12 ಚುನಾವಣೇಲಿ ಲೆಕ್ಕ ಬರೆದ್ರೂ ಪಡೀಲಿಲ್ಲ ರೊಕ್ಕ!
ಶಿವಮೊಗ್ಗ: ಚುನಾವಣೆ ಎಂದರೆ ಪಕ್ಷ, ಅಭ್ಯರ್ಥಿ, ನಾಯಕರು, ಮುಖಂಡರು, ಕಾರ್ಯಕರ್ತರು ಹೀಗೆ ಎಷ್ಟೊಂದು ಮಂದಿಯ ಕಾರ್ಯನಿರ್ವಹಣೆ ಇರುತ್ತದೆ. ಇವರೆಲ್ಲರ ನಡುವೆ ನಿಷ್ಠೆಯಿಂದ ಕೆಲಸ ಮಾಡುವ ಇನ್ನೊಬ್ಬರಿರುತ್ತಾರೆ. ಅವರೇ ಲೆಕ್ಕಾಚಾರ ಮಾಡುವವರು. ಪ್ರತಿ ಅಭ್ಯರ್ಥಿಯ ರಾಮನ ಲೆಕ್ಕ ಬರೆಯುವವರು. ಅರ್ಥಾತ್, ಚುನಾವಣಾ ಆಯೋಗಕ್ಕೆ ಅಭ್ಯರ್ಥಿ ಸಲ್ಲಿಸುವ ಲೆಕ್ಕ ಬರೆಯುವವರು. ಇವರ ಲೆಕ್ಕದ ಮೇಲೆ ಅಭ್ಯರ್ಥಿಯ ಭವಿಷ್ಯವೂ ನಿರ್ಧಾರವಾಗಿರುತ್ತದೆ. ಅಂತಹ ಅಪರೂಪದ ಲೆಕ್ಕದ ಮೇಷ್ಟ್ರು ಶುಕ್ರವಾರ ಕನ್ನಡಪ್ರಭದ ಕಣ್ಣಿಗೆ ಬಿದ್ದರು.
ಹೆಸರು ಗೋಪಾಲಕೃಷ್ಣ ರಾವ್, ವಯಸ್ಸು 80. ಶಿವಮೊಗ್ಗದ ಮಲ್ಲೇಶ್ವರ ಬಡಾವಣೆ ನಿವಾಸಿಯಾದ ಇವರು ಕಳೆದ 12 ಚುನಾವಣೆಯಲ್ಲಿ ಅಭ್ಯರ್ಥಿಗಳ ಲೆಕ್ಕ ಬರೆದು ಸೈ ಎನಿಸಿಕೊಂಡಿದ್ದಾರೆ. ಈ ಬಾರಿ ಬಿ.ಎಸ್. ಯಡಿಯೂರಪ್ಪನವರ ಚುನಾವಣಾ ಲೆಕ್ಕಾಚಾರ ನಿರ್ವಹಿಸುತ್ತಿರುವವರು ಇವರೇ.
ಲೆಕ್ಕಾಚಾರ ಪಕ್ಕಾ: ಟಿ.ಎನ್. ಶೇಷನ್ ಅವರು ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಮಾರ್ಪಾಡು ತಂದರು. ಇದೇ ಹೊತ್ತಿನಲ್ಲಿ ಚುನಾವಣಾ ಲೆಕ್ಕಾಚಾರವನ್ನೂ ಕಡ್ಡಾಯಗೊಳಿಸಿದರು. ಅಂದಿನಿಂದಲೂ ನಾನು ಚುನಾವಣಾ ಲೆಕ್ಕಾಚಾರ ನಿರ್ವಹಿಸುತ್ತಿದ್ದೇನೆ ಎಂದು ವಿವರಿಸಿದರು ಗೋಪಾಲಕೃಷ್ಣರಾವ್.
1992ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದೆ. 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪನವರ ಚುನಾವಣಾ ಲೆಕ್ಕಾಚಾರ ನಿರ್ವಹಿಸಿದೆ. ನಂತರ 1999, 2004, 2008, 2013ರ ಚುನಾವಣೆಯಲ್ಲಿ ಈಶ್ವರಪ್ಪ ಅವರ ಚುನಾವಣೆಯ ಲೆಕ್ಕಾಚಾರ ಬರೆಯುವ ಜತೆಗೆ ಈ ಹಿಂದಿನ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಎರಡು ಚುನಾವಣೆಯಲ್ಲಿ ಕೆ.ಜಿ. ಕುಮಾರಸ್ವಾಮಿ ಅವರ ಚುನಾವಣಾ ಲೆಕ್ಕ ಬರೆದೆ. ಹಾಗೆಯೇ ಎಸ್. ಬಂಗಾರಪ್ಪ, ಎಂ.ಬಿ. ಭಾನುಪ್ರಕಾಶ್, ಬಿ.ವೈ. ರಾಘವೇಂದ್ರ ಅವರ ಲೋಕಸಭಾ ಚುನಾವಣೆ ಲೆಕ್ಕಾಚಾರ ನಿರ್ವಹಿಸಿದೆ. ಇದೀಗ ಬಿ.ಎಸ್. ಯಡಿಯೂರಪ್ಪ ಅವರ ಚುನಾವಣಾ ಲೆಕ್ಕ ನಿರ್ವಹಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ನಯಾ ಪೈಸೆ ಪಡೆಯಲ್ಲ: ಈ ವ್ಯಕ್ತಿ ಯಾರಿಂದಲೂ ನಯಾ ಪೈಸೆ ಅಪೇಕ್ಷಿಸಿದವರಲ್ಲ. ಲೆಕ್ಕಾಚಾರ ನಿರ್ವಹಿಸಿದ ಬಾಬ್ತು ಯಾವುದೇ ಗೌರವಧನ ಪಡೆದಿಲ್ಲ ಎಂದು ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ ವಿವರಿಸುತ್ತಾರೆ. ಒಂದು ಕಾಫಿ ಕುಡಿಯುವುದಕ್ಕೂ ಹಿಂದೇಟು ಹಾಕುವ ವ್ಯಕ್ತಿ, ಅವರ ಮನೆಗೆ ಹೋದಾಗ ನಮಗೆ ಕಾಫಿ ಕುಡಿಸಿ ಕಳುಹಿಸುವ ಸೌಜನ್ಯಯುತ ವ್ಯಕ್ತಿ ಎಂದು ಬಣ್ಣಿಸಿದರು. ವಿಶೇಷವೆಂದರೆ ಇವರು 12 ಚುನಾವಣೆಯಲ್ಲಿ ಚುನಾವಣಾ ಲೆಕ್ಕಾಚಾರ ನಿರ್ವಹಿಸಿದ್ದಕ್ಕಾಗಿ ಒಂದು ಪೈಸೆ ಪಡೆದಿಲ್ಲ. ತಮ್ಮ ದ್ವಿಚಕ್ರ ವಾಹನದಲ್ಲೇ ಬಿಜೆಪಿ ಕಚೇರಿಗೆ ಬಂದು ಲೆಕ್ಕ ಬರೆದು ಹೋಗುವ ಇವರಿಗೆ ಈ ಬಾರಿ ಬಂದು ಹೋಗಲು ವಾಹನ ವ್ಯವಸ್ಥೆ ಮಾಡಲಾಗಿದೆಯಂತೆ. ಈ ಹಿಂದೆ ಚುನಾವಣೆ ಲೆಕ್ಕ ಬರೆಯುವುದು ಕಷ್ಟವಿತ್ತು. ನಿಗದಿತ ಮೊತ್ತಕ್ಕೆ ಸರಿದೂಗಿಸುವುದು ತ್ರಾಸವಾಗುತ್ತಿತ್ತು. ಆದರೀಗ ಒಂದಷ್ಟು ಸುಧಾರಣೆಯಾಗಿದೆ ಎಂದೂ ಹೇಳಿದರು.
ಅಧಿಕಾರಿಗಳಿಗೆ ಕನ್ನಡ: ಈ ಅಪರೂಪದ ಚುನಾವಣಾ ಲೆಕ್ಕಾಚಾರದ ಶಿಕ್ಷರಾದ ಗೋಪಾಲಕೃಷ್ಣರಾವ್ ತಮ್ಮ ಶಿಕ್ಷಕ ವೃತ್ತಿಯನ್ನು ಆಗುಂಬೆ ಸರ್ಕಾರಿ ಶಾಲೆಯಲ್ಲಿ ಆರಂಭಿಸಿದರು. ನಂತರ ಶಿವಮೊಗ್ಗದ ಸಿಗೆಹಟ್ಟಿ ಶಾಲೆ, ಉಂಬಳೆಬೈಲು ಶಾಲೆಯಲ್ಲಿ ಕಾರ್ಯನಿರ್ವಹಿಸಿ ಕೊನೆಯಲ್ಲಿ ಗುರುಪುರ ಸರ್ಕಾರಿ ಶಾಲೆಯಲ್ಲಿ ನಿವೃತ್ತಿಯಾದರು. ಸುಮಾರು 12- 13 ಮಂದಿ ಐಎಎಸ್- ಐಪಿಎಸ್ ಅಧಿಕಾರಿಗಳಿಗೆ ಇವರು ಕನ್ನಡ ಕಲಿಸಿದ ಗರಿ ಇವರಿಗೆ ಸಲ್ಲುತ್ತದೆ. ಶಿಕ್ಷಣ ಇಲಾಖೆ ಆಯುಕ್ತ ಮೊಹ್ಮದ್ ಮೋಹಸಿನ್ ಅವರಿಗೆ ಕನ್ನಡ ಕಲಿಸಿದ್ದು ಇವರೇ. ಅದೇ ರೀತಿ ಅಲೋಕ್ ಮೋಹನ್, ಪವನ್ಜಿತ್ ಸಂಧು, ಅಣ್ಣಾಮಲೈ ಸೇರಿ ಅನೇಕರಿಗೆ ಕನ್ನಡ ಕಲಿಸಿದ್ದಾರೆ.
-ವಿಶೇಷ ವರದಿ