ಚಿದಂಬರಂ ರಾಜ್ಯಸಭೆ ಕನಸು ಭಗ್ನವಾಗಲಿದೆಯೇ?
ಲೋಕಸಭೆ ಚುನಾವಣೆಯಿಂದ ದೂರವುಳಿದು ಸುಲಭವಾಗಿ ರಾಜ್ಯಸಭೆ ...
ನವದೆಹಲಿ: ಲೋಕಸಭೆ ಚುನಾವಣೆಯಿಂದ ದೂರವುಳಿದು ಸುಲಭವಾಗಿ ರಾಜ್ಯಸಭೆ ಪ್ರವೇಶಿಸಬಹುದು ಎಂಬ ಕೇಂದ್ರ ಸಚಿವ ಪಿ.ಚಿದಂಬರಂ ಕನಸು ಭಗ್ನವಾಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಚಿದು ಅವರ ರಾಜ್ಯಸಭೆ ಆಸೆಗೆ ಅವರ ಪಕ್ಷದವರೇ ತಣ್ಣೀರು ಸುರಿಸಲಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಮುಂದಿನ 3 ವರ್ಷಗಳ ಕಾಲ ಚಿದಂಬರಂ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಬೇಡಿ ಎಂದು ಕೋರಿ ಕಾಂಗ್ರೆಸ್‌ನ ಮೂವರು ಸಚಿವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷವು ಸಂಕಷ್ಟದ ಸ್ಥಿತಿಯಲ್ಲಿರುವಾಗ ಕೈಹಿಡಿಯಬೇಕಾಗಿದ್ದ ಹಿರಿಯ ನಾಯಕ ಚಿದಂಬರಂ ಅವರೇ ಪಕ್ಷಕ್ಕೆ ಕೈಕೊಟ್ಟಿದ್ದು ಇದಕ್ಕೆ ಕಾರಣ. ಈ ಹಿಂದಿನ ಲೋಕಸಭೆ ಚುನಾವಣೆಗಳ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿದು ಈ ಬಾರಿ ಚುನಾವಣಾ ಸಮರದಿಂದ ದೂರ ಉಳಿದಿದ್ದಾರೆ. ಪಕ್ಷವು ಟಿಕೆಟ್ ನೀಡಲು ಮುಂದೆ ಬಂದರೂ ಅದನ್ನು ಚಿದು ನಿರಾಕರಿಸಿದ್ದಾರೆ. ಕೊನೆಗೆ ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಅವರ ಪುತ್ರ ಕಾರ್ತಿ ಚಿದಂಬರಂಗೆ ಟಿಕೆಟ್ ನೀಡಲಾಗಿದೆ. ಚಿದು ಲೋಕಸಮರದಲ್ಲಿ ಸ್ಪರ್ಧಿಸಲು ಹಿಂದೆ ಸರಿದಿದ್ದು ಪಕ್ಷದೊಳಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿಯೇ, ಸುಲಭವಾಗಿ ರಾಜ್ಯಸಭೆ ಪ್ರವೇಶಿಸುವ ಚಿದು ಆಸೆಗೆ ಸಚಿವರು ಅಡ್ಡಗಾಲು ಹಾಕಿದ್ದಾರೆ.