ಬಿಜೆಪಿ ಸೇರಿ ಬಿಟ್ಟರು ಪ್ರಮೋದ ಮುತಾಲಿಕ್
ಹುಬ್ಬಳ್ಳಿ/ನವದೆಹಲಿ/ಪಣಜಿ:
ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಸೇರಿದ್ದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಷ್ಟೇ ಬೇಗ ಪಕ್ಷದಿಂದ ನಿರ್ಗಮಿಸಿದ್ದಾರೆ. ಮುತಾಲಿಕ್ ಸೇರ್ಪಡೆಗೆ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳಿಂದ ಟೀಕೆ, ಪಕ್ಷದೊಳಗೇ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ನಾಯಕತ್ವ ಅವರಿಗೆ ಪಕ್ಷದ ಸದಸ್ಯತ್ವ ನಿರಾಕರಿಸಿತು. ಧಾರವಾಡದಿಂದ ಶ್ರೀರಾಮ ಸೇನೆ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದ ಮುತಾಲಿಕ್, ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದರು. ಆದರೆ, ಭಾನುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ನಿಲುವು ಬದಲಿಸಿದ ಅವರು, ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್, ಈಶ್ವರಪ್ಪ ಸಮ್ಮುಖ ಬಿಜೆಪಿಗೆ ಸೇರ್ಪಡೆಯಾಗಿದ್ದರು.