ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮರೆಯಾದ 'ಖುಷಿ'

ನಾನು ಸಾವಿನ ಕುರಿತು ಆಗಾಗ ಆಲೋಚಿ...

Vishwanath S
Updated On : 21 Mar 2014, 1:30 am

ನಾನು ಸಾವಿನ ಕುರಿತು ಆಗಾಗ ಆಲೋಚಿಸುತ್ತೇನೆ. ಆದರೆ, ಸಾವಿಗೆ ಹೆದರಿ ನಿದ್ದೆ ಹಾಳು ಮಾಡಿಕೊಳ್ಳುವುದಿಲ್ಲ. ನನಗೆ ಗೊತ್ತಾಗದಂತೆ ನನ್ನ ಪ್ರಾಣ ಹೋಗಲಿ ಎನ್ನುವುದು ನನ್ನ ಅಭಿಲಾಷೆ.
ದೇಹ ಗಾಲಿ ಕುರ್ಚಿಗೆ ಅಂಟಿಕೊಂಡಿದ್ದರೂ, ಪೆನ್ನು ಮಾತ್ರ ಅವರ ವಿಚಾರಧಾರೆಗಳನ್ನು ಬಿಳಿ ಹಾಳೆಗಳಲ್ಲಿ ಚಿತ್ರಿಸುತ್ತಾ ಸಾಗುತ್ತಿತ್ತು. ಅವರಿಗೆ ಇದೆಲ್ಲ ಸಾಕು ಎನಿಸಿದರೂ, ಜೀವನಪ್ರೀತಿ ಮಾತ್ರ ಅವರನ್ನು ಬಿಟ್ಟು ಹೋಗಲೊಲ್ಲೆ ಎಂದು ಕುಳಿತಿತ್ತು.
ಹೌದು. ಖ್ಯಾತ ಲೇಖಕ, ಪತ್ರಕರ್ತ, ಇತಿಹಾಸಕಾರ, ಕಾದಂಬರಿಕಾರ ಖುಷ್ವಂತ್ ಸಿಂಗ್ ಶತಾಯುಷಿಯಾಗಲು ಇನ್ನೇನು ಒಂದು ವರ್ಷವಷ್ಟೇ ಇದೆ ಎನ್ನುವಾಗಲೇ ಇಹಲೋಕ ತ್ಯಜಿಸಿದ್ದಾರೆ. ತೀಕ್ಷ್ಣ ಜಾತ್ಯತೀತತೆ, ಹಾಸ್ಯ, ಕವಿತೆಗಳ ಬಗೆಗಿನ ಅದಮ್ಯ ಪ್ರೀತಿ, ನೇರ ಹಾಗೂ ದಿಟ್ಟ ವಿಚಾರಧಾರೆಗಳನ್ನು ಭಾರತೀಯರ ಮನೆಮನಗಳಲ್ಲಿ ತುಂಬಿದವರು ತಮ್ಮ 99 ವರ್ಷಗಳ 'ಖುಷ್‌'ವಂತ ಬದುಕಿಗೆ ವಿದಾಯ ಹೇಳಿದ್ದಾರೆ.

ಪತ್ರಕರ್ತನಾಗಿ
ಸಿಂಗ್ ಅವರು 1915ರ ಫೆ.2ರಂದು ಹಡಾಲಿ(ಈಗ ಪಾಕಿಸ್ತಾನದ ಪಂಜಾಬ್‌ನಲ್ಲಿದೆ)ಯಲ್ಲಿ ಜನಿಸಿದರು. ದೆಹಲಿಯ ಮಾಡರ್ನ್ ಸ್ಕೂಲ್, ಲಾಹೋರ್‌ನ ಸರ್ಕಾರಿ ಕಾಲೇಜು, ದೆಹಲಿಯ ಸೈಂಟ್ ಸ್ಟೀಫನ್ಸ್ ಕಾಲೇಜು ಹಾಗೂ ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ನಂತರ ಅವರು ಯೋಜನಾ ಆಯೋಗದ 'ಯೋಜನಾ' ನಿಯತಕಾಲಿಕದ ಸ್ಥಾಪಕ ಸಂಪಾದಕರಾಗಿಯೂ, ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ, ನ್ಯಾಷನಲ್ ಹೆರಾಲ್ಡ್, ಹಿಂದೂಸ್ಥಾನ್ ಟೈಮ್ಸ್‌ನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಅವಧಿಯಲ್ಲಿ ಇಲ್ಲಸ್ಟ್ರೇಟೆಡ್ ವೀಕ್ಲಿಯ ಪ್ರಸಾರ 65 ಸಾವಿರದಿಂದ 4 ಲಕ್ಷಕ್ಕೇರಿತ್ತು. 'ಟ್ರೈನ್ ಟು ಪಾಕಿಸ್ತಾನ್‌', 'ಐ ಶಲ್ ನಾಟ್ ಹಿಯರ್ ದಿ ನೈಟಿಂಗೇಲ್‌', 'ಡೆಲ್ಲಿ' ಮುಂತಾದ ಮೇರು ಕೃತಿಗಳನ್ನಷ್ಟೇ ಅಲ್ಲ, ಸಿಖ್ ಧರ್ಮ ಮತ್ತು ಸಂಸ್ಕೃತಿ ಬಗ್ಗೆ, ದೆಹಲಿ ರಾಜಕೀಯದ ಬಗ್ಗೆಯೂ ಅನೇಕ ಲೇಖನಗಳನ್ನು, ಉರ್ದು ಕವಿತೆಗಳನ್ನೂ ಬರೆದ ಹೆಗ್ಗಳಿಕೆಗೆ ಸಿಂಗ್ ಪಾತ್ರರಾಗಿದ್ದರು. ಸಿಂಗ್ ಅವರಿಗೆ 98 ವರ್ಷ ವಯಸ್ಸಾಗಿದ್ದಾಗ ಅವರ ಕೊನೆಯ ಕೃತಿ 'ಖುಷ್ವಂತ್‌ನಾಮಾ: ದಿ ಲೆಸೆನ್ಸ್ ಆಫ್ ಮೈ ಲೈಫ್‌' ಬಿಡುಗಡೆಯಾಗಿತ್ತು.
ಅವರು ಬರೆಯುತ್ತಿದ್ದ 'ವಿತ್ ಮೆಲೈಸ್ ಟುವರ್ಡ್ಸ್ ಒನ್ ಆ್ಯಂಡ್ ಆಲ್‌' ಅಂಕಣವು ಹೆಚ್ಚಾಗಿ ಜಾತ್ಯತೀತತೆಗೆ ಪ್ರೇರಣೆ ಹಾಗೂ ಶಾಂತಿಯ ಸಂದೇಶವನ್ನೇ ಒಳಗೊಂಡಿರುತ್ತಿತ್ತು. ಅವರು ಎಂದಿಗೂ ನಿವೃತ್ತಿಯನ್ನೇ ಪಡೆಯದವರು. ಜೀವನವನ್ನು ಸಂತೋಷದಿಂದ ಅನುಭವಿಸಿದವರು ಹಾಗೂ ಯಾವತ್ತೂ ಬ್ಯುಸಿಯಾಗಿದ್ದವರು. 'ಒಂದು ಕವಿತೆ ಓದಿ ಎಂದು ನೀವು ಅವರನ್ನು ಕೇಳಿಕೊಂಡರೆ, ತಕ್ಷಣವೇ ಇಲ್ಲ ಎಂಬ ಉತ್ತರ ಬರುತ್ತಿತ್ತು. ನಂತರ ಅವರಾಗಿಯೇ ಮನಸ್ಸು ಬದಲಿಸಿ, ಘಾಲಿಬ್‌ಗಳನ್ನು ಹೇಳಿ ನಿಮ್ಮ ಮನಸ್ಸು ತಣಿಸುತ್ತಿದ್ದರು. ಅವರೇ ಖುಷ್ವಂತ್ ಸಿಂಗ್. ವಿಸ್ಕಿ, ಹೆಣ್ಣು ಮತ್ತು ಹಾಸ್ಯದ ಜತೆ ಜತೆಗೆ ಅವರಿಗೆ ಕವಿತೆಗಳ ಬಗ್ಗೆ ಕಕ್ಕುಲತೆಯಿತ್ತು' ಎನ್ನುತ್ತಾರೆ ಹವ್ಯಾಸಿ ಪತ್ರಕರ್ತೆ ಗರೀಮಾ ದತ್.

ಇಂದಿರಾರಿಗೆ ಆಪ್ತ
ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ಖುಷ್ವಂತ್ ರಾಜ್ಯಸಭೆಗೂ ಆಯ್ಕೆಯಾಗಿದ್ದರು. 1980ರಿಂದ 1986ರವರೆಗೆ ಸಂಸತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಇಂದಿರಾ ಹಾಗೂ ಅವರ ಪುತ್ರ ಸಂಜಯ್ ಗಾಂಧಿ ಬಗ್ಗೆ ಖುಷ್ವಂತ್‌ಗೆ ವಿಶೇಷ ಪ್ರೀತಿಯಿತ್ತು. ತುರ್ತು ಪರಿಸ್ಥಿತಿ ಘೋಷಣೆ ಹಾಗೂ ಸಂಜಯ್ ಗಾಂಧಿಯವರ ಕೆಲವು ನೀತಿಗಳಿಗೆ ಎಲ್ಲರಿಂದ ವಿರೋಧ ವ್ಯಕ್ತವಾಗಿದ್ದರೂ ಸಿಂಗ್ ಮಾತ್ರ ಅವರನ್ನು ಸಮರ್ಥಿಸಿಕೊಂಡಿದ್ದರು. 1974ರಲ್ಲಿ ಖುಷ್ವಂತ್‌ರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಆದರೆ, 1984ರಲ್ಲಿ ಅಮೃತಸರದ ಸ್ವರ್ಣಮಂದಿರದ ಮೇಲೆ ದಾಳಿ ನಡೆದಾಗ ಅದನ್ನು ವಿರೋಧಿಸಿ ಸಿಂಗ್ ತಮ್ಮ ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು.

ಕ್ಯಾರೇ ಎನ್ನದ ಖುಷ್ವಂತ್
ಖುಷ್ವಂತ್ ಅವರು ಹೊಗಳಿಕೆಗೂ, ಟೀಕೆಗೂ ಕ್ಯಾರೇ ಎಂದವರಲ್ಲ. ಅವರಿಗೆ ಬೌದ್ಧಿಕ ಡಾಂಭಿಕತೆ ಇರಲಿಲ್ಲ. ತಾನೇನು ಹೇಳುತ್ತಿದ್ದೇನೆ, ಏನು ಬರೆಯುತ್ತಿದ್ದೇನೆ ಎಂಬ ಬಗ್ಗೆಯೂ ಅವರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಾನೊಬ್ಬ ಆಕಸ್ಮಿಕ ಬರಹಗಾರ ಎಂದು ಅವರೇ ಹೇಳುತ್ತಿದ್ದರು. ಬದುಕಿದ್ದಾಗ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ವೈನ್, ಹೆಣ್ಣು ಹಾಗೂ ಗಾಸಿಪ್ ಬಗೆಗಿದ್ದ ಪ್ರೀತಿ ಅವರನ್ನೊಬ್ಬ ವಿಚಿತ್ರ ವ್ಯಕ್ತಿಯನ್ನಾಗಿಸಿತ್ತು. ಇದರಿಂದಾಗಿ ಅವರಿಗೆ ಅಭಿಮಾನಿಗಳೂ, ಶತ್ರುಗಳೂ ಹುಟ್ಟಿಕೊಂಡಿದ್ದರು.

ನೋವಿಲ್ಲದ ಸಾವು ಬರಲಿ ಎಂದಿದ್ದ ಖುಷ್ವಂತ್
ಸಾವಿನ ಬಗೆಗಿನ ಅವರ ಕಲ್ಪನೆ ಹೇಗಿತ್ತು ಎಂಬುದನ್ನು ಖುಷ್ವಂತ್ 'ಪ್ರಿಪೇರ್ ಫಾರ್ ಡೆತ್ ವೈಲ್ ಅಲೈವ್‌' (ಬದುಕಿದ್ದಾಗಲೇ ಸಾವಿಗೆ ಸಿದ್ಧರಾಗಿ) ಎಂಬ ಪ್ರಬಂಧದಲ್ಲಿ ಬಣ್ಣಿಸಿದ್ದರು.

ಸೆಕ್ಸ್ ಮತ್ತು ರೊಮ್ಯಾನ್ಸ್‌ನಲ್ಲಿ ಯಾವುದು ಮುಖ್ಯ? ಹೀಗಂತ ಯಾರಾದರೂ ನನ್ನನ್ನು ಕೇಳಿದರೆ ನಾನು ಸೆಕ್ಸೇ ಪ್ರಮುಖ ಎನ್ನುತ್ತೇನೆ. ರೋಮ್ಯಾನ್ಸ್ ಅನ್ನುವುದು ಒಂದು ರೀತಿಯಲ್ಲಿ ಬಾಹ್ಯಹೊಳಪು. ಅದರ ಆಯುಷ್ಯ ಕಡಿಮೆ.
- ಖುಷ್ವಂತ್ ಸಿಂಗ್

ಮೆಲುಕು- 1915-2014
1915 ಫೆ.2ರಂದು ಹದಲಿ ಜಿಲ್ಲೆ, ಖುಶಬ್-ಪಂಜಾಬ್(ಈಗಿನ ಪಾಕಿಸ್ತಾನ)ನಲ್ಲಿ ಜನನ
1934 ರಿಂದ 1938: ದ ಮಾಡನ್ ಸ್ಕೂಲ್- ನವದೆಹಲಿ, ಸಂತ ಸ್ಟೀಫನ್ಸ್. ಕಾಲೇಜು, ನವದೆಹಲಿ, ಸರ್ಕಾರಿ ಕಾಲೇಜು- ಲಾಹೋರ್, ಬಿ.ಎ
1934 ಕಿಂಗ್ಸ್ ಕಾಲೇಜು- ಲಂಡನ್, ಎಲ್‌ಎಲ್‌ಬಿ
1938 8 ವರ್ಷಗಳ ಕಾಲ ಲಾಹೋರ್‌ನ ಹೈ ಕೋರ್ಟ್‌ನಲ್ಲಿ ಅಭ್ಯಾಸ ಮಾಡಿದರು.
1939 ರಿಂದ 1947: ಲಾಹೋರ್‌ನ ಹೈ ಕೋರ್ಟ್‌ನಲ್ಲಿ ಪ್ರಾಕ್ಟಿಸಿಂಗ್ ವಕೀಲ
1947 ರಿಂದ 1951: ಪತ್ರಿಕಾ ರಾಯಭಾರಿ ಕಚೇರಿಗೆ ಸೇರಿದರು- ಲಂಡನ್, ಒಟ್ಟಾವಾದಲ್ಲಿ ಭಾರತೀಯ ವಿದೇಶಾಂಗ ಸೇವೆ.
1951 ಆಲ್ ಇಂಡಿಯಾ ರೇಡಿಯೋದಲ್ಲಿ ಸೇವೆ
1954 ರಿಂದ 1956: ಯುನೆಸ್ಕೊ- ಪ್ಯಾರಿಸ್‌ನ ಸಮೂಹ ಮಾಧ್ಯಮ ಇಲಾಖೆಯ ಸದಸ್ಯ.
1956 ರಿಂದ 1958: ಭಾರತ ಸರ್ಕಾರದ ಪ್ರಕಟಣೆ- 'ಯೋಜನಾ'ದ ಸಂಪಾದಕ.
1956 ಇವರ ಪ್ರಥಮ ಕಾದಂಬರಿ, 'ಟ್ರೈನ್ ಟು ಪಾಕಿಸ್ತಾನ್‌'
1969 ರಿಂದ 1978: ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್. ಇಂಡಿಯಾದ ಸಂಪಾದಕ
1974 ಪದ್ಮ ಭೂಷಣದಿಂದ ಸನ್ಮಾನ
1984 ಭಾರತ ಸೈನ್ಯ ಗೋಲ್ಡನ್ ಟೆಂಪಲ್‌ಗೆ  ಮುತ್ತಿಗೆ ಹಾಕಿದ್ದರಿಂದ ಪ್ರತಿಭಟನೆಯಾಗಿ ಸರ್ಕಾರಕ್ಕೆ ಪ್ರಶಸ್ತಿ ವಾಪಸ್
1978 ರಿಂದ 1979: ನ್ಯಾಷನಲ್ ಹೆರಾಲ್ಡ್‌ನ ಮುಖ್ಯ ಸಂಪಾದಕ.
1980 ರಿಂದ 1983: ಹಿಂದುಸ್ತಾನ್ ಟೈಮ್ಸ್, ಕಾಂಟೂರ್‌ನ ಮುಖ್ಯ ಸಂಪಾದಕ.
1980ರಿಂದ 1986 ತನಕ ರಾಜ್ಯ ಸಭಾ ಸದಸ್ಯ
2006 ಪಂಜಾಬ್ ಸರ್ಕಾರದಿಂದ 'ಪಂಜಾಬ್ ರತನ್‌' ಗೌರವ
2007 ಪದ್ಮ ವಿಭೂಷಣ ಗೌರವ
2013 ಟಾಟಾ ಲಿಟರೇಚರ್ ಲೈವ್! ದ ಮುಂಬೈ ಲಿಟ್ಫೆಸ್ಟ್‌ನಲ್ಲಿ ಖುಶ್ವಂತ್ ಸಿಂಗ್‌ಗೆ ಜೀವಮಾನ ಸಾಧನೆ ಪ್ರಶಸ್ತಿ
2014 ಮಾ.20 ಖುಶ್ವಂತ್ ಸಿಂಗ್ ನಿಧನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement