ಮಾಹಿತಿ ಯೋಜನೆ ಚಾಲನೆಗಿದ್ದ ಆಸಕ್ತಿ ಜಾರಿಗಿಲ್ಲ
ಕ.ಪ್ರ.ವಾರ್ತೆ ಬೆಂಗಳೂರು ಮಾ.22
ಸರ್ಕಾರದ ಬಳಿ ಇರುವ ಮಾಹಿತಿ ಸಾರ್ವಜನಿಕರ ಸ್ವತ್ತು ಎಂದು ತಿಳಿಸಲು ನಮಗೆ ಒಂದು ವರ್ಷ ಕಳೆಯಿತು ಎಂದು ಪ್ರಧಾನ ಮಂತ್ರಿ ಸಲಹೆಗಾರ ಸ್ಯಾಮ್ ಪಿಟ್ರೋಡಾ ಬೇಸರವ್ಯಕ್ತಪಡಿಸಿದ್ದಾರೆ.
ಮಾಹಿತಿ ತಂತ್ರಜ್ಞಾನದ ಯುಗದಲ್ಲಿರುವಾಗ ಸರ್ಕಾರಿ ಮಾಹಿತಿಗಳು ಕೂಡ ಜನರಿಗೆ ಬೆರಳ ತುದಿಗೆ ಸಿಗಬೇಕು ಎಂಬ ಆಶಯದಿಂದ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿತು. ಆದರೆ ಚಾಲನೆ ನೀಡುವಾಗ ತೋರಿಸಿದ ಆಸಕ್ತಿಯನ್ನು ಮಾಹಿತಿ ನೀಡಲು ತೋರಿಸಲಿಲ್ಲ. ಮಾಹಿತಿ ಕೇಳಲು ಮುಂದಾದಾಗ ಇದು 'ಸರ್ಕಾರಿ ಮಾಹಿತಿ' ಎಂದು ಗೌಪ್ಯತೆ ಕಾಪಾಡುವ ಪ್ರಯತ್ನ ನಡೆಯಿತು. ಆದರೆ ಯೋಜನಾ ಆಯೋಗ ಹಾಗೂ ಕೇಂದ್ರ ಸರ್ಕಾರವನ್ನು ಒಪ್ಪಿಸಿ ಮಾಹಿತಿಗಳನ್ನು ಸಾರ್ವಜನಿಕ ಮಾಡಲು ಬರೋಬ್ಬರಿ ಒಂದು ವರ್ಷ ಕಳೆಯಿತು ಎಂದು ಅವರು ನಗರದಲ್ಲಿ ಶನಿವಾರ ನಡೆದ ಪತ್ರಿಕಾ ಸಂವಾದದಲ್ಲಿ ಅಭಿಪ್ರಾಯಪಟ್ಟರು.
ಇಂತಹ ಬದಲಾವಣೆಯಿಂದ ಮಾತ್ರ ಆಡಳಿತ ವ್ಯವಸ್ಥೆಯಲ್ಲಿ ಹೊಸತನ ತರಲು ಸಾಧ್ಯವಿದೆ. ಈಗ ನಡೆಯಲಿರುವ ಲೋಕಸಭೆ ಚುನಾವಣೆ ಕೂಡ ಎಲ್ಲ ಹೊಸತನಗಳನ್ನು ನಿರ್ಧರಿಸಲಿದೆ. ಭಾರತದ ಮತದಾರ ಈಗ ನೀಡುವ ಮತವು ಮುಂದಿನ ಒಂದು ದಶಕದ ಭಾರತವನ್ನು ನಿರ್ಧರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ 10 ವರ್ಷದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದರೆ ಇದನ್ನು ಪ್ರಚುರಪಡಿಸಲು ಸರ್ಕಾರ ವಿಫಲವಾಗಿದೆ. ಮಾಧ್ಯಮಗಳು ಕೂಡ ಸರ್ಕಾರದ ಋಣಾತ್ಮಕ ವಿಚಾರಗಳನ್ನು ವೈಭವೀಕರಿಸಿವೆ. ಇದರಿಂದ ದೇಶದಲ್ಲಿ ಅಭಿವೃದ್ಧಿಯಾಗಿದ್ದರೂ ಜನರಲ್ಲಿ ಖುಷಿಯಿಲ್ಲದಂತಾಗಿದೆ. ಸರ್ಕಾರಗಳ ಮೇಲೆ ಜನರು ಅತೃಪ್ತಿ ಹೊಂದಿದ್ದಾರೆ. ಆದಾಗ್ಯೂ ಯುಪಿಎ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಪಿಟ್ರೋಡಾ ಹೇಳಿದರು.
ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ: ಭ್ರಷ್ಟಾಚಾರವು ಸಮಾಜದ ಜೀವನ ಪದ್ಧತಿಯಾಗಿದೆ. ಭ್ರಷ್ಟಾಚಾರವನ್ನು ನಾಶ ಮಾಡಲು ಸಾಧ್ಯವಿಲ್ಲ. ಸಮಾಜದ ಪ್ರತಿ ವಿಭಾಗದಲ್ಲಿಯೂ ಭ್ರಷ್ಟಾಚಾರವಿದೆ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಅಮೆರಿಕ, ಯುರೋಪ್ನಲ್ಲಿಯೂ ಭ್ರಷ್ಟಾಚಾರವಿದೆ. ಆದರೆ ಅಲ್ಲಿನ ಭ್ರಷ್ಟಾಚಾರ ಸಾಮಾನ್ಯ ಜನತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದ ಪಿಟ್ರೋಡಾ, ಕೇಂದ್ರ ಸರ್ಕಾರದ ಹಗರಣಗಳ ಕುರಿತ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ನುಣುಚಿಕೊಂಡರು.
ದೇಶವನ್ನು ಒಂದು ರಾತ್ರಿಯಲ್ಲಿ ಬದಲಿಸಲು ಸಾಧ್ಯವಿಲ್ಲ. ಆದರೆ ಜನರು ಕ್ಷಣಾರ್ಧದಲ್ಲಿ ಬದಲಾವಣೆ ನಿರೀಕ್ಷಿಸುತ್ತಿದ್ದಾರೆ. ದೇಶ ಹಾಗೂ ಕಂಪನಿಯನ್ನು ಕಟ್ಟುವುದು ಒಂದೇ ತರಹವಲ್ಲ. ದೇಶದ ಅಭಿವೃದ್ಧಿಗೆ ಇಂದು ಪ್ರಾರಂಭಿಸಿದರೆ ಅದರ ಪ್ರಭಾವ ತಿಳಿಯಲು ಕೆಲ ವರ್ಷಗಳು ಬೇಕಾಗುತ್ತವೆ ಎಂದು ಹೇಳಿದರು.
ಯುವ ದೇಶಕ್ಕೆ ಮುದಿ ಮಾದರಿ: ಈ ದೇಶದ ಭವಿಷ್ಯ ಯುವ ಜನಾಂಗವನ್ನು ಅವಲಂಬಿಸಿದೆ. ಆದರೆ 20 ವರ್ಷದ ಯುವಕರ ಆಕಾಂಕ್ಷೆಗಳನ್ನು ತಿಳಿಯದ 60 ವರ್ಷದ ಮುದುಕರು ನಿಯಮ ರೂಪಿಸುತ್ತಾರೆ. 17 ವರ್ಷದ ವಿದ್ಯಾರ್ಥಿಗಳು ಅಭ್ಯಾಸ ಮಾಡುವಲ್ಲಿ 60 ವರ್ಷದ ಹಿರಿಯರು ಕುಲಪತಿಗಳಾಗಿ ಕೆಲಸ ಮಾಡುತ್ತಾರೆ. ದೇಶದ ಆಡಳಿತ ಹಾಗೂ ಶೈಕ್ಷಣಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸದಿದ್ದರೆ ಯುವ ಶಕ್ತಿಯನ್ನು ನಾಶ ಮಾಡಿದಂತಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿಯೂ ಈ ಬದಲಾವಣೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮೋದಿ ಜೊತೆ ಭಿನ್ನಾಭಿಪ್ರಾಯವಿಲ್ಲ
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯೊಂದಿಗೆ ಯಾವುದೆ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ಆದರೆ ಆ ಪಕ್ಷ ಹಾಗೂ ವ್ಯಕ್ತಿಯ ಸಿದ್ದಾಂತ ನನಗೆ ಇಷ್ಟವಾಗುವುದಿಲ್ಲ ಎಂದು ಪಿಟ್ರೋಡಾ ಹೇಳಿದ್ದಾರೆ. ಒಂದೊಮ್ಮೆ ಮೋದಿ ಅಧಿಕಾರಕ್ಕೆ ಬಂದರೆ ಜತೆಯಲ್ಲಿಯೇ ಕೆಲಸ ಮಾಡುತ್ತೀರಾ ಎಂಬ ಪ್ರಶ್ನೆಗೆ, 'ಈ ಪ್ರಶ್ನೆಯನ್ನು ಅವರು ಕೇಳಲಿ, ಆಗ ಉತ್ತರಿಸುತ್ತೇನೆ' ಎಂದಷ್ಟೆ ಹೇಳಿದರು.