ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನರ್ವಸ್ ನೈಂಟಿ

ನಿರ್ಭೀತ, ದಿಟ್ಟ ಹಾಗೂ ತೀಕ್ಷ್ಣ ಬರವಣಿಗೆಗಳಿಗೆ ಹೆಸರಾಗಿದ್ದ ಖ್ಯಾತ ಲೇಖಕ, ಪತ್ರಕರ್ತ ಖುಷ್ವಂತ್ ಸಿಂಗ್(99) ಗುರುವಾರ ನವದೆಹಲಿಯಲ್ಲಿ ನಿಧನರಾದರು...

Vishwanath S
Updated On : 21 Mar 2014, 12:35 pm

1915-2014
ನವದೆಹಲಿ:
ನಿರ್ಭೀತ, ದಿಟ್ಟ ಹಾಗೂ ತೀಕ್ಷ್ಣ ಬರವಣಿಗೆಗಳಿಗೆ ಹೆಸರಾಗಿದ್ದ ಖ್ಯಾತ ಲೇಖಕ, ಪತ್ರಕರ್ತ ಖುಷ್ವಂತ್ ಸಿಂಗ್(99) ಗುರುವಾರ ನವದೆಹಲಿಯಲ್ಲಿ ನಿಧನರಾದರು.
 ಸುಜನ್ ಸಿಂಗ್ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಮಧ್ಯಾಹ್ನ ಅವರು ಕೊನೆಯುಸಿರೆಳೆದರು. ಖುಷ್ವಂತ್ ಅವರು ಪುತ್ರ ರಾಹುಲ್ ಹಾಗೂ ಪುತ್ರಿ ಮಾಲಾರನ್ನು ಅಗಲಿದ್ದಾರೆ. ಸಂಜೆ ಲೋಧಿ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.
 ಕೆಲವು ವಾರಗಳ ಹಿಂದಷ್ಟೇ ಅವರು ತಮ್ಮ ಬರವಣಿಗೆಗಳನ್ನು ನಿಲ್ಲಿಸಿದ್ದರು. ಆದರೆ ಪ್ರತಿ ದಿನ ಬೆಳಗ್ಗೆ ಎಲ್ಲ ಪತ್ರಿಕೆಗಳನ್ನೂ ಓದುತ್ತಿದ್ದರು. ಕೊನೆಯುಸಿರು ಎಳೆಯುವವರೆಗೂ ಅವರು ಮಾನಸಿಕವಾಗಿ ಕ್ರಿಯಾಶೀಲರಾಗಿದ್ದರು. ತಾವು ಬಯಸಿದಂತೆಯೇ ಅವರು ಶಾಂತಿಯುತವಾಗಿ ಮರಣ ಹೊಂದಿದರು ಎಂದು ಖುಷ್ವಂತ್ ಪುತ್ರ, ಪತ್ರಕರ್ತ ರಾಹುಲ್ ಹೇಳಿದ್ದಾರೆ.
ಖುಷ್ವಂತ್ ಅವರು ಅಂತಾರಾಷ್ಟ್ರೀಯವಾಗಿ ಖ್ಯಾತಿ ಗಳಿಸಿದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ 'ಟ್ರೈನ್ ಟು ಪಾಕಿಸ್ತಾನ್‌', 'ಐ ಶಲ್ ನಾಟ್ ಹಿಯರ್ ದಿ ನೈಟಿಂಗೇಲ್‌', 'ಎ ಹಿಸ್ಟರಿ ಆಫ್ ದ ಸಿಖ್ಸ್‌', 'ದಿ ಕಂಪನಿ ಆಫ್ ವಿಮೆನ್‌' ಹಾಗೂ 'ಡೆಲ್ಲಿ' ಸೇರಿದೆ. ಒಟ್ಟು 30 ಕಾದಂಬರಿಗಳು, ಹಲವು ಸಣ್ಣ ಕಥೆಗಳು, ಪ್ರಬಂಧಗಳು ಹಾಗೂ ಅಸಂಖ್ಯ ವಿಮರ್ಶೆಗಳನ್ನು ಬರೆದ ಖ್ಯಾತಿಯನ್ನೂ ಅವರು ಹೊಂದಿದ್ದಾರೆ.
ಪ್ರಧಾನಿ, ರಾಷ್ಟ್ರಪತಿ ಕಂಬನಿ: ಖುಷ್ವಂತ್ ನಿಧನಕ್ಕೆ ಪ್ರಧಾನಿ ಮನಮೋಹನ್‌ಸಿಂಗ್, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರೊಬ್ಬ ನಿರ್ಭೀತ ಬುದ್ಧಿಜೀವಿ ಎಂದು ಪ್ರಣಬ್ ಬಣ್ಣಿಸಿದ್ದಾರೆ.  ಪ್ರಧಾನಿ ಸಿಂಗ್, ಪತ್ನಿ ಗುರುಶರಣ್ ಕೌರ್, ಸೋನಿಯಾ ಗಾಂಧಿ ಅವರು ಖುಷ್ವಂತ್‌ರ ನಿವಾಸಕ್ಕೆ ಭೇಟಿ ನೀಡಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ, ಕುಲದೀಪ್ ನಯ್ಯರ್, ಬಿಶನ್ ಸಿಂಗ್ ಬೇಡಿ, ಲೇಖಕ ವಿಕ್ರಂ ಸೇಥ್ ಸೇರಿದಂತೆ ಅನೇಕ ಗಣ್ಯರು ಸಿಂಗ್‌ರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement