ಮಾಲೀಕರ ಹಿಡಿತದಲ್ಲಿ ರಾಜಕೀಯ ಪಕ್ಷಗಳು
ಕ.ಪ್ರ.ವಾರ್ತೆ, ಬೆಂಗಳೂರು: ಎಲ್ಲಾ ರಾಜಕೀಯ ಪಕ್ಷಗಳು ಕೂಡ ಒಬ್ಬ ಮಾಲೀಕನ ಹಿಡಿತದಲ್ಲಿ ನಡೆಯುತ್ತಿದೆ. ಆ ಮಾಲೀಕನ ಮಾತಿಗೆ ವಿರುದ್ಧ ಮಾತನಾಡಿದರೆ ಪಕ್ಷದಿಂದ ಹೊರದಬ್ಬಲಾಗುತ್ತದೆ ಎಂದು ಶಾಸಕ ಎಂ. ರಮೇಶ್‌ಕುಮಾರ್ ಹೇಳಿದರು.
ವಿದ್ಯಾಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಅವರು ಮಾತನಾಡಿದರು. ಪಕ್ಷದ ಒಂದು ಟಿಕೆಟ್ ಪಡೆದುಕೊಳ್ಳಬೇಕಾದರೆ ಪಾಸ್‌ಬುಕ್ ಕೇಳುತ್ತಾರೆ. ಜಾತಿ, ಉಪ ಜಾತಿಗಳನ್ನು ಕೇಳುತ್ತಾರೆ. ನಾಚಿಕೆಯಾಗಬೇಕು. ರಾಜಕಾರಣದಲ್ಲಿ ಎಲ್ಲಾ ಸತ್ತುಹೋಗಿದೆ. ಎಲ್ಲವನ್ನೂ ಬಿಟ್ಟು ಜಗತ್ತೆಲ್ಲಾ ನಮ್ಮದೇ ಎನ್ನುವ ಭಾವನೆಯಲ್ಲಿ ರಾಜಕಾರಣಿಗಳಿರುತ್ತಾರೆ ಎಂದರು.
ಕಾಂಗ್ರೆಸ್‌ನಲ್ಲಿದ್ದುಕೊಂಡು ಈತ ಯಾಕೆ ಹೀಗೆ ಮಾತನಾಡುತ್ತಿದ್ದಾನೆ ಎಂದು ಯೋಚಿಸಬಹುದು. ನನಗೆ ಕಾಂಗ್ರೆಸ್ ಸಾಕಾಗಬೇಕು, ಕಾಂಗ್ರೆಸ್‌ಗೆ ನಾನು ಸಾಕಾಗಬೇಕು. ರಾಜಕಾರಣದಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ. ರಾಜಕಾರಣಿಗಳಾಗಬೇಕಾದರೆ ಒಂದು ಭಟ್ಟಂಗಿಗಳಾಗಿರಬೇಕು ಅಥವಾ ಕ್ರೂರಿಗಳಾಗಿರಬೇಕು ಎಂದು ತಮ್ಮ ರಾಜಕೀಯ ಜೀವನ ಮತ್ತು ಸಮಾಜದ ಅವಲೋಕನ ಮಾಡಿಕೊಂಡರು. ನಾನು ಪಕ್ಷ ಕಟ್ಟಲು ಪ್ರಯತ್ನಿಸಿದ್ದೆ. ಆದರೆ ನನಗೆ ಪಕ್ಷ ಕಟ್ಟಲು ಹಣದ ಕೊರತೆ ಅಡ್ಡಿಯಾಯಿತು. ಪಕ್ಷ ಕಟ್ಟುವುದರಿಂದ ಎರಡು ರೀತಿಯ ಪ್ರಯೋಜನಗಳಿವೆ. ಒಂದು ಹಣ ಮಾಡಿಕೊಳ್ಳಬಹುದು, ಇನ್ನೊಂದು ಮನೆ ಕಟ್ಟಿಕೊಳ್ಳಬಹುದು. ಆದರೆ ನನಗೆ ಈ ಎರಡು ರೀತಿಯ ಪ್ರಯೋಜನಗಳು ಕೂಡ ಆಗಿಲ್ಲ ಎಂದು ಸದ್ಯದ ರಾಜಕೀಯ ಪರಿಸ್ಥಿತಿಯನ್ನು ವ್ಯಂಗ್ಯವಾಡಿದರು.
ದೇಶಕ್ಕೆ ಇದು ಪರೀಕ್ಷೆಯ ಕಾಲ. ಸ್ವಿಡ್ಜರ್‌ಲ್ಯಾಂಡ್ ಸರ್ಕಾರ ಹೇಳುವ ಪ್ರಕಾರ ಭಾರತದಲ್ಲಿ ಅಕ್ರಮವಾಗಿ ಸಂಪಾದಿಸಿದ ರು. 1350 ಬಿಲಿಯನ್ ಡಾಲರ್ ಹಣ ಸ್ವಿಸ್ ಬ್ಯಾಂಕ್‌ನಲ್ಲಿದೆ. ಯಾರೆಲ್ಲಾ ಈ ಹಣವನ್ನು ಹೊಂದಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಲು ಸಿದ್ಧರಿದ್ದೇವೆ ಎಂದು ಒಂದು ಒಪ್ಪಂದಕ್ಕೆ ಬರಲಾಗಿತ್ತು. ಆದರೇನು ಮಾಡಲಿ ನಮ್ಮ ಸರ್ಕಾರದಲ್ಲಿ ಬರೆದುಕೊಳ್ಳಲು ಪೆನ್ನು, ಪುಸ್ತಕಗಳೇ ಇಲ್ಲ ಎಂದು ವ್ಯಂಗ್ಯವಾಡಿದರು.
ರಾಜಕಾರಣದಲ್ಲಿರುವವರೆಲ್ಲರೂ ಆರೆಸ್ಸೆಸ್ ಮನೋಭಾವದವರು
ರಾಜಕಾರಣದ್ಲಲಿರುವವರೆಲ್ಲರೂ ಆರ್‌ಎಸ್ಸೆಸ್ ಮನೋಭಾವದವರು. ಎಲ್ಲರೂ ಕೂಡ ಭಾರತಮಾತೆಯ, ಒಂದೇ ತಾಯಿಯ ಮಕ್ಕಳು. ಭಾರತ ಮಾತೆಯ ಸೇವೆಯನ್ನು ಒಗ್ಗಟ್ಟಾಗಿ ಮಾಡುತ್ತಿದ್ದಾರೆ ಎಂದು ರಮೇಶ್ ಕುಮಾರ್ ಹೇಳಿದರು. ಸ್ವಿಸ್ ಬ್ಯಾಂಕ್ ಹಣದ ಬಗ್ಗೆ ಮನಮೋಹನ ಸಿಂಗ್ ಮೌನಿಯಾಗಿದ್ದರೆ ವಿರೋಧ ಪಕ್ಷಗಳು ಯಾಕೆ ಇನ್ನೂ ಸುಮ್ಮನೆ ಕುಳಿತಿದೆ. ಮಾಹಿತಿಯನ್ನು, ವಿವರಗಳನ್ನು ಬಹಿರಂಗಪಡಿಸಲು ಹೇಳಬಹುದಿತ್ತಲ್ಲವೇ? ಆದರೆ ಯಾರು ಕೂಡ ಆ ರೀತಿ ಮಾಡುತ್ತಿಲ್ಲ. ಅಲ್ಲಿಯ ದುಡ್ಡು ಅಲ್ಲೇ ಇರಲಿ. ಎಲ್ಲರೂ ಹೊಂದಿಕೊಂಡು ಯಾರ ಬಗ್ಗೆಯೂ ಯಾರು ಕೂಡ ಮಾತನಾಡದೆ ಸಾಗುತ್ತಿರೋಣ. ಇದಕ್ಕೆ ಪಕ್ಷ ಬೇಧದ ಹಂಗು ಬೇಡ ಎಂದು ಎಲ್ಲರು ಒಂದೇ ರೀತಿಯಮನೋಭಾವದಲ್ಲಿ ಹೋಗುತ್ತಿದ್ದಾರೆ. ಹೀಗಾಗಿ ಪಕ್ಷಗಳ ವಿಂಗಡಣೆಯಿಲ್ಲದೆ ರಾಜಕೀಯ ಕ್ಷೇತ್ರದಲ್ಲಿರುವ ನಾವೆಲ್ಲರೂ ಕೂಡ ಒಂದೇ ತಾಯಿಯ ಮಕ್ಕಳು ಎಂದರು. ಒಂದು ವೇಳೆ ಸ್ವಲ್ಪ ಸರಿಯಾದ ವ್ಯಕ್ತಿ ಆ ಕ್ಷೇತ್ರದಲ್ಲಿ ಇದ್ದರೆ ಅವನ ಅಲ್ಪಸ್ವಲ್ಪ ಮಾನವನ್ನು ಕೂಡ ಹರಾಜು ಮಾಡುತ್ತಾರೆ. ಅವನ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸುತ್ತಾರೆ. ನನ್ನ ಮೇಲೆ ಈ ರೀತಿಯ ಆರೋಪ ನಿರಂತರವಾಗಿ ಕೇಳಿಬಂದಾಗ ನಾನು ಇದರ ಬಗ್ಗೆ ಜ್ಯೋತಿಷಿಗಳಲ್ಲಿ, ತಿಳಿದವರಲ್ಲಿ ಯಾಕೆ ಹೀಗೆ ಎಂದು ಕೇಳಿದೆ. ನೀವು ಕೂಡ ಎಲ್ಲರಂತೆ ಎಲ್ಲವನ್ನು ಬಿಟ್ಟು ರಾಜಕಾರಣದಲ್ಲಿದ್ದರೆ ನಿಮ್ಮ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಹಿರೇಮಠ್ ಅವರ ಆರೋಪಗಳಿಗೆ ಪರೋಕ್ಷ ಟಾಂಗ್ ನೀಡಿದರು.