ಆಧಾರ್ ಅಕ್ರಮ
ಯುಪಿಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಂದೇ ಬಿಂಬಿಸಲಾಗಿದ್ದ 'ಆಧಾರ್'ನ ಅಸಲಿ ಒಳಸಂಚಿನ ಬಗ್ಗೆ ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ನಡೆಸಿ ಬಯಲಿಗೆಳೆದಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದೇಶದ ಭದ್ರತೆ ಬಗೆಗಿನ ಅಸಡ್ಡೆಯನ್ನು ತೋರಿಸುತ್ತಿದೆ. ಇಂಥ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
ಜಾಹೀರಾತಿನಲ್ಲಿ ಆಧಾರ್ ಗುರುತಿನ ಚೀಟಿಯ ನೋಂದಣಿದಾರರ ಸಂಖ್ಯೆಯನ್ನು ದೊಡ್ಡದಾಗಿ ತೋರಿಸಿ, ಮತಗಿಟ್ಟಿಸಿಕೊಳ್ಳಲು ಯುಪಿಎ ಸರ್ಕಾರ ನಡೆಸಿದ್ದ ಹುನ್ನಾರ ಕೋಬ್ರಾಪೋಸ್ಟ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಇಂಥ ಗಿಮಿಕ್‌ನಿಂದ ದೇಶದ ಭದ್ರತೆಯನ್ನೇ ಅಡವಿಡಲು ಹೊರಟಿದ್ದ ಸರ್ಕಾರದ ಕ್ರಮದ ಬಗ್ಗೆ ಸಂಶಯ ಹುಟ್ಟಿಸುತ್ತದೆ. ಇದೇ ಕುಟುಕು ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಹೇಳುವ ಪ್ರಕಾರ, ಆಧಾರ್ ಗುರುತು ಸಂಖ್ಯೆಯೊಂದನ್ನು ಪಡೆದರೆ ಸುಲಭವಾಗಿ ಪಡಿತರ ಚೀಟಿ, ಮತಚೀಟಿ ಸೇರಿದಂತೆ ಎಲ್ಲ ಅಧಿಕೃತ ಕಾರ್ಡ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು. ಆಧಾರ್ ಗೊತ್ತುವಳಿ ಪ್ರಕಾರ ಭಾರತದ ನಿವಾಸಿಗಳಿಗೆ (ಗಮನಿಸಿ, ಭಾರತದ ನಾಗರಿಕರು ಅಲ್ಲ) ಆಧಾರ್ ಚೀಟಿ ವಿತರಿಸಬಹುದು. ಅಂದರೆ ಈ ದೇಶದಲ್ಲಿ ಉಗ್ರರು ಸೇರಿದಂತೆ ಯಾರು ಬೇಕಿದ್ದರೂ ಅಧಿಕೃತವಾಗಿ ತಮ್ಮ ಒಳಸಂಚನ್ನು ಆಧಾರ್ ಮೂಲಕ ಅನುಷ್ಠಾನಗೊಳಿಸಿಕೊಳ್ಳುವುದು ಇನ್ನು ಸುಲಭ ಸಾಧ್ಯ!
ಕುಟುಕು ಕಾರ್ಯಾಚರಣೆ ಸಂಪೂರ್ಣ ಮಾಹಿತಿ
1. ಆಸಿಫ್ ಚೌದರಿ, ಹೊಸ ಸೇಲಂಪುರ್, ದೆಹಲಿ
ಹೊಸ ಸೇಲಂಪುರ ಭಾಗವು ಬಾಂಗ್ಲಾ ವಲಸಿಗರಿಂದ ತುಂಬಿಕೊಂಡಿದೆ. ಕೋಬ್ರಾ ಪೋಸ್ಟ್‌ನ ವರದಿಗಾರರು ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸರ್ಕಾರಿ ಕಚೇರಿ ಪ್ರವೇಶಿಸುತ್ತಾರೆ. ಭಾರತೀಯರು ಎನ್ನುವುದಕ್ಕೆ ನಮ್ಮ ಬಳಿ ಯಾವುದೆ ದಾಖಲೆಗಳಿಲ್ಲ ಎಂದು ಹೇಳಿಕೊಂಡಾಗ, ' 500 ನೀಡಿ ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ' ಎಂದು ಆಸಿಫ್ ಹೇಳುತ್ತಾನೆ. ಅಂದಹಾಗೆ ನೋಂದಣಿಗಾಗಿ ಪ್ರಾಧಿಕಾರದಿಂದ ಹೊರಗುತ್ತಿಗೆ ಪಡೆದ ಸಂಸ್ಥೆಯ ನೌಕರ ಈತ.
2. ಫರ್ಮಾನ್ ಅಲಿ, ಎಸ್‌ಡಿಎಂ ಕಚೇರಿ, ಕಟ್ವಾಲಿ, ದೆಹಲಿ
ಈತನಿಗೆ 1 ಸಾವಿರ ನೋಟು ತೋರಿಸಿದರೆ ಆಧಾರ್ ನೋಂದಣಿ ಎಲ್ಲ ರಹಸ್ಯ ಹೇಳುತ್ತಾನೆ. 'ನಿಮಗೇಕೆ
ತಲೆಬಿಸಿ ಸ್ವಾಮಿ, ದಿನದಲ್ಲಿ 100 ನೋಂದಣಿಯಾದರೆ ಅದರಲ್ಲಿ ಹತ್ತು ಅಕ್ರಮವಾಗಿರುತ್ತದೆ. ನಿಮ್ಮಂತಹ ಅಕ್ರಮ ವಲಸಿಗರು ಬಂದು ಕೇಳಿದಾಗ 'ವ್ಯವಸ್ಥೆ'ಯಾದರೆ ಒಂದು ತಿಂಗಳೊಳಗೆ ನಿಮ್ಮ ಮನೆಗೆ ಗುರುತಿನ ಸಂಖ್ಯೆ ಚೀಟಿ ಬಂದು ತಲುಪುತ್ತದೆ' ಎಂದು ಹೇಳುತ್ತಾನೆ.
3. ರವೀಂದ್ರಕುಮಾರ್, ಜಿಲ್ಲಾಧಿಕಾರಿಗಳ ಕಚೇರಿ, ಶಹಜಾನ್, ದೆಹಲಿ
ಪ್ರಾರಂಭದಲ್ಲಿ ನೋಂದಣಿಗೆ ನಿರಾಕರಿಸುವ ರವೀಂದ್ರ, ಕೊನೆಯಲ್ಲಿ ಇದಕ್ಕೆ ಅಗತ್ಯವಿರುವ ವಿಳಾಸದ ದಾಖಲೆಯನ್ನು ತಾನೇ ಸೃಷ್ಟಿಸುತ್ತೇನೆ. ಅಗತ್ಯವಿರುವ ಹಣ ನೀಡಿದರಾಯಿತು ಎಂದು ಹೇಳುತ್ತಾನೆ. ಇದೇ ಅಧಿಕಾರಿ ಎಲ್ಲ ದಾಖಲೆಗಳನ್ನು ತಯಾರಿಸಿಕೊಂಡು ಅಗತ್ಯವಿರುವ ಗೆಜೆಟೆಡ್ ಅಧಿಕಾರಿಗಳಿಂದ ಸಹಿಯನ್ನು ಹಾಕಿಸಿ ನೋಂದಣಿ ಮಾಡಿಸಲು ತಯಾರಾಗುತ್ತಾನೆ.
4. ಸದ್ದಾಮ್, ಎಸ್‌ಡಿಎಂ ಕಚೇರಿ, ಥೀಸ್ ಹಜಾರಿ ಕೋರ್ಟ್, ದೆಹಲಿ
ಈ ಆಧಾರ್ ನೋಂದಣಾಧಿಕಾರಿ ಮುಖತಃ ಮಾತನಾಡಲೇ ತಯಾರಿಲ್ಲ. ಫೋನಿನಲ್ಲಿ ಮಾತನಾಡಿ, ಆಮೇಲೆ ನೋಂದಣಿ ಮಾಡೋಣ ಎಂಬ ಹೇಳಿಕೆ ನೀಡುತ್ತಾನೆ. ಆದರೆ ಅಂತಿಮವಾಗಿ 1500 ನೀಡಲು ಒಪ್ಪಿದಾಗ ಎರಡು ಆಧಾರ್ ಗುರುತಿನ ಸಂಖ್ಯೆಗೆ ನೋಂದಣಿ ಮಾಡಿಸಲು ಒಪ್ಪುತ್ತಾನೆ. ಇದಲ್ಲದೆ ಯಾವುದೇ ದಾಖಲೆ ಪತ್ರಗಳನ್ನು ನೀಡುವ ಅಗತ್ಯವಿಲ್ಲ ಎಂಬ ಭರವಸೆ ನೀಡುತ್ತಾನೆ.
5. ಸೂರಜ್, ತ್ರಿಲೋಕ್‌ಪುರಿ, ಹೊಸದೆಹಲಿ
'ಹೇ ಇದು ಭಾರತ ಕಣಯ್ಯ, ಇಲ್ಲಿ ಏನು ಬೇಕಾದರೂ ಆಗುತ್ತದೆ', ಬಾಂಗ್ಲಾದೇಶಿ ವಲಸಿಗನಾದ ನನಗೆ ಆಧಾರ್ ಗುರುತಿನ ಸಂಖ್ಯೆ ಸಿಗುತ್ತದೆಯೇ ಎಂದು ಕುಟುಕು ಕಾರ್ಯಾಚರಣೆಯ ತಂಡದ ವರದಿಗಾರ ಕೇಳಿದ ಪ್ರಶ್ನೆಗೆ ಸೂರಜ್ ನೀಡಿದ ಉತ್ತರವಿದು. ಈತನಿಗೆ 2 ಸಾವಿರ ನೀಡಲು ಒಪ್ಪಿದಾಗ ಯಾವುದೆ ದಾಖಲೆಯಿಲ್ಲದೆ ನೋಂದಣಿಗೆ ಅವಕಾಶ ನೀಡುತ್ತಾನೆ.
6. ಆದಿತ್ಯ ಮತ್ತು ರೋಹಿತ್, ಎಸ್‌ಡಿಎಂ ಕಚೇರಿ, ಕರೋಲ್ ಬಾಗ್, ಹೊಸದೆಹಲಿ
'ಚುನಾವಣೆ ನಡೆಯುತ್ತಿದೆ, ವಲಸಿಗರ ನೋಂದಣಿ ಮಾಡಿಸಿ' ಇಂತಹದೊಂದು ಅಲಿಖಿತ ನಿರ್ದೇಶನವನ್ನು ಸ್ಥಳೀಯ ಶಾಸಕ ಆಧಾರ್ ಸಿಬ್ಬಂದಿಗೆ ನೀಡಿದ್ದಾರಂತೆ. ಮತಬ್ಯಾಂಕ್ ರಾಜಕೀಯಕ್ಕಾಗಿ ದೇಶದ ಭದ್ರತೆಯನ್ನೇ ಇವರು ಒತ್ತೆ ಇಡುತ್ತಿದ್ದಾರೆ. ಈ ಕಚೇರಿಯಲ್ಲಿ ಹಣಕ್ಕಾಗಿ ನೋಂದಣಿ ನಡೆಯುವುದಿಲ್ಲ, ಇಲ್ಲಿ ಕೇವಲ ಮತಬೇಟೆಗೆ ಮಾತ್ರ ಒತ್ತು ದೊರೆಯುತ್ತದೆ.
7.ಎಲ್.ಬಿ.ಪಾಸ್ವಾನ್, ಎಸ್‌ಡಿಎಂ ಕಚೇರಿ, ಲಕ್ಷ್ಮಿನಗರ, ದೆಹಲಿ
'ಒಂದೇನು 4 ಗುರುತಿನ ಸಂಖ್ಯೆ ಕೊಡಿಸ್ತೀನಿ, ನಾನು ಪ್ರಾಧಿಕಾರದ ಏಜೆಂಟ್' ಎಂದು ಹೇಳಿಕೊಳ್ಳುತ್ತಾನೆ. ಈವಯ್ಯನಿಗೂ ಯಾವುದೇ ದಾಖಲೆ ಪತ್ರ ನೀಡುವ ಅಗತ್ಯವಿಲ್ಲ. ಎಂಜಲು ಕಾಸು ಕೊಟ್ಟರೆ ಗುರುತಿನ ಸಂಖ್ಯೆಯ ಚೀಟಿಯನ್ನು ಮನೆಯ ಬಾಗಿಲಿಗೆ ಮುಟ್ಟಿಸುತ್ತಾನೆ.
8.ರಾಜ್, ನಂದ್‌ನಗರಿ, ದೆಹಲಿ
ಮೊದಲು ಕಾನೂನಿನ ಬಗ್ಗೆ ಮಾತನಾಡುವ ರಾಜ್, ಕೊನೆಯಲ್ಲಿ ಮಾನವೀಯತೆ ಆಧಾರದ ಮೇಲೆ ನೇಪಾಳಿ ವಲಸಿಗರಿಗೆ ಆಧಾರ್ ನೋಂದಣಿಗೆ ಒಪ್ಪಿಕೊಳ್ಳುತ್ತಾನೆ. ಈತನಿಗೆ ಲಂಚ ಕೊಡಬೇಕೆಂದು ಇಲ್ಲವೆಂತೆ. ಚಹಾ ಕುಡಿಸಿ ಏನಾದರೂ ತಿನ್ನಿಸಿದರೂ ಸಾಕಂತೆ.
9.ರಾಹುಲ್, ಜಿಲ್ಲಾಧಿಕಾರಿಗಳ ಕಚೇರಿ, ಗುರಗಾಂವ್
ಮಧ್ಯವರ್ತಿ ಮೂಲಕ ಈತನನ್ನು ಸಂಪರ್ಕಿಸಿದಾಗ, ಕಾನೂನು ವ್ಯಾಪ್ತಿಯಲ್ಲಿ ನೇಪಾಳಿಯರಿಗೆ ನೋಂದಣಿ ಮಾಡಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸುತ್ತಾನೆ. ಆದರೆ 5 ಸಾವಿರ ಲಂಚದ ಬೇಡಿಕೆಗೆ ವರದಿಗಾರರು ಒಪ್ಪಿದಾಗ, ಭಾರತೀಯರ ಚೀಟಿಯಿರುವ ಹಾಗೆಯೇ ನಿಮಗೂ ಗುರುತಿನ ಸಂಖ್ಯೆ ಚೀಟಿ ದೊರೆಯುತ್ತದೆ ಎಂದು ಹೇಳುತ್ತಾನೆ.
10. ಸಜೀದ್ ಅಲಿ, ಹೊಸ ಮಾರುಕಟ್ಟೆ, ಭೋಪಾಲ್
ಈ ಭೂಪನು ಕಚೇರಿಯಲ್ಲಿ ನೋಂದಣಿ ಮಾಡಿಸುವ ಬದಲು, ಮನೆಗೆ ಬಂದುಬಿಡಿ ಎಂದು ಹೇಳುತ್ತಾನೆ. ಸಂಜೆಯಷ್ಟೊತ್ತಿಗೆ ಮನೆಯಲ್ಲಿರು, ನೋಂದಣಿ ಮಾಡಲು ಅಗತ್ಯವಿರುವ ಯಂತ್ರ ತರುತ್ತೇನೆ, ಅಲ್ಲಿಯೇ ಎಲ್ಲ ಕೆಲಸ ಮುಗಿಸಿದರಾಯಿತು ಎಂದು ಮನೆಯಲ್ಲಿಯೇ ವ್ಯವಹಾರ ಕುದುರಿಸುವ ಪ್ರಸ್ತಾಪ ಇಡುತ್ತಾನೆ.
11. ಕಪಿಲ್, ದಿಲ್ಶಾದ್ ಕಾಲನಿ, ದೆಹಲಿ
ಈತನಿಗೆ ಒಂದು ಸಾವಿರ ರುಪಾಯಿ ನೋಟು ತೋರಿಸಿದರೆ ಎಲ್ಲ ಮಾಹಿತಿಗಳನ್ನು ಈತನೇ ತಯಾರಿಸುತ್ತಾನೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಬಯೋವುಟ್ರಿಕ್ ಮಾಹಿತಿಯನ್ನು ಅರ್ಜಿದಾರ ನೀಡುವ ಅಗತ್ಯವಿಲ್ಲ. ಇದನ್ನು ಆಧಾರ್ ಸಿಂಬ್ಬಂದಿಯೇ ಸೃಷ್ಟಿಸಿಕೊಳ್ಳುತ್ತಾನೆ!
ಶಾಸಕರು ಹಾಗೂ ಗೆಜೆಟೆಡ್ ಅಧಿಕಾರಿಗಳು ಶಾಮೀಲು!
ಈ ಅಕ್ರಮದಲ್ಲಿ ಕೆಲ ಶಾಸಕರು ಹಾಗೂ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ದುಡ್ಡು, ಮತ ಹಾಗೂ ಆಧಾರ್ ಗುರುತಿನ ಸಂಖ್ಯೆ ನೋಂದಣಿ ಹೆಚ್ಚಳಕ್ಕಾಗಿ ದೇಶದ ಭದ್ರತೆಯನ್ನು ಇವರು ಒತ್ತೆ ಇಡುತ್ತಿದ್ದಾರೆ. ಆಧಾರ್ ನೋಂದಣಿಗೆ ಕಡ್ಡಾಯವಾಗಿ ವಿಳಾಸಕ್ಕೆ ದಾಖಲೆ ಪತ್ರ ನೀಡಬೇಕಾಗುತ್ತದೆ. ವಿಳಾಸವನ್ನು ಪರಿಶೀಲಿಸದೆ ಅಧಿಕಾರಿಗಳು ಸಹಿ ಹಾಕಿ ಕೊಡುತ್ತಿದ್ದಾರೆ. ಶಾಸಕರು ಮತಕ್ಕಾಗಿ ನೋಂದಣಿ ಮಾಡುವಂತೆ ಸೂಚಿಸುತ್ತಿದ್ದಾರೆ.
ನಂಬರ್ ಗೇಮ್!
ಯಾವುದನ್ನು ಕಾಯಿದೆಯಿಂದ ಮಾಡಲು ಸಾಧ್ಯವಿಲ್ಲವೋ ಅದನ್ನು ಸುಗ್ರೀವಾಜ್ಞೆ ಮೂಲಕ ತರುವುದು ಯುಪಿಎ ಸರ್ಕಾರದ ಚಾಳಿ. ಸದನ ಸಮಿತಿಯಿಂದ ತಿರಸ್ಕೃತಗೊಂಡ ಈ ಕಾಯಿದೆಗೂ ಕೂಡ ಅಕ್ರಮವಾಗಿ ಪ್ರಾಧಿಕಾರದ ರೂಪ ನೀಡಲಾಯಿತು. ಕಾಯಿದೆ ಮೂಲಕ ಕಡ್ಡಾಯವಾಗಬೇಕಿರುವುದು ಪ್ರಾಧಿಕಾರದ ಮೂಲಕ ಏಜೆನ್ಸಿಯಾಗಿ ರೂಪುಗೊಂಡಿತು. ಆದರೆ ಪ್ರಕರಣವನ್ನು ಕರ್ನಾಟಕದ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸುಪ್ರೀಂ ಕೋರ್ಟ್ ಅಂಗಳಕ್ಕೆ ತೆಗೆದುಕೊಂಡು ಹೋದಾಗ ಸರ್ಕಾರಕ್ಕೆ ಭಯ ಪ್ರಾರಂಭವಾಯಿತು. ನೋಂದಣಿ ಮಾಡಿದವರ ಸಂಖ್ಯೆ ಹೆಚ್ಚಿಸುವುದೊಂದೆ ಯೋಜನೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂಬ ಲೆಕ್ಕಾಚಾರಕ್ಕೆ ನಿಲೇಕಣಿ ತಂಡ ಬಂದಿತು. ಇದೇ ಕಾರಣಕ್ಕೆ ಯಾವುದೇ ವಲಸಿಗರು ಬಂದರೂ ನೋಂದಣಿ ಮಾಡಿಸಿಕೊಳ್ಳಲಾಯಿತು. 'ಇಷ್ಟೊಂದು ಸಾವಿರ ಕೋಟಿ ವ್ಯಯಿಸಿದ್ದೇವೆ, 65 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ, ದಯವಿಟ್ಟು ಯೋಜನೆಗೆ ಒಪ್ಪಿಗೆ ಕೊಟ್ಟುಬಿಡಿ ಸ್ವಾಮಿ' ಎನ್ನುವುದು ಪ್ರಾಧಿಕಾರದ ನಂಬರ್ ಗೇಮ್ ಇದ್ದಂತಿದೆ.