ಮಹಾರಾಷ್ಟ್ರದ ಸಾಂಸ್ಕೃತಿಕ ಚಳವಳಿಗೆ ಪರಂಪರೆ ಇದೆ: ಸಂಜಯ ದೇವಸ್ಥಳೆ
ಮುಂಬೈ: ಮಹಾರಾಷ್ಟ್ರ ಸರ್ಕಾರದ ಸಂಸ್ಕೃತಿ ಇಲಾಖೆಯು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ಕಾರ್ಯವೆಸಗುವ ಸಂಸ್ಥೆಗಳಿಗಾಗಿ ಅನುವಾದ ನೀಡುವಂತಹ ಯೋಜನೆಯಿದ್ದು ಅದನ್ನು ಕ್ರಮಬದ್ಧವಾಗಿ ನೀಡುತ್ತಾ ಬಂದಿದೆ. ಇಲ್ಲಿಯ ಸಾಂಸ್ಕೃತಿಕ ಚಳವಳಿಗೆ ತನ್ನದೇ ಆದ ಪರಂಪರೆ ಇದೆ. ಇಲ್ಲಿ ಶಾಸ್ತ್ರೀಯ ಸಂಗೀತ ವಿವಿಧ ನೃತ್ಯ ಸಂಸ್ಥೆಗಳು ಲೋಕನಾಟ್ಯ ಸಂಸ್ಥೆಗಳು ಕಾರ್ಯನಿರತವಾಗಿದ್ದು ಅದು ಪ್ರತಿ ಜಿಲ್ಲೆಯಲ್ಲೂ ಅರ್ಥಪೂರ್ಣವಾಗಿ ಕೆಲಸ ಮಾಡಬೇಕೆಂದು ಸರ್ಕಾರದ ಪ್ರಬಲ ಇಚ್ಛೆಯಾಗಿದೆ ಎಂದು ಸಾಂಸ್ಕೃತಿಕ ಸಚಿವ ಸಂಜಯ ದೇವಸ್ಥಳೆ ಹೇಳಿದರು. ಮಹಾರಾಷ್ಟ್ರ ಸರ್ಕಾರದ ಸಾಂಸ್ಕೃತಿಕ ಇಲಾಖೆಯು ಫೆ.24ರಂದು ರವೀಂದ್ರನಾಟ್ಯ ಮಂದಿರದ ಪು.ಲ. ದೇಶಪಾಂಡೆ ಸಭಾಗೃಹದಲ್ಲಿ ಆಯೋಜಿಸಿದ ಅನುದಾನ ವಿತರಣೆ ಕಾರ್ಯಕ್ರಮದಲ್ಲಿ ಅನುದಾನ ನೀಡಿ ಮಾತನಾಡುತ್ತಿದ್ದರು.
ಮುಂಬಯಿಯಲ್ಲಿ ಕನ್ನಡ-ಮರಾಠಿ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರ್ನಾಟಕ ಸಂಘ ಮುಂಬಯಿ ಇದರ ಕಾರ್ಯವೈಖರಿಯನ್ನು ಪರಿಗಣಿಸಿ ಸರ್ಕಾರ ಪ್ರಥಮ ಬಾರಿಗೆ ಆದ್ಯತೆ ನೀಡಿದ್ದು ಒಂದು ಲಕ್ಷ ಮೊತ್ತವನ್ನು ಸಂಘದ ಅಧ್ಯಕ್ಷ ಪ್ರಕಾಶ್ ಜಿ. ಬುರ್ಡೆ, ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಮಾನ್ಯ ಸಚಿವರಿಂದ ಸ್ವೀಕರಿಸಿದರು. ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ಮನೋಜ್ ಸನಾಪ್ ಧನ್ಯವಾದಗೈದರು.