ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ಲೋಕ'ದರ್ಶನ

Mainashree
Updated On : 23 Mar 2014, 11:22 am

ನಗ್ಮಾ ಜತೆ ಅಸಭ್ಯ ವರ್ತನೆ!
ಮೀರತ್:
ಉತ್ತರಪ್ರದೇಶದ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸುತ್ತಿರುವ ನಟಿ ನಗ್ಮಾ ಅವರು ಪಕ್ಷದ ಶಾಸಕನಿಂದಲೇ ಲೈಂಗಿಕ ಕಿರುಕುಳಕ್ಕೊಳಗಾದ ಘಟನೆ ಶನಿವಾರ ನಡೆದಿದೆ. ಹಾಪುರ್‌ನಲ್ಲಿ ಪ್ರಚಾರ ಹಾಗೂ ಪಕ್ಷದ ಕಚೇರಿ ಉದ್ಘಾಟನೆಗಾಗಿ ತೆರಳಿದ್ದಾಗ ಕ್ಷೇತ್ರದ ಶಾಸಕ ಗಿರಿರಾಜ್ ಶರ್ಮಾ ನಗ್ಮಾ ಜತೆಗೆ ಸಾರ್ವಜನಿಕವಾಗಿಯೇ ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ಆಘಾತಗೊಂಡ ನಗ್ಮಾ ತಮ್ಮ ಮೈಮೇಲಿದ್ದ ಶಾಸಕನ ಕೈಯನ್ನು ತಕ್ಷಣ ತಳ್ಳಿದ್ದಾರೆ. ರ್ಯಾಲಿಯನ್ನು ಮರೆತು ಜೀಪ್ ಹತ್ತಿ ವಾಪಸಾಗಿದ್ದಾರೆ. ನಗ್ಮಾ ಮೇಲಿನ ಕಿರುಕುಳಕ್ಕೆ ಮಹಿಳಾ ಸಂಘಟನೆಗಳು ಹಾಗೂ ಕಾಂಗ್ರೆಸ್ ಮುಖಂಡರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ತಮ್ಮ ಪುತ್ರಿಯ ವಯಸ್ಸಿನ ಮಹಿಳೆ ಜತೆಗಿನ ವರ್ತನೆಗೆ ಗಿರಿರಾಜ್ ಕ್ಷಮೆಯಾಚಿಸಬೇಕೆಂದು ಹಲವು ಮುಖಂಡರು ಆಗ್ರಹಿಸಿದ್ದಾರೆ. ಗಿರಿರಾಜ್ ವಿರುದ್ಧ ನಗ್ಮಾ ಈವರೆಗೆ ದೂರು ನೀಡಿಲ್ಲ.
ಸೋನಾಕ್ಷಿ ಪ್ರಚಾರ ಇಲ್ಲ?
ಪಟನಾ:
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಈ ಬಾರಿ ಚುನಾವಣೆಯಲ್ಲಿ ತಂದೆ ಶತ್ರುಘ್ನ ಸಿನ್ಹಾ ಪರ ಪ್ರಚಾರ ನಡೆಸುತ್ತಿಲ್ಲ.  'ಹಿಂದಿ ಚಿತ್ರಗಳಲ್ಲಿ ಬಿಡುವಿಲ್ಲದ ಶೆಡ್ಯೂಲ್‌ನಿಂದಾಗಿ ಈ ಬಾರಿ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ' ಎಂದು ಆಕೆಯ ಕುಟುಂಬ ಮೂಲಗಳು ತಿಳಿಸಿವೆ. ಶತ್ರುಘ್ನ ಸಿನ್ಹಾ ಪಟನಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಶುಕ್ರವಾರ ಅವರು ನಾಮಪತ್ರ ಸಲ್ಲಿಸುವ ವೇಳೆ ಸೋನಾಕ್ಷಿ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಆಕೆಯ ಗೈರುಹಾಜರಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಸೋನಾಕ್ಷಿ ಅಭಿನಯದ 'ಹಾಲಿಡೆ' ಮತ್ತು 'ಆ್ಯಕ್ಷನ್ ಜಾಕ್ಸನ್‌' ಚಿತ್ರಗಳು ಸದ್ಯವೇ ಬಿಡುಗಡೆಯಾಗಲಿದ್ದು,  ಪ್ರಚಾರದಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಹೀಗಾಗಿ ತಂದೆ ಪರ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ. 2009ರ ಚುನಾವಣೆಯಲ್ಲಿ ಸೋನಾಕ್ಷಿ ತಂದೆ ಪರ ಪ್ರಚಾರದಲ್ಲಿ ಭಾಗವಹಿಸಿದ್ದರು.
ಮೋದಿಗೆ ಕಾರ್ಪೊರೇಟ್ ಲಾಬಿ
ನವದೆಹಲಿ:
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರ ಕಾರ್ಪೊರೇಟ್ ವಲಯ ಪ್ರಚಾರಾಂದೋಲನದಲ್ಲಿ ತೊಡಗಿದೆ ಎಂದು ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಾಲ್ ಆರೋಪಿಸಿದ್ದಾರೆ. 'ಗುಜರಾತ್‌ನಲ್ಲಿ ಮೋದಿಯಿಂದ ಸಾಕಷ್ಟು ಕೊಡುಗೆಗಳನ್ನು ಪಡೆದಿರುವ ಈ ವಲಯ, ಅದರ ಋಣ ತೀರಿಸನು ಪ್ರಬಲ ಲಾಬಿ ನಡೆಸುತ್ತಿದೆ' ಎನ್ನುವುದು ಸಿಬಲ್ ಆಪಾದನೆ. ಇಂಥ ಪ್ರಬಲ ಬೆಂಬಲವಿದ್ದರೂ ಹಲವು ರಾಜ್ಯಗಳಲ್ಲಿ ಬಿಜೆಪಿಗೆ ವಿಶ್ವಾಸಾರ್ಹ ಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹಳೆಯ ಮಿತ್ರ ಶಿವಸೇನೆಯೇ ಮೈತ್ರಿ ಮುರಿದುಕೊಳ್ಳುವ ಮಾತುಗಳನ್ನಾಡುತ್ತಿದೆ. ಈ ದುಸ್ಥಿತಿ ಕಾಂಗ್ರೆಸ್‌ಗೆ ಬಂದಿಲ್ಲ ಎಂದರು. '2009ರ ಚುನಾವಣೆಗಿಂತ ಕಾಂಗ್ರೆಸ್, ಈ ಬಾರಿ ಉತ್ತಮ ಫಲಿತಾಂಶ ನೀಡಲಿದೆ' ಎಂಬ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಬಲ್, ಕಳೆದ 10 ವರ್ಷದಲ್ಲಿ ಕಾಂಗ್ರೆಸ್‌ನ ಯಾವೊಬ್ಬ ನಾಯಕನ ವಿರುದ್ಧವೂ ಭ್ರಷ್ಟಾಚಾರದ ಆರೋಪ ಕೇಳಿಬಂದಿಲ್ಲ ಎಂದು ಹೇಳಿಕೊಂಡರು.
ಜಯದ ಸನಿಹ  ಸೋತರು
ನವದೆಹಲಿ:
ಚುನಾವಣೆಯಲ್ಲಿ ಸೋಲುವುದನ್ನೇ ಅಭ್ಯರ್ಥಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಥದ್ದರಲ್ಲಿ ಆ ಸೋಲು ಅತ್ಯಂತ ಕಡಿಮೆ ಅಂತರದ್ದಾಗಿದ್ದರೆ? ಹೌದು. 2009ರ ಲೋಕಸಭೆ ಚುನಾವಣೆ ವೇಳೆ 114 ಮಂದಿ ಅಭ್ಯರ್ಥಿಗಳು ಶೇ.3ಕ್ಕಿಂತಲೂ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಇವರಲ್ಲಿ 19 ಮಂದಿ ಉತ್ತರಪ್ರದೇಶದವರು. ಉಳಿದಂತೆ, ಆಂಧ್ರದ 11 ಮಂದಿ, ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದ ತಲಾ 9 ಮಂದಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋಲುಂಡವರು ಎಂದು ಚುನಾವಣಾ ಆಯೋಗದ ದಾಖಲೆಗಳು ತಿಳಿಸಿವೆ.
ಮೇಡಂ ಮೂಲ ಜಟಾಪಟಿ
ನವದೆಹಲಿ/ಚಂಡೀಗಡ:
ಬಿಜೆಪಿ ನಾಯಕ ಅರುಣ್ ಜೇಟ್ಲಿ  ಮತ್ತೆ ಸೋನಿಯಾ ವಿದೇಶಿ ಮೂಲವನ್ನು ಕೆದಕಿದ್ದಾರೆ.  ಅಮೃತಸರದಿಂದ ಕಣಕ್ಕಿಳಿದಿರುವ ಜೇಟ್ಲಿ ಹಾಗೂ ಕಾಂಗ್ರೆಸ್‌ನ ಅಮರೀಂದರ್ ಸಿಂಗ್ ನಡುವಿನ ವಾಗ್ವಾದ ತಾರಕಕ್ಕೇರಿದ ಬೆನ್ನಲ್ಲೇ ಸೋನಿಯಾರ ವಿದೇಶಿ ಮೂಲದ ಬಗ್ಗೆ ಜೇಟ್ಲಿ ಪ್ರಶ್ನಿಸಿದ್ದಾರೆ.  ಜೇಟ್ಲಿ ಅಮೃತಸರಕ್ಕೆ ಹೊರಗಿನವರು ಎಂಬ ಅಮರೀಂದರ್ ಹೇಳಿಕೆಗೆ ಉತ್ತರಿಸುವ ಭರದಲ್ಲಿ ಅರುಣ್ ಜೇಟ್ಲಿ ಈ ಮಾತುಗಳನ್ನು ಆಡಿದ್ದಾರೆ. ಈ ವಿಚಾರದಲ್ಲಿ ಸೋನಿಯಾರನ್ನು ಎಳೆದು ತಂದಿದ್ದರಿಂದ ಆಕ್ರೋಶಿತರಾದ ಅಮರೀಂದರ್, ಭಾರತದ ಸಂಸ್ಕೃತಿಯ ಪ್ರಕಾರ, ಸೊಸೆಯು ಕುಟುಂಬದ ನೈಜ ವಾರಸುದಾರಳಾಗುತ್ತಾಳೆ. ಅವಳು ಎಲ್ಲಿಂದ ಬಂದಿದ್ದಾಳೆ ಎಂಬುದನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ಗೀತಾ ಬಂಗಾರಪ್ಪ ಕುಟುಂಬದ ಆಯ್ಕೆ
ತುಮಕೂರು: ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಬಂಗಾರಪ್ಪ ಕುಟುಂಬದ ಆಯ್ಕೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಹೇಳಿದರು. ಗೀತಾ ಅವರನ್ನು ಕಣಕ್ಕೆ ಇಳಿಸುವ ಮೂಲಕ ಜೆಡಿಎಸ್ ಡಾ.ರಾಜ್ ಕುಟುಂಬ ಒಡೆದಿದೆ ಎನ್ನುವ ಆರೋಪ ಹುರುಳಿಲ್ಲದ್ದು. ಬಂಗಾರಪ್ಪ ಕುಟುಂಬದವರು ಗೀತಾ ಶಿವರಾಜ್ ಕುಮಾರ್ ಹೆಸರು ಸೂಚಿಸಿದ್ದರಿಂದ ಅವರಿಗೆ ಟಿಕೆಟ್ ಕೊಡಲಾಗಿದೆ ಅಷ್ಟೇ ಎಂದು ಕೃಷ್ಣಪ್ಪ ಹೇಳಿದರು.
ತುಮಕೂರಿನ ಹನುಮಂತಪುರದ ಕೊಲ್ಲಾಪುರದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪಾದಯಾತ್ರೆ ಆರಂಭಿಸುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದರು.
ತಮ್ಮ ನೋವನ್ನು ವ್ಯಕ್ತಪಡಿಸುವಾಗ ಕಣ್ಣೀರಿನ ಮೂಲಕ ಭಾವನೆಯನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸಂದರ್ಭದ ಮೊಸಳೆ ಕಣ್ಣೀರಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement