ಮಕ್ಕಳ ಹಕ್ಕಿಗೆ ದನಿಯಾಗಿ ನಮಗೋಸ್ಕರ ಮತ ಕೊಡಿ
ಧಾರವಾಡ: ನಮ್ಮ ಹಕ್ಕುಗಳಿಗೆ ದನಿ ಕೊಡಿ, ನಮಗಾಗಿ ಮತ ಕೊಡಿ!
ಧಾರವಾಡದ ಹಳ್ಳಿ-ಹಳ್ಳಿಗಳಲ್ಲೂ ಮಕ್ಕಳು ಈ ಘೋಷಣೆ ಕೂಗುತ್ತಾ ಚುನಾವಣೆಯಲ್ಲಿ ಗೆದ್ದ ಮೇಲೆ ನಮ್ಮ ಹಕ್ಕುಗಳಿಗಾಗಿ ಸಂಸತ್ತಿನಲ್ಲಿ ದನಿ ಕೊಡಿ ಎಂದು ರಾಜಕೀಯ ಮಂದಿಗೆ ಬೆನ್ನು ಬಿದ್ದಿದ್ದರೆ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪ್ರತಿಯೊಬ್ಬರೂ ಮತದಾನ ಮಾಡಿ ಎಂದು ಮತದಾರರ ಜಾಗೃತಿ ಶುರು ಹಚ್ಚಿಕೊಂಡಿದ್ದಾರೆ. ಮಕ್ಕಳು ರಾಜಕಾರಣಿಗಳಿಗೆ ಮತ ಬ್ಯಾಂಕ್ ಅಲ್ಲ. ಅವರ ವಿರುದ್ಧ ಪ್ರತಿಭಟನೆ ಮಾಡುವುದೂ ಇಲ್ಲ. ಹೇಗೆ ಮಕ್ಕಳನ್ನು ಎಲ್ಲ ಹಂತದಲ್ಲಿಯೂ ಕಡೆಗಣಿಸಲಾಗುತ್ತಿದೆ ಎಂದು ವಿವರಿಸಲು ಧಾರವಾಡದ ಕಿಡ್ಸ್ ಸಂಸ್ಥೆ ಪ್ರಸಕ್ತ ಲೋಕಸಭಾ ಚುನಾವಣೆ ವೇಳೆ 'ನಮ್ಮ ಹಕ್ಕುಗಳಿಗೆ ದನಿ ಕೊಡಿ, ನಮಗಾಗಿ ಮತ ಕೊಡಿ' ಎಂಬ ವಿಶೇಷ ಆಂದೋಲನ ಹಮ್ಮಿಕೊಂಡಿದೆ. ಮಾ.9ರಿಂದ ಧಾರವಾಡ ತಾಲೂಕಿನ ಮನಗುಂಡಿ, ಶಿಬಾರಗಟ್ಟಿ, ಮಂಗಳಗಟ್ಟಿ, ಹಾರೋಬೆಳವಡಿ, ಕ್ಯಾರಕೊಪ್ಪ ಪುಡಕಲಕಟ್ಟಿ ಗ್ರಾಮಗಳಲ್ಲಿ ಈ ಆಂದೋಲನ ಶುರುವಾಗಿದೆ. ರಾಜ್ಯಾದ್ಯಂತ ಆಂದೋಲನ ನಡೆಸಲಿದ್ದೇವೆ. ಪಕ್ಷಗಳ ಮುಖಂಡರಿಗೆ ಬೇಡಿಕೆಗಳ ಪಟ್ಟಿಯನ್ನೂ ಮಕ್ಕಳು ಸಲ್ಲಿಸಿದ್ದಾರೆ.
ಏನಿವೆ ಮಕ್ಕಳ ಬೇಡಿಕೆಗಳು?
1. ರಾಜ್ಯದ ಎಲ್ಲ ಮಕ್ಕಳ ಪೌಷ್ಟಿಕತೆ ಮಟ್ಟ ಕಾಯ್ದುಕೊಳ್ಳುವುದು ಮತ್ತು ಅಪೌಷ್ಟಿಕತೆಯಿಂದ ಯಾವುದೇ ಮಗು ಸಾವಿಗೀಡಾಗದಂತೆ ರಕ್ಷಿಸುವುದು.
2. ಎಚ್ಐವಿ ಪೀಡಿತ ಮತ್ತು ಬಾಧಿತ ಮಕ್ಕಳಿಗೆ ಪೋಷಣೆ, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ಪುನರ್ವಸತಿ ಸೌಲಭ್ಯ ಒದಗಿಸುವುದು.
3. ಪ್ರತಿ ಜಿಲ್ಲೆಯಲ್ಲೂ ಬುದ್ಧಿಮಾಂದ್ಯ ಮಕ್ಕಳಿಗೆ ವಸತಿ ಕೇಂದ್ರ ಹಾಗೂ ಚಿಕಿತ್ಸಾ ಕೇಂದ್ರ ಸ್ಥಾಪನೆ.
4. ಪ್ರತಿ ಗ್ರಾಪಂ ಮಟ್ಟದಲ್ಲಿ ಮಕ್ಕಳಿಗೆ ಪ್ರತ್ಯೇಕ ಆರೋಗ್ಯ ಘಟಕ ಸ್ಥಾಪನೆ.
5. ಪ್ರತಿ ಶಾಲೆಯಲ್ಲಿ ಆಪ್ತ ಸಲಹೆಗಾರರನ್ನು ನೇಮಿಸುವುದು.
6. ಎಸ್ಸೆಸ್ಸೆಲ್ಸಿವರೆಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ಕಾಯ್ದೆ ಜಾರಿ ಮಾಡುವುದು.
7. ಶಿಕ್ಷಕರ ತರಬೇತಿಯಲ್ಲಿ ಕಡ್ಡಾಯವಾಗಿ ಬಾಲನ್ಯಾಯ ಕಾಯ್ದೆ, ಮಕ್ಕಳ ಹಕ್ಕುಗಳು ಹಾಗೂ ಅವರಿಗಿರುವ ಕಾನೂನುಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು.
8. ಕೆಲವೇ ಜಿಲ್ಲೆಗಳಲ್ಲಿ ಮಕ್ಕಳ ಸಹಾಯವಾಣಿ (1098) ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ಜಿಲ್ಲೆಗಳಲ್ಲೂ ಆರಂಭಿಸುವುದು.
9. ಬಾಲಕಾರ್ಮಿಕ ನಿಷೇಧ, ಮಕ್ಕಳ ಮೇಲೆ ಲೈಂಗಿಕ ಶೋಷಣೆ ತಡೆ ಕಾಯ್ದೆ, ಬಾಲ್ಯವಿವಾಹ ತಡೆ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಶಿವರಾಜ ಪಾಟೀಲ ವರದಿ ಅನುಷ್ಠಾನ.
10. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ನ್ಯಾಯಾಲಯ ಸ್ಥಾಪನೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರಿಗೆ ಉಗ್ರ ಶಿಕ್ಷೆ ವಿಧಿಸುವುದು.
11. ಗ್ರಾಪಂಗಳಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಕಡ್ಡಾಯ ಹಾಗೂ ವರ್ಷದಲ್ಲಿ 2 ಬಾರಿ ನಡೆಸುವುದನ್ನು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಸೇರಿಸುವುದು.
12. ಮಕ್ಕಳ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವಾಗ ಮಕ್ಕಳ ಅಭಿಪ್ರಾಯಗಳಿಗೆ ಅವಕಾಶವಿರಲಿ.
13. ಶಾಲೆಗೆ ಹೋಗುವ ಮಕ್ಕಳ ವಲಸೆ ಕಡ್ಡಾಯವಾಗಿ ತಡೆಯುವುದು.
14. ಆಯವ್ಯಯದಲ್ಲಿ ಮಕ್ಕಳ ರಕ್ಷಣೆಗೆ ಹೆಚ್ಚಿನ ಅನುದಾನ ಮೀಸಲಿಡುವುದು.
ಅನಾದಿ ಕಾಲದಿಂದಲೂ ಮಕ್ಕಳು ನಿರ್ಲಕ್ಷಿತ ಸಮೂಹ. ಅವರ ಭಾವನೆಗಳಿಗೆ ಎಂದಿಗೂ ಸ್ಪಂದನೆ ದೊರೆತಿಲ್ಲ. ಇತ್ತೀಚೆಗೆ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಿವೆ. ಅವರ ರಕ್ಷಣೆಗೆ ಹುಟ್ಟಿಕೊಂಡ ಕಾನೂನುಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ಆದ್ದರಿಂದ ಮಕ್ಕಳ ಶಾಲೆ, ಶಿಕ್ಷಣ, ರಕ್ಷಣೆ, ವಸತಿ ಹೀಗೆ ಅವರ ಬೇಡಿಕೆಗಳನ್ನು ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವುದು ಹಾಗೂ ಚುನಾಯಿತ ಪ್ರತಿನಿಧಿಗಳು ಅವುಗಳನ್ನು ಈಡೇರಿಸುವುದು ಈ ಕಾರ್ಯಕ್ರಮದ ಉದ್ದೇಶ.
- ಎ.ಪಿ. ಪಠಾಣ, ಕಿಡ್ಸ್ ಸಂಸ್ಥೆ ಸಂಚಾಲಕ
-ಬಸವರಾಜ ಹಿರೇಮಠ