ವಿಮಾನ ಕಣ್ಮರೆಯಾಗಿ 11 ದಿನ: 30 ಲಕ್ಷ ಜನರಿಂದ ಉಪಗ್ರಹ ಮೂಲಕ ಶೋಧ
ಮಲೇಷ್ಯಾ ವಿಮಾನ ನಿಗೂಢವಾಗಿ ನಾಪತ್ತೆಯಾಗಿ ಮಂಗಳವಾರಕ್ಕೆ ಬರೋಬ್ಬರಿ 11 ದಿನಗಳು ತುಂಬಿವೆ. ವಿಶ್ವದ ಸುಮಾರು 26 ರಾಷ್ಟ್ರಗಳು...
ವಿಶ್ವಸಂಸ್ಥೆ/ಕೌಲಾಲಂಪುರ: ಮಲೇಷ್ಯಾ ವಿಮಾನ ನಿಗೂಢವಾಗಿ ನಾಪತ್ತೆಯಾಗಿ ಮಂಗಳವಾರಕ್ಕೆ ಬರೋಬ್ಬರಿ 11 ದಿನಗಳು ತುಂಬಿವೆ. ವಿಶ್ವದ ಸುಮಾರು 26 ರಾಷ್ಟ್ರಗಳು ವಿಮಾನಕ್ಕಾಗಿ ಶೋಧ ನಡೆಸುತ್ತಿದ್ದರೂ ವಿಮಾನ ಏನಾಗಿದೆ ಎಂಬ ಸುಳಿವೇ ಸಿಕ್ಕಿಲ್ಲ. ಈ ನಡುವೆ, ಕಣ್ಮರೆಯಾದ ವಿಮಾನದ ಹುಡುಕಾಟಕ್ಕಾಗಿ ಉಪಗ್ರಹ ಶೋಧ ಕಾರ್ಯ ಆರಂಭವಾಗಿದ್ದು, ಇದರಲ್ಲಿ 30 ಲಕ್ಷ ಮಂದಿ ಕೈಜೋಡಿಸಿದ್ದಾರೆ.
ಡಿಜಿಟಲ್ ಗ್ಲೋಬ್ ಎಂಬ ಉಪಗ್ರಹ ಸಂಸ್ಥೆಯು ಹೊಸದಾಗಿ ಶೋಧ ಕಾರ್ಯ ಆರಂಭಿಸಿದೆ. ಸುಮಾರು 24 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಈ ಕಾರ್ಯ ನಡೆಯುತ್ತಿದೆ. ಇದರಲ್ಲಿ 30 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಇವರು ಈಗಾಗಲೇ ಸುಮಾರು 25.7 ಕೋಟಿ ನಕ್ಷೆಗಳು ಹಾಗೂ 2.9 ದಶಲಕ್ಷ ಪ್ರದೇಶಗಳನ್ನು ಟ್ಯಾಗ್ ಮಾಡಿದ್ದಾರೆ. ಈ ಚಿತ್ರಗಳ ಮೂಲಕ ವಿಮಾನದ ಅವಶೇಷಗಳೇನಾದರೂ ಕಾಣಸಿಗುತ್ತದೆಯೇ ಎಂದು ನೋಡಲಾಗುತ್ತದೆ. ಇಷ್ಟೊಂದು ಜನರು ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶ್ವದ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗುತ್ತಿದೆ.
ಸ್ಫೋಟ/ಪತನ ಸಾಧ್ಯತೆಗಳಿಲ್ಲ: ಮಲೇಷ್ಯಾ ವಿಮಾನ ಸ್ಫೋಟಗೊಂಡಿರುವ ಅಥವಾ ಪತನಗೊಂಡಿರುವ ಸಾಧ್ಯತೆ ಕಡಿಮೆ ಎಂದು ವಿಶ್ವಸಂಸ್ಥೆ ಬೆಂಬಲಿತ ವಿಯೆನ್ನಾದ ಅಣ್ವಸ್ತ್ರ ನಿಯಂತ್ರಣ ಸಂಸ್ಥೆ ಹೇಳಿದೆ. ಈವರೆಗೆ ವಿಮಾನ ನೀರಲ್ಲಾಗಲೀ, ನೆಲದಲ್ಲಾಗಲೀ ಪತನಗೊಂಡಿರುವ ಅಥವಾ ಸ್ಫೋಟಗೊಂಡಿರುವ ಸುಳಿವು ಸಿಕ್ಕಿಲ್ಲ ಎಂದೂ ಸಂಸ್ಥೆ ಹೇಳಿದೆ. ಏತನ್ಮಧ್ಯೆ, ವಿಮಾನವನ್ನು ತಾಲಿಬಾನ್ ಉಗ್ರರು ಅಪಹರಿಸಿರಬಹುದು ಎಂಬ ಸುದ್ದಿಗೆ ಉತ್ತರ ನೀಡಿರುವ ತಾಲಿಬಾನ್, ತಾನು ಅಂತಹ ಕೃತ್ಯ ಎಸಗಿಲ್ಲ ಎಂದಿದೆ.
ಪೂರ್ವನಿಯೋಜಿತ ಕೃತ್ಯ: ವಿಮಾನವು ಯಾವ ಸಮಯಕ್ಕೆ ಹಾಗೂ ಯಾವ ಪ್ರದೇಶದಲ್ಲಿ ರೇಡಾರ್ ಸಂಪರ್ಕದಿಂದ ಹೊರಹೋಗಬೇಕು ಎಂಬುದನ್ನು ಮೊದಲೇ ನಿರ್ಧರಿಸಲಾಗಿತ್ತು. ಸೂಕ್ತ ತರಬೇತಿ ಪಡೆದ ಬುದ್ಧಿವಂತ ಪೈಲಟ್ ಅಥವಾ ಪ್ರಯಾಣಿಕನು ಪೂರ್ವಯೋಜನೆ ನಡೆಸಿಯೇ ವಿಮಾನದ ದಿಕ್ಕು ತಪ್ಪಿಸಿದ್ದಾನೆ ಎಂದು ನಾಗರಿಕ ವಿಮಾನಯಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಯಾವಾಗ ವಿಮಾನದ ಪಥ ಬದಲಿಸಬೇಕು ಎಂಬುದನ್ನು ಕಂಪ್ಯೂಟರ್ ವ್ಯವಸ್ಥೆಯ ಮೂಲಕ ಮಾಡಲಾಗಿತ್ತು. ವಿಮಾನದ ಎಲ್ಲ ವ್ಯವಸ್ಥೆಗಳ ಬಗ್ಗೆ ಅರಿವುಳ್ಳ ವ್ಯಕ್ತಿ ಕಾಕ್ ಪಿಟ್ನಲ್ಲಿ ಕುಳಿತು ಈ ಕೆಲಸ ನಿರ್ವಹಿಸಿದ್ದಾನೆ ಎಂದೂ ತಜ್ಞರು ಅಂದಾಜಿಸಿದ್ದಾರೆ.
ಇದೇ ವೇಳೆ, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಆದರೆ ವಿಮಾನವನ್ನು ಅಪಹರಿಸುವಂತಹ ರಾಜಕೀಯ ಅಥವಾ ಕ್ರಿಮಿನಲ್ ಉದ್ದೇಶ ಹೊಂದಿರುವ ಯಾವೊಬ್ಬರೂ ಅದರಲ್ಲಿದ್ದಿದ್ದು ಕಂಡುಬಂದಿಲ್ಲ ಎಂದು ಪಾಶ್ಚಿಮಾತ್ಯ ಭದ್ರತಾ ಪಡೆಗಳು ಹಾಗೂ ಚೀನಾ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ಉತ್ತರ ಕಾರಿಡಾರ್ ಮೂಲಕ ವಿಮಾನವು ಮಧ್ಯ ಏಷ್ಯಾದತ್ತ ತೆರಳಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಚೀನಾವು ಟಿಬೆಟ್ ಮತ್ತು ಕ್ಸಿನ್ಜಿಯಾಂಗ್ನಲ್ಲಿ ಶೋಧ ಕಾರ್ಯ ಆರಂಭಿಸಿದೆ.