ಭಾರತ - ಚೀನಾ ಸಮರ, ರಹಸ್ಯ ವರದಿ ಬಯಲು
1962ರ ಭಾರತ-ಚೀನಾ ಯುದ್ಧದಲ್ಲಿ ಭಾರತವು ಹೀನಾಯವಾಗಿ ಸೋಲಲು ಅಂದಿನ ಪ್ರಧಾನಿ..
ಲೋಕಸಭೆ ಚುನಾವಣೆಯ ಕಾವು ಏರುತ್ತಿರುವಂತೆಯೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಹಳೇ ಪ್ರಕರಣಗಳ ಬಿಸಿ ತಟ್ಟಿದೆ. ಚೀನಾ ಯುದ್ಧದಲ್ಲಿ ಭಾರತ ಸೋಲಿಗೆ ನೆಹರು ಕಾರಣ ಎಂಬ ವಿಚಾರ ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ್ತೊಂದೆಡೆ, ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐಗೆ ಹೊಸ ಸಾಕ್ಷ್ಯ ಲಭ್ಯವಾಗಿರುವ ಸುದ್ದಿ ಬಿಜೆಪಿಗೆ ಬರಸಿಡಿಲಿನಂತೆ ಬಂದೆರಗಿದೆ. ಎರಡೂ ಪಕ್ಷಗಳೂ ಈ ಸಂಬಂಧ ಕೆಸರೆರಚಾಟ ನಡೆಸುತ್ತಿವೆ.
ನವದೆಹಲಿ: 1962ರ ಭಾರತ-ಚೀನಾ ಯುದ್ಧದಲ್ಲಿ ಭಾರತವು ಹೀನಾಯವಾಗಿ ಸೋಲಲು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಕಾರಣ!
ಹೌದು. ಬರೋಬ್ಬರಿ 5 ದಶಕಗಳ ಕಾಲ ಭಾರತ ಸರ್ಕಾರವು ರಹಸ್ಯವಾಗಿರಿಸಿದ್ದ ವರದಿಯೊಂದು ಈಗ ಜಗಜ್ಜಾಹೀರಾಗಿದ್ದು, ಭಾರತ ಸೋಲಲು ಕಾರಣವೇನು ಎಂಬ ಮಾಹಿತಿ ಬಹಿರಂಗವಾಗಿದೆ. ದೇಶವು ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿರುವಾಗಲೇ ಇಂತಹುದೊಂದು ವರದಿ ಹೊರಬಂದಿದೆ. ಹಗರಣಗಳ ಸರಣಿಯಿಂದ ಈಗಾಗಲೇ ಮುಖಭಂಗ ಅನುಭವಿಸಿರುವ ಕಾಂಗ್ರೆಸ್ಗೆ ಇದು ತೀವ್ರ ಮುಜುಗರ ಉಂಟುಮಾಡಿದೆ. ಇದೇ ವೇಳೆ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಮತ್ತಷ್ಟು ವಾಕ್ ಪ್ರಹಾರ ನಡೆಸಲು ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಸರ್ಕಾರವು ಯುದ್ಧದ ಬಗೆಗಿನ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ರಹಸ್ಯವು ಬಯಲಾದಾಗ
ಚೀನಾದೊಂದಿಗಿನ ಯುದ್ಧದ ವೇಳೆ ಭಾರತವು ಯಾವ ರೀತಿ ರಕ್ಷಣಾ ಸನ್ನದ್ಧತೆ ನಡೆಸಿತ್ತು ಎಂಬ ಬಗೆಗಿನ ಮಾಹಿತಿಯುಳ್ಳ 'ಹೆಂಡರ್ಸನ್ ಬ್ರೂಕ್ಸ್ ರಿಪೋರ್ಟ್'ನ 120 ಕ್ಕೂ ಹೆಚ್ಚು ಪುಟಗಳನ್ನು ಬಹಿರಂಗಪಡಿಸಲಾಗಿದೆ. ಆಸ್ಟ್ರೇಲಿಯಾದ ಪತ್ರಕರ್ತ ಹಾಗೂ ಇತಿಹಾಸಕಾರ ನೆವಿಲ್ಲೆ ಮ್ಯಾಕ್ಸ್ವೆಲ್ ಎಂಬುವರು ಆನ್ಲೈನ್ನಲ್ಲಿ ಈ ವಿಚಾರವನ್ನು ಬಯಲು ಮಾಡಿದ್ದಾರೆ. ಯುದ್ಧದ ಸಂದರ್ಭದಲ್ಲಿ ಮ್ಯಾಕ್ಸ್ವೆಲ್ ಅವರು ಭಾರತದಲ್ಲಿ ವರದಿಗಾರಿಕೆ ನಡೆಸುತ್ತಿದ್ದರು. ಗಡಿಯುದ್ದಕ್ಕೂ ವಿವಾದಿತ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದ ಚೀನಾದೆದುರು ಭಾರತ ಸೋಲು ಕಾಣಲು ಕಾರಣವೇನು ಎಂಬುದನ್ನು ಭಾರತೀಯ ಸೇನೆಯು ಈ ವರದಿಯಲ್ಲಿ ವಿವರಿಸಿತ್ತು.
ಸರ್ಕಾರ-ಸೇನೆ ಬಿಕ್ಕಟ್ಟು
ಯುದ್ಧದ ವೇಳೆ ಭಾರತ ಸರ್ಕಾರ ಹಾಗೂ ಸೇನಾ ನಾಯಕತ್ವದ ನಡುವೆ ಮೂಡಿದ್ದ ಒಡಕುಗಳು, ಭಾರತೀಯ ಸೇನೆಯ ಸಾಮರ್ಥ್ಯದ ಬಗ್ಗೆ ಸರ್ಕಾರಕ್ಕಿದ್ದ ತಪ್ಪು ತಿಳಿವಳಿಕೆ ಮತ್ತಿತರ ವಿವರಗಳೂ ವರದಿಯಲ್ಲಿದ್ದವು. ಅಷ್ಟೇ ಅಲ್ಲ, ಚೀನಾ ಪಡೆಗಳನ್ನು ಎದುರಿಸುವಲ್ಲಿ ನೆಹರೂ ಸರ್ಕಾರದ 'ಮುನ್ನಡೆ ನೀತಿ'ಯನ್ನು ವರದಿಯಲ್ಲಿ ಟೀಕಿಸಲಾಗಿತ್ತು. ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಲ್ಲಿ ಸರ್ಕಾರ ಆಸ್ಥೆ ವಹಿಸಿರಲಿಲ್ಲ. ನಮ್ಮ ಸೇನೆಯ ಸಾಮರ್ಥ್ಯವನ್ನು ಅರಿಯುವ ಬದಲು, ಚೀನಾ ಹೆಚ್ಚಿನ ಪ್ರತಿಕ್ರಿಯೆ ನೀಡಲಿಕ್ಕಿಲ್ಲ ಎಂಬ ಊಹೆಯ ಆಧಾರದ ಮೇಲೆಯೇ ಈ ನೀತಿಯನ್ನು ಜಾರಿಮಾಡಲಾಗಿತ್ತು ಎಂದು ವರದಿಯಲ್ಲಿ ಸೇನೆ ಆರೋಪಿಸಿತ್ತು.
ಮೋದಿ ವಿರುದ್ಧವೂ ಸಿಬಿಐ ಅಸ್ತ್ರ
ನವದೆಹಲಿ/ಅಹಮದಾಬಾದ್: ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣ ಮತ್ತೆ ನರೇಂದ್ರ ಮೋದಿಯನ್ನು ಬಾಧಿಸತೊಡಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹೊಸ ಸಾಕ್ಷ್ಯಗಳು ಸಿಬಿಐಗೆ ಲಭ್ಯವಾಗಿರುವುದೇ ಇದಕ್ಕೆ ಕಾರಣ. ಮೋದಿ ಸಂಪುಟದ ಸಚಿವರು, ಗುಜರಾತ್ ಪೊಲೀಸ್ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಸಭೆ ಸೇರಿ ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿರುವ ವಿಚಾರ ಈಗ ಬಹಿರಂಗಗೊಂಡಿದೆ. 2011ರಲ್ಲಿ ನಡೆದ ಈ ಸಭೆಯ ವಿವರವನ್ನೊಳಗೊಂಡ ಆಡಿಯೋ ಸಿಡಿ ಈಗ ಸಿಬಿಐ ಕೈಗೆ ಸಿಕ್ಕಿದೆ. ಗುಜರಾತ್ ಸರ್ಕಾರದ ಉನ್ನತ ಸಚಿವರು, ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ.ಆದರೆ ಸಿಬಿಐ ಇದನ್ನು ನಿರಾಕರಿಸಿದೆ.
4 ದಶಕಗಳ ಹಿಂದಿನ ವಿಚಾರ ಇಟ್ಟುಕೊಂಡು ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ.
- ಅಭಿಷೇಕ್ ಸಿಂಘ್ವಿ
ಕಾಂಗ್ರೆಸ್ ಮುಖಂಡ
ಚೀನಾ ವಿರುದ್ಧದ ಸೋಲಿನ ಕುರಿತ ಸತ್ಯ
ವನ್ನು ಈಗಲಾದರೂ ಬಹಿರಂಗಪಡಿಸಲಿ.
- ರವಿಶಂಕರ್ ಪ್ರಸಾದ್
ಬಿಜೆಪಿ ನಾಯಕ