ಅನ್ಸಾರಿ ಈಗ ಮೋದಿ ಪ್ರತಿಸ್ಪರ್ಧಿ
ನವದೆಹಲಿ: ವಾರಾಣಸಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎಂದು ಗೊತ್ತಾಗದೆ ಕಾಂಗ್ರೆಸ್ ಗೊಂದಲದಲ್ಲಿದ್ದರೆ, ಈ ವ್ಯಕ್ತಿ ಮಾತ್ರ ನಾನು ಮೋದಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ರಾಜಾರೋಷವಾಗಿ ಘೋಷಿಸಿದ್ದಾರೆ. ಅವರ್ಯಾರು ಗೊತ್ತೇ? ಭೂಗತ ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ ವಿರುದ್ಧ ಕೇವಲ 17,087 ಮತಗಳಿಂದ ಸೋಲುಂಡಿದ್ದ ಅನ್ಸಾರಿ ಈಗ ಅದೇ ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಅವರಿಗೆ ಕ್ವಾಮಿ ಏಕತಾ ದಲ್ ಎಂಬ ಪಕ್ಷವು ಟಿಕೆಟ್ ನೀಡಿದೆ. ಬಿಜೆಪಿ ಶಾಸಕರೊಬ್ಬರ ಹತ್ಯೆ ಪ್ರಕರಣದಲ್ಲಿ ಸದ್ಯ ಆಗ್ರಾ ಜೈಲಿನಲ್ಲಿರುವ ಅನ್ಸಾರಿ, 'ವಾರಾಣಸಿಯ ಜನತೆ ನನ್ನೊಂದಿಗಿದ್ದಾರೆ. ಚುನಾವಣೆ ನಡೆಯಲಿ, ಏನಾಗುತ್ತೋ ನೋಡೋಣ' ಎಂದಿದ್ದಾರೆ.