ಸ್ತ್ರೀ ಎಂದರೆ ಪುಕ್ಕಟೆ ಭಾಷಣಕ್ಕಷ್ಟೇ ಸಾಕೇ!
ಯುವ ಶಕ್ತಿ ಮತ್ತು ಮಹಿಳಾ ಶಕ್ತಿ ಎಂಬುದು..
ಕನ್ನಡಪ್ರಭ ವಾರ್ತೆ, ಬೆಂಗಳೂರು ಮಾ.22
ರಾಜಕೀಯ ಪಕ್ಷಗಳಿಗೆ ಯುವ ಶಕ್ತಿ ಮತ್ತು ಮಹಿಳಾ ಶಕ್ತಿ ಎಂಬುದು ಕೇವಲ ಮತಬೇಟೆ ಅಸ್ತ್ರ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ.
ಯುವಕರಿಗೆ ಪ್ರಾಶಸ್ತ್ಯ, ಮಹಿಳಾ ಸಬಲೀಕರಣ ಎಂಬ ಮಾತುಗಳು ಕೇವಲ ಭಾಷಣಕ್ಕೆ ಸೀಮಿತವಾಗಿವೆ. ಈ ನಿಟ್ಟಿನಲ್ಲಿ ಗಂಭೀರ ಹೆಜ್ಜೆ ಇಡಲು ಎಲ್ಲ ರಾಜಕೀಯ ಪಕ್ಷಗಳೂ ರಾಜ್ಯದಲ್ಲಿ ವಿಫಲವಾಗಿವೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ನೋಡಿದರೆ ಸಾಕು ಈ ಮಾತುಗಳೆಲ್ಲ ಢೋಂಗಿ ಎಂಬುದು ಅರಿವಾಗುತ್ತದೆ. ಮೀಸೆ ಚಿಗುರುತ್ತಿರುವ ಯುವಕರಿಗಿಂತ ಹಿರಿಯರಿಗೆ ರಾಷ್ಟ್ರೀಯ ಪಕ್ಷಗಳು ಮಣೆಹಾಕಿವೆ. ಗೆಲ್ಲುವ ಸಾಧ್ಯತೆ ಎಂಬ ಅರ್ಹತೆಯ ಮುಂದೆ ನೂತನ ಪ್ರಯತ್ನಗಳ ಸಮೀಕರಣ ಅಸಾಧ್ಯ ಎನ್ನುವುದನ್ನು 16ನೇ ಲೋಕಸಭೆ ಚುನಾವಣೆಯ ರಾಜ್ಯ ಅಭ್ಯರ್ಥಿಗಳ ಪಟ್ಟಿ ಸಾರಿ ಹೇಳುತ್ತಿದೆ.
ಯುವ ರಾಜಕೀಯ ಶಕ್ತಿ ಕುರಿತಂತೆ ಗಂಟೆಗಟ್ಟಲೇ ಭಾಷಣ ಮಾಡಿದ, ಯುವಕರೊಂದಿಗೆ ತಾಸುಗಟ್ಟಲೆ ಸಂವಾದ ನಡೆಸಿದ ರಾಹುಲ್ ಗಾಂಧಿಯ ಕಾಂಗ್ರೆಸ್ನ ರಾಜ್ಯ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯಲ್ಲಿ ಟಿಕೆಟ್ ಗಿಟ್ಟಿಸಿದ ಯುವಕರು ಕೇವಲ ನಾಲ್ಕು.
ಇನ್ನು ಕೇಂದ್ರದ ಯುಪಿಎ ಸರ್ಕಾರ ಯುವಕರನ್ನು ಮರೆತಿದೆ ಎಂದು ಜರಿಯುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಲ್ಲಿ ಮೂವರು ಯುವ ಅಭ್ಯರ್ಥಿಗಳ ಮೇಲೆ ವಿಶ್ವಾಸವಿಡಲಾಗಿದೆ! ಜೆಡಿಎಸ್ ಪ್ರಕಟಿಸಿರುವ ಪಟ್ಟಿಯಲ್ಲಿ ಯುವಕರಿಗೆ ಸ್ಥಾನವೇ ಇಲ್ಲ. ಆದರೆ ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವ ಆಮ್ ಆದ್ಮಿ ಪಕ್ಷವೇ ಲೇಸು, ರಾಜ್ಯದ 28 ಕ್ಷೇತ್ರಗಳ ಪೈಕಿ 9 ಕ್ಷೇತ್ರವನ್ನು ಯುವಕರಿಗೆ ಮೀಸಲಿಟ್ಟಿದೆ.
ಈ ಬಗ್ಗೆ ರಾಜಕೀಯ ಪಕ್ಷಗಳನ್ನು ಪ್ರಶ್ನಿಸಿದರೆ ಒಂದೆರಡು ಹೊಸ ಪ್ರಯೋಗಗಳತ್ತ ಕೈ ತೋರಿಸಿ ತೃಪ್ತಿ ಪಡಿಸುವ ಕೆಲಸ ಮಾಡುತ್ತಿವೆ. ಇನ್ನೊಂದೆಡೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸೇರಿಸಿದರೆ 3 ಅಭ್ಯರ್ಥಿಗಳು ದೊರೆಯುತ್ತಾರೆ. ತೆನೆ ಹೊತ್ತ ಮಹಿಳೆಯ ಗುರುತಿರುವುದರಿಂದ ಜೆಡಿಎಸ್ನಲ್ಲಿ ಬಹುಶಃ ಒಂದೇ ಮಹಿಳೆಗೆ ಟಿಕೆಟ್ ನೀಡಲಾಗಿದೆ. ಆಪ್ ಕೇವಲ ಮೂವರು ಮಹಿಳೆಯರಿಗೆ ಟಿಕೆಟ್ ನೀಡಿದೆ. ಒಟ್ಟಾರೆ ಲೆಕ್ಕ ಹಾಕಿದರೆ ಹೆಚ್ಚು ವಯಸ್ಸಾಗಿರುವುದು ಕಾಂಗ್ರೆಸ್ಗೆ. ಯಾಕೆಂದರೆ ಕಾಂಗ್ರೆಸ್ ಅಭ್ಯರ್ಥಿಗಳ ಸರಾಸರಿ ವಯಸ್ಸು 56, ಬಿಜೆಪಿಯಲ್ಲಿ ಇದು 54, ಆಪ್ನಲ್ಲಿ 48!
ಕಾಂಗ್ರೆಸ್ 'ಹಿರಿತನದ' ಪಕ್ಷ: ರಾಜ್ಯದ 28 ಕ್ಷೇತ್ರಗಳಿಗೆ ಕಾಂಗ್ರೆಸ್ 26 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇವರಲ್ಲಿ 12 ಅಭ್ಯರ್ಥಿಗಳ ವಯಸ್ಸು 60 ಮೀರಿದೆ. 40ಕ್ಕೂ ಕಡಿಮೆ ವಯಸ್ಸಿನ ಯುವಕರ ಸಂಖ್ಯೆ 4ಕ್ಕೆ ಸೀಮಿತ. ಉತ್ತರ ಕನ್ನಡದಿಂದ ಪ್ರಶಾಂತ್ ದೇಶಪಾಂಡೆ(36), ಮಂಡ್ಯದಿಂದ ರಮ್ಯಾ(32), ಬೆಂಗಳೂರು ಕೇಂದ್ರದಿಂದ ರಿಜ್ವಾನ್ ಅರ್ಶದ್(35) ಹಾಗೂ ಬೆಳಗಾವಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್(39)ರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ನ ಸಂಭಾವ್ಯ ಪ್ರಧಾನಿ ಅಭ್ಯರ್ಥಿ ರಾಹುಲ್ಗಿಂತ ರಾಜ್ಯ ಅಭ್ಯರ್ಥಿಗಳ ಸರಾಸರಿ ವಯೋವಾನ 12 ವರ್ಷ ಹೆಚ್ಚಿದೆ.
ಇನ್ನು ದೇಶದಲ್ಲಿ ಬದಲಾವಣೆ ಗಾಳಿಯನ್ನು ಕಾಣುತ್ತಿರುವ ಬಿಜೆಪಿಯಲ್ಲಿ ಕೇವಲ ಮೂವರು ಯುವ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಬಿಜೆಪಿಯ 10 ಅಭ್ಯರ್ಥಿಗಳು 60ರ ಗಡಿ ದಾಟಿದ್ದಾರೆ. ಮೈಸೂರಿನಿಂದ ಪ್ರತಾಪ ಸಿಂಹ, ಬೆಂಗಳೂರು ಗ್ರಾಮಾಂತರದ ಮುನಿರಾಜು ಗೌಡ ಹಾಗೂ ರಾಯಚೂರು ಕ್ಷೇತ್ರದ ಶಿವನಗೌಡ ನಾಯಕ ಅವರು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅತಿ ಚಿಕ್ಕವರು. ಮೈಸೂರು ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ವಯಸ್ಸು ಕೂಡ 38. ಇನ್ನುಳಿದ ನಾಯಕರನ್ನು ಯುವಕರ ಪಟ್ಟಿಗೆ ಪಕ್ಷ ಸೇರಿಸಿಕೊಳ್ಳಬೇಕೆ ಹೊರತು ವಯಸ್ಸಿನ ಆಧಾರದಲ್ಲಿ ಯುವ ಸಮುದಾಯದ ಪ್ರತಿನಿಧಿಗಳು ಎನ್ನಲಾಗದು. ಸಮಾಧಾನಕರ ಸಂಗತಿಯಿಂದರೆ ಪಕ್ಷದ ಪ್ರಧಾನಿ ಅಭ್ಯರ್ಥಿಗಿಂತ ರಾಜ್ಯದ ಅಭ್ಯರ್ಥಿಗಳ ಸರಾಸರಿ ವಯೋವಾನ 10 ವರ್ಷ ಕಡಿಮೆಯಿದೆ.
ದೆಹಲಿ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾಗಿದ್ದ ಆಮ್ ಆದ್ಮಿ ಪಕ್ಷ ಶೇ.30ರಷ್ಟು ಸೀಟುಗಳನ್ನು ಯುವಕರಿಗೆ ನೀಡಿದೆ. ಅದಲ್ಲದೆ ಪಕ್ಷದ ಅಭ್ಯರ್ಥಿಗಳ ಸರಾಸರಿ ವಯೋವಾನ ಕೂಡ 48 ವರ್ಷವಾಗಿದೆ. ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ಬಿಜಾಪುರ, ಬಳ್ಳಾರಿ, ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರದಿಂದ ಯುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.
ಇದು ಮಹಿಳಾ ಸಬಲೀಕರಣ
ಶೇ.49ರಷ್ಟು ಮತ ಹೊಂದಿರುವ ಮಹಿಳೆಯರನ್ನು ಸೆಳೆಯಲು ಎಲ್ಲ ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಭಾಷಣ ಮಾಡುತ್ತವೆ. ಆದರೆ ರಾಜ್ಯದಲ್ಲಿ ಪ್ರಮುಖ ಪಕ್ಷಗಳಿಂದ ಪ್ರಕಟವಾಗಿರುವ ಅಭ್ಯರ್ಥಿಗಳಲ್ಲಿ ಮಹಿಳಾ ಹುರಿಯಾಳುಗಳ ಸಂಖ್ಯೆ ಕೇವಲ ಏಳು! ಇದರಲ್ಲಿ ಆಮ್ ಆದ್ಮಿ ಪಕ್ಷದಿಂದ 3, ಕಾಂಗ್ರೆಸ್ನಿಂದ 2 ಹಾಗೂ ಬಿಜೆಪಿ ಮತ್ತು ಜೆಡಿಎಸ್ನಿಂದ ತಲಾ ಒಂದು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಮಹಿಳೆಯರಿಗೆ ಶೇ.5ರಿಂದ 10ರಷ್ಟು ಸೀಟನ್ನು ನೀಡಲು ಸಾಧ್ಯವಾಗಿಲ್ಲ. ಇನ್ನು ಶೇ.50ರ ಮೀಸಲು ದೂರವೇ ಉಳಿಯಿತು.
- ರಾಜೀವ ಹೆಗಡೆ