ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ಲೋಕ'ದರ್ಶನ

Mainashree
Updated On : 23 Mar 2014, 11:44 am

ಸೀರೆ, ನಗದು ವಶ
ಕನಕಪುರ: ತಾಲೂಕಿನ ಜಿಲ್ಲಾ ಗಡಿಯಾದ ಹೊನ್ನಗನಹಳ್ಳಿ ಚೆಕ್ ಪೋಸ್ಟ್ ಬಳಿ ಯಾವುದೇ ದಾಖಲಾತಿಗಳಿಲ್ಲದೆ ಪಕ್ಕದ ಮಂಡ್ಯ ಜಿಲ್ಲೆಗೆ ಸಾಗಿಸುತ್ತಿದ್ದ ಸೀರೆಗಳು ಹಾಗೂ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾತನೂರಿನಿಂದ ಹಲಗೂರು ಕಡೆಗೆ ಹೊಗುತ್ತಿದ್ದ ಮಾರುತಿ ಝೆನ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 150 ಸೀರೆಗಳು ಹಾಗೂ 21 ಸಾವಿರ ರು.ಗಳನ್ನು ತನಿಖೆಯ ವೇಳೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಾಹನ ಹಾಗೂ ಚಾಲಕನನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡು ಸಾತನೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಳಿನ್ ವಿರುದ್ಧ ದೂರು
ಮಂಗಳೂರು: ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ವಿರುದ್ಧ ವಾಟ್ಸಪ್‌ನಲ್ಲಿ ಅವಹೇಳನಕಾರಿ ಚಿತ್ರಗಳನ್ನು ಕಳುಹಿಸಿದ ಆರೋಪದಲ್ಲಿ ರಾಹುಲ್ ಶೆಟ್ಟಿ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ರಾಹುಲ್ ಶೆಟ್ಟಿ ಈ ರೀತಿಯ ಅಪಪ್ರಚಾರ ನಡೆಸುತ್ತಿದ್ದಾನೆ ಎಂದು ಬಿಜೆಪಿ ಪ್ರಚಾರ ಪ್ರಮುಖ ಕೆ.ಶಂಭು ಶರ್ಮ ಬಂದರು ಪೊಲೀಸರಿಗೆ ದೂರು ನೀಡಿದ್ದಾರೆ.
ಮುಖ್ಯಸ್ಥರ ನೇಮಕಕ್ಕೆ ಒಪ್ಪಿಗೆ
ನವದೆಹಲಿ: ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಜೋಶಿ ರಾಜಿನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಹೊಸಬರನ್ನು ನೇಮಿಸುವ ಪ್ರಸ್ತಾಪಕ್ಕೆ ಕೇಂದ್ರ ಚುನಾವಣಾ ಆಯೋಗ ಒಪ್ಪಿದೆ. ಹೊಸ ಮುಖ್ಯಸ್ಥರ ನೇಮಕ ಮಾಡುವ ಬಗ್ಗೆ ರಕ್ಷಣಾ ಇಲಾಖೆ ಕೇಂದ್ರ ಚುನಾವಣಾ ಆಯೋಗದ ಅನುಮತಿ ಕೋರಿತ್ತು. ಸಬ್‌ಮೆರಿನ್ ದುರಂತದ ಹಿನ್ನೆಲೆಯಲ್ಲಿ ಫೆ.26ರಂದು ಅಡ್ಮಿರಲ್ ಜೋಶಿ ಪದತ್ಯಾಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಮುಖ್ಯಸ್ಥರ ನೇಮಕಕ್ಕೆ ನೌಕಾಪಡೆ ಐವರು ಸದಸ್ಯರ ಸಮಿತಿ ರಚನೆ ಮಾಡಿದೆ.
ಬಿಜೆಪಿಗೇ ಬೆಂಬಲ: ಶ್ರೀರಾಮ ಸೇನೆ
ಹುಬ್ಬಳ್ಳಿ: ಶ್ರೀರಾಮ ಸೇನೆಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಕ್ಕೆ ಹಾಗೂ ಅದರ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಪ್ರಾಥಮಿಕ ಸದಸ್ಯತ್ವ ನೀಡುವುದಕ್ಕೆ ಬಿಜೆಪಿ ವರಿಷ್ಠರು ವಿರೋಧಿಸಿದ್ದರೂ, ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂಬ ಉದ್ದೇಶದಿಂದ ಬಿಜೆಪಿಗೇ ಬೆಂಬಲ ನೀಡಲು ಶ್ರೀರಾಮ ಸೇನೆ ಮುಖಂಡರು ತೀರ್ಮಾನಿಸಿದ್ದಾರೆ.  ರಾಜ್ಯ ಮುಖಂಡರು ಶ್ರೀರಾಮಸೇನೆ ವಿಲೀನಕ್ಕೆ ಸಮ್ಮತಿಸಿದ್ದರು. ಬಿಜೆಪಿ ವರಿಷ್ಠರ ನಿರ್ಧಾರಕ್ಕೆ ಅವರೀಗ ತಲೆ ಬಾಗಬೇಕಾಗಿದೆ. ಆರೆಸ್ಸೆಸ್ ಪ್ರಮುಖರೂ ತಮ್ಮೊಂದಿಗೆ ಸತತ ಸಂಪರ್ಕದಲ್ಲಿದ್ದು, ಅವರೊಂದಿಗೆ ಚರ್ಚಿಸಿದ ಬಳಿಕ ಬಿಜೆಪಿ ಬೆಂಬಲಿಸಲು ತೀರ್ಮಾನಿಸಿದ್ದೇವೆ ಎಂದು ಶ್ರೀರಾಮ ಸೇನೆ ಮುಖಂಡರು ತಿಳಿಸಿದರು.

ಸರ್ಕಾರ ಬದಲಿಸಿ, ಧರ್ಮವನ್ನಲ್ಲ
ಭುವನೇಶ್ವರ: ಸರ್ಕಾರವನ್ನು ಬದಲಿಸಿ, ಧರ್ಮವನ್ನಲ್ಲ. ಹೀಗೆಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಅವರು ದಲಿತರು, ಬುಡಕಟ್ಟು ಜನಾಂಗೀಯರು ಹಾಗೂ ಸಮಾಜದ ದುರ್ಬಲ ವರ್ಗದವರಿಗೆ ಕರೆನೀಡಿದ್ದಾರೆ. ಭುವನೇಶ್ವರದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್‌ನವರು ಒಡಿಶಾದ ಮೂಲೆ ಮೂಲೆಗೂ ತೆರಳಿ, ಮರುಮತಾಂತರಗೊಳ್ಳುವಂತೆ ಅಲ್ಲಿನ ಆದಿವಾಸಿ, ದಲಿತರಿಗೆ ಸಲಹೆ ನೀಡುತ್ತಿದ್ದಾರೆ. ಆದರೆ ನೀವ್ಯಾರೂ ಧರ್ಮ ಬದಲಾಯಿಸಬೇಡಿ. ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರವನ್ನು ಬದಲಿಸಿ ಎನ್ನುವುದು ನನ್ನ ಸಲಹೆ ಎಂದಿದ್ದಾರೆ ಮಾಯಾ.

ಅಮೆರಿಕದಲ್ಲೂ ನಡೆದಿದೆ ಪ್ರಚಾರ
ವಾಷಿಂಗ್ಟನ್:  ಲೋಕಸಭೆ ಚುನಾವಣೆ ಭಾರತದಲ್ಲಿ ಮಾತ್ರವಲ್ಲ, ಅಮೆರಿಕದಲ್ಲೂ ಬಿರುಸು ಪಡೆದಿದೆ. ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ದೇಶಾದ್ಯಂತ ಪ್ರಚಾರ ನಡೆಸುತ್ತಿದ್ದರೆ, ಅವುಗಳ ಪ್ರತಿನಿಧಿಗಳು ಅಮೆರಿಕದ ವಿವಿಧ ಭಾಗಗಳಲ್ಲಿ ಅನಿವಾಸಿ ಭಾರತೀಯರ ಮನವೊಲಿಕೆ ಯತ್ನದಲ್ಲಿ ಮುಂದಾಗಿದ್ದಾರೆ. ಅನಿವಾಸಿ ಭಾರತೀಯರ ಮನವೊಲಿಕೆಯಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ಪಕ್ಷವೆಂದರೆ ಆಮ್ ಆದ್ಮಿ ಪಕ್ಷ. ಪ್ರಚಾರದ ಜತೆಗೆ ಪಕ್ಷಗಳು ನಿಧಿ ಸಂಗ್ರಹಣೆಗೆ ಕೂಡ ಒತ್ತು ನೀಡಿವೆ. ಭಾರತದಲ್ಲಿ ಜನಪ್ರಿಯವಾಗಿರುವ ಚಾಯ್‌ಪೆ ಚರ್ಚಾ ಕಾರ್ಯಕ್ರಮವನ್ನು ಕೂಡ ಬಿಜೆಪಿ ಅಮೆರಿಕದ ವಿವಿಧ ಭಾಗದಲ್ಲಿ ನಡೆಸಿದೆ. ನ್ಯೂಯಾರ್ಕ್, ಬಾಸ್ಟನ್, ಮಿಯಾಮಿ ಮತ್ತು ಹ್ಯೂಸ್ಟನ್‌ನ ವಿವಿಧ ಭಾಗಗಳಲ್ಲಿ ನರೇಂದ್ರ ಮೋದಿ ಜತೆಗೆ 'ಚಾಯ್‌ಪೆ ಚರ್ಚಾ' ಕಾರ್ಯಕ್ರಮ ಆಯೋಜಿಸಿತ್ತು.
ಉಮೇದುವಾರಿಕೆ ಇಂದು ಸಲ್ಲಿಸುವವರು
ಪ್ರಹ್ಲಾದ ಜೋಶಿಟ ಧಾರವಾಡ- ಬಿಜೆಪಿ, ಬೆಳಗ್ಗೆ11, ಧಾರವಾಡ ಡಿಸಿ ಕಚೇರಿ
ಶಿವಕುಮಾರ ಉದಾಸಿಟ ಹಾವೇರಿ- ಬಿಜೆಪಿ, ಬೆಳಗ್ಗೆ11, ಹಾವೇರಿ ಡಿಸಿ ಕಚೇರಿ
ರವಿ ಮೆಣಸಿನಕಾಯಿಟ ಹಾವೇರಿ- ಜೆಡಿಎಸ್, ಬೆಳಗ್ಗೆ11.30, ಹಾವೇರಿ ಡಿಸಿ ಕಚೇರಿ
ಚಂದ್ರಶೇಖರ ಪಾಟೀಲಟ ಹಾವೇರಿ- ಕನ್ನಡ ಪಕ್ಷ, ಮಧ್ಯಾಹ್ನ 12.30, ಹಾವೇರಿ ಡಿಸಿ ಕಚೇರಿ
ಸಂಗಣ್ಣ ಕರಡಿಟ ಕೊಪ್ಪಳ- ಬಿಜೆಪಿ, ಮಧ್ಯಾಹ್ನ 12.30, ಕೊಪ್ಪಳ ಡಿಸಿ ಕಚೇರಿ
ಶಿವಾನಂದ ನಾಯ್ಕಟ ಉತ್ತರ ಕನ್ನಡ- ಜೆಡಿಎಸ್, ಬೆಳಗ್ಗೆ 11.00, ಕಾರವಾರ ಡಿಸಿ ಕಚೇರಿ
ಭೀಮರಾಯಟ ರಾಯಚೂರು- ಆಮ್ ಆದ್ಮಿ ಪಾರ್ಟಿ, ಬೆಳಗ್ಗೆ 11.30, ರಾಯಚೂರು ಡಿಸಿ ಕಚೇರಿ
ಸುದತ್ತ ಜೈನ್ ಶಿರ್ತಾಡಿಟ ದಕ್ಷಿಣ ಕನ್ನಡ- ಪಕ್ಷೇತರ, ಬೆಳಗ್ಗೆ 11.00, ಮಂಗಳೂರು ಡಿಸಿ ಕಚೇರಿ
ಯಾದವ ಶೆಟ್ಟಿಟ ದಕ್ಷಿಣ ಕನ್ನಡ- ಸಿಪಿಎಂ, ಬೆಳಗ್ಗೆ 11.30, ಮಂಗಳೂರು ಡಿಸಿ ಕಚೇರಿ
ಬಿ.ಎನ್.ಮಂಜಪ್ಪಟ ಚಿತ್ರದುರ್ಗ- ಕಾಂಗ್ರೆಸ್, ಬೆಳಗ್ಗೆ 11.00, ಚಿತ್ರದುರ್ಗ ಡಿಸಿ ಕಚೇರಿ
ಜನಾರ್ದನ ಸ್ವಾಮಿಟ ಚಿತ್ರದುರ್ಗ- ಬಿಜೆಪಿ, ಬೆಳಗ್ಗೆ 11.00, ಚಿತ್ರದುರ್ಗ ಡಿಸಿ ಕಚೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement