ಬೀದರ್: ಮತ್ತೆ ಪೊಲೀಸರ ದಾಳಿ
ಬೀದರ್: ಬೀದರ್ನ ಇರಾನಿ ಕಾಲೋನಿಯ ಕೆಲವರು ಆಂಧ್ರ ಪ್ರದೇಶದ ವಿವಿಧೆಡೆ ದರೋಡೆ ಸುಲಿಗೆಯ ಆರೋಪ ಹೊತ್ತು ನ್ಯಾಯಾಲಯದಿಂದ ಜಾಮೀನು ಪಡೆದು ನಂತರದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದವರು ನಗರದಲ್ಲಿ ಅಡಗಿದ್ದಾರೆ ಎಂಬ ಮಾಹಿತಿಯ ಮೇರೆಗೆ ಸೋಮವಾರ ಬೆಳ್ಳಂಬೆಳಿಗ್ಗೆ ಆಂಧ್ರ ಶಸ್ತ್ರಸಜ್ಜಿತ ಪೊಲೀಸರು ಇರಾನಿ ಕಾಲೋನಿಯನ್ನು ಸುತ್ತುವರೆದು ಶೋಧ ಕಾರ್ಯ ನಡೆಸಿದ ಘಟನೆ ಜರುಗಿತು.
ಇರಾನಿ ಬಡಾವಣೆಯು ಸುಮಾರು 10-15 ಜನರು ಆಂಧ್ರ ಪ್ರದೇಶದ ವಿವಿಧ ಕಡೆಗಳಲ್ಲಿ ದರೋಡೆ ಪ್ರಕರಣಗಳಲ್ಲಿ ಪಾಲ್ಗೊಂಡು ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ವಿಚಾರಣೆಗಾಗಿ ಹಾಜರಾಗದೇ ತಪ್ಪಿಸಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರಕಿತ್ತು. ಅವರನ್ನು ಬಂಧಿಸಲು ಸೋಮವಾರ ಬೆಳಿಗ್ಗೆ ಆಂಧ್ರ ಪೊಲೀಸರು ಐದಾರು ವಾಹನಗಳಲ್ಲಿ ಶಸ್ತ್ರಸಜ್ಜಿತವಾಗಿ ಕಾಲೋನಿಗೆ ಬಂದಿಳಿದ್ದಿದ್ದು, ಇವರಿಗೆ ಸ್ಥಳೀಯ ಪೊಲೀಸರು ಸಹಕಾರ ನೀಡಿದ್ದರು.
ಬರಿಗೈಲಿ ಮರಳಿದರು: ಆಂಧ್ರ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಇರಾನಿ ಕಾಲೋನಿಯ ಕೆಲವು ಮನೆಗಳ ಮೇಲೆ ದಾಳಿ ಮಾಡುವಷ್ಟರ ಒಳಗಾಗಿ ಎಲ್ಲ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆಂಧ್ರದಿಂದ ಬಂದ ಪೊಲೀಸರು ಬೆಳಿಗ್ಗೆ ಸುಮಾರು 9ರವರೆಗೆ ಕಾಯ್ದು ಮರಳಿದರು. ಈ ಹಿಂದೆಯೂ ಬೆಂಗಳೂರಿನಲ್ಲಿ ಸುಲಿಗೆ ಪ್ರಕರಣದಲ್ಲಿ ಬೇಕಿದ್ದ ಸುಮಾರು 40ಕ್ಕೂ ಹೆಚ್ಚು ಇರಾನಿ ಸಮುದಾಯದ ಜನರನ್ನು ಬೆಂಗಳೂರಿನ ವಿಶೇಷ ಪೊಲೀಸ್ ಪಡೆಯ ನೂರಾರು ಪೊಲೀಸ್ ಸಿಬ್ಬಂದಿ ನಗರಕ್ಕೆ ಬಂದು ಬಂಧಿಸಿದ್ದರು. ಅಂದು ಸಿನಿಮೀಯ ಮಾದರಿಯಲ್ಲಿ ಬೆಂಗಳೂರು ಪೊಲೀಸರು ದಾಳಿ ನಡೆಸಿದ್ದು, ಇರಾನಿ ಸಮುದಾಯದ ಜನ ತಮ್ಮ ಚಿಕ್ಕಮಕ್ಕಳು, ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಮತ್ತು ಅಮಾಯಕರನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದರು.