ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಚಾಂದ್‌ನಿ ಚೌಕದಿಂದ ವಾರಾಣಸಿಯವರೆಗೆ

ದೇಶದಲ್ಲಿ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ, ಇವುಗಳಲ್ಲಿ ಕೆಲವು ಕ್ಷೇತ್ರಗಳಲ್ಲಿನ ಸ್ಪರ್ಧೆ ಮಾತ್ರ ಈಗಾಗಲೇ...

Mainashree
Updated On : 25 Mar 2014, 10:21 am

ದೇಶದಲ್ಲಿ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ, ಇವುಗಳಲ್ಲಿ ಕೆಲವು ಕ್ಷೇತ್ರಗಳಲ್ಲಿನ ಸ್ಪರ್ಧೆ ಮಾತ್ರ ಈಗಾಗಲೇ ದೇಶಾದ್ಯಂತ ಕುತೂಹಲ ಸೃಷ್ಟಿಸಿದೆ. ಅಂಥ ಕೆಲ ಕ್ಷೇತ್ರಗಳ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಚಾಂದ್‌ನಿ ಚೌಕ್
1    ಕಪಿಲ್ ಸಿಬಲ್(ಕಾಂಗ್ರೆಸ್)
2    ಅಶುತೋಷ್ ಗುಪ್ತಾ(ಆಪ್)
3    ಹರ್ಷವರ್ಧನ್(ಬಿಜೆಪಿ)
ಕ್ಷೇತ್ರದ ಸಂಸದ, ಕೇಂದ್ರ ಸಚಿವ ಕಪಿಲ್ ಸಿಬಲ್ ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ಕೇವಲ ಮುಸ್ಲಿಂ ಮತಗಳಿಂದಾಗಿಯೇ ಗೆಲವು ಸಾಧಿಸಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಮಾಜಿ ಪತ್ರಕರ್ತ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಶುತೋಷ್ ಈ ಬಾರಿ ಮುಸ್ಲಿಮರು ಮತ್ತು ಬನಿಯಾ ಜನಾಂಗದವರ ಓಲೈಕೆಗೆ ಪ್ರಯತ್ನಿಸುತ್ತಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಹರ್ಷವರ್ಧನ್ ಮೂಲತಃ ಚಾಂದನಿಚೌಕ್‌ನವರು. ಆದರೆ, ವಿಜಯ್‌ಗೋಯಲ್ ಸ್ಪರ್ಧೆಯಿಂದಾಗಿ ಹಿನ್ನಡೆ ಅನುಭವಿಸಿದ್ದರು. ಆದರೆ, ಈ ಬಾರಿ ಹರ್ಷವರ್ಧನ್‌ಗೆ ಮೋದಿ ಮತ್ತು ಜೇಟ್ಲಿ ಬೆಂಬಲ ಇದೆ.

ಮುಂಬೈ ಉತ್ತರ ಕೇಂದ್ರ
1    ಪ್ರಿಯಾ ದತ್(ಕಾಂಗ್ರೆಸ್)
2    ಫಿರೋಜ್ ಪಾಲ್ಖಿವಾಲಾ(ಆಪ್)
3    ಪೂನಂ ಮಹಾಜನ್ ರಾವ್(ಬಿಜೆಪಿ)
ಈ ಕ್ಷೇತ್ರ ಖ್ಯಾತನಾಮರ ಮಕ್ಕಳ ಕದನದಿಂದಾಗಿ ಕುತೂಹಲ ಕೆರಳಿಸಿದೆ. ನಟ ಸುನಿಲ್‌ದತ್ ಸಾವಿನಿಂದ ತೆರವಾಗಿದ್ದ ಲೋಕಸಭಾ ಸ್ಥಾನಕ್ಕೆ 2005ರಲ್ಲಿ ನಡೆದ ಉಪಚುನಾವಣೆಯಲ್ಲಿ ಪುತ್ರಿ ಪ್ರಿಯಾದತ್ ಗೆದ್ದಿದ್ದರು. 2009ರ ಚುನಾವಣೆಯಲ್ಲೂ ಗೆದ್ದಿದ್ದರು. ಫಿರೋಜ್ ಖ್ಯಾತ ವಕೀಲ ದಿ. ನಾನಿ ಪಾಲ್ಖಿವಾಲಾ ಅವರ ಪುತ್ರ. ಇನ್ನು ಪೂನಂ ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ. ಪ್ರಮೋದ್ ಮಹಾಜನ್ ಪುತ್ರಿ. ಮಹಾರಾಷ್ಟ್ರ ಬಿಜೆಪಿಯಲ್ಲಿ ಬಲಿಷ್ಠವಾಗಿರುವ ಗೋಪಿನಾಥ್ ಮುಂಡೆ ಮಹಾಜನ್ ಸಂಬಂಧಿ. ಆದರೆ, ಇದರಿಂದ ಪೂನಂಗೆ ಅಂಥದ್ದೇನೂ ಲಾಭವಾಗಿಲ್ಲ. ಮುಂಡೆ ತಮ್ಮ ಪುತ್ರಿಯರನ್ನು ರಾಜಕೀಯಕ್ಕೆ ಬರಲು ಪ್ರೋತ್ಸಾಹಿಸಿದರೇ ಹೊರತು ಪೂನಂರನ್ನಲ್ಲ.

ಅಮೃತಸರ
1    ಅರುಣ್ ಜೇಟ್ಲಿ(ಬಿಜೆಪಿ)
2    ಅಮರೀಂದರ್ ಸಿಂಗ್(ಕಾಂಗ್ರೆಸ್)
ನರೇಂದ್ರ ಮೋದಿ ಜತೆಗೆ ದೋಸ್ತಿ ಮಾಡಿಕೊಂಡಿರುವ ಜೇಟ್ಲಿ ರಾಜ್ಯಸಭೆ ಎನ್ನುವ ಸುರಕ್ಷಿತ ಮಾರ್ಗ ಬಿಟ್ಟು ಚುನಾವಣೆಯ ಹಾದಿ ಹಿಡಿದಿದ್ದಾರೆ. ಚಂಡೀಗಡಕ್ಕೆ ಜೇಟ್ಲಿ ಹೊರಗಿನವರು. ಈಗ ಕ್ಷೇತ್ರವನ್ನು ಬಿಜೆಪಿಯವರೇ ಆದ ನವಜೋತ್ ಸಿಂಗ್ ಸಿದು ಪ್ರತಿನಿಧಿಸುತ್ತಿದ್ದರು. ವರಿಷ್ಠರ ಸೂಚನೆಯಂತೆ ಈ ಬಾರಿ ಜೇಟ್ಲಿ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಜೇಟ್ಲಿ ವಿರುದ್ಧ ಕಾಂಗ್ರೆಸ್ ಕೂಡ ಬಲಿಷ್ಠ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಅಮರೀಂದರ್ ಸಿಂಗ್ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಆಗಿದ್ದವರು. ಆದರೆ, ಬಿಜೆಪಿ ಮಿತ್ರಪಕ್ಷವಾದ ಅಕಾಲಿದಳ ಮಾತ್ರ ಜೇಟ್ಲಿ ಗೆಲುವಿನ ವಿಶ್ವಾಸದಲ್ಲಿದೆ. ಜೇಟ್ಲಿ ಗೆದ್ದರೆ ಉಪಪ್ರಧಾನಿಯಾಗಲಿದ್ದಾರೆ ಎಂಬ ಘೋಷಣೆ ಮೊಳಗಿಸಿದೆ.

ವಾರಾಣಸಿ
ನರೇಂದ್ರ ಮೋದಿ(ಬಿಜೆಪಿ)
ಕೇಜ್ರಿವಾಲ್ (ಆಪ್)
ಕಾಂಗ್ರೆಸ್(?)
ಬಿಜೆಪಿ ಪ್ರಧಾನಿ ಅಭ್ಯರ್ಥಿ ಸ್ಪರ್ಧೆಯಿಂದ ಕುತೂಹಲ ಮೂಡಿಸಿರುವ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸ್ಪರ್ಧಿಸಲಿದ್ದಾರೆ.  ವಾರಾಣಸಿಯಲ್ಲಿ ಮಂಗಳವಾರ ನಡೆದ ರೋಡ್‌ಶೋನಲ್ಲಿ  ಕೇಜ್ರಿವಾಲ್ ಈ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಈವರೆಗೆ ಯಾವುದೇ ಅಭ್ಯರ್ಥಿಯನ್ನು ಹೆಸರಿಸಿಲ್ಲ. ಮೋದಿ ಅವರಿಗೆ ನೈಜ ಸ್ಪರ್ಧೆಯೊಡ್ಡುವ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಒಂದು ವೇಳೆ ಕೇಜ್ರಿವಾಲ್ ಸ್ಪರ್ಧಿಸಿದ್ದೇ ಆದರೆ ವಾರಾಣಸಿ ಕ್ಷೇತ್ರ ಇಡೀ ದೇಶದ ಗಮನ ಸೆಳೆಯಲಿದೆ.

ನಾಗ್ಪುರ
1 ನಿತಿನ್ ಗಡ್ಕರಿ( ಬಿಜೆಪಿ)
2 ಅಂಜಲಿ ದಮಾನಿಯಾ(ಆಪ್)
3 ವಿಲಾಸ್ ಮುತ್ತೆಮ್ವಾರ್(ಕಾಂಗ್ರೆಸ್)
ಆರ್‌ಟಿಐ ಕಾರ್ಯಕರ್ತೆ ದಮಾನಿಯಾ ನೀರಾವರಿ ಹಗರಣಕ್ಕೆ ಸಂಬಂಧಿಸಿ ಈಗಾಗಲೇ ಗಡ್ಕರಿ ಬೆವರಿಳಿಸಿದ್ದಾರೆ. ಚುನಾವಣೆಯಲ್ಲಿ ಗಡ್ಕರಿ ಏದುಸಿರು ಬಿಡುವಂತೆ ಮಾಡುವ ಶಪಥ ಮಾಡಿದ್ದಾರೆ. ಅಂಜಲಿ ಸ್ಪರ್ಧೆ ಕುತೂಹಲ ಮೂಡಿಸಿದ್ದರೂ ನಾಗ್ಪುರದಲ್ಲಿ ನಿಜವಾದ ಸ್ಪರ್ಧೆ ನಡೆಯುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಎನ್ನುತ್ತವೆ ಸಮೀಕ್ಷೆಗಳು. ಅಂದರೆ ಮುತ್ತೆಮ್ವಾರ್ ಮತ್ತು ಗಡ್ಕರಿ ನಡುವೆ. ಗಡ್ಕರಿ ನಾಗ್ಪುರದಲ್ಲಿ ಉತ್ತಮ ನೆಟ್‌ವರ್ಕ್ ಹೊಂದಿದ್ದಾರೆ.

ಗಾಜಿಯಾಬಾದ್
1    ವಿ.ಕೆ. ಸಿಂಗ್(ಬಿಜೆಪಿ)
2    ರಾಜ್‌ಬಬ್ಬರ್(ಕಾಂಗ್ರೆಸ್)
3    ಶಾಜಿಯಾ ಇಲ್ಮಿ(ಆಪ್)
ವಿ.ಕೆ. ಸಿಂಗ್ ನಿವೃತ್ತ ಸೇನಾ ಮುಖ್ಯಸ್ಥರು. ಯುಪಿಎ ಸರ್ಕಾರದ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದವರು. ಅಣ್ಣಾ ಹಜಾರೆ ಅವರೊಂದಿಗೆ ಗುರುತಿಸಿಕೊಂಡವರು. ಇನ್ನು ರಾಜ್‌ಬಬ್ಬರ್ ಹೆಸರಾಂತ ನಟ, ರಾಜಕಾರಣಿ. ಶಾಜಿಯಾ ಆಮ್ ಆದ್ಮಿ ಪಕ್ಷದ ಪ್ರಮುಖ ಮುಖಂಡರು. ದೆಹಲಿ ವಿಧಾನಸಭೆಯಲ್ಲಿ ನಡೆದ ಜಾದೂ ಗಾಜಿಯಾಬಾದ್‌ನಲ್ಲೂ ಪುನರಾವರ್ತನೆಯಾಗಲಿದೆ. ಆಪ್‌ಗೆ ಜನ ಬೆಂಬಲ ಸಿಗಲಿದೆ ಎನ್ನುವ ವಿಶ್ವಾಸ ಇಲ್ಮಿ ಅವರಿಗಿದೆ.

ಚಂಡೀಗಡ
1    ಕಿರಣ್ ಖೇರ್(ಬಿಜೆಪಿ)
2    ಗುಲ್‌ಪನಾಗ್(ಆಪ್)
3    ಪವನ್ ಬನ್ಸಲ್(ಕಾಂಗ್ರೆಸ್)
ದೇಶಾದ್ಯಂತ ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಚಂಡೀಗಡ ಕೂಡ ಒಂದು. ಕಾಂಗ್ರೆಸ್‌ನ ಹಿರಿಯ ಮುಖಂಡ ಬನ್ಸಲ್ ಎದುರು ಬಿಜೆಪಿ ಹಾಗೂ ಆಪ್‌ನಿಂದ ಇಬ್ಬರು ಗುಳಿಕೆನ್ನೆಯ ತಾರಾಮಣಿಗಳು ಸ್ಪರ್ಧಿಸುತ್ತಿದ್ದಾರೆ. ಎಷ್ಟೋ ಬಾರಿ ಈ ಗ್ಲಾಮರ್ ಮುಖಗಳ ಮುಂದೆ ಬನ್ಸಲ್ ಸಪ್ಪೆಯಾಗಿ ಕಾಣಿಸುವುದುಂಟು.

ರಾಬ್ರಿ v/s ಸಾಧು
ಪಟನಾ: ಬಿಹಾರದ ಸರಣ್ ಲೋಕಸಭಾ ಕ್ಷೇತ್ರ ಚುನಾವಣೆ ಈ ಬಾರಿ ಈಗ ಎಲ್ಲರ ಕುತೂಹಲದ ಕೇಂದ್ರವಾಗಿದೆ. ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಪತ್ನಿ ರಾಬ್ರಿದೇವಿ ವಿರುದ್ಧ ಆಕೆಯ ಸಹೋದರ ಸಾಧು ಯಾದವ್ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಒಂದು ಕಾಲದಲ್ಲಿ ಆರ್‌ಜೆಡಿಯ ಪ್ರಮುಖ ನಾಯಕರಲ್ಲೊಬ್ಬರಾಗಿದ್ದ ಸಾಧುಯಾದವ್ ಅಲಿಯಾಸ್ ಅನಿರುದ್ಧ್ ಯಾದವ್ ಅವರು ಬಳಿಕ ಕಾಂಗ್ರೆಸ್ ಸೇರಿದ್ದರು. ಈಗ ಸರಣ್ ಕ್ಷೇತ್ರದಿಂದ ಸ್ಪತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಸಹೋದರಿಯ ವಿರುದ್ಧವೇ ಕಣಕ್ಕಳಿಯುವ ಹಿಂದಿನ ಉದ್ದೇಶವನ್ನು ಪ್ರಚಾರದ ವೇಳೆ ಜನರ ಮುಂದೆ ಬಹಿರಂಗಪಡಿಸುವುದಾಗಿ ಸಾಧು ಯಾದವ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement