ಎಷ್ಟು ಕಟ್ತೀರಾ, ಮೋದಿನೇ ಪ್ರಧಾನಿ!
ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ..
ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ದೇಶದಲ್ಲಿ ಬೆಟ್ಟಿಂಗ್ ಭರಾಟೆ ಆರಂಭವಾಗಿದೆ. ಪ್ರಮುಖ ನಗರಗಳಲ್ಲಿ ಪಂಟರ್‌ಗಳ ಕಾರುಬಾರು ನಡೆಯುತ್ತಿದೆ. ದೇಶದಲ್ಲಿ ಎದ್ದಿರುವ ಮೋದಿ ಅಲೆಯು ಯುಪಿಎಯನ್ನು ಧೂಳೀಪಟ ಮಾಡಲಿದೆ ಎನ್ನುವುದು ಈ ಬಾಜಿಗಾರರ ಅಂಬೋಣ.
ಬೆಟ್ಟಿಂಗ್ ದರ
ಮೋದಿ 20 ಪೈಸೆ
ರಾಹುಲ್ ರು.6
(ಇಲ್ಲಿ ರಾಹುಲ್‌ಗೆ 6 ದರ ನಿಗದಿಪಡಿಸಲಾಗಿದೆ. ಅಂದರೆ ಅವರು ಪ್ರಧಾನಿಯಾಗುವ ಸಾಧ್ಯತೆ ಅತ್ಯಂತ ಕಡಿಮೆ ಎಂದರ್ಥ. ಆದರೆ ಮೋದಿ ಅವರಿಗೆ 20 ಪೈಸೆ ನಿಗದಿಪಡಿಸಲಾಗಿದ್ದು, ಮೋದಿಯೇ ಮುಂದಿನ ಪ್ರಧಾನಿ ಎನ್ನುವ ಬಾಜಿಗಾರರ ನಂಬಿಕೆಯನ್ನು ಇದು ತೋರಿಸುತ್ತದೆ)
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ 272, ಯುಪಿಎಗೆ 100ಕ್ಕೂ ಕಡಿಮೆ ಸೀಟುಗಳು. ನರೇಂದ್ರ ಮೋದಿ
ಅವರೇ ಪ್ರಧಾನಿ!
ಇನ್ನೂ ಚುನಾವಣೇನೇ ನಡೆದಿಲ್ಲ. ಅದಕ್ಕೂ ಮೊದಲೇ ಫಲಿತಾಂಶ ಬಂತಾ ಎಂದು ಅಚ್ಚರಿ
ಪಡುತ್ತಿದ್ದೀರಾ?
ಇದು ಚುನಾವಣೆಯ ಫಲಿತಾಂಶ ಅಲ್ಲ. ಬಾಜಿಗಾರರ ವಿಶ್ವಾಸದ ನುಡಿಗಳು.
ಆಂತರಿಕ ಜಗಳ ಲೆಕ್ಕಕ್ಕೇ ಇಲ್ಲ
ಬಿಜೆಪಿಯೊಳಗೆ ಎಷ್ಟೇ ಜಗಳವಿದ್ದರೂ ಅದು ದೊಡ್ಡ ವಿಷಯವೇ ಅಲ್ಲ ಎನ್ನುತ್ತಾರೆ ಬಾಜಿಗಾರರು. ಮೋದಿ ಅಲೆಯ ಮುಂದೆ ಯಾವುದೂ ನಿಲ್ಲುವುದಿಲ್ಲ. ಮುಂದಿನ ಪ್ರಧಾನಿ ಮೋದಿಯೇ ಎನ್ನುವುದು ಇವರ ವಾದ. ಬಿಜೆಪಿ ಸುಲಭವಾಗಿ 200 ಸೀಟು ಗೆಲ್ಲಲಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಈ ಸಂಖ್ಯೆ 235 ಆಗಲಿದೆ ಎನ್ನುತ್ತಾರೆ. ಆದರೆ, ಕಾಂಗ್ರೆಸ್‌ಸ್ಥಿತಿ ಮಾತ್ರ ಹೀನಾಯ. ಅದು 75-80 ಸೀಟಿಗೆ ತೃಪ್ತಿಪಡುತ್ತದಂತೆ.
ಎಲೆಕ್ಷನ್ನೇ ಫೇವರಿಟ್
ಚುನಾವಣಾ ಕಣ ರಂಗೇರುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಆಸಕ್ತಿಯೇ ಇಲ್ಲ. ಈಗ ಏನಿದ್ದರೂ ಎಲೆಕ್ಷನ್ ಬೆಟ್ಟಿಂಗ್. ಮುಂಬೈ, ಉತ್ತರಪ್ರದೇಶ, ದೆಹಲಿ, ಜೈಪುರ ಸೇರಿ ಪ್ರಮುಖ ನಗರಗಳಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಯಲ್ಲಿ ಸಾವಿರಾರು ಮಂದಿ ಭಾಗಿಯಾಗುತ್ತಿದ್ದಾರೆ.