10 ಕೋಟಿ ಬ್ಲಾಕ್ಮೇಲ್; ಇಬ್ಬರ ಸೆರೆ
ಶ್ರೀರಾಮಚಂದ್ರಾಪುರ ಮಠದ ಬಗ್ಗೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ಹಣ ಕೊಟ್ಟರೆ ಅದನ್ನು ವಾಪಸ್...
-ಮುಂಗಡವಾಗಿ 10 ಲಕ್ಷ ಹಣ ಕೇಳಿದ್ದ ಆರ್ಟಿಐ ಕಾರ್ಯಕರ್ತ
-ಹಣ ನೀಡದೆ ಇದ್ದರೆ ನೀವು, ಶ್ರೀಗಳ ಬಂಧನ ಎಂದಿದ್ದ ಆರೋಪಿ
ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಬಗ್ಗೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ಹಣ ಕೊಟ್ಟರೆ ಅದನ್ನು ವಾಪಸ್ ಪಡೆಯುವ ಆಮಿಷವೊಡ್ಡಿ 10 ಲಕ್ಷ ಕೇಳಿದ್ದ ಇಬ್ಬರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕು ನಿವಾಸಿ ಮಲ್ಲಿಕಾರ್ಜುನ ಪಾಟೀಲ್ (46) ಹಾಗೂ ಆರ್ಟಿಐ ಕಾರ್ಯಕರ್ತ ಬೆಂಗಳೂರಿನ ಮತ್ತಿಕೆರೆ ಗೋಕುಲ ನಿವಾಸಿ ಎಂ.ಸಿ. ಚಂದನ್ (30) ಬಂಧಿತರು.
ಪ್ರಕರಣ: ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ಪಾರ್ಕ್ ಬಳಿ ಇರುವ ಶ್ರೀರಾಮಚಂದ್ರಾಪುರ ಮಠ ಮತ್ತು ಧರ್ಮಚಕ್ರ ಟ್ರಸ್ಟ್ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಾಹಕರಾದ ಕೆ.ಜಿ. ಭಟ್ ಅವರಿಗೆ ಸುಮಾರು 1 ತಿಂಗಳಿಂದ ಆರೋಪಿ ಮಲ್ಲಿಕಾರ್ಜುನ ಕರೆ ಮಾಡಿ, ಮಠ ಹಾಗೂ ಟ್ರಸ್ಟ್ಗಳ ಮೇಲೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಅರ್ಜಿಯಲ್ಲಿ ಮಠ ಹಾಗೂ ಟ್ರಸ್ಟ್ನಿಂದ ಅವ್ಯವಹಾರ ನಡೆದ ಬಗ್ಗೆ ಉಲ್ಲೇಖವಿದೆ. ನೀವು ವಿಷಯನ್ನು ತುರ್ತಾಗಿ ಇತ್ಯರ್ಥಪಡಿಸಿಕೊಳ್ಳದಿದ್ದರೆ ನಿಮಗೆ ತೊಂದರೆಯಾಗುತ್ತದೆ. ಅಲ್ಲದೇ ನಿಮ್ಮ ಶ್ರೀಗಳ ಬಂಧನಕ್ಕೆ ಒಳಗಾಗುತ್ತಾರೆ. ನೀವು 10 ಕೋಟಿ ನೀಡಿದಲ್ಲಿ ಪಿಐಎಲ್ ಅರ್ಜಿದಾರರಿಂದ ಕೇಸನ್ನು ವಾಪಸ್ ತೆಗೆಸುವುದಾಗಿ ಬೆದರಿಕೆ ಹಾಕುತ್ತಿದ್ದ. ಕೊನೆಗೆ ಮಾತುಕತೆ ಬಳಿಕ 5 ಕೋಟಿಗೆ ಆರೋಪಿಗಳು ಒಪ್ಪಿಕೊಂಡಿದ್ದರು.
ಈ ಸಂಬಂಧ ಶ್ರೀರಾಮಚಂದ್ರಾಪುರ ಮಠದ ಸಿಇಓ ಕೆ.ಜಿ. ಭಟ್ ಅವರು ಗಿರಿನಗರ ಪೊಲೀಸ್ ಠಾಣೆಯಲ್ಲಿ 2014 ಮಾ.21 ರಂದು ಪ್ರಕರಣ ದಾಖಲಿಸಿದ್ದರು.
ಆರೋಪಿಗಳು ಬಲೆಗೆ: 5 ಕೋಟಿ ಪೈಕಿ ಮಾ.24ರಂದು 10 ಲಕ್ಷ ಮುಂಗಡ ನೀಡಬೇಕು ಎಂದು ಆರೋಪಿಗಳು ಒತ್ತಾಯಿಸಿದ್ದರು. ಮುಂಗಡ ಹಣವನ್ನು ಶೇಷಾದ್ರಿಪುರದ ವಿಠಲ್ ರಿಜೆನ್ಸಿ ಹೊಟೇಲ್ಗೆ ತೆಗೆದುಕೊಂಡು ಬರುವಂತೆ ತಿಳಿಸಿದ್ದರು.
ಆರೋಪಿಗಳ ಬೇಡಿಕೆ ಬಗ್ಗೆ ಶ್ರೀರಾಮಚಂದ್ರಾಪುರ ಮಠದ ಪರವಾಗಿ ಕಾನೂನು ಸಲಹೆಗಾರ ಅರುಣ್ ಶ್ಯಾಮ್ ಮತ್ತು ಕಾರ್ಯದರ್ಶಿ ಮೋಹನ್ ಹೆಗಡೆ ಅವರು ಗಿರಿನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಪೊಲೀಸರ ಸೂಚನೆಯಂತೆ 10 ಲಕ್ಷದೊಂದಿಗೆ ಆರೋಪಿಗಳು ಹೇಳಿದ ಸ್ಥಳಕ್ಕೆ ಮಠದ ಪರವಾಗಿ ಇಬ್ಬರು ಹೊಟೇಲ್ಗೆ ಹೋಗಿದ್ದರು. ಇವರನ್ನು ಹಿಂಬಾಲಿಸಿಕೊಂಡು ಹೋದ ಗಿರಿನಗರ ಠಾಣೆ ಇನ್ಸ್ಪೆಕ್ಟರ್ ಬಿ.ಬಿ. ಲಕ್ಷ್ಮೇಗೌಡ ಮತ್ತು ಸಿ.ಕೆ.ಅಚ್ಚುಕಟ್ಟು ಠಾಣೆ ಇನ್ಸ್ಪೆಕ್ಟರ್ ಬಿ.ಕೆ. ಶೇಖರ್ ಹಾಗೂ ಸಿಬ್ಬಂದಿ ಹೊಟೇಲ್ನಲ್ಲಿ ಹಣ ಸ್ವೀಕರಿಸುತ್ತಿದ್ದಾಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಒತ್ತಾಯಪೂರ್ವಕವಾಗಿ ಪಡೆದಿದ್ದ 10 ಲಕ್ಷ, ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡನೇ ಆರೋಪಿ ಚಂದನ್ ಆರ್ಟಿಐ ಕಾರ್ಯಕರ್ತನಾಗಿದ್ದು ಅಸ್ತ್ರ ಹೆಸರಿನ ಸರ್ಕಾರೇತರ ಸಂಸ್ಥೆ ನಡೆಸುತ್ತಿದ್ದಾನೆ. ಈತನ ವಿರುದ್ಧ ಈಗಾಗಲೇ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.