ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತೆನೆ ಹೊರಲು ಕಷ್ಟ ಎಂದ ಷರೀಫ್

ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಹೇಳಿದ್ದ ಜಾಫರ್ ಷರೀಫ್

Mainashree
Updated On : 24 Mar 2014, 11:13 am

ಕ.ಪ್ರ. ವಾರ್ತೆ, ಮೈಸೂರು, ಮಾ.23
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಹೇಳಿದ್ದ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ತೆನೆಹೊತ್ತ ರೈತ ಮಹಿಳೆ ಕಿವಿಗೆ ಹೂವು ಮುಡಿಸಿದ್ದಾರೆ. ಷರೀಫ್ ಕೈ ಕೊಟ್ಟಿದ್ದರಿಂದ ಪರ್ಯಾಯ ಅಭ್ಯರ್ಥಿಗಾಗಿ ಜೆಡಿಎಸ್ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆರಂಭದಿಂದಲೂ ಮೈಸೂರು- ಕೊಡಗು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಗೊಂದಲಮಯ ವಾತಾವರಣ. ಮೊದಲು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪತ್ನಿ ಪ್ರಮೋದಾದೇವಿ ಒಡೆಯರ್‌ರನ್ನು ಸೆಳೆದು, ಟಿಕೆಟ್ ಕೊಡುವ ಯತ್ನ ನಡೆಯಿತು. ಅವರು ನಿರಾಕರಿಸಿದ್ದರಿಂದ ನಂತರ ಕೆ.ಆರ್. ನಗರ ಶಾಸಕ ಸಾ.ರಾ.ಮಹೇಶ್, ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ, ಎಚ್.ಡಿ. ಕೋಟೆ ಶಾಸಕ ಎಸ್.ಚಿಕ್ಕಮಾದು ಹೆಸರು ಕೇಳಿ ಬಂದವು.
ಇದಾದ ನಂತರ ಬಿಜೆಪಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪರನ್ನು ಸೆಳೆದು, ಟಿಕೆಟ್ ನೀಡುವ ಯತ್ನ ನಡೆಯಿತು. ಆ ವೇಳೆಗೆ ಬೆಂಗಳೂರು ಸೆಂಟ್ರಲ್‌ನಿಂದ ಟಿಕೆಟ್ ನಿರಾಕರಿಸಲ್ಪಟ್ಟ ಸಿ.ಕೆ.ಜಾಫರ್ ಷರೀಫ್ ಜೆಡಿಎಸ್ ಅಭ್ಯರ್ಥಿಯಾಗುತ್ತಾರೆ ಎಂಬ ಮಾತು ಕೇಳಿಬಂತು. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ- ಷರೀಫ್ ನಡುವಿನ ಭೇಟಿ ಇದಕ್ಕೆ ಇಂಬು ನೀಡಿತು. ಮೆಕ್ಕಾ ಯಾತ್ರೆಗೆ ಹೊರಟಿದ್ದ ಷರೀಫ್ ವಾಪಸ್ಸಾದ ನಂತರ ಮೈಸೂರಿನಿಂದ ನಾಮಪತ್ರ ಸಲ್ಲಿಸುತ್ತಾರೆ ಎಂದು ಹೇಳಲಾಗಿತ್ತು. ಸ್ವತಃ ಎಚ್.ಡಿ. ದೇವೇಗೌಡರು ಹಾಸನದಲ್ಲಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚಿಕ್ಕಬಳ್ಳಾಪುರದಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದರು.
ಜೆಡಿಎಸ್‌ಗೆ ಇಬ್ಬರೂ ಇಲ್ಲ:
ಈ ಬೆಳವಣಿಗೆಯಿಂದ ಬೇಸತ್ತ ಪ್ರೊ.ಮಲ್ಲಿಕಾರ್ಜುನಪ್ಪ ಶಿವಮೊಗ್ಗಕ್ಕೆ ತೆರಳಿ, ತಮ್ಮ ರಾಜಕೀಯ ಮಾರ್ಗದರ್ಶಕರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಬಿಜೆಪಿಯಲ್ಲೇ ಉಳಿಯಲು ತೀರ್ಮಾನಿಸಿದರು. ಹೀಗಾಗಿ ಜೆಡಿಎಸ್‌ಗೆ ಈಗ ಇತ್ತ ಷರೀಫೂ ಇಲ್ಲ, ಅತ್ತ ಪ್ರೊ.ಮಲ್ಲಿಕಾರ್ಜುಪ್ಪ ಕೂಡ ಬರಲ್ಲ ಎಂಬಂತಾಗಿದೆ.
ಏತನ್ಮಧ್ಯೆ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮಾತ್ರ ಮೈಸೂರಿನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಯಾರು ಈ ಅಚ್ಚರಿಯ ಅಭ್ಯರ್ಥಿ? ಮತ್ತದೇ ಕಾಂಗ್ರೆಸ್‌ನಲ್ಲಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ರೇವಣ್ಣ ಪತ್ನಿ ಭವಾನಿಯೇ ಎಂಬ ಚರ್ಚೆ ನಡೆಯುತ್ತಿದೆ. ಇದರ ನಡುವೆ ಶಾಸಕ ಜಿ.ಟಿ. ದೇವೇಗೌಡ ಅಥವಾ ಅವರ ಪತ್ನಿ ಜಿಪಂ ಸದಸ್ಯೆ ಲಲಿತಾ ದೇವೇಗೌಡ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ. ಒಂದು ವೇಳೆ ಎಚ್.ಡಿ. ರೇವಣ್ಣ ಅವರೇ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ. ಇದಕ್ಕೆಲ್ಲಾ ತೆರೆ ಎಳೆಯಲೆಂದೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೋಮವಾರ (ಮಾ.24) ಮೈಸೂರಿಗೆ ಆಗಮಿಸುತ್ತಿದ್ದಾರೆ. ಅಭ್ಯರ್ಥಿ ಹೆಸರು ಅಂತಿಮಗೊಳಿಸಲಿದ್ದಾರೆ.
ದೇವೇಗೌಡರಿಗೆ ಷರೀಫ್ ಪತ್ರ?
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸಿನ ಜಾಫರ್ ಷರೀಫ್ ಅಭ್ಯರ್ಥಿಯಾಗುತ್ತಾರೆ ಎಂದು ಕಾದಿದ್ದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರಿಗೆ ಷರೀಫ್ ಮೆಕ್ಕಾದಿಂದ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಪತ್ರದಲ್ಲಿ 'ನಾನು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಟಸ್ಥನಾಗಿರಲು ಇಚ್ಛಿಸಿದ್ದೇನೆ. ಆದರೆ, ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳಿಗೆ ಬೆಂಬಲ ನೀಡುತ್ತೇನೆ. ಈ ಕುರಿತು ಮೆಕ್ಕಾದಿಂದ ಬಂದ ನಂತರ ನಿಲುವನ್ನು ಪ್ರಕಟಿಸುತ್ತೇನೆ' ಎಂದು ಪತ್ರದಲ್ಲಿ ಬರೆದಿದ್ದಾರೆ.

  ಸ್ಪರ್ಧೆಗೆ ನಿರಾಸಕ್ತಿ
ರಾಯಚೂರು
: ಮೈಸೂರಿನಿಂದ ಮಾತ್ರ ವಲ್ಲ ರಾಯಚೂರಿನಲ್ಲೂ ಅಭ್ಯರ್ಥಿಗೆ ಸಂಬಂಧಿಸಿ ಜೆಡಿಎಸ್ ಗೊಂದಲಕ್ಕೆ ಬಿದ್ದಿದೆ. ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ ಸಮೀಪಿಸುತ್ತಿದ್ದಂತೆ ಅಭ್ಯರ್ಥಿ ರಾಜಾ ಪರಮೇಶ್ವರ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ರಾಜಾ ಪರಮೇಶ್ವರ ಅವರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ. ಇದು ಜೆಡಿಎಸ್ ಪಾಲಿಗೆ ಹೊಸ ತಲೆನೋವು ಸೃಷ್ಟಿಸಿದೆ.

 ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement