ವಾರಾಣಸಿಯಲ್ಲಿ ಕೇಜ್ರಿ, ವಡೋದರದಲ್ಲಿ ಮಿಸ್ತ್ರಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಿಂದ ಆಮ್ ಆದ್ಮಿ ಪಕ್ಷ(ಆಪ್)ದ ಮುಖಂಡ..
ವಾರಾಣಸಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಿಂದ ಆಮ್ ಆದ್ಮಿ ಪಕ್ಷ(ಆಪ್)ದ ಮುಖಂಡ ಅರವಿಂದ ಕೇಜ್ರಿವಾಲ್, ಗುಜರಾತ್ನ ವಡೋದರದಿಂದ ಕಾಂಗ್ರೆಸ್ನ ಮಧುಸೂದನ ಮಿಸ್ತ್ರಿ ಕಣಕ್ಕಿಳಿಯಲಿದ್ದಾರೆ. ವಾರಾಣಸಿಯಲ್ಲಿ ಪಕ್ಷದಿಂದ ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಕಾಂಗ್ರೆಸ್ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪಕ್ಷದ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೆಸರು ಕೇಳಿ ಬರುತ್ತಿದೆಯಾದರೂ ಅದಕ್ಕಿನ್ನೂ ವರಿಷ್ಠರ ಒಪ್ಪಿಗೆ ಮುದ್ರೆ ಬಿದ್ದಿಲ್ಲ.
ಕೇಜ್ರಿ ಘೋಷಣೆ
ಮೋದಿ ಬೆಂಬಲಿಗರ ಪ್ರತಿಭಟನೆ, ವಿರೋಧದ ನಡುವೆಯೇ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ವಾರಾಣಸಿಯಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ವಾರಾಣಸಿಯಿಂದ ಸ್ಪರ್ಧಿಸಬೇಕೇ, ಬೇಡವೇ ಎನ್ನುವ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಆಪ್ ಮುಖಂಡ ಈ ನಿರ್ಧಾರ ಪ್ರಕಟಿಸಿದ್ದಾರೆ. ಕೇಜ್ರಿವಾಲ್ ಸ್ಪರ್ಧೆಯಿಂದ ವಾರಾಣಸಿ ಲೋಕಸಭಾ ಚುನಾವಣಾ ಕಣಕ್ಕೆ ವಿಶೇಷ ಕಳೆ ಮೂಡಿದಂತಾಗಿದೆ.
ಮೊಟ್ಟೆ, ಶಾಯಿ ಸೆಳೆತ..
ಇದಕ್ಕೂ ಮುನ್ನ ನಗರದಲ್ಲಿ ಆಪ್ ವತಿಯಿಂದ ನಡೆಸಿದ ರೋಡ್ಶೋದಲ್ಲಿ ಕೇಜ್ರಿವಾಲ್ ಮತ್ತು ಉಳಿದ ನಾಯಕರ ಮೇಲೆ ಮೊಟ್ಟೆ ಹಾಗೂ ಶಾಯಿ ಎಸೆದ ಘಟನೆಯೂ ನಡೆಯಿತು. ಕಾಲ ಭೈರವ ಮತ್ತು ಕಾಶಿ ವಿಶ್ವನಾಥ ದೇವಸ್ಥಾನ ಭೇಟಿ ಬಳಿಕ ಕೇಜ್ರಿವಾಲ್ ಅವರಿದ್ದ ಕಾರಿನ ಮೇಲೆ ಕೆಲ ದುಷ್ಕರ್ಮಿಗಳು ಮೊಟ್ಟೆ ಎಸೆದಿದ್ದಾರೆ. ನಂತರ ನಡೆದ ರೋಡ್ಶೋನಲ್ಲಿ ಹಿಂದೂ ವಾಹಿನಿ ಸೇನೆ ಮತ್ತಿತರ ಸಂಘಟನೆಗಳ ಮುಖಂಡರು ಕೇಜ್ರಿವಾಲ್ ಮುಖ ಹಾಗೂ ಬಟ್ಟೆ ಮೇಲೆ ಶಾಯಿ ಎಸೆದರು. ಈ ವೇಳೆ ಆಪ್ ಮುಖಂಡರಾದ ಸಂಜಯ್ ಸಿಂಗ್, ಸೋಮನಾಥ್ ಭಾರ್ತಿ, ಮನೀಷ್ ಸಿಸೋಡಿಯಾ ಮುಖ ಕೂಡ ಶಾಯಿಯಿಂದಾಗಿ ಕಪ್ಪಾಯಿತು.
ಜಸ್ವಂತ್: ಮತ್ತೆ ವಾಕ್ಸಮರ
ನವದೆಹಲಿ: ಜಸ್ವಂತ್ ಸಿಂಗ್ ಟಿಕೆಟ್ ವಿಚಾರ ಬಿಜೆಪಿಯೊಳಗೆ ಮತ್ತೊಂದು ಸುತ್ತಿನ ಆಂತರಿಕ ತಿಕ್ಕಾಟ ಸೃಷ್ಟಿಸಿದೆ. ಪಕ್ಷದಲ್ಲಿ ಮೋದಿ ವ್ಯಕ್ತಿಪೂಜೆ ನಡೆಯುತ್ತಿದೆ ಎನ್ನುವ ಜಸ್ವಂತ್ ಹೇಳಿಕೆಯನ್ನು ಅರುಣ್ ಜೇಟ್ಲಿ ತಿರಸ್ಕರಿಸಿದ್ದಾರೆ. ಇದೇ ವೇಳೆ, ಜಸ್ವಂತ್ ಟಿಕೆಟ್ ವಿಚಾರ ಚುನಾವಣಾ ಸಮಿತಿಯಲ್ಲಿ ಚರ್ಚೆಗೆ ಬರಲೇ ಇಲ್ಲ ಎನ್ನುವ ಸುಷ್ಮಾ ಹೇಳಿಕೆಯನ್ನು ಅಧ್ಯಕ್ಷ ರಾಜನಾಥ್ ಸಿಂಗ್ ತಿರಸ್ಕರಿಸಿದ್ದಾರೆ. ರಾಜಸ್ಥಾನದ ಎಲ್ಲ ಟಿಕೆಟ್ಗಳ ವಿಚಾರ ಚರ್ಚೆಗೆ ಬಂದಿದೆ ಎಂದಿದ್ದಾರೆ ರಾಜನಾಥ್.
ಕೈ ಪ್ರಣಾಳಿಕೆ ಇಂದು
ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಠಿಣ ಸವಾಲುಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ಬುಧವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ಪ್ರಧಾನಿ ಮನಮೋಹನ್ಸಿಂಗ್ ಹಾಗೂ ಇತರೆ ನಾಯಕರ ಸಮ್ಮುಖದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಆರೋಗ್ಯ ಹಕ್ಕು ಹಾಗೂ ಉದ್ಯೋಗಾವಕಾಶ ಪ್ರಣಾಳಿಕೆಯ ಮುಖ್ಯ ಅಂಶವಾಗಿದ್ದು, ಜತೆಗೆ ರಾಜಕೀಯದಲ್ಲಿ ಮಹಿಳಾ ಮೀಸಲಾತಿ, ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶ, ಕಪ್ಪುಹಣ ವಾಪಸಾತಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆಗಳ ಜಾರಿ ಸೇರಿದಂತೆ ಅನೇಕ ಜನಹಿತ ಕಾರ್ಯಗಳನ್ನು ಪ್ರಣಾಳಿಕೆಯು ಒಳಗೊಂಡಿರುವ ಸಾಧ್ಯತೆಯಿದೆ.
ಅಳಗಿರಿ ಉಚ್ಚಾಟನೆ
ಚೆನ್ನೈ: ಡಿಎಂಕೆಯ ಬಂಡಾಯ ನಾಯಕ ಎಂ.ಕೆ. ಅಳಗಿರಿ ಅವರನ್ನು ಮಂಗಳವಾರ ಪಕ್ಷದಿಂದ ಉಚ್ಚಾಟಿಸಲಾಗಿದೆ. ಅಳಗಿರಿಯನ್ನು ಉಚ್ಚಾಟಿಸುವ ನಿರ್ಧಾರವನ್ನು ತಂದೆ, ಪಕ್ಷದ ಅಧ್ಯಕ್ಷ ಎಂ. ಕರುಣಾನಿಧಿಯೇ ತೆಗೆದುಕೊಂಡಿದ್ದಾರೆ. ಕಿರಿಯ ಸಹೋದರ ಎಂ.ಕೆ. ಸ್ಟಾಲಿನ್ ವಿರುದ್ಧ ಬಂಡಾಯವೆದ್ದ ಹಿನ್ನೆಲೆಯಲ್ಲಿ ಅಳಗಿರಿ ಅವರನ್ನು ಜನವರಿಯಲ್ಲಿ ಡಿಎಂಕೆಯಿಂದ ಅಮಾನತು ಮಾಡಲಾಗಿತ್ತು. ಅಮಾನತು ಬಳಿಕವೂ ಪಕ್ಷದ ವಿರುದ್ಧ ಪದೇ ಪದೆ ಸಾರ್ವಜನಿಕವಾಗಿ ಮಾತನಾಡಿದ್ದು, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಿದ್ದು ಹಾಗೂ ನೋಟಿಸ್ಗೆ ಉತ್ತರ ನೀಡದ ಹಿನ್ನಲೆಯಲ್ಲಿ ಅಳಗಿರಿ ಅವರನ್ನು ಉಚ್ಚಾಟಿಸಲಾಗಿದೆ ಎಂದು ಕರುಣಾನಿಧಿ ಹೇಳಿದ್ದಾರೆ.
ಕಳಂಕಿತ ಚವಾಣ್ಗೆ ಟಿಕೆಟ್
ಭ್ರಷ್ಟಾಚಾರಿಗಳಿಗೆ ಟಿಕೆಟ್ ಕೊಡುವುದಿಲ್ಲ ಎಂದು ಹೇಳುತ್ತಿದ್ದ ಕಾಂಗ್ರೆಸ್ ಕಳಂಕಿತ ಮುಖಂಡ, ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ಗೆ ಟಿಕೆಟ್ ನೀಡಿದೆ. ಆದರ್ಶ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಚವಾಣ್ ನಾಂದೇಡ್ನಿಂದ ಸ್ಪರ್ಧಿಸಲಿದ್ದಾರೆ. ಇದೇ ವೇಳೆ, ಅನಾರೋಗ್ಯದ ನೆಪ ಹೇಳಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಕೇಂದ್ರ ಸಚಿವ ಮನೀಷ್ ತಿವಾರಿ ಬದಲಿಗೆ ಸಂಸದ ರಣ್ವೀತ್ ಸಿಂಗ್ ಬಿಟ್ಟು ಅವರಿಗೆ ಲೂಧಿಯಾನದಿಂದ ಟಿಕೆಟ್ ನೀಡಲಾಗಿದೆ.
2002ರ ಗುಜರಾತ್ ಗಲಭೆ ಬಗ್ಗೆ ನೋವಿದೆ. ಆದರೆ, ತಪ್ಪಿತಸ್ಥ ಮನೋಭಾವ ಇಲ್ಲ. ಗಮನಿಸಬೇಕಾದ ವಿಚಾರವೆಂದರೆ ನಾನು ತಪ್ಪಿತಸ್ಥ ಎಂದು ಇನ್ನೂ ಯಾವುದೇ ಕೋರ್ಟ್ ಸಾಬೀತುಪಡಿಸಿಲ್ಲ. ಮಾಧ್ಯಮಗಳು ಅವುಗಳ ಕೆಲಸ ಮಾಡುತ್ತಿರಲಿ. ಮಾಧ್ಯಮಗಳ ಜತೆ ಮುಖಾಮುಖಿಯಾಗಿ ನನ್ನ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ.
- ನರೇಂದ್ರ ಮೋದಿ
(ಬ್ರಿಟಿಷ್ ಲೇಖಕ ಆ್ಯಂಡಿ ಮರೀನೋ
ಬರೆದ ಮೋದಿ ಜೀವನಚರಿತ್ರೆಯಲ್ಲಿ)
ಎನ್ಡಿಎ ಅಂಗಪಕ್ಷಗಳಿಗೆ ನರೇಂದ್ರ ಮೋದಿ ಅಸ್ಪೃಶ್ಯ. ಮೋದಿಗೆ ದೇಶದ ಸಂಸದೀಯ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲ. ಅವರೊಬ್ಬ ನಿರಂಕುಶಾಧಿಕಾರಿ. ಹಾಗಾಗಿ ಅವರು ದೇಶದ ಪ್ರಧಾನಿಯಾಗಲು ಸಾಧ್ಯವೇ ಇಲ್ಲ. ನೋಡುತ್ತಿರಿ, ಒಂದು ದಿನ ದೇಶದ ಜನರೇ ಅವರನ್ನು ಮೂಲೆಗುಂಪು ಮಾಡಲಿದ್ದಾರೆ.
- ವೀರಪ್ಪ ಮೊಯ್ಲಿಕೇಂದ್ರ ಪೆಟ್ರೋಲಿಯಂ ಸಚಿವ