ಆಸ್ಕರ್ ಮತ್ತೆ ಕಣಕ್ಕಿಳಿಯಲಿಲ್ಲ!
ಅವರು ಸತತವಾಗಿ 5 ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದವರು, ನಂತರ 1 ಬಾರಿ ಸೋತರು, ನಂತರ ಅವಕಾಶ ಇದ್ದರೂ 4 ಬಾರಿ...
ಉಡುಪಿ: ಅವರು ಸತತವಾಗಿ 5 ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದವರು, ನಂತರ 1 ಬಾರಿ ಸೋತರು, ನಂತರ ಅವಕಾಶ ಇದ್ದರೂ 4 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದೇ ದೂರ ನಿಂತರು. ಆದರೂ ಪಕ್ಷಕ್ಕೆ ಸಲ್ಲಿಸಿದ ಸೇವೆಗಾಗಿ 3 ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು ಮತ್ತು 2 ಬಾರಿ ಮಂತ್ರಿಯೂ ಆದರು!
ಅವರು ಬೇರೇ ಯಾರೂ ಉಡುಪಿಯ ಆಸ್ಕರ್ ಫರ್ನಾಂಡೀಸ್. ರಾಜ್ಯದ ಕಾಂಗ್ರೆಸ್ ನಾಯಕರಿಂದ ಹಿಡಿದು ಕಾರ್ಯಕರ್ತರೆಲ್ಲರಿಗೂ ಆಸ್ಕರಣ್ಣ, ಒಂದು ರೀತಿಯಲ್ಲಿ ರಾಜ್ಯದ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡರ್. 1970ರ ಆರಂಭದಲ್ಲಿ ಆಸ್ಕರ್ ಎಲ್‌ಐಸಿಯ ಉದ್ಯೋಗಕ್ಕೆ ರಾಜಿನಾಮೆ ನೀಡಿ ಉಡುಪಿ ನಗರಸಭಾ ಚುನಾವಣೆಗೆ ನಿಂತು ಗೆದ್ದಿದ್ದರು. ನಂತರ ಗದ್ದೆ, ಕೃಷಿ, ಟೆಂಪೋ- ಆಟೋ ಯೂನಿಯನ್ ಎಂದೆಲ್ಲಾ ಓಡಾಡುತ್ತಿದ್ದರು. 1977ರಲ್ಲಿ ಮಣಿಪಾಲದ ಟಿ.ಎ.ಪೈ ಅವರು ಉಡುಪಿಯಿಂದ ಸಂಸದರಾಗಿ ಚುನಾಯಿತರಾಗಿ ರೇಲ್ವೆ ಮಂತ್ರಿಯೂ ಆಗಿದ್ದರು. ಆಗ ಪೈ ಅವರ ಕಾರ್ಯದರ್ಶಿಯಾಗಿ ಆಸ್ಕರ್ ಮೊದಲ ಬಾರಿಗೆ ದಿಲ್ಲಿಗೆ ಹೋಗಿ ಬಂದರು. ಒಂದು ರೀತಿಯಲ್ಲಿ ಟಿ.ಎ.ಪೈ ಅವರು ಆಸ್ಕರ್ ಅವರ ರಾಜಕೀಯ ಗುರು. ಆದರೆ 1980ರಲ್ಲಿ ಅದ್ಯಾಕೋ ಗುರುವಿನ ಜೊತೆ ಮುನಿಸಿಕೊಂಡ ಆಸ್ಕರ್ ತಮ್ಮ ಗುರುವಿನ ಎದುರೇ ಸ್ಪರ್ಧಿಸಿ ಗೆದ್ದೂ ಬಿಟ್ಟರು. ನಂತರ 1984, 1989ರಲ್ಲಿಯೂ ಸತತವಾಗಿ ಗೆದ್ದರು.
1991ರಲ್ಲಿ ರಾಜೀವ್ ಗಾಂಧಿ ಹತ್ಯೆಯ ಅನುಕಂಪದ ಅಲೆಯಲ್ಲಿ ಆಸ್ಕರ್ ಕೂಡ ಗೆದ್ದು ಬಿಟ್ಟರು. ಆದರೂ 4 ಸಲ ಗೆದ್ದರೂ ಆಸ್ಕರಣ್ಣ ಉಡುಪಿಗೇನೂ ಮಾಡಿಲ್ಲ ಎನ್ನುವ ಆರೋಪ ಅವರ ಮೇಲೆ ಇತ್ತು. 1996ರಲ್ಲಿ ಉಡುಪಿಯ ಮತದಾರರು ಬಹಳ ಕಡಿಮೆ ಮತಗಳ ಅಂತರದಿಂದ ಕೊನೆಯ ಅವಕಾಶ ನೀಡಿದರು. ಆದರೆ 1998ರ ಚುನಾವಣೆಯಲ್ಲಿ ಆಸ್ಕರ್ ಉಡುಪಿಗೇನೂ ಮಾಡಿಲ್ಲ ಎನ್ನುವ ಆರೋಪ ವರ್ಕೌಟ್ ಆಯಿತು. ಪರಿಣಾಮ 1998ರ ಚುನಾವಣೆಯಲ್ಲಿ ಆಸ್ಕರಣ್ಣ ಸೋತರು. ಇತಿಹಾಸದಲ್ಲಿ ಮೊದಲ ಬಾರಿಗೆ ಉಡುಪಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಗೆದ್ದುಬಿಟ್ಟಿತು.
ಒಂದು ಬಾರಿ ಸೋತ ಅವರಿಗೆ ಮತ್ತೆ ಸ್ಪರ್ಧಿಸುವ ಧೈರ್ಯ ಸಾಲುತ್ತಿಲ್ಲ.
ಸುಭಾಶ್ಚಂದ್ರ ಎಸ್. ವಾಗ್ಳೆ