ಒಂಟಿತನದಿಂದ ವೃದ್ಧ ದಂಪತಿ ಸಾವಿಗೆ ಶರಣು
ಉಡುಪಿ: ಯುವಪೀಳಿಗೆ ತಮ್ಮ ಭವಿಷ್ಯ ಕಟ್ಟಿಕೊಳ್ಳುವ ಭರದಲ್ಲಿ ಹೆತ್ತವರನ್ನು ಕಡೆಗಣಿಸುತ್ತಿದೆಯೆ? ಖರ್ಚಿಗೆ ಒಂದಷ್ಟು ಹಣ ಕಳುಹಿಸಿ ಮನೆಗೆಲಸಕ್ಕೆ ಯಾರನ್ನಾದರೂ ನೇಮಿಸಿದರೆ ಕರ್ತವ್ಯ ಮುಗಿಯಿತು ಎಂಬ ಭ್ರಮೆಯಲ್ಲಿ ಯುವಜನತೆ ಇದೆಯೆ? ಮಕ್ಕಳು ವೃದ್ಧಾಪ್ಯದಲ್ಲಿ ಆಸರೆಯಾಗುತ್ತಾರೆ ಎಂಬ ಹಿರಿಜೀವಗಳ ಭಾವನೆಗೆ ಬೆಲೆಯೇ ಇಲ್ಲವೆ?
ಉದ್ಯೋಗಕ್ಕಾಗಿ ಹೆತ್ತವರಿಂದ ದೂರ ಇರುವ ಮಕ್ಕಳು ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡಿರುವ ಕರಳು ಕಲಕುವ ಘಟನೆಯೊಂದು ಉಡುಪಿಯಲ್ಲಿ ಬುಧವಾರ ನಡೆದಿದೆ. ಮಕ್ಕಳು ತಮ್ಮಿಂದ ದೂರ ಹೋಗಿ ನೆಲೆಸಿರುವ ಒಂಟಿತನದಿಂದ ಅನಾರೋಗ್ಯ ಪೀಡಿತ ವೃದ್ಧ ದಂಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಜೀವ ಕೋಟ್ಯಾನ್ (74) ಮತ್ತು ಇಂದಿರಾ ಕೋಟ್ಯಾನ್ (64) ಮೃತರು.
ಕಾರಣ ಏನು?: ಇಬ್ಬರೂ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಯಿಂದ ನರಳುತ್ತಿದ್ದರು. ಸಂಜೀವ ಕೋಟ್ಯಾನ್ ಕೆಲ ಸಮಯದಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಇಂದಿರಾ ಸಂಬಂಧಿ ವಸಂತ ಕುಮಾರ್ ಎಂಬವರಿಗೆ ಕರೆ ಮನೆಗೆ ತರಕಾರಿ ತರುವಂತೆ ಹೇಳಿದ್ದರು. ಅದರಂತೆ ವಸಂತ ಕುಮಾರ್ ತರಕಾರಿ ತೆಗೆದುಕೊಂಡು ಬಂದಾಗ ಮನೆಯ ಮುಂಬಾಗಿಲು ಮುಚ್ಚಿತ್ತು, ಚಿಲಕ ಹಾಕಿರಲಿಲ್ಲ. ಬಾಗಿಲು ದೂಡಿದಾಗ ದಟ್ಟ ಸುಟ್ಟ ವಾಸನೆ ಬಂತು. ಬೆಡ್‌ರೂಮ್‌ನಲ್ಲಿ ಸುಟ್ಟ ಸ್ಥಿತಿಯಲ್ಲಿ ದೇಹಗಳು ಬಿದ್ದಿದ್ದವು. ತಕ್ಷಣ ಪೊಲೀಸರಿಗೆ ದೂರು ನೀಡಿದರು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮೃತಪಟ್ಟಿರುವುದು ಪತ್ತೆಯಾಗಿದೆ.