ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಂಕಪಟ್ಟಿ ಇಲ್ಲದೆ ಕಳೆಯಿತು 9 ತಿಂಗಳು!

Vishwanath S
Updated On : 21 Mar 2014, 12:45 pm

ಬೆಂಗಳೂರು: ಕಳೆದ ಒಂಬತ್ತು ತಿಂಗಳಿಂದ ರಾಜ್ಯದ ಎಲ್ಲ ಶಾಲೆಗಳಲ್ಲಿ ಹಾಜರಿ ಪಟ್ಟಿಯೇ ಅಂಕಪಟ್ಟಿಯಾಗಿದೆ!
ಶೈಕ್ಷಣಿಕ ವರ್ಷ ಮುಗಿಯಲು ಬಂದರೂ ಅಂಕಪಟ್ಟಿ ವಿತರಿಸಲು ಶಿಕ್ಷಣ ಇಲಾಖೆಗೆ ಸಮಯ ದೊರೆತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಏಪ್ರಿಲ್ 10 ರೊಳಗೆ ನೀಡಿದರಾಯಿತಲ್ಲ ಎಂಬ ಅಸಡ್ಡೆ ಉತ್ತರ ನೀಡುತ್ತಿದ್ದಾರೆ.
ಸಾಮಾನ್ಯ ಜ್ಞಾನ ಇದ್ದಂತಿಲ್ಲ: ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ನಿಯಮ ರೂಪಿಸುವ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಅಂಕಪಟ್ಟಿ ನೀಡಬೇಕೆಂಬ ಸಾಮಾನ್ಯ ಜ್ಞಾನ ಇದ್ದಂತಿಲ್ಲ. ಸಮಗ್ರ ವ್ಯಾಪಕ ಮೌಲ್ಯಮಾಪನವನ್ನು ವಿರೋಧದ ನಡುವೆಯೇ ಅವಸರದಲ್ಲಿ ಜಾರಿಗೆ ತಂದಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ, ಅದಕ್ಕೆ ಅವಶ್ಯವಿರುವ ಸೌಕರ್ಯಗಳನ್ನು ಮಾತ್ರ ನೀಡಲಿಲ್ಲ. ಜೂನ್ ತಿಂಗಳಲ್ಲಿಯೇ ಶಿಕ್ಷಕರಿಗೆ ನೀಡಬೇಕಿದ್ದ ಅಂಕಪಟ್ಟಿಯನ್ನು ಶೈಕ್ಷಣಿಕ ವರ್ಷ ಮುಗಿಯುತ್ತಿದ್ದರೂ ಒದಗಿಸಿಲ್ಲ.
ಸಮಯಪ್ರಜ್ಞೆ ಇಲ್ಲದ ಇಲಾಖೆ: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸೂಚಿಸಿತು ಎಂಬ ಕಾರಣಕ್ಕೆ ಸಮಗ್ರ ವ್ಯಾಪಕ ಮೌಲ್ಯಮಾಪನವನ್ನು ಶಿಕ್ಷಣ ಇಲಾಖೆ ಜಾರಿಗೆ ತಂದಿದೆ. ಈ ನಿಯಮದಿಂದ ಶಿಕ್ಷಕರ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಅಂಕಪಟ್ಟಿಯನ್ನು ಸಮಯಕ್ಕೆ ಸರಿಯಾಗಿ ನೀಡುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಬೇಕಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆಯ ಆಯುಕ್ತರನ್ನು ಪ್ರಶ್ನಿಸಿದರೆ 'ಈಗಾಗಲೆ ಇಲಾಖೆಯಿಂದ ಅಂಕಪಟ್ಟಿ ಕಳುಹಿಸಿದ್ದೇವೆ' ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಆದರೆ ಜಿಲ್ಲಾ ಶಿಕ್ಷಣಾಧಿಕಾರಿಗಳು ನೀಡುವ ಉತ್ತರ ತದ್ವಿರುದ್ಧವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಂಕಪಟ್ಟಿ ಬಾರದೆ ಶಾಲೆಗಳಿಗೆ ಹೇಗೆ ವಿತರಿಸಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ.
ಅಂಕಪಟ್ಟಿ ಬದಲು ಚೀಟಿ ವ್ಯವಹಾರ!: ಸಮಗ್ರ ವ್ಯಾಪಕ ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ಬಂದ ದಿನದಿಂದ ಪ್ರತಿ ವಾರಕ್ಕೊಂದು ಪರೀಕ್ಷೆ ನಡೆಯುತ್ತಿದೆ. ಇದನ್ನು ಹೊರತುಪಡಿಸಿ ನಾಲ್ಕು ಕಿರು ಹಾಗೂ ತಲಾ ಒಂದು ಮಧ್ಯವಾರ್ಷಿಕ, ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ. ಇದೇ ಶಿಕ್ಷಣ ಇಲಾಖೆಯ ಸೂಚನೆ ಪ್ರಕಾರ ಪ್ರತಿ ಪರೀಕ್ಷೆ ಬಳಿಕ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಪಾಲಕ, ಪೋಷಕರ ಸಹಿ ಹಾಕಿಸಬೇಕು. ಇದಕ್ಕೆ ಮೊದಲು ಉತ್ತರ ಪ್ರತಿಯ ಮೇಲೂ ಸಹಿ ಹಾಕಿಸಬೇಕು.
ಆದರೆ ಪ್ರಸಕ್ತ ಶಿಕ್ಷಣ ವರ್ಷದಲ್ಲಾದ ಗೊಂದಲದಿಂದ ಅಂಕಪಟ್ಟಿಯ ಬದಲು ಚೀಟಿಗಳಲ್ಲಿ ಅಂಕ ಬರೆದು ಕೊಟ್ಟು ಸಹಿ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮತ್ತೊಂದೆಡೆ ಶಿಕ್ಷಕರು ತಾತ್ಕಾಲಿಕವಾಗಿ ಹಾಜರಿ ಪಟ್ಟಿ ಅಥವಾ ಬೇರೆಡೆ ಅಂಕಗಳನ್ನು ದಾಖಲಿಸಿಕೊಳ್ಳಬೇಕಿದೆ. ಈ ತಿಂಗಳಾಂತ್ಯದೊಳಗೆ ಅಂಕಪಟ್ಟಿ ನೀಡಿದರೆ ಮತ್ತೊಮ್ಮೆ ಶಿಕ್ಷಕರು ಅಂಕಗಳನ್ನು ದಾಖಲಿಸಿ ಪಾಲಕರ ಸಹಿ ಹಾಕಿಸಿಕೊಳ್ಳಬೇಕಿದೆ.
ವಿಳಂಬಕ್ಕೆ ಕಾರಣವೇನು?: ಅಂಕಪಟ್ಟಿ ಕುರಿತಂತೆ ಕಳೆದ 4 ತಿಂಗಳಿಂದ ಶಿಕ್ಷಕರು ಹಾಗೂ ಶಿಕ್ಷಕರ ಸಂಘಟನೆಗಳು ಇಲಾಖೆ ಗಮನಕ್ಕೆ ತಂದಿದ್ದರು. ಆದರೆ ವಾರ್ಷಿಕ ಪರೀಕ್ಷೆ ಮುಗಿಯುವುದರೊಳಗೆ ನೀಡಿದರಾಯಿತು ಎಂಬ ಅಸಡ್ಡೆಯೇ ವಿಳಂಬಕ್ಕೆ ಕಾರಣವಾಗಿದೆ.
ಆಯುಕ್ತರ ಉತ್ತರವೇ ಅಯೋವುಯ: ಈ ವಿಚಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮಹಮದ್ ಮೋಹ್ಸೀನ್ ಅವರನ್ನು 'ಕನ್ನಡಪ್ರಭ' ಪ್ರಶ್ನಿಸಿದಾಗ, 'ಈಗಾಗಲೆ ಅಂಕಪಟ್ಟಿ ನೀಡಲಾಗಿದೆ. ಸರಿಯಾದ ದಿನ ನನಗೆ ನೆನಪಿಲ್ಲ. ಯಾವುದೇ ವಿಳಂಬವಾಗಿಲ್ಲ' ಎಂಬ ಸುಳ್ಳು ಹೇಳಿಕೆ ನೀಡಿದ್ದಾರೆ.
ಆದರೆ ಉತ್ತರ ಕನ್ನಡದ ಡಿಡಿಪಿಐ ಅವರು ನೀಡಿದ ಉತ್ತರವೇ ಆಯುಕ್ತರು ಸುಳ್ಳು ಹೇಳಿರುವುದನ್ನು ಸಾಬೀತು ಮಾಡಿದೆ. 'ಶಿಕ್ಷಕರು ನಮಗೆ ಮನವಿ ಮಾಡುತ್ತಿದ್ದಾರೆ. ವಿಳಂಬವಾಗಿರುವುದು ನಿಜ. ಆದರೆ ಅಂಕಪಟ್ಟಿಯಲ್ಲಿ ಅಂಕಗಳನ್ನು ದಾಖಲಿಸಲು ಇನ್ನೂ ಕಾಲಾವಕಾಶವಿದೆ. ಶಿಕ್ಷಣ ಇಲಾಖೆಯನ್ನು ಕೇಳಿದಾಗ ಇನ್ನೊಂದೆರಡು ದಿನದಲ್ಲಿ ಕಳುಹಿಸುತ್ತೇವೆ ಎಂಬ ಉತ್ತರ ನೀಡುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಅಸಡ್ಡೆ ಧೋರಣೆ
ಶಿಕ್ಷಣ ಇಲಾಖೆಯಲ್ಲಿ ಕುಳಿತ ಬಹುತೇಕ ಅಧಿಕಾರಿಗಳು ಶಿಕ್ಷಕರ ವೃತ್ತಿಯನ್ನು ಅಸಡ್ಡೆಯಿಂದ ಕಾಣುವವರು. 'ಮಾಡಲೇನು ಕೆಲಸವಿರುತ್ತೆ, ಎಲ್ಲ ಪರೀಕ್ಷೆ ಮುಗಿದ ಬಳಿಕ ನೀಡಿದರಾಯಿತು' ಎಂಬ ಧೋರಣೆ ಹೊಂದಿರುತ್ತಾರೆ. ಆದರೆ ಪರೀಕ್ಷೆ ಮುಗಿದ ಬಳಿಕ ಚುನಾವಣೆ ಕಾರ್ಯಕ್ಕೆ ತರಬೇತಿ ಮೇಲೆ ಶಿಕ್ಷಕರನ್ನು ಕಳುಹಿಸುತ್ತಾರೆ. ಸಮಗ್ರ ವ್ಯಾಪಕ ಮೌಲ್ಯಮಾಪನದಲ್ಲಿ ಅಸಂಬದ್ಧ 55 ಪ್ರಶ್ನೆಗಳಿಗೆ ಉತ್ತರ ಬರೆಯುವಲ್ಲಿಯೇ ಸುಸ್ತಾಗುವ ಶಿಕ್ಷಕರಿಗೆ, ಮತ್ತೆ ಇಲ್ಲಿಯೂ ಗೊಂದಲ ಮೂಡಿಸಲಾಗುತ್ತಿದೆ.


-ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement