ನಿರ್ವಾಹಕಿಗೆ ಬಸ್‌ನಲ್ಲೇ ಪತಿಯಿಂದ ಇರಿತ
ಸುಬ್ರಹ್ಮಣ್ಯ: ಕಾಸರಗೋಡಿನಿಂದ ಸುಳ್ಯ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಸಾರಿಗೆ ಬಸ್‌ನ ನಿರ್ವಾಹಕಿಗೆ ಪತಿಯೇ ಚೂರಿಯಿಂದ ಇರಿದಿರುವ ಘಟನೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಬುಧವಾರ ನಡೆದಿದೆ.
ಗಂಭೀರವಾಗಿ ಗಾಯಗೊಂಡ ನಿರ್ವಾಹಕಿ ಇಂದಿರಾ(30)ಳನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪತಿ ಪ್ರಕಾಶ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದೂ ಆತನಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾಸರಗೋಡಿನಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ ಅನ್ನು ಪ್ರಕಾಶ್ ಸುಳ್ಯದಲ್ಲಿ ಹತ್ತಿದ್ದಾನೆ.
ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದಾಗ ಪ್ರಯಾಣಿಕರೆಲ್ಲರೂ ಇಳಿದಿದ್ದರು. ಚಾಲಕ ಕೂಡ ಟೀ ಕುಡಿಯಲೆಂದು ಹೊರಗೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಬಸ್ ಒಳಗಿಂದ ಚೀರಾಟ ಕೇಳಿ ಬಂದಿದ್ದು ಸಾರಿಗೆ ಸಿಬ್ಬಂದಿ ಬಂದು ನೋಡಿದಾಗ ನಿರ್ವಾಹಕಿ ಇಂದಿರಾ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆಕೆಯ ಪತಿ ಪ್ರಕಾಶನೇ ಇಂದಿರಾಳ ಎದೆ ಮತ್ತು ಹೊಟ್ಟೆಗೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದ. ಈ ಸಂದರ್ಭ ಆತನ ಕೈಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ನಿರ್ವಾಹಕಿ ಇಂದಿರಾ ಮೂಲತಃ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದವಳಾಗಿದ್ದು, ಈಕೆ ಬಿಜಾಪುರದ ಮೆಸ್ಕಾಂ ಬಳಿಯ ನಿವಾಸಿ ಪ್ರಕಾಶ್‌ನೊಂದಿಗೆ 8 ತಿಂಗಳ ಹಿಂದೆ ವಿವಾಹವಾಗಿತ್ತು ಎನ್ನಲಾಗಿದೆ. ಇವರಿಬ್ಬರ ನಡುವೆ ವೈಮನಸ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.