ಭ್ರಷ್ಟಾಚಾರ ವಿರುದ್ಧ ಪಾತ್ರ ಸೃಷ್ಟಿ ಸಾಹಿತಿಗಳಿಗೆ ಭೈರಪ್ಪ ಸಲಹೆ
ಮೈಸೂರು: ಇಂದಿನ ದಿನಗಳಲ್ಲಿ ಉದಾತ್ತ ಧ್ಯೇಯ, ನಿಷ್ಠೆ ಕಡಿಮೆಯಾಗಿದ್ದು ಭ್ರಷ್ಟಾಚಾರ ಹೆಚ್ಚಾಗಿದೆ. ಇದನ್ನು ಹೋಗಲಾಡಿಸಲು ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಡುವಂತೆ ಪಾತ್ರ ಸೃಷ್ಟಿಸಬೇಕು ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಹೇಳಿದರು.
ಡಿವಿಜಿ ಬಳಗ ಮೈಸೂರು ಸಂಸ್ಥೆಯು ಭಾನುವಾರ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿ ಡಾ.ಎಸ್.ಆರ್. ರಾಮಸ್ವಾಮಿ ಅವರಿಗೆ ಡಿವಿಜಿ ಪ್ರಶಸ್ತಿ- 2014 ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಹಿಂದಿನ ಸಾಹಿತಿಗಳಲ್ಲಿ ಕಾಣುತ್ತಿದ್ದ ಉದಾತ್ತ ಧ್ಯೇಯವನ್ನು ಇಂದಿನವರಲ್ಲಿ ಊಹಿಸಲಾಗುತ್ತಿಲ್ಲ. ಅವರು ಸೃಷ್ಟಿಸುತ್ತಿದ್ದ ಪಾತ್ರಗಳು ಗಟ್ಟಿತನವಾಗಿದ್ದವು. ಗುಂಡು ಹಾಕುತ್ತಿದ್ದಾಗ ಎಂಬುದರ ಮೂಲಕ ಬರವಣಿಗೆ ಆರಂಭಿಸುತ್ತಿದ್ದರು. ಅವರ ಬರವಣಿಗೆ ಚರ್ಚೆಗಳಲ್ಲಿ ಪ್ರತಿಧ್ವನಿಸುತ್ತಿತ್ತು ಎಂದರು.
ಈಗ ಕಾಲ ಬದಲಾಗಿದ್ದು ಸುಳ್ಳನ್ನು ಬೇಕಾದರೂ ಹೇಳಬಹುದಾದ ಪರಿಸ್ಥಿತಿ ನೆಲೆಸಿದೆ. ಇಂತಹ ಸಂದರ್ಭದಲ್ಲಿ ಡಿವಿಜಿ ಅವರ ಕೃತಿಗಳ ಪುನರ್ ಓದು ಸಹಕಾರಿಯಾಗಲಿದೆ. ಡಿವಿಜಿ ಬರೀ ಸಾಹಿತಿಯಾಗಿರಲಿಲ್ಲ. ರಾಜಕೀಯ, ಅರ್ಥಶಾಸ್ತ್ರ, ಸಾಮಾಜಿಕ ಕ್ಷೇತ್ರದಲ್ಲೂ ಕೆಲಸ ಮಾಡಿ ಛಾಪು ಮೂಡಿಸಿದ್ದರು. ತಮ್ಮ ಬದುಕು, ಬರಹದ ಮೂಲಕ ಘನ ಪರಂಪರೆಯನ್ನು ಬೆಳೆಸಿದ್ದರು. ಅವರ ಒಡನಾಟದಲ್ಲೆ ಬೆಳೆದು ಬಂದ ರಾಮಸ್ವಾಮಿ ಅವರದು ಮೇರು ವ್ಯಕ್ತಿತ್ವ ಎಂದು ಅವರು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿದ ಡಾ.ಎಸ್.ಆರ್. ರಾಮಸ್ವಾಮಿ ಅವರು ಡಿವಿಜಿ ಅವರೊಂದಿನ ದಿನಗಳನ್ನು ನೆನಪಿಸಿಕೊಂಡರು. ಪ್ರಶಸ್ತಿ ಪುರಸ್ಕೃತ ಡಾ.ಎಸ್.ಆರ್. ರಾಮಸ್ವಾಮಿ ಅವರ ಕುರಿತು ಪತ್ರಕರ್ತ ಸೂಯಪ್ರಕಾಶ್ ಪಂಡಿತ್ ಅಭಿನಂದನಾ ಭಾಷಣ ಮಾಡಿದರು. ಬಳಗದ ಅಧ್ಯಕ್ಷ ಸಿ.ಕನಕರಾಜು, ಸಂಸ್ಕೃತಿ ಸುಬ್ರಹ್ಮಣ್ಯ ಇದ್ದರು.