...........................35.2
ಚಿತ್ರದುರ್ಗ.......................36
ಬೆಳಗಾವಿ......................35.1
ಮಂಗಳೂರು................35.6
ಬಿಜಾಪುರ.........................36
ಚಾಮರಾಜನಗರ..............35
ಕೆಲವು ದಿನಗಳ ಹಿಂದೆ ರಾಜ್ಯದ ಅನೇಕ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗಿದ್ದರಿಂದ ಬೇಸಿಗೆ ಆರಂಭವಾಗಿದ್ದರೂ ಜನರ ಅರಿವಿಗೆ ಬಂದಿರಲ್ಲಿಲ್ಲ. ಈಗ ಮಳೆ ಮಾರುತ ಮಾಯವಾಗಿ ತಾಪಮಾನದಲ್ಲಿ ದಿಢೀರ್ ಏರಿಕೆ ಆಗಿದ್ದರಿಂದ ಬಿಸಿ ತಟ್ಟುತ್ತಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಮೃತ್ಯುಂಜಯ ಪಾಟೀಲ್, ಹವಾಮಾನ ಇಲಾಖೆ ಹಿರಿಯ ಅಧಿಕಾರಿ
ರಾಜ್ಯದ ಅನೇಕ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗಿದ್ದರಿಂದ ಬೇಸಿಗೆ ಆರಂಭವಾಗಿದ್ದರೂ ಜನರ ಅರಿವಿಗೆ ಬಂದಿರಲ್ಲಿಲ್ಲ. ಈಗ ಮಳೆ ಮಾರುತ ಮಾಯವಾಗಿ ಶಾಖ ಏರಿಕೆಯಾಗಿದೆ.
-ಮೃತ್ಯುಂಜಯ ಪಾಟೀಲ್
ಹವಾಮಾನ ಇಲಾಖೆ ಅಧಿಕಾರಿ
ಶಿವಕುಮಾರ್ ಬೆಳ್ಳಿತಟ್ಟೆ