ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ನ್ಯೂ ಏಜ್ ಕ್ಯಾಂಪೇನ್‌'

'ಮಹಾಯುದ್ಧ'ಕ್ಕೆ ದೇಶ ಸನ್ನದ್ಧವಾಗಿದೆ. ಪ್ರಚಾರಕ್ಕೆ ತುದಿಬೆರಳಿನಲ್ಲಿ ಜಗತ್ತು ..

Mainashree
Updated On : 20 Mar 2014, 10:25 am

'ಮಹಾಯುದ್ಧ'ಕ್ಕೆ ದೇಶ ಸನ್ನದ್ಧವಾಗಿದೆ. ಪ್ರಚಾರಕ್ಕೆ ತುದಿಬೆರಳಿನಲ್ಲಿ ಜಗತ್ತು ಬಿಂಬಿಸುವ ಸಾಮಾಜಿಕ ಜಾಲತಾಣ ಬಳಕೆಯೂ ಹೇರಳವಾಗಿದೆ. ಫೇಸ್‌ಬುಕ್, ಟ್ವಿಟರ್, ಬ್ಲಾಗ್, ವೆಬ್‌ಸೈಟ್‌ಗಳಲ್ಲೂ ಪ್ರಚಾರ ಭರಾಟೆ ಜೋರಾಗಿದೆ. ಯಾರ ಕಥೆ ಹೇಗಿದೆ ಎಂಬುದರ ವಿಸ್ತೃತ ಮಾಹಿತಿ ಇಲ್ಲಿದೆ.

ಮಂಗಳೂರು:
ಅರ್ಧ ಗಂಟೆಯಲ್ಲಿ ಕನಿಷ್ಠ 2 ಲಕ್ಷಕ್ಕೂ ಅಧಿಕ ಮಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಲಿಂಕ್!
ಇದು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯಲು ಬಿಜೆಪಿ ಹಮ್ಮಿಕೊಂಡಿರುವ 'ನ್ಯೂ ಏಜ್ ಕ್ಯಾಂಪೇನ್‌' ಸ್ವರೂಪ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ಹೈಟೆಕ್ ಪ್ರಚಾರ ಮಾಡುವುದು ಸಾಮಾನ್ಯ. ಈಗ ಅದೇ ತಂತ್ರವನ್ನು ಯುವ ಮತದಾರರನ್ನು ಆಕರ್ಷಿಸಲು ಬಿಜೆಪಿ ರಾಜ್ಯ ಘಟಕ ಐಟಿ ಸೆಲ್ ರೂಪಿಸಿದೆ. ಮೂರು ಹಂತಗಳಲ್ಲಿ ನವ ಮನ್ವಂತರ ಅಭಿಯಾನ ಹೆಸರಲ್ಲಿ ಸಾಮಾಜಿಕ ಜಾಲತಾಣ ಮೂಲಕ ಜನರನ್ನು ತಲುಪಲಿದೆ.
ಪ್ರತಿ ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿ ಖಾತೆಯನ್ನು ಫೇಸ್‌ಬುಕ್‌ನಲ್ಲಿ ತೆರೆಯುತ್ತಾರೆ. ಹಾಲಿ ಸಂಸದರಾಗಿದ್ದರೆ ಅವರ ಸಾಧನೆಯನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತಾರೆ. ಆಯಾ ಕ್ಷೇತ್ರಕ್ಕೆ ಐಟಿ ಪರಿಣತ ತಂಡ ಇರುತ್ತದೆ. ಅಭ್ಯರ್ಥಿಯ ಚುನಾವಣೆ ಪ್ರಚಾರ ಇತ್ಯಾದಿ ಮಾಹಿತಿಯನ್ನು ಕಾಲಕಾಲಕ್ಕೆ ಅಪ್‌ಲೋಡ್ ಮಾಡುತ್ತಾರೆ. ಹಾಗಾಗಿ ಫೇಸ್‌ಬುಕ್‌ನಲ್ಲಿ ತಾಜಾ ಮಾಹಿತಿ ಸಿಗಲಿದೆ. ಒಮ್ಮೆ ಅಭ್ಯರ್ಥಿಯ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದರೆ ಸಾಕು. ಬಿಜೆಪಿ ಪದಾಧಿಕಾರಿಗಳ ಗುಂಪು ಅದನ್ನು ಪರಸ್ಪರ ಶೇರ್ ಮಾಡುತ್ತಾರೆ. ಅವರ ಗೆಳೆಯರು ಇದನ್ನು ಲೈಕ್ ಮಾಡುವುದು ಅಥವಾ ಕಮೆಂಟ್ ಹಾಕುವುದು ಮಾಡುತ್ತಾರೆ. ಮತ್ತೆ ಅವರ ಗೆಳೆಯರಿಗೆ ಹೋಗುತ್ತದೆ. ಅಲ್ಲಿಗೆ ಸುಲಭದಲ್ಲಿ ಅಭ್ಯರ್ಥಿ ಪರ ಪ್ರಚಾರ ಆದಂತೆ. ಅರ್ಧ ಗಂಟೆಯಲ್ಲಿ ಕನಿಷ್ಠ 2 ಲಕ್ಷಕ್ಕೂ ಅಧಿಕ ಮಂದಿಯನ್ನು ಸಂಪರ್ಕಿಸುವ ಸುಲಭ, ತ್ವರಿತ ಸಾಧನ ಇದು ಎನ್ನುತ್ತಾರೆ ದ.ಕ. ಕ್ಷೇತ್ರದ ಕ್ಯಾಂಪೇನ್ ಪ್ರಭಾರಿ ಡಾ. ಭರತ್ ಶೆಟ್ಟಿ.
ಯೂ ಟ್ಯೂಬ್‌ನಲ್ಲಿ ನರೇಂದ್ರ ಮೋದಿ ಭಾಷಣ ತುಣುಕು ಪ್ರಚುರಪಡಿಸುತ್ತೇವೆ. ಇದಕ್ಕೂ ಲಕ್ಷಾಂತರ ಮಂದಿ ವೀಕ್ಷಕರಿರುತ್ತಾರೆ. ಇದನ್ನು ಆಗಾಗ ಅಪ್‌ಲೋಡ್ ಮಾಡುತ್ತಿರುತ್ತೇವೆ. ಟ್ವಿಟರ್‌ನಲ್ಲಿ ಹೊಸ ಹೊಸ ಸುದ್ದಿ, ಅಭ್ಯರ್ಥಿಯ ಬ್ಲಾಗ್‌ನಲ್ಲಿ ಅಭ್ಯರ್ಥಿ ಸಾಧನೆಯಲ್ಲದೆ ಕಾರ್ಯಕ್ರಮ ವಿವರ ಇರುತ್ತದೆ. ಸಾಧ್ಯವಾದಷ್ಟು ಯುವಪೀಳಿಗೆಯನ್ನು ತಲುಪಲು ಇ-ಮೇಲ್‌ನಲ್ಲಿ ಮಾಹಿತಿ ರವಾನೆಯೂ ಮಾಡುತ್ತೇವೆ. ವಾಟ್ಸ್‌ಆ್ಯಪ್‌ನಲ್ಲಿ ಗ್ರೂಪ್ ಮೆಸೇಜ್ ಮೂಲಕ ಗುಣಾತ್ಮಕ ಕ್ಯಾಂಪೇನ್ ನಡೆಸುತ್ತೇವೆ. ಮೂರನೇ ಹಂತದಲ್ಲಿ ಎಸ್‌ಎಂಎಸ್ ಮೂಲಕ ಮತದಾನ ಮಹತ್ವ, ಮತದಾನ ಯಾರಿಗೆ ಮಾಡಬೇಕು ಎನ್ನುವುದನ್ನು ಮತದಾರರಿಗೆ ತಲಪಿಸುತ್ತೇವೆ. ಇದಕ್ಕೆಲ್ಲ ಚುನಾವಣೆ ಆಯೋಗದ ಪೂರ್ವಾನುಮತಿ ಪಡೆದೇ  ಮುಂದುವರಿಯುತ್ತೇವೆ ಎನ್ನುತ್ತಾರೆ ಭರತ್ ಶೆಟ್ಟಿ.

ಯುವಜನತೆ ಟಾರ್ಗೆಟ್
ಶೇ.50ರಷ್ಟು ಯುವ ಮತದಾರರು ಇರುವುದರಿಂದ ಅವರನ್ನು ಪರಿಣಾಮಕಾರಿಯಾಗಿ ತಲುಪಲು ಸಾಮಾಜಿಕ ಜಾಲತಾಣಗಳಲ್ಲಿ ಸಾಧ್ಯ. ಕೆಲವರು ತಕ್ಷಣವೇ ಜಾಲತಾಣ ನೋಡದಿದ್ದರೂ ಬಿಡುವಲ್ಲಿ ನೋಡಿದರೂ ಪ್ರಚಾರಕ್ಕೆ ಸಾಕಾಗುತ್ತದೆ. ಸ್ಮಾರ್ಟ್‌ಫೋನ್, ಆ್ಯಂಡ್ರಾಯ್ಡ್‌ಸೌಲಭ್ಯದಿಂದ ನಿರೀಕ್ಷೆಗೂ ಮೀರಿ ಇದು ಯಶಸ್ಸು ಪಡೆಯುವ ವಿಶ್ವಾಸ ಐಟಿ ಸೆಲ್‌ನದ್ದು. ಆಯಾ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಕ್ಷಣದಿಂದಲೇ ಸಾಮಾಜಿಕ ಜಾಲತಾಣ ಪ್ರಚಾರಕ್ಕೆ ಲಗ್ಗೆ ಇಡುತ್ತದೆ.

ಅರ್ಧ ಗಂಟೆಯಲ್ಲಿ 2 ಲಕ್ಷ ಮಂದಿ ಜಾಲತಾಣ ಲಿಂಕ್  
ಪ್ರತಿ ಅಭ್ಯರ್ಥಿಯ ಫೇಸ್‌ಬುಕ್ ಖಾತೆ ತೆರೆಯುತ್ತಾರೆ
ಹಾಲಿ ಸಂಸದರ ಕಾರ್ಯವೈಖರಿ ಮಾಹಿತಿ ನೀಡುತ್ತಾರೆ
ಇದಕ್ಕಾಗಿಯೇ ಬಿಜೆಪಿ ರಾಜ್ಯ ಘಟಕ ಆರಂಭಿಸಿದೆ ಐಟಿ ಸೆಲ್

ಸಾಮಾಜಿಕ ತಾಣಗಳಲ್ಲಿ ಜಾಹೀರಾತು: ಆಯೋಗದಿಂದ ಮಾರ್ಗದರ್ಶಿ ಸೂತ್ರ

ಸಾಮಾಜಿಕ ತಾಣಗಳಲ್ಲಿ ಪಕ್ಷಗಳು ಮಾಡುವ ವೆಚ್ಚದ ಬಗ್ಗೆಯೂ ನಿಗಾ ವಹಿಸಿದೆ. ಅದರ ಮೊದಲ ಹೆಜ್ಜೆಯೆಂಬಂತೆ, ಟ್ವಿಟರ್, ಫೇಸ್‌ಬುಕ್‌ನಂತಹ ತಾಣಗಳಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸುವುದಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಚುನಾವಣಾ ಆಯೋಗ ಬುಧವಾರ ಬಿಡುಗಡೆ ಮಾಡಿದೆ.
ಸಾಮಾಜಿಕ ತಾಣಗಳಲ್ಲಿ ಜಾಹೀರಾತು ಪ್ರಕಟಿಸುವ ಮುನ್ನ ಅದರಲ್ಲಿರುವ ಅಂಶಗಳನ್ನು ಆಯೋಗಕ್ಕೆ ತೋರಿಸಿ ಅದಕ್ಕೆ ಒಪ್ಪಿಗೆ (ಸರ್ಟಿಫಿಕೇಟ್) ಪಡೆಯಬೇಕು

ಇಲ್ಲಿ ನೀಡುವ ಜಾಹೀರಾತುಗಳಿಗೆ ಪಕ್ಷ ಅಥವಾ ವ್ಯಕ್ತಿ ಮಾಡಿರುವ ವೆಚ್ಚದ ಬಗೆಗಿನ ಮಾಹಿತಿಯನ್ನು ಆಯಾ ಸಾಮಾಜಿಕ ತಾಣಗಳು ಇಟ್ಟುಕೊಂಡಿರಬೇಕು. ಅಗತ್ಯ ಬಿದ್ದಾಗ ಒದಗಿಸಿಬೇಕು
ಕಾನೂನುಬಾಹಿರ ಅಥವಾ ಅವಹೇಳನಕಾರಿ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವಂತಹ ಅಂಶಗಳುಳ್ಳ ಜಾಹೀರಾತುಗಳನ್ನು ಪ್ರಕಟಿಸಬಾರದು.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಸಾಮಾಜಿಕ ತಾಣಗಳ ಖಾತೆಗಳ ವಿವರವನ್ನೂ ನೀಡಬೇಕು
ಸಾಮಾಜಿಕ ತಾಣಗಳಲ್ಲಿ ಜಾಹೀರಾತಿಗಾಗಿ ಮಾಡಿದ ವೆಚ್ಚದ ವಿವರವನ್ನು ಅಭ್ಯರ್ಥಿ ಹೊಂದಿರತಕ್ಕದ್ದು. ಅಭ್ಯರ್ಥಿಯ ಒಟ್ಟು ವೆಚ್ಚದಲ್ಲಿ ಈ ವೆಚ್ಚವೂ ಸೇರ್ಪಡೆಗೊಳ್ಳುತ್ತದೆ.


ಸಂಪರ್ಕ ಇಲ್ಲದವರು
ಪ್ರಹ್ಲಾದ್ ಜೋಶಿ (ಫೇಸ್‌ಬುಕ್ ಖಾತೆ ಇತ್ತೀಚೆಗೆ ಡಿಲಿಟ್ ಆಗಿದೆ), ಡಾ.ಬಿ. ಶಿವಲಿಂಗಯ್ಯ, ಎ.ಆರ್. ಕೃಷ್ಣಮೂರ್ತಿ, ರಮೇಶ್ ಕತ್ತಿ, ಗದ್ದಿಗೌಡರ್, ರಮೇಶ್ ಜಿಗಜಿಣಗಿ, ರೇವುನಾಯಕ ಬೆಳಮಗಿ, ಶಿವನಗೌಡ ನಾಯಕ, ಸಂಗಣ್ಣ ಕರಡಿ, ಜಿ.ಎಸ್. ಬಸವರಾಜು, ಎಂ. ನಾರಾಯಣಸ್ವಾಮಿ.

ವೆಬ್‌ಸೈಟ್‌ವುಳ್ಳವರು

ಅಜಯ್‌ಕುಮಾರ್ ಸರ್‌ನಾಯಕ್ ಪೇಸ್‌ಬುಕ್ ಅಕೌಂಟ್ ಹೊಂದಿದ್ದರೂ ಸಕ್ರಿಯರಾಗಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಿನಲ್ಲಿ ಪೇಸ್‌ಬುಕ್ ಅಕೌಂಟ್ ಇದ್ದರೂ ಅಪ್‌ಡೇಟ್ ಆಗಿಲ್ಲ. ರಿಜ್ವಾನ್ ಅರ್ಷದ್ ವೆಬ್‌ಸೈಟ್ ಹೊಂದಿದ್ದಾರೆ.

ದೂರ ಉಳಿದವರು...
ಬಿ.ವಿ. ನಾಯ್ಕ್, ಪ್ರಕಾಶ್ ಹುಕ್ಕೇರಿ, ಬಿ.ಎನ್. ಚಂದ್ರಪ್ಪ, ಎನ್. ಧರ್ಮಸಿಂಗ್, ಎಚ್. ವಿಶ್ವನಾಥ್, ಎ. ಮಂಜು, ಮಂಜುನಾಥ್ ಭಂಡಾರಿ, ಎಸ್.ಪಿ. ಮುದ್ದಹನುಮೇಗೌಡ, ಪ್ರಕಾಶ್ ರಾಥೋಡ್ ಸಾಮಾಜಿಕ ಜಾಲ ತಾಣಗಳಲ್ಲಿ ಇಲ್ಲ.

ಕ್ರಿಯಾಶೀಲರಾಗಿರದವರು
ಜನಾರ್ದನ ಸ್ವಾಮಿ (ವೆಬ್‌ಸೈಟ್ ಇದೆಯಾದರೂ 2009ರ ನಂತರ ಅಪ್‌ಡೇಟ್ ಆಗಿಲ್ಲ), ಶೋಭಾ ಕರಂದ್ಲಾಜೆ.  


ನೆಟ್‌ನಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳು ಹಿಟ್ಸ್ ಹೀಗಿವೆ
ನಂದನ್ ನೀಲೇಕಣಿ- ವೆಬ್‌ಸೈಟ್, ಪೇಸ್‌ಬುಕ್ 3,621
ಡಿ.ಕೆ.ಸುರೇಶ್- ವೆಬ್‌ಸೈಟ್, ಪೇಸ್‌ಬುಕ್ 1,513
ಮಲ್ಲಿಕಾರ್ಜುನ ಖರ್ಗೆ- ಪೇಸ್‌ಬುಕ್ ಪೇಜ್ 1,447
ಕೆ.ಎಚ್. ಮುನಿಯಪ್ಪ - ಪೇಸ್‌ಬುಕ್ ಪೇಜ್ 318
ಎನ್.ವೈ. ಹನುಮಂತಪ್ಪ- ಪೇಸ್‌ಬುಕ್    16
ಆರ್. ಧ್ರುವನಾರಾಯಣ - ಪೇಸ್‌ಬುಕ್ ಪೇಜ್    03
ಜಯಪ್ರಕಾಶ್ ಹೆಗ್ಡೆ- ಪೇಸ್‌ಬುಕ್ 15,88
ರಮ್ಯಾ - ಪೇಸ್‌ಬುಕ್ 2351    ಟ್ವೀಟರ್    222
ಡಾ.ಎಂ. ವೀರಪ್ಪ ಮೊಯ್ಲಿ- ಪೇಸ್‌ಬುಕ್ ಪೇಜ್     473
ಸಿ. ನಾರಾಯಣಸ್ವಾಮಿ - ಪೇಸ್‌ಬುಕ್    2179


ಕ್ರಿಯಾಶೀಲರಾಗಿರುವ ಸಂಸದ ಅಭ್ಯರ್ಥಿಗಳು
ಅನಂತ್ ಕುಮಾರ್- ವೆಬ್‌ಸೈಟ್, ಫೇಸ್‌ಬುಕ್  2.70 ಲಕ್ಷ    ಟ್ವೀಟರ್    22,000
ಪ್ರತಾಪ್ ಸಿಂಹ- ವೆಬ್‌ಸೈಟ್, ಫೇಸ್‌ಬುಕ್    51,000    ಟ್ವೀಟರ್    12400
ಡಿ.ವಿ. ಸದಾನಂದಗೌಡ- ವೆಬ್‌ಸೈಟ್, ಫೇಸ್‌ಬುಕ್    4,400    ಟ್ವೀಟರ್    553
ಪಿ.ಸಿ.ಮೋಹನ್- ವೆಬ್‌ಸೈಟ್, ಫೇಸ್‌ಬುಕ್     2200    ಟ್ವೀಟರ್    172
ಯಡಿಯೂರಪ್ಪ- ವೆಬ್‌ಸೈಟ್, ಫೇಸ್‌ಬುಕ್    6,000    ಟ್ವೀಟರ್    5,213
ಮುನಿರಾಜು ಗೌಡ- ಫೇಸ್‌ಬುಕ್    10,020
ಅನಂತ್‌ಕುಮಾರ್ ಹೆಗಡೆ- ಫೇಸ್‌ಬುಕ್    6,000
ಬಿ.ಎನ್.ಬಚ್ಚೇಗೌಡ- ಟ್ವೀಟರ್    144
ನಳೀನ್ ಕುಮಾರ್ ಕಟೀಲು- ವೆಬ್‌ಸೈಟ್, ಫೇಸ್‌ಬುಕ್    16,000    ಟ್ವೀಟರ್    660
ಸುರೇಶ್ ಅಂಗಡಿ- ವೆಬ್‌ಸೈಟ್, ಫೇಸ್‌ಬುಕ್    10,334


- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement