ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ನಾನೊಬ್ಬನೇ ಬಾಸ್ಟರ್ಡ್‌'!

Vishwanath S
Updated On : 21 Mar 2014, 12:28 pm

ನನಗೆ ದ್ವೇಷದ ಪತ್ರಗಳು ಬರುತ್ತಿರುತ್ತವೆ. ಅವುಗಳಲ್ಲಿ ಒಂದನ್ನು ಸ್ಮರಣಿಕೆ ಥರ ಇಟ್ಟುಕೊಂಡಿದ್ದೇನೆ. ಅದರಲ್ಲಿ ವಿಳಾಸ ಹೀಗೆ ಬರೆದಿತ್ತು: 'ಬಾಸ್ಟರ್ಡ್ ಖುಷ್‌ವಂತ್ ಸಿಂಗ್, ಇಂಡಿಯಾ'. ಅಂಚೆ ಇಲಾಖೆ ಪ್ರಾಮಾಣಿಕವಾಗಿ ಈ ದೇಶದ ಒಬ್ಬನೇ ಒಬ್ಬ ಬಾಸ್ಟರ್ಡ್ ಆಗಿರುವ ನನಗೆ ಅದನ್ನು ತಲುಪಿಸಿತ್ತು.
ಹೀಗೆ ತನ್ನನ್ನೇ ಗೇಲಿ ಮಾಡಿಕೊಳ್ಳುತ್ತಿದ್ದವರು ಖುಷ್‌ವಂತ್ ಸಿಂಗ್. ದ್ವೇಷದ ಪತ್ರಗಳಿಗೆ ಅವರು ಅರ್ಹರೂ ಆಗಿದ್ದರೆನ್ನಿ. ಬಹುತ್ವದ ಈ ನಾಡಿನಲ್ಲಿ, ನೇರವಾಗಿ ಬರೆಯುವವನು ಕೆಲವರ ದ್ವೇಷವನ್ನಾದರೂ ಕಟ್ಟಿಕೊಳ್ಳಬೇಕು. ಖುಷ್ವಂತಜ್ಜ ಅವರಿವರೆನ್ನದೆ ಎಲ್ಲರ ದ್ವೇಷವನ್ನೂ ಪ್ರೀತಿಯನ್ನೂ ಕಟ್ಟಿಕೊಂಡಿದ್ದರು.
ಒಮ್ಮೆ ಪ್ರಧಾನಿ ಮನಮೋಹನ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್, ಅಜ್ಜನನ್ನು ನೋಡಲು ಬಂದಿದ್ದರು. ಕಾಲು ಗಂಟೆ ಮಾತಾಡಿದ್ದರೋ ಇಲ್ಲವೋ, ಅಜ್ಜ ಹೇಳಿದರು: 'ಗುರುಶರಣ್, ನೀವಿನ್ನು ಹೊರಡಿ'. ಪ್ರಧಾನಿಯ ಪತ್ನಿಗೆ ನನ್ನಂಥ ಮುದಿಯನ ಬಳಿ ಮಾತಾಡಿ ಸಮಯ ಹಾಳು ಮಾಡುವುದಕ್ಕಿಂತ ಬೇರೆ ಒಳ್ಳೆಯ ಕೆಲಸಗಳಿರಬಹುದು ಎಂಬುದು ಅವರ ತರ್ಕ. ಪಶ್ಚಿಮ ದೇಶಗಳ ಪ್ರಧಾನಿ ಅಥವಾ ಅಧ್ಯಕ್ಷರ ಪತ್ನಿಯರು ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಾರೆ. ಆ ನಿಟ್ಟಿನಲ್ಲಿ ಭಾರತದಲ್ಲಿ ಗುರುಶರಣ್ ಮೊದಲಿಗಳು ಎಂಬುದು ಅವರ ಇಂಗಿತ.  
ಖುಷ್ವಂತರ ರಾಜಕೀಯ ನಿಲುವುಗಳು ಸಾಕಷ್ಟು ಟೀಕೆಗೊಳಗಾಗಿದ್ದವು. ತುರ್ತುಪರಿಸ್ಥಿತಿಯ ವೇಳೆ ಇಂದಿರಾ ಗಾಂಧಿಯನ್ನು ಬೆಂಬಲಿಸಿದ್ದು, ಸಂಜಯ ಗಾಂಧಿಯ ಬಗ್ಗೆ ಮೃದು ನಿಲುವು ಹೊಂದಿದ್ದುದನ್ನೆಲ್ಲ ಇಲ್ಲಿ ಉಲ್ಲೇಖಿಸಬಹುದು. ಇದೇ ಇಂದಿರಾ, ಬ್ಲೂಸ್ಟಾರ್ ಕಾರ್ಯಾಚರಣೆ ಮಾಡಿದಾಗ ಖಂಡಿಸಲೂ ಅವರು ಮರೆಯಲಿಲ್ಲ. 'ಪೊಲಿಟಿಕಲಿ ಕರೆಕ್ಟ್‌' ಎನಿಸಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ನೇರತನವೇ ಅವರ ಸೊತ್ತಾಗಿತ್ತು.  2003ರಲ್ಲಿ ಅವರು 'ದಿ ಎಂಡ್ ಆಫ್ ಇಂಡಿಯಾ' ಎಂಬ ಪುಸ್ತಕ ಬರೆದರು. ಗೋಧ್ರಾ ಮತ್ತು ಗೋಧ್ರೋತ್ತರ ಹತ್ಯಾಕಾಂಡಕ್ಕೆ ನರೇಂದ್ರ ಮೋದಿಯೇ ನೇರ ಹೊಣೆಗಾರ. ಆತನೊಬ್ಬ ಸರ್ವಾಧಿಕಾರಿ, ಕೋಮುವಾದಿ. ಆತ ಭಿಂದ್ರಾನ್‌ವಾಲೆಯ ಪುನರಾವತಾರ ಎಂದು ಅದರಲ್ಲಿ ಟೀಕಿಸಿದ್ದರು. ಖುಷ್ವಂತರ ಅಭಿಪ್ರಾಯಗಳನ್ನು ಪ್ರಶ್ನಿಸಬಹುದು, ಗೇಲಿ ಮಾಡಬಹುದು. ಆಗೆಲ್ಲ ಸಾಹಿತ್ಯವೆಂಬುದು ಜೀವನದ ರಕ್ತಮಾಂಸಗಳನ್ನೇ ಮುಲಾಜಿಲ್ಲದೆ ಭಟ್ಟಿಯಿಳಿಸುವುದು ಎಂದು ಖುಷ್ವಂತಜ್ಜ ಹೇಳಿದಂತಾಗುತ್ತದೆ.


-ಹರೀಶ್ ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement