ಮುಗಿಯದ ಟಿಕೆಟ್ ಕಿತಾಪತಿ, ರಾಜಕೀಯ ನೆಲೆಗೆ ಮರಕೋತಿ
ಲೋಕಸಭಾ ಚುನಾವಣೆ ರಾಜ್ಯ ರಾಜಕೀಯದಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು,
ಬೆಂಗಳೂರು: ಲೋಕಸಭಾ ಚುನಾವಣೆ ರಾಜ್ಯ ರಾಜಕೀಯದಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಪ್ರಮುಖ 3 ಪಕ್ಷಗಳೂ ಅಸಮಾಧಾನದ ಸುಳಿಗೆ ಸಿಲುಕಿವೆ.
ಗುರುಪಾದಪ್ಪ ನಾಗಮಾರಪಳ್ಳಿ ಅವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಬೀದರ್ ಬಿಜೆಪಿಯಲ್ಲಿ ಭಾರೀ ಅಸಮಾಧಾನ ಕಾಣಿಸಿಕೊಂಡಿದೆ. ಪಕ್ಷದ ಕಚೇರಿಗೆ ಕಲ್ಲು ತೂರಿದ ಪ್ರಕರಣಗಳು ಹಾಗೂ ನಾಗಮಾರಪಳ್ಳಿ ಕುಟುಂಬದ ಬೇಸರ ಬಿಜೆಪಿಗೆ ಚುನಾವಣೆಯಲ್ಲಿ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಕಾಣಿಸುತ್ತಿವೆ.
ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಸಮಾಧಾನ ಹೊಗೆ ದಟ್ಟವಾಗಿದೆ. ದಾವಣಗೆರೆಯಲ್ಲಿ ಅಭ್ಯರ್ಥಿಯಾಗಬಯಸಿದ್ದ ಮಾಜಿ ಸಿಎಂ ಜೆ.ಎಚ್. ಪಟೇಲ್ ಪುತ್ರ ಮಹಿಮಾ ಪಟೇಲ್ ಕಾಂಗ್ರೆಸ್ ತೊರೆದು ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಹಲವು ಪ್ರಯತ್ನದ ನಂತರವೂ ಸಿ.ಕೆ. ಜಾಫರ್ ಷರೀಫ್ ಮತ್ತು ಸಾಂಗ್ಲಿಯಾನ ಅವರು ಪಕ್ಷ ತೊರೆಯುವುದನ್ನು ತಡೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ.
ಇನ್ನು ಧಾರವಾಡ ಮತ್ತು ಹಾವೇರಿ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ ಅಲ್ಲೂ ಭಿನ್ನಮತ ಸ್ಫೋಟಗೊಳ್ಳುವ ಮುನ್ಸೂಚನೆಗಳು ಈಗಲೇ ದೊರೆಯಲಾರಂಭಿಸಿವೆ. ಈ ನಡುವೆ ಹೆಚ್ಚು ಕಡಿಮೆ ಅಸ್ತಿತ್ವ ಕಳೆದುಕೊಂಡಿರುವ ಕೆಜೆಪಿಯಲ್ಲಿದ್ದ ಪುಡಾರಿಗಳೆಲ್ಲ ಕಾಂಗ್ರೆಸ್ ಸೇರಲಾರಂಭಿಸಿದ್ದಾರೆ. ಇತರ ನಾಯಕರ ವಲಸೆಯಿಂದ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ. ಇನ್ನೂ 13 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಬೇಕಾದ ಜೆಡಿಎಸ್‌ನಲ್ಲೂ ಕಲಹ ಆರಂಭವಾಗಿರುವುದು ವಿಶೇಷ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಕುರಿತು ಕಾರ್ಯಕರ್ತರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅವರು ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧಿಸಬೇಕೋ? ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಬೇಕೋ ಎಂಬುದುನ್ನು ನಿರ್ಧರಿಸಲಾಗುತ್ತಿಲ್ಲ.
ಕಲ್ಲು ತೂರಾಟ, ಪ್ರತಿಭಟನೆ
ಬೀದರ್: 'ಮಹಾಯುದ್ಧ'ಕ್ಕೆ ಸನ್ನದ್ಧವಾಗಿರುವ ಬಿಜೆಪಿಗೆ 'ಸೇನಾನಿ'ಗಳ ಆಯ್ಕೆ ವಿಚಾರದಲ್ಲಿ ಅಸಮಾಧಾನ ಬಿಸಿ ತಾಗುತ್ತಿದೆ. ಬೀದರ್‌ನಿಂದ ಸ್ಪರ್ಧಿಸಲು ಬಯಸಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಅವರ ಬೆಂಬಲಿಗರು ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಪ್ರಮುಖರಾದ ಡಿ.ಕೆ. ಸಿದ್ರಾಮ್ ಹಾಗೂ ಝರೆಪ್ಪ ಮಮದಾಪೂರೆ ನೇತೃತ್ವದಲ್ಲಿ ನೂರಾರು ಬೆಂಬಲಿಗರು ಪಕ್ಷದ ಕಚೇರಿ ಎದುರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ತಡೆದರಾದರೂ ಕೆಲವು ಕಾರ್ಯಕರ್ತರು ಪಕ್ಷದ ಕಚೇರಿಗೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಅಲ್ಲದೆ ಕಚೇರಿಯಲ್ಲಿದ್ದ ಕುರ್ಚಿಗಳನ್ನು ಎಳೆದಾಡಿ ಮುರಿದಿದ್ದಾರೆ. ಈ ವೇಳೆ ಪಕ್ಷದ ಕಚೇರಿಯಲ್ಲಿ ಅಧ್ಯಕ್ಷ ಶಿವರಾಜ ಗಂದಗೆ, ಪ್ರಧಾನ ಕಾರ್ಯದರ್ಶಿ ಉಪೇಂದ್ರ ದೇಶಪಾಂಡೆ ಸೇರಿದಂತೆ ಮತ್ತಿತರರು ಇದ್ದರಾದರೂ ಯಾವುದೇ ಹಾನಿಯಾಗಿಲ್ಲ.
ನವದೆಹಲಿ: ಮಹಾಚುನಾವಣೆಯ ಮೊದಲ ಹಂತ ಆರಂಭಕ್ಕೆ ದಿನಗಳು ಇರುವಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಬಿಜೆಪಿಯಲ್ಲಿ ಗಾಂಧಿನಗರದಿಂದ ಎಲ್.ಕೆ.ಆಡ್ವಾಣಿ ಸ್ಪರ್ಧಿಸುವ ವಿಚಾರಕ್ಕೆ ಉಂಟಾಗಿರುವ ಬಿಕ್ಕಟ್ಟು ನಿವಾರಣೆಯಾಗುತ್ತಲೇ ರಾಜಸ್ಥಾನದ ಬಾರ್ಮರ್ ಕ್ಷೇತ್ರದಿಂದ ಬಿಜೆಪಿ ನಾಯಕ ಜಸ್ವಂತ್ ಸಿಂಗ್‌ಗೆ ಟಿಕೆಟ್ ನಿರಾಕರಿಸಿದ್ದು ಮತ್ತೊಂದು ತಲೆನೋವಿಗೆ ಕಾರಣವಾಗಿದೆ.
ಮತ್ತೊಂದೆಡೆ ಉತ್ತರಪ್ರದೇಶದ ಝಾನ್ಸಿಯಿಂದ ಸ್ಪರ್ಧಿಸಲು ಟಿಕೆಟ್ ಪಡೆದಿರುವ ಉಮಾ ಭಾರತಿ ತಮಗೆ ಭೋಪಾಲ್‌ನಿಂದಲೇ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಶಿವಸೇನೆ ಮತ್ತು ಬಿಜೆಪಿ ನಡುವೆ ಬಿಕ್ಕಟ್ಟು ತಲೆದೋರಿದೆ ಎಂದು ಹೇಳಲಾಗಿದೆ. ಈ ಸಂಶಯಕ್ಕೆ ಪುಷ್ಟಿ ನೀಡುವಂತೆ ಉತ್ತರಪ್ರದೇಶ, ಬಿಹಾರ ಮತ್ತು ದೆಹಲಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಆದರೆ ರಾಜನಾಥ್‌ಸಿಂಗ್, ಮೋದಿ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದಿದೆ. ಮತ್ತೊಂದೆಡೆ ಗುಜರಾತ್‌ನಲ್ಲಿ ಭಾವ್‌ನಗರದ ಹಾಲಿ ಬಿಜೆಪಿ ಸಂಸದ ರಾಜೇಂದ್ರ ಸಿಂಹ ರಾಣಾಗೆ ಟಿಕೆಟ್ ನಿರಾಕರಿಸಲಾಗಿದೆ. ಅವರು ಮೋದಿಯ ಪ್ರಬಲ ಟೀಕಾಕಾರರಾಗಿದ್ದಾರೆ. ಇದಲ್ಲದೆ ಮತ್ತೊಬ್ಬ ಸಂಸದ ಹರೀನ್ ಪಾಠಕ್‌ಗೂ ಟಿಕೆಟ್ ನೀಡಲಾಗುತ್ತಿಲ್ಲ ಎಂದು ಹೇಳಲಾಗಿದೆ. ಕಾಂಗ್ರೆಸ್‌ನಿಂದ ಟಿಕೆಟ್ ನಿರಾಕರಿಸಲ್ಪಟ್ಟಿರುವ ಕೇಂದ್ರದ ಮಾಜಿ ಸಚಿವ ಸುರೇಶ್ ಕಲ್ಮಾಡಿ 'ಇತರ ಪಕ್ಷಗಳತ್ತ' ಮುಖ ಮಾಡಿದ್ದಾರೆ.