ಪ್ರತ್ಯೇಕ ಅಪಘಾತ: 10 ಜನರ ಸಾವು
ಆಳಂದ/ಚಿಕ್ಕಮಗಳೂರು: ರಾಜ್ಯ ದಲ್ಲಿ ಶನಿವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಟ್ಟು 10 ಜನರು ಮೃತಪಟ್ಟಿದ್ದು, 20 ಜನರು ಗಾಯಗೊಂಡಿದ್ದಾರೆ.
ಗುಲ್ಬರ್ಗ ಜಿಲ್ಲೆಯ ಆಳಂದ-ಖಜೂರಿ ಗಡಿ ಬಳಿ ಲಾರಿ ಮತ್ತು ಕ್ರೂಸರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ 5 ಜನರು ಮೃತಪಟ್ಟು ಮೂವರು ಗಾಯಗೊಂಡರೆ, ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಬಳಿ ಕಬ್ಬು ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದು ಐವರು ಅಸು ನೀಗಿದ್ದಾರೆ. 20 ಜನರು ಗಾಯಗೊಂಡ್ಡಿದ್ದಾರೆ.
ಎಲ್ಲಿ.. ಏನಾಯ್ತು?: ಸೇಡಂನ 8 ಜನರಿದ್ದ ಕ್ರೂಸರ್ ಉಮರಗಾ ಮಾರ್ಗವಾಗಿ ಶನಿವಾ ಬೆಳಗ್ಗೆ ಆಳಂದ ಕಡೆಗೆ ಹೊರಟಿತ್ತು. ಆಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟರೆ, ಗಾಯಗೊಂಡಿದ್ದ ಇನ್ನೂಳಿದ ನಾಲ್ವರ ಪೈಕಿ ಒಬ್ಬರು ಉಮರಗಾ ಆಸ್ಪತ್ರೆಯಲ್ಲಿ ನಿಧನರಾದರು.
ಉರುಳಿ ಬಿತ್ತು ಲಾರಿ: ಕಡೂರು ತಾಲೂಕಿನ ಸಕ್ರೆಪಟ್ಟಣ ಸಮೀಪದ ಕಮ್ಮೇನಹಳ್ಳಿಯಲ್ಲಿ ಕಬ್ಬು ಕಟಾವಿಗೆಂದು ತೆರಳಿದ್ದ ಈ ಕಾರ್ಮಿಕರು, ಕಬ್ಬು ಕಟಾವಿನ ಬಳಿಕ ಲಾರಿಗೆ ಲೋಡ್ ಮಾಡಿ ಅದೇ ಲಾರಿಯಲ್ಲಿ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಲಾರಿ ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಹತ್ತಿರ ಬರುತ್ತಿದ್ದಂತೆ ಉರುಳಿ ಬಿದ್ದಿದೆ. ಆಗ, ಲಾರಿಯಲ್ಲಿದ್ದ ಕಾರ್ಮಿಕರು ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇವರ ಪೈಕಿ ಮೂವರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟರೆ 17ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ.