ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ಮಾರುತ

ಒಂದು ಕಾಲದ ಅಸ್ಪೃಶ್ಯ 'ಮೋದಿ' ಈಗ ಎಲ್ಲರ ಪಾಲಿನ ದುಂಬಿ. ಅಧಿಕಾರ ಮೋದಿ ಕುರಿತ...

Mainashree
Updated On : 22 Mar 2014, 11:02 am

ಒಂದು ಕಾಲದ ಅಸ್ಪೃಶ್ಯ 'ಮೋದಿ' ಈಗ ಎಲ್ಲರ ಪಾಲಿನ ದುಂಬಿ. ಅಧಿಕಾರ ಮೋದಿ ಕುರಿತ ಹಿಂದಿನ ಆಪಾದನೆಗಳನ್ನೇ ಅಳಿಸಿ ಹಾಕಿಬಿಟ್ಟಿದೆ. ನಾ ಬರ್ತೇನೆ, ತಾ ಬರ್ತೇನೆ ಎಂದೇಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಕ್ಷಕ್ಕೆ ಸೇರಿಸಿಕೊಳ್ಳುವ ಭರಾಟೆಯಲ್ಲಿ ಆಡ್ವಾಣಿ ಮಾತನ್ನೂ ಧಿಕ್ಕರಿಸಲಾಗಿದೆ.

ರಾಮ್‌ವಿಲಾಸ್ ಪಾಸ್ವಾನ್
ಇವರೊಂದು ರೀತಿ ಅವಕಾಶವಾದಿ ರಾಜಕಾರಣಿ.
ಎನ್‌ಡಿಎ, ಯುಪಿಎ ಎರಡೂ ಇವರಿಗೆ ಸಹ್ಯ. ಹಿಂದೆ ಲಾಲು ಸಖ್ಯ ಮಾಡಿ ಸೋಲುಂಡವರು. ಈ ಬಾರಿ ಮೋದಿ ಅಲೆಯಲ್ಲಿ ಗೆಲ್ಲುವ ಆಸೆ ಇಟ್ಟುಕೊಂಡು ಎನ್‌ಡಿಎಗೆ ಬಂದಿದ್ದಾರೆ. ವಿಶೇಷವೆಂದರೆ 2002ರ ಗೋಧ್ರಾ ಗಲಭೆ ನಂತರ ಮೊದಲಿಗೆ ಎನ್‌ಡಿಎ ಮೈತ್ರಿಕೂಟ ಬಿಟ್ಟು ಹೊರನಡೆದವರೂ ಇವರೇ. ಆದರೆ ಈಗ ಮತ್ತೆ ವಾಪಸ್ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಆರ್.ಕೆ. ಸಿಂಗ್
ಕೇಂದ್ರ ಗೃಹ ಕಾರ್ಯದರ್ಶಿಯಾಗಿದ್ದ ಆರ್.ಕೆ. ಸಿಂಗ್ ಅವರು ನಿವೃತ್ತಿ ನಂತರ ಬಿಜೆಪಿ ಸೇರ್ಪಡೆಯಾದರು.
ಜಗದಂಬಿಕಾ ಪಾಲ್
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ. ಮೋದಿ ಅಲೆಯನ್ನು ಗ್ರಹಿಸಿರುವ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಉತ್ತರಪ್ರದೇಶದ ದೊಮರಿಯಾಗಂಜ್ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಸಂಭವ ಇದೆ.

ಶರದ್ ಪವಾರ್
ಮಹಾರಾಷ್ಟ್ರದ ರಾಜಕಾರಣದಲ್ಲಿ ನಿರ್ಣಾಯಕ
ಪಾತ್ರ. ಅವರ ಎನ್‌ಸಿಪಿ ಸದ್ಯ ಯುಪಿಎ ಮಿತ್ರಪಕ್ಷವಾ
ಗಿದ್ದು, ಪವಾರ್ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಮುಂದೆ ಎನ್‌ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆ ಮನಗಂಡಿರುವ ಅವರು, ಯುಪಿಎಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಎನ್‌ಡಿಎ ಅಧಿಕಾರದ ಚುಕ್ಕಾಣಿ ಹಿಡಿದರೆ ಪವಾರ್ ಸಹ ಯುಪಿಎಗೆ ಗುಡ್‌ಬೈ ಹೇಳಿ ಎನ್‌ಡಿಎ ಬಳಗ ಸೇರುವುದು ನಿಶ್ಚಿತ. ಇದರ ಜೊತೆಗೆ ಮೋದಿ ಕುರಿತಂತೆ ಹಲವಾರು ಬಾರಿ ಎನ್‌ಸಿಪಿ ನಾಯಕರು ಮೆದು ಮಾತುಗಳನ್ನಾಡಿರುವುದು ಯುಪಿಎ ಬಿಡುವ ಸೂಚ್ಯವನ್ನು ತೋರಿದ್ದಾರೆ.

ಉಮರ್ ಫಾರೂಕ್
ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹುರಿಯತ್ ಕಾನ್ಫರೆನ್ಸ್ ತಿಳಿಸಿದ್ದರೂ ಸಹ, ಕಾಶ್ಮೀರ ಸಮಸ್ಯೆ ಇತ್ಯರ್ಥಪಡಿಸಲು ಯುಪಿಎಗಿಂತ ಬಿಜೆಪಿ ನೇತೃತ್ವದ ಎನ್‌ಡಿಎ ಮುತುವರ್ಜಿ ವಹಿಸಲಿದೆ ಎಂದು ಹುರಿಯತ್ ಮುಖ್ಯಸ್ಥ ಫಾರೂಕ್ ಅಭಿಪ್ರಾಯಪಟ್ಟಿದ್ದಾರೆ.
ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ. 1999ರಿಂದ 2004ರ ಅವಧಿಯಲ್ಲಿ ಎನ್‌ಡಿಎ ಆಡಳಿತ ಇದ್ದಾಗ, ಎನ್‌ಡಿಎ ಸಮನ್ವಯಕಾರರಾಗಿದ್ದರು. 2004ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಪರಾಭವ ಹೊಂದಿದ ಬಳಿಕ ಎನ್‌ಡಿಎ ತೊರೆದಿದ್ದರು. ಈಗ ಆಂಧ್ರಪ್ರದೇಶ ವಿಭಜನೆ ಹಿನ್ನೆಲೆಯಲ್ಲಿ ರಾಜಕೀಯ ಲೆಕ್ಕಾಚಾರ ಹಾಕಿಕೊಂಡು ಮತ್ತೆ ಬಿಜೆಪಿ ಗೆಳೆತನಕ್ಕೆ ಮುಂದಾಗಿದ್ದಾರೆ.

ಪುರಂದರೇಶ್ವರಿ
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ದಿ.ಎನ್‌ಟಿಆರ್ ಪುತ್ರಿ. ಯುಪಿಎ 1, ಯುಪಿಎ 2 ಎರಡೂ ಅವಧಿಯಲ್ಲಿ ಕೇಂದ್ರದಲ್ಲಿ ಸಚಿವೆ. ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಮಾ.7ರಂದು ಬಿಜೆಪಿ ಸೇರಿದ್ದಾರೆ.
ಬಿ.ಶ್ರೀರಾಮುಲು
ಒಂದು ಕಾಲದಲ್ಲಿ ಸುಷ್ಮಾ ಆಪ್ತರಾಗಿದ್ದ ಬಿ.ಶ್ರೀರಾಮುಲು 2011ರಲ್ಲಿ ಬಿಜೆಪಿ ತೊರೆದು ಬಿಎಸ್‌ಆರ್ ಕಾಂಗ್ರೆಸ್ ಸ್ಥಾಪಿಸಿದ್ದರು. ಈಗ ಮಾತೃಪಕ್ಷಕ್ಕೆ ಮರಳಿರುವ ಅವರು ಬಳ್ಳಾರಿಯಿಂದ
 ಬಿಜೆಪಿ ಅಭ್ಯರ್ಥಿ.

ಮುಫ್ತಿ
ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಜತೆ ಸೇರಿ ಕೆಲಸ ಮಾಡಲು ಸಿದ್ಧ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಘೋಷಿಸಿದ್ದಾರೆ. ದೆಹಲಿಯಲ್ಲಿನ 'ಪ್ರಬಲ ನಾಯಕತ್ವ' ಕಾಶ್ಮೀರಕ್ಕೆ ಒಳ್ಳೆಯದು ಮಾಡಲಿದೆ ಎನ್ನುವುದು ನಿಲುವು.
ಸತ್ಯಪಾಲ್ ಸಿಂಗ್
ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಇವರು, ಕರ್ತವ್ಯಕ್ಕೆ ನಿವೃತ್ತಿ ಕೊಟ್ಟು ಬಿಜೆಪಿ ಸೇರಿದರು. ಇವರಿಗೆ ಮುಂಬೈನಲ್ಲಿ ಟಿಕೆಟ್ ಘೋಷಣೆಯಾಗಿದೆ.    

ಸತ್ಪಾಲ್ ಮಹಾರಾಜ್
ಮೂಲತಃ ಕಾಂಗ್ರೆಸ್ಸಿಗ. 1995ರಲ್ಲಿ ಪಕ್ಷ ತ್ಯಜಿಸಿ, 1999ರಲ್ಲಿ ಮತ್ತೆ ಸೇರ್ಪಡೆ. ಹಲವು ಸಲ ಕಾಂಗ್ರೆಸ್ ಸಂಸದ. ಪತ್ನಿ ಉತ್ತರಾಖಂಡದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆ. ಮುಖ್ಯಮಂತ್ರಿ ಹರೀಶ್ ರಾವತ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಈಗ ಬಿಜೆಪಿ ಸೇರ್ಪಡೆಯಾಗಿ, ಪೌರಿ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಎನ್.ಕೆ. ಸಿಂಗ್
ಹಣಕಾಸು ತಜ್ಞ. ಇದಕ್ಕಿಂತ ಹೆಚ್ಚಾಗಿ ಕೇಂದ್ರ ಸರ್ಕಾರದ ಹಲವಾರು ಇಲಾಖೆಗಳಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುವ ಅನುಭವ. ಜೆಡಿಯುನಲ್ಲಿದ್ದ ಇವರು, ನಿತೀಶ್ ಸಖ್ಯ ತೊರೆದು ಮೋದಿ ಪ್ರಭಾವಕ್ಕೆ ಮಣಿದು ಬಿಜೆಪಿ ತೆಕ್ಕೆಗೆ ಸೇರಿದ್ದಾರೆ.
ರಾಮ್‌ಕೃಪಾಲ್ ಯಾದವ್
ಆರ್‌ಜೆಡಿ ನಾಯಕ ಲಾಲು ಅವರ ಹತ್ತಿರದ ಸಂಬಂಧಿ, ಪರಮಾಪ್ತ. ಆದರೆ ಈಗ ರಾಜಕೀಯ ದುಷ್ಮನ್. ಮಿಸಾದ ಟಿಕೆಟ್ ನಿರಾಕರಣೆಯಾದಾಗ ಲಾಲು ಪಕ್ಷ ಬಿಟ್ಟು ಬಿಜೆಪಿಗೆ ಸೇರ್ಪಡೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement