ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಧಾರ ಕಡ್ಡಾಯ ಆದೇಶ ಹಿಂಪಡೆಯಿರಿ

ಸರ್ಕಾರದ ಸೇವೆ ಮತ್ತು ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ

Mainashree
Updated On : 25 Mar 2014, 11:13 am

ಕನ್ನಡಪ್ರಭ ಪ್ರತಿನಿಧಿಯಿಂದ,
ನವದೆಹಲಿ
: ಸರ್ಕಾರದ ಸೇವೆ ಮತ್ತು ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವೆಂಬ ಎಲ್ಲ ಆದೇಶಗಳನ್ನು  ತಕ್ಷಣವೇ ಹಿಂದಕ್ಕೆ ಪಡೆಯುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಅಲ್ಲದೆ, ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಆತನ ಅನುಮತಿ ಇಲ್ಲದೆ ಸರ್ಕಾರದ ಯಾವುದೇ ಸಂಸ್ಥೆಯೊಂದಿಗೂ ಹಂಚಿಕೊಳ್ಳಬಾರದು ಎಂದೂ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ (ಯುಐಡಿಎಐ) ತಾಕೀತು ಮಾಡಿದೆ.
ಕಾನೂನಿನ ಮಾನ್ಯತೆ ಇಲ್ಲದೆ ಮತ್ತು ರಾಷ್ಟ್ರದ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ  ಆಧಾರ್ ಕಾರ್ಡ್‌ನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪುಟ್ಟಸ್ವಾಮಿ, ಭೂಸೇನಾ ಕೇಂದ್ರ ಕಚೇರಿಯಲ್ಲಿ ಶಿಸ್ತು ಮತ್ತು ನಿಗಾ ಘಟಕದ ಹೆಚ್ಚುವರಿ ನಿರ್ದೇಶಕರಾಗಿ ನಿವೃತ್ತರಾದ ಮೆ.ಜ.ಎಸ್.ಜಿ. ಒಂಬತ್ಕೆರೆ  ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಬಿ.ಎಸ್.ಚೌಹಾಣ್, ನ್ಯಾಯಮೂರ್ತಿ ಜೆ.ಚಲಮೇಶ್ವರ, ನ್ಯಾಯಮೂರ್ತಿ ಎಂ.ವೈ.ಇಕ್ಬಾಲ್ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿಂತೆ ತನಿಖಾ ಸಂಸ್ಥೆಯೊಂದಿಗೆ ಮಾಹಿತಿ ಹಂಚಿಕೊಳ್ಳುವಂತೆ ಗೋವಾ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಯುಐಡಿಎಐ ಸಲ್ಲಿಸಿದ್ದ ಅರ್ಜಿಯನ್ನು ಸಹ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು.
ಕಾಂಗ್ರೆಸ್‌ಗೆ ಮುಖಭಂಗ: ಆಧಾರ್ ಕಾರ್ಡ್ ತನ್ನ ಸಾಧನೆ ಎಂದು ಬೀಗುತ್ತಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ನ ಈ ಆದೇಶದಿಂದಾಗಿ ಭಾರಿ ಮುಖಭಂಗವಾದಂತಾಗಿದೆ. ಆಧಾರ್ ಯೋಜನೆಯ ನೇತೃತ್ವ ವಹಿಸಿದ್ದ  ಇನ್ಪೋಸಿಸ್‌ನ ನಿವೃತ್ತ ಸಿಇಒ ನಂದನ್ ನಿಲೇಕಣಿ ಈಗ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಸುಪ್ರೀಂ ಅಭಿಮತವೇನು?: ಆಧಾರ್ ಯೋಜನೆ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಅಷ್ಟೇ ಅಲ್ಲ, ಅದರ ಮುಖ್ಯ ಆಧಾರವಾಗಿರುವ ಬೆರಳಚ್ಚು ಮುದ್ರಿಕೆ (ಬಯೋವುಟ್ರಿಕ್ಸ್) ಪರಿಪಕ್ವವಲ್ಲದ, ವಿಶ್ವಾಸಾರ್ಹವಲ್ಲದ ತಂತ್ರಜ್ಞಾನವಾಗಿದೆ. ಅಲ್ಲದೆ, ಈ ಯೋಜನೆಗೆ ಸಾರ್ವಜನಿಕರ ಹಣವನ್ನು ಯಾವುದೇ ಪರಿಶೀಲನೆ ನಡೆಸದೇ ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ನ್ಯಾ.ೂರ್ತಿ ಬಿ.ಎಸ್.ಚೌಹಾಣ್ ಹೇಳಿದರು.
ಕಾನೂನಿನ ಆಧಾರವಿಲ್ಲ:  ಇದಕ್ಕೂ ಮೊದಲು ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ, ಶಾಮ್ ದಿವಾನ್, ಈ ಯೋಜನೆಗೆ ಯಾವುದೇ ಕಾನೂನಿನ ರಕ್ಷಣೆ ಇಲ್ಲ. ಅಕಸ್ಮಾತ್ ಯಾವುದಾದರೂ ಕಾನೂನಿನ ರಕ್ಷಣೆ ಇದ್ದರೂ ಅದು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿದ್ದರು.  ಆಧಾರ್ ಅಡಿ ಸಂಗ್ರಹಿಸುವ ಮಾಹಿತಿ ರಕ್ಷಣೆ ಹೊಣೆ ಯಾರದ್ದೆಂದೇ ಸ್ಪಷ್ಟವಾಗಿಲ್ಲ.  ಬಯೋವುಟ್ರಿಕ್ ಮೂಲಕ ಸಂಗ್ರಹಿಸಿದ ಆಧಾರ್ ಮಾಹಿತಿಗಳು ಖಾಸಗಿ ಸಂಸ್ಥೆಗಳ ಬಳಿ ಇರುತ್ತವೆ. ಈ ಮಾಹಿತಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಿಕೊಳ್ಳಬಹುದು. ಇದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆ ಆಗುತ್ತದೆ.   ಖಾಸಗಿ ಮಾಹಿತಿಗಳು ಸೋರಿಕೆಯಾಗುತ್ತವೆ. ಖಾಸಗಿತನವೇ ಇಲ್ಲವಾಗುತ್ತದೆ.  ಈ ವ್ಯವಸ್ಥೆ ಸಂವಿಧಾನ ದತ್ತವಾಗಿ ಸಿಕ್ಕಿರುವ  ಖಾಸಗಿತನದ ಹಕ್ಕು ಮತ್ತು ಸಂವಿಧಾನದ 21 ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಆಧಾರ್ ನೋಂದಣಿ ಹಂತದಿಂದಲೇ ಹಲವು ಲೋಪಗಳಿವೆ  ಎಂದು ವಾದಿಸಿದ್ದರು.

ಮಧ್ಯಂತರ ಆದೇಶ ನೀಡಿತ್ತು
ಸುಪ್ರೀಂಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಸರ್ಕಾರದ ಯಾವುದೇ ಸೇವೆ ಮತ್ತು ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಆಧಾರ್ ಇಲ್ಲ ಎಂಬ ಕಾರಣಕ್ಕೆ ಯಾವುದೇ ವ್ಯಕ್ತಿ ಸರ್ಕಾರದ ಸೇವೆ ಮತ್ತು ಸೌಲಭ್ಯದಿಂದ ವಂಚಿತರಾಗಬಾರದು  ಎಂದು ತಿಳಿಸಿತ್ತು. ಆದಾದ ನಂತರವಷ್ಟೆ ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ತನ್ನ ಹಿಂದಿನ ಆದೇಶ ಮಾರ್ಪಾಡು ಮಾಡಿತ್ತು.

4.17 ಕೋಟಿ ಇಷ್ಟು ಮಂದಿ ಜನರಿಗೆ ಕರ್ನಾಟಕದಲ್ಲಿ ಆಧಾರ್ ವಿತರಣೆ
57.51 ಕೋಟಿ ಇಷ್ಟು ಮಂದಿಗೆ ದೇಶದಲ್ಲಿ ಆಧಾರ್ ವಿತರಣೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement