ಪರೀಕ್ಷೆ ವೇಳೆಯಲ್ಲೇ ಶಾಲೆಗೆ ಬಂತು ಸೇನಾ ತುಕಡಿ!
ಉಪ್ಪಿನಂಗಡಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ನಿಯೋಜಿಸಲಾಗುವ ಭದ್ರತಾ ಸಿಬ್ಬಂದಿ ತುಕಡಿಗಳ ಆಗಮನವಾಗಿದ್ದು, ಉಪ್ಪಿನಂಗಡಿಯ ಸರ್ಕಾರಿ ಮಾದರಿ ಶಾಲಾ ಕಟ್ಟಡದಲ್ಲಿ ಇವರಿಗೆ ವಾಸ್ತವ್ಯದ ಅವಕಾಶ ಕಲ್ಪಿಸಲಾಗಿದೆ.
ಅರೆ ಸೇನಾಪಡೆಯ ತುಕುಡಿಗಳು ಈಗಾಗಲೇ ಆಗಮಿಸಿದ್ದು, 90ರಷ್ಟು ಮಂದಿ ಇರುವ ತಂಡ ಉಪ್ಪಿನಂಗಡಿಯ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಮೊಕ್ಕಾಂ ಹೂಡಿದೆ. ಚುನಾವಣೆಯ ಸಂದರ್ಭದಲ್ಲಿ ಇವರನ್ನು ವಿವಿಧ ಮತಗಟ್ಟೆಗಳಿಗೆ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ.
ಮಾರ್ಚ್ ಅಂತ್ಯದವರೆಗೂ ಪರೀಕ್ಷೆಗಳು ನಡೆಯಲಿರುವುದರಿಂದ ಶಾಲಾ ಕ್ಯಾಂಪಸ್ನೊಳಗೆ ಭದ್ರತಾ ಪಡೆಗಳ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿರುವುದು ವಿದ್ಯಾರ್ಥಿಗಳ ಏಕಾಗ್ರತೆ ಕೆಡಿಸಿದಂತಾಗುತ್ತಿದೆ ಎಂಬ ಆರೋಪ ಪೋಷಕರಿಂದ ಕೇಳಿಬರುತ್ತಿದೆ.
ಆಗಮಿಸಿರುವ ಭದ್ರತಾ ಪಡೆಗಳನ್ನು ಪರೀಕ್ಷೆ ಮುಗಿಯುವ ವರೆಗೆ ಕಲ್ಯಾಣ ಮಂಟಪದಂತಹ ಕಟ್ಟಡಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ. ಪರೀಕ್ಷೆ ಮುಗಿದ ಬಳಿಕ ಶಾಲೆಯಲ್ಲಿ ಅವಕಾಶ ಕಲ್ಪಿಸಿದಲ್ಲಿ ಯಾವುದೇ ಸಮಸ್ಯೆ ಮೂಡದು. ಬಹುತೇಕ 1ರಿಂದ 8 ನೇ ತರಗತಿಯ ವರೆಗಿನ ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಸೈನಿಕ ವಸ್ತ್ರಧಾರಿ, ಆಯುಧಧಾರಿ ಭದ್ರತಾ ಪಡೆಯವರನ್ನು ಕಾಣುವ ವಿದ್ಯಾರ್ಥಿಗಳು ಕುತೂಹಲದಂತೆ ಅವರನ್ನೇ ನೋಡುತ್ತಾ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಪೋಷಕರು.
ಶಿಕ್ಷಣ ಇಲಾಖೆ ಅನುಮತಿ: ಈ ಕುರಿತು ಪತ್ರಿಕ್ರಿಯಿಸಿದ ಉಪ್ಪಿನಂಗಡಿ ಪೊಲೀಸ್ ಅಧಿಕಾರಿಯೊಬ್ಬರು, ಚುನಾವಣಾ ಭದ್ರತೆಯೂ ಅಗತ್ಯ. ಈ ಹಿನ್ನೆಲೆಯಲ್ಲಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದ್ದು, ಅವರಿಗೆ ಸಮರ್ಪಕ ವಾಸ್ತವ್ಯದ ಅವಕಾಶ ಕಲ್ಪಿಸಬೇಕಾಗಿದೆ. ಈ ಕಾರಣಕ್ಕೆ ಅಗತ್ಯ ಶೌಚಾಲಯ, ಕೊಠಡಿಗಳ ಸಂಖ್ಯೆ ಹೊಂದಿರುವ ಉಪ್ಪಿನಂಗಡಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಅನುಮತಿ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.