ಹೊಸ್ತಿಲು ತುಳಿದರೂ ಮುಗಿಯದ ಗೊಂದಲ
ಅಭ್ಯರ್ಥಿ ಆಯ್ಕೆ ಜಟಿಲಗೊಂಡ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಅಧಿಸೂಚನೆಯ ನಂತರವೂ ಕಾಂಗ್ರೆಸ್ನಲ್ಲಿ ಗೊಂದಲ ಮುಂದುವರಿದಿದೆ...
-ರಾಜ್ಯದ ಚುನಾವಣೆ ಅಧಿಸೂಚನೆ ಹೊರಬಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದರೂ, ಪ್ರಮುಖ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲಕ್ಕೆ ಪೂರ್ಣ ವಿರಾಮ ಬಿದ್ದಿಲ್ಲ. ಕಗ್ಗಂಟಾಗಿರುವ ಕ್ಷೇತ್ರಗಳಲ್ಲಿ ಟಿಕೆಟ್ಗಾಗಿ ಪೈಪೋಟಿ ಮುಂದುವರಿದಿದ್ದು ಕಾಂಗ್ರೆಸ್ ತಿಣುಕಾಟ ಕೊನೆಗೊಂಡಿಲ್ಲ. ಬಿಜೆಪಿ ಪಟ್ಟಿ ಅಂತಿಮಗೊಳಿಸಿದ್ದರೂ ಅಸಮಾಧಾನದ ಹೊಗೆ ಶಮನಗೊಂಡಿಲ್ಲ. ಜೆಡಿಎಸ್ನಲ್ಲಿ ಅಭ್ಯರ್ಥಿಗಳ ಹುಡುಕಾಟವೇ ಮುಗಿದಿಲ್ಲ...
ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.19
ಅಭ್ಯರ್ಥಿ ಆಯ್ಕೆ ಜಟಿಲಗೊಂಡ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಅಧಿಸೂಚನೆಯ ನಂತರವೂ ಕಾಂಗ್ರೆಸ್ನಲ್ಲಿ ಗೊಂದಲ ಮುಂದುವರಿದಿದೆ.
ಹುಬ್ಬಳ್ಳಿ- ಧಾರವಾಡ ಹಾಗೂ ಹಾವೇರಿ ಯಿಂದ ಯಾರನ್ನು ಕಣಕ್ಕಿಳಿಸಬೇಕೆಂಬುದು ರಾಜ್ಯ ಹಾಗೂ ರಾಷ್ಟ್ರೀಯ ನಾಯಕತ್ವಕ್ಕೆ ಬಗೆ ಹರಿದಿಲ್ಲ. ಈ ನಡುವೆಯೇ ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರು ಉತ್ತರ ಮತ್ತು ಕೇಂದ್ರ ಕ್ಷೇತ್ರದ ಆಕಾಂಕ್ಷಿಗಳು ಮುನಿಸಿಕೊಂಡಿದ್ದು, ಪಕ್ಷೇತರ ಸ್ಪರ್ಧೆ, ಪಕ್ಷಾಂತರ ಸಿದ್ಧತೆ ನಡೆಸಿದ್ದಾರೆ.
ಶಿವಮೊಗ್ಗದಿಂದ ಮಾಜಿ ಸಚಿವ ಕುಮಾರ ಬಂಗಾರಪ್ಪ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಅವರ ಮನವೊಲಿಕೆ ಪ್ರಯತ್ನ ನಡೆಯುತ್ತಿದ್ದರೂ ಅಧಿಕೃತ ಅಭ್ಯರ್ಥಿ ಮಂಜುನಾಥ್ ಭಂಡಾರಿ ಬಿ ಫಾರ್ಮ್ ಇಲ್ಲದೆಯೇ ನಾಮಪತ್ರ ಸಲ್ಲಿಸಿದ್ದಾರೆ. ಇದು ಕುಮಾರ ಬಣವನ್ನು ಕೆರಳಿಸಿದೆ.
ಬೆಂಬಲಿಗರ ಪ್ರತಿಭಟನೆ: ಚಿತ್ರದುರ್ಗದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ವಿರುದ್ಧ ಕಳೆದ ಬಾರಿಯ ಅಭ್ಯರ್ಥಿ ತಿಪ್ಪೇಸ್ವಾಮಿ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಸಮಾಜಕಲ್ಯಾಣ ಸಚಿವ ಎಚ್. ಆಂಜನೇಯ ಅವರ ಒತ್ತಡಕ್ಕೆ ಮಣಿದು ಹೊರ ಜಿಲ್ಲೆಯವರಿಗೆ ಟಿಕೆಟ್ ನೀಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆಯಲ್ಲಿ ಸೋತಿದ್ದ ಚಂದ್ರಪ್ಪನವರಿಗೆ ಟಿಕೆಟ್ ನೀಡಿದ್ದು ಆಕ್ರೋಶಕ್ಕೆ ಕಾರಣ.
ಮತ್ತೆರಡು ಬಂಡಾಯ: ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ಗೆ ಇನ್ನಿಬ್ಬರು ಮುಖಂಡರು ಬಂಡಾಯದ ಬಾವುಟ ಹಾರಿಸಿದ್ದಾರೆ. ರಾಜ್ಯದ ಯಾವ ಕ್ಷೇತ್ರದಿಂದಲೂ ಕ್ರಿಶ್ಚಿಯನ್ನರಿಗೆ ಟಿಕೆಟ್ ನೀಡಿಲ್ಲ ಎಂಬ ನೆಪ ನೀಡಿ ಮಾಜಿ ಸಂಸದ ಎಚ್.ಟಿ. ಸಾಂಗ್ಲಿಯಾನಾ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಂಗ್ಲಿಯಾನಾ ಜೆಡಿಎಸ್ನಿಂದ ಬೆಂಗಳೂರು ಕೇಂದ್ರಕ್ಕೆ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಒಂದೊಮ್ಮೆ ಜಾಫರ್ ಷರೀಫ್ ಜೆಡಿಎಸ್ನ ಮೈಸೂರ ಅಭ್ಯರ್ಥಿಯಾದರೆ ಸಾಂಗ್ಲಿಯಾನಾ ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಲಿದ್ದಾರೆ.
ಅದೇ ರೀತಿ ಬೆಂಗಳೂರು ಉತ್ತರದಿಂದ ಕಣಕ್ಕಿಳಿಯಲು ಬಯಸಿದ್ದ ಕಾಂಗ್ರೆಸ್ನ ಕೆ.ಸಿ.ರಾಮಮೂರ್ತಿ ಅವರೂ ಜೆಡಿಎಸ್ನತ್ತ ಮುಖ ಮಾಡಿದ್ದಾರೆ. ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸದೇ ಅಚ್ಚರಿ ಮೂಡಿಸಿದ್ದ ಅವರು ಈಗ ಜೆಡಿಎಸ್ ಸೇರುವ ಪ್ರಯತ್ನ ನಡೆಸಿರುವುದು ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ.
ಆಳ್ವ ಬೇಸರ: ಇನ್ನು ಕೆನರಾದಿಂದ ಸಚಿವ ದೇಶಪಾಂಡೆ ಅವರ ಪುತ್ರನಿಗೆ ಟಿಕೆಟ್ ನೀಡಿರುವುದು, ರಾಜ ಸ್ಥಾನ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಅವರ ಕೋಪಕ್ಕೆ ಕಾರಣವಾಗಿದೆ. ಈ ಕ್ಷೇತ್ರದಿಂದ ಪುತ್ರ ನಿವೇದಿತ್ ಆಳ್ವ ಅವರಿಗೆ ಟಿಕೆಟ್ ಕೊಡಿಸಲು ಮಾರ್ಗರೇಟ್ ಪ್ರಯತ್ನಿಸಿದ್ದರು.
ಮುಗಿಯದ ಸಮಸ್ಯೆ: ಆದರೆ ಇದೆಲ್ಲಕ್ಕಿಂತ ಹೆಚ್ಚಾಗಿ ಹಾವೇರಿ ಮತ್ತು ಹುಬ್ಬಳ್ಳಿ- ಧಾರವಾಡ ಕ್ಷೆತ್ರ ಸಮಸ್ಯೆಯಾಗಿ ಪರಿಣಮಿಸಿದೆ. ಈ ಪೈಕಿ ಒಂದು ಕಡೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕಾದ ಅನಿವಾರ್ಯತೆ ಇದೆ. ಹಾವೇರಿಯಲ್ಲಿ ಸಲೀಂ ಅಹ್ಮದ್ ಹಾಗೂ ಝಾಕೀರ್ ಸನದಿ ಮಧ್ಯೆ ಪೈಪೋಟಿ. ಜತೆಗೆ ಸಚಿವ ಎಚ್.ಕೆ. ಪಾಟೀಲ್ ಸೋದರ ಬಿ.ಆರ್. ಪಾಟೀಲ್ ಕೂಡ ಆಕಾಂಕ್ಷಿ. ಹುಬ್ಬಳ್ಳಿ- ಧಾರವಾಡದಿಂದ ಮಂಜು ನಾಥ್ ಕುನ್ನೂರ್ ಅಥವಾ ಶಾಸಕ ವಿನಯ್ಕುಲಕರ್ಣಿ ಅವರ ಪೈಕಿ ಯಾರಿಗೆ ಮಣೆ ಹಾಕಬೇಕೆಂಬ ಸಂದಿಗ್ಧವಿದೆ. ಒಂದೊಮ್ಮೆ ಹಾವೇರಿಯಲ್ಲಿ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ತಪ್ಪಿದರೆ ಧಾರವಾಡದಲ್ಲಿ ಅವಕಾಶ ನೀಡಬೇಕಾಗುತ್ತದೆ.
ಮೋದಿ ವಿರುದ್ಧ ದಿಗ್ವಿಜಯ ?
ವಾರಾಣಸಿಯಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೋದಿ ವಿರುದ್ಧ ಕಣಕ್ಕಿಳಿಸಲು ಕಾಂಗ್ರೆಸ್ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. ಅಷ್ಟರಲ್ಲಿ ದಿಗ್ವಿಜಯ್ ಸಿಂಗ್ ಅವರು ಸ್ವಯಂಪ್ರೇರಿತವಾಗಿ ಮೋದಿ ವಿರುದ್ಧ ಕಣಕ್ಕಿಳಿಯಲು ಮುಂದೆ ಬಂದಿದ್ದಾರೆ. ಈ ನಡುವೆ, ಮೋದಿ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಅವರಿಗೆ ಪಕ್ಷ ಬೆಂಬಲ ನೀಡಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಎನ್ಡಿಎ ಜತೆ ಮೈತ್ರಿ ಇಲ್ಲ
ಎನ್ಸಿಪಿಯು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಜತೆಗೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆ ಬಳಿಕ ಎನ್ಸಿಪಿಯು ಬಿಜೆಪಿ ಸಖ್ಯ ಮಾಡಿಕೊಳ್ಳಲಿದೆ
ದೇಶಾದ್ಯಂತ ನಾಮಪತ್ರ ಸಲ್ಲಿಕೆ
ಸ್ಪೀಕರ್ ಮೀರಾಕುಮಾರ್, ಕೇಂದ್ರ ಸಚಿವ ಮುಲ್ಲಪಲ್ಲಿ ರಾಮಚಂದ್ರನ್, ರಾಮ್ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್, ಐಯುಎಂಎಲ್-ಎಂ ಅಧ್ಯಕ್ಷಇ.ಅಹಮದ್ ಏ.10ರಂದು ನಡೆಯುವ 3ನೇ ಹಂತದ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ಪ್ರಮುಖರು.
ಮನೀಶ್ ಸ್ಪರ್ಧೆ ಖಚಿತ
ಕೇಂದ್ರ ವಾರ್ತಾ ಸಚಿವ ಮನೀಶ್ ತಿವಾರಿ ಪಂಜಾಬ್ನ ಲೂಧಿಯಾನಾ ಕ್ಷೇತ್ರದಿಂದಲೇ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಸೂಚನೆಯನ್ನು ಕಾಂಗ್ರೆಸ್ ನೀಡಿದೆ. 'ತಿವಾರಿ ಆರೋಗ್ಯದಿಂದ ಇದ್ದಾರೆ ಅಂತಾದರೆ ಅವರು ಸ್ಪರ್ಧಿಸದೇ ಇರಲು ಕಾರಣಗಳೇನೂ ಇಲ್ಲ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಶಕೀಲ್ ಅಹಮದ್ ಹೇಳಿದ್ದಾರೆ. ಲುಧಿಯಾನಾದ ಹಾಲಿ ಸಂಸದರಾಗಿರುವ ತಿವಾರಿ ಮಾ.15ರಂದು ಖಾಸಗಿ ಆಸ್ಪತ್ರೆಯ ಹೃದ್ರೋಗ ವಿಭಾಗಕ್ಕೆ ದಾಖಲಾಗಿದ್ದರು. ಎರಡು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಕೇಂದ್ರದ ಮಾಜಿ ಸಚಿವ ಪವನ್ ಕುಮಾರ್ ಬನ್ಸಲ್ ಸ್ಪರ್ಧಿಸುತ್ತಿರುವ ಚಂಡೀಗಡ ಕ್ಷೇತ್ರದ ಬಗ್ಗೆ ತಿವಾರಿ ಆಸಕ್ತಿ ಹೊಂದಿದ್ದಾರೆ ಎನ್ನುವ ಮಾತುಗಳೂ ಇದ್ದವು.
ಜೆಡಿಎಸ್ನಿಂದ ಷರೀಫ್ ಕಣಕ್ಕೆ
ಕಾಂಗ್ರೆಸ್ ಮುಖಂಡ ಸಿ.ಕೆ. ಜಾಫರ್ ಷರೀಫ್ ಮೈಸೂರು- ಕೊಡಗು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಶಾಸಕ ಜಿ.ಟಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ಷರೀಫ್ ಸ್ಪರ್ಧಿಸದಿದ್ದರೆ ಸಾ.ರಾ.ಮಹೇಶ್ ಕಣಕ್ಕೆ ಇಳಿಯಲಿದ್ದಾರೆ ಎಂದರು.
ಟಿಎಂಸಿ ವಿನಾಯ್ತಿ ಇಲ್ಲ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಯಾದವ್ ವಿರುದ್ಧ ತೃಣಮೂಲ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಬುಧವಾರ ಪ್ರಕಟಿಸಿದೆ.
4 ಹಂತ ಏ.12 ಅಸ್ಸಾಂನ 3, ಗೋವಾದ 2, ಸಿಕ್ಕಿಂ ಮತ್ತು ತ್ರಿಪುರಾಗಳ ತಲಾ ಒಂದು ಕ್ಷೇತ್ರಗಳಲ್ಲಿ ಮತ
ಒಟ್ಟು 7
5 ಹಂತ ಏ.17
ಕರ್ನಾಟಕದ 28, ರಾಜಸ್ತಾನದ 20, ಮಹಾರಾಷ್ಟ್ರದ 19, ಒಡಿಸ್ಸಾ ಮತ್ತು ಉತ್ತರ ಪ್ರದೇಶಗಳ ತಲಾ 11, ಮಧ್ಯಪ್ರದೇಶದ 10, ಬಿಹಾರದ 7, ಜಾರ್ಖಂಡ್ನ 6, ಪಶ್ಚಿಮ ಬಂಗಾಳದ 4, ಛತ್ತೀಸಗಡದ 3, ಜಮ್ಮು-ಕಾಶ್ಮೀರ ಹಾಗೂ ಮಣಿಪುರಗಳ ತಲಾ 1 ಕ್ಷೇತ್ರ
ಒಟ್ಟು 118