ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಧಾರ್; ಸಂಸತ್ ಆಶೋತ್ತರಗಳಿಗೆ ಅಪಚಾರ

ಹಿಂಬಾಗಿಲ ಮೂಲಕ ಆಧಾರ್ ಯೋಜನೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ಸಂಸತ್‌ನ...

Mainashree
Updated On : 26 Mar 2014, 10:19 am

ಕ.ಪ್ರ.ವಾರ್ತೆ |ಬೆಂಗಳೂರು | ಮಾ.26
ಹಿಂಬಾಗಿಲ ಮೂಲಕ ಆಧಾರ್ ಯೋಜನೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ಸಂಸತ್‌ನ ಆಶೋತ್ತರಗಳಿಗೆ ಅಪಚಾರವೆಸಗಿದೆ ಎಂದು ಮಾಜಿ ರಾಜ್ಯಪಾಲ ನ್ಯಾ.ಎಂ. ರಾಮಾ ಜೋಯಿಸ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಆಧಾರ್ ವಿಚಾರ ಪ್ರಸ್ತಾಪಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ, ಪ್ರಧಾನಿಗೆ ಪತ್ರ ಬರೆದರೆ 'ಸ್ವೀಕೃತವಾಗಿದೆ' ಎಂದು ಉತ್ತರಿಸುತ್ತಾರೆ. ಎಲ್ಲವನ್ನು ಮುಚ್ಚಿಟ್ಟುಕೊಂಡು ದೇಶದ ಜನರ ತೆರಿಗೆ ಹಣದ 50 ಸಾವಿರ ಕೋಟಿ ಖರ್ಚು ಮಾಡಿ ಆಧಾರ್ ಯೋಜನೆ ಜಾರಿಗೆ ಯುಪಿಎ ಸರ್ಕಾರ ಪ್ರಯತ್ನಿಸಿದೆ. ಕಾನೂನು ಮಾನ್ಯತೆಯಿಲ್ಲದ ಇಂತಹ ಯೋಜನೆಗಳ ಅನುಷ್ಠಾನಕ್ಕೆ ಕಾರಣವಾದ ವ್ಯಕ್ತಿ ಹಾಗೂ ಪಕ್ಷದಿಂದ ಈ ಹಣವನ್ನು ವಸೂಲಿ ಮಾಡಬೇಕು ಎಂದು ಅವರು 'ಭ್ರಷ್ಟಾಚಾರದ ವಿರುದ್ಧ ಯುವಜನತೆ' ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಬುಧವಾರ ಅಭಿಪ್ರಾಯಪಟ್ಟರು.
ದೇಶದ ಜನತೆಗೆ ಗುರುತಿನ ಚೀಟಿ ನೀಡುವುದಾಗಿ ಹೇಳಿಕೊಂಡು 2009ರಲ್ಲಿ ವಿಶಿಷ್ಟ ಗುರುತಿನ ಪ್ರಾಧಿಕಾರ ರಚಿಸಲಾಯಿತು. ಆದರೆ 2011ರಲ್ಲಿ ಈಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಂಡಿಸಿದ ಬಜೆಟ್‌ನಲ್ಲಿ 1900 ಕೋಟಿ ಹಣ ಮೀಸಲಿಡಲಾಯಿತು. ಬಜೆಟ್ ಮೇಲಿನ ಚರ್ಚೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಕಾನೂನು ಮಾನ್ಯತೆಯಿಲ್ಲದ ಯೋಜನೆಗೆ ಹೇಗೆ ಅಷ್ಟೊಂದು ಪ್ರಮಾಣದ ಹಣ ಮೀಸಲಿಟ್ಟಿದ್ದೀರಿ ಎಂದು ಪ್ರಶ್ನಿಸಿದರೆ, ಸರ್ಕಾರ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ. ಆದರೆ ಸಭಾಧ್ಯಕ್ಷರ ವಿಶೇಷ ಅನುಮತಿ ಮೇರೆಗೆ ನಂತರದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದಾಗ ಅಟಾರ್ನಿ ಜನರಲ್ ಅವರ ಅನುಮತಿ ಪಡೆಯಲಾಗಿದೆ ಎಂಬ ಹಾರಿಕೆ ಉತ್ತರ ನೀಡಿದರು ಎಂದು ಜೋಯಿಸ್ ಹೇಳಿದರು.
ಪ್ರಧಾನಿಗೆ ಪತ್ರ: ಇದಕ್ಕೂ ಮುಂಚೆ 2011ರ ಜನವರಿಯಲ್ಲಿ ಯೋಜನೆ ಕುರಿತು ವಿವರಣೆ ನೀಡುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದೆ. ಪತ್ರ ಸ್ವೀಕೃತವಾಗಿದೆ ಎನ್ನುವ ಬೇಜವಾಬ್ದಾರಿ ಉತ್ತರಕ್ಕಿಂತ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಕೇಂದ್ರ ಸರ್ಕಾರವು ಯಾವುದೇ ಮಾಹಿತಿ ವಿನಿಮಯ ಅಥವಾ ಚರ್ಚೆಗೆ ಸಿದ್ಧವಿಲ್ಲ ಎನ್ನುವುದು ತಿಳಿಯಿತು. ಇದಾದ ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು ಎಂದು ಅವರು ತಿಳಿಸಿದರು.
ವಿಶೇಷ ಆದೇಶದ ಮೂಲಕ ವಿಶಿಷ್ಟ ಗುರುತಿನ ಪ್ರಾಧಿಕಾರ ರಚಿಸುವ ಮುಂಚೆ ಈ ಯೋಜನೆ ಕುರಿತ ಕಾಯಿದೆಯ ಕರಡು ಪ್ರತಿ ರಾಜ್ಯಸಭೆ ಮುಂದೆ ಬಂದಿತ್ತು. ಆದರೆ 33 ಸಂಸದರ ಸದನ ಸಮಿತಿಯು ಈ ಕಾಯಿದೆಯನ್ನು ತಿರಸ್ಕರಿಸಿತ್ತು. ಈ ಘಟನೆಯ ಬಳಿಕ 3 ತಿಂಗಳುಗಳ ಕಾಲ ಆಧಾರ್ ನೋಂದಣಿ ನಿಲ್ಲಿಸಲಾಗಿತ್ತು. ಆದರೆ ಜನರು ಮರೆತ ಬಳಿಕ ಮತ್ತೆ ಪ್ರಾರಂಭಿಸಲಾಯಿತು.
ದೇಶದ 120 ಕೋಟಿ ಜನರು ಹಾಗೂ 50 ಸಾವಿರ ಕೋಟಿಗೆ ಸಂಬಂಧಿಸಿದ ವಿಚಾರಕ್ಕೆ ಸಂಸತ್ತಿನ ಅನುಮತಿಯಿಲ್ಲದೆ ಹೇಗೆ ಪ್ರಾರಂಭಿಸಲು ಸಾಧ್ಯ? ಯೋಜನೆಯನ್ನು ಪರಾಮರ್ಶಿಸದೆ ಜಾರಿ ಮಾಡಲು ಇರುವ ತರಾತುರಿಯೇನು ಎಂದು ರಾಮಾ ಜೋಯಿಸ್ ಪ್ರಶ್ನಿಸಿದರು.
ಕಾರ್ಗಿಲ್ ಯುದ್ಧದ ಬಳಿಕ ದೇಶದ ಜನರಿಗೆ ಗುರುತಿನ ಚೀಟಿ ನೀಡಬೇಕು ಎನ್ನುವುದು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಚರ್ಚೆಗೆ ಬಂದಿತ್ತು. ಆದರೆ ಆಧಾರ್ ಹೆಸರಿನಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಸಂವಿಧಾನಕ್ಕೆ ವಿರುದ್ಧವಾಗಿ ಬಯೋವುಟ್ರಿಕ್ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ರಾಮಾ ಜೋಯಿಸ್ ಆರೋಪಿಸಿದರು.

ಅಕ್ರಮ ವಲಸಿಗರಿಗೆ ದೇಶದ ಗುರುತು ನೀಡಿದರೆ ಏನಾಗುತ್ತದೆ ಎನ್ನುವುದಕ್ಕೆ ಆಸ್ಸಾಂ ಉತ್ತಮ ಉದಾಹರಣೆ. ದೇಶದ ಭದ್ರತೆ ಹಾಗೂ ಭಾರತೀಯರ ಸ್ವಾತಂತ್ರ್ಯವನ್ನು ಕಡೆಗಣಿಸಿ ಈ ಯೋಜನೆ ಜಾರಿಗೆ ತರಲಾಗಿದೆ. ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ಒಬ್ಬ ಅಕ್ರಮ ವಲಸಿಗನಿಂದ ದುಡ್ಡು ಪಡೆದು ಆಧಾರ್ ಸಂಖ್ಯೆ ನೀಡಿ ಭವಿಷ್ಯದಲ್ಲಿ ಉಳಿದ ಎಲ್ಲ ಚೀಟಿಗಳನ್ನು ಪಡೆಯುವಂತೆ ಸೂಚಿಸುವುದು ಆಡಳಿತ ಪಕ್ಷವು ಮತಗಳಿಗಾಗಿ ನಡೆಸುತ್ತಿರುವ ಪ್ರಯತ್ನ ಎನ್ನುವುದು ತಿಳಿಯುತ್ತದೆ.
-ಉಪಮನ್ಯು ಹಜಾರಿಕಾ, ಸುಪ್ರೀಂ ಕೋರ್ಟ್ ನ್ಯಾಯವಾದಿ

ಕಾನೂನು ಮಾನ್ಯತೆಯಿಲ್ಲದ ಆಧಾರ್ ಗುರುತಿನ ಸಂಖ್ಯೆಗೆ ನೋಂದಣಿ ಮಾಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇವತ್ತಿನವರೆಗೂ ನಾನು ನೋಂದಣಿ ಮಾಡಿಸಿಲ್ಲ. ಆಧಾರವೇ ಇಲ್ಲದ ಆಧಾರ್ ಯೋಜನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸುವ ಸಾಧ್ಯತೆ ಹೆಚ್ಚಿದೆ.
-ನ್ಯಾ.ಎಂ.ರಾಮಾ ಜೋಯಿಸ್, ಮಾಜಿ ರಾಜ್ಯಪಾಲ

ಬಯೋವುಟ್ರಿಕ್ ಗೌಪ್ಯತೆ ಹೇಗೆ ನಂಬುವುದು?
ದೇಶಾದ್ಯಂತ ಆಧಾರ್ ಸಂಸ್ಥೆಯೇ ಅಧಿಕೃತವಾಗಿ ನೋಂದಣಿ ಮಾಡುತ್ತಿಲ್ಲ. ನಾನಾ ಖಾಸಗಿ ಕಂಪನಿಗಳಿಗೆ ನೋಂದಣಿ ಮಾಡಲು ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆಗಳ ಅರ್ಹತೆ ಬಗ್ಗೆ ಪರಿಶೀಲನೆ ಮಾಡಲಾಗಿಲ್ಲ. ಭಾರತೀಯರು ನೀಡಿರುವ ಎಲ್ಲ ಮಾಹಿತಿಗಳನ್ನು ಖಾಸಗಿ ಸಂಸ್ಥೆಗಳು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎನ್ನುವುದನ್ನು ಹೇಗೆ ನಂಬುವುದು. ಯೋಜನೆಗೆ ಕಾನೂನು ಪರಿಧಿಯಿದ್ದರಾದರೂ ಸಮಸ್ಯೆಯಿರಲಿಲ್ಲ.
ಕಾಯಿದೆಗೆ ಸಂಸತ್ತಿನಿಂದ ಅನುಮತಿ ಪಡೆಯದೆ ಹಿಂಬಾಗಿಲಿನಿಂದ ಪ್ರವೇಶ ಪಡೆದು, ಯೋಜನೆಯ ಲಾಭದ ಕುರಿತಂತೆಯೂ ಸ್ಪಷ್ಟನೆ ನೀಡದಿದ್ದರೆ ಜನರಿಗೆ ಆಧಾರ್ ಅಗತ್ಯದ ಬಗ್ಗೆ ಗೊಂದಲ ಮೂಡುತ್ತದೆ. ಇದಲ್ಲದೆ ಆಧಾರ್‌ನಿಂದ ದೇಶದ ಜನರಿಗೆ ಗುರುತು ಬರುತ್ತದೆ ಎನ್ನುವುದು ಸುಳ್ಳು ಎನ್ನುವುದನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ದಾಖಲೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹಿರಿಯ ಅಂಕಣಕಾರ ಸ್ವಪನ್ ದಾಸ್‌ಗುಪ್ತ ಹೇಳಿದರು. ಯಾವುದೇ ದಾಖಲೆಗಳಿಲ್ಲದೆ ಆಧಾರ್ ನೋಂದಣಿ ಮಾಡಿಸಬಹುದು ಎನ್ನುವುದನ್ನು ಕುಟುಕು ಕಾರ್ಯಾಚರಣೆ ಸಾಬೀತುಪಡಿಸಿದೆ. ಭಾರತದಲ್ಲಿ ನುಸುಳಿರುವ ಉಗ್ರನು ಆಧಾರ್ ಗುರುತಿನ ಸಂಖ್ಯೆ ಪಡೆಯಬಹುದು. ಮುಂದೊಂದು ದಿನ ಒಬ್ಬ ವ್ಯಕ್ತಿ ಬಂದು ನಾನೇ ರಜನಿಕಾಂತ್ ಎಂದು ಹೇಳಿದರೆ ನಂಬಬೇಕಾದ ಪರಿಸ್ಥಿತಿಯಿರುತ್ತದೆ. ಯಾವುದೋ ವ್ಯಕ್ತಿ ಬಯೋವುಟ್ರಿಕ್ ಡಾಟಾವನ್ನು ಮತ್ತೊಬ್ಬನ ಅರ್ಜಿಗೆ ಸೇರಿಸಿದರೆ ಇಂತಹ ಪರಿಸ್ಥಿತಿ ಎದುರಾಗಬಹುದು. ಆಧಾರ್ ಅನುಷ್ಠಾನಕ್ಕೆ ಮೊದಲು ಇಂತಹ ಅಪಾಯಗಳ ಬಗ್ಗೆ ಸಾರ್ವಜನಿಕ ಚರ್ಚೆ ನಡೆಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಹಾಗೂ ವಿಶಿಷ್ಟ ಗುರುತಿನ ಪ್ರಾಧಿಕಾರವು ಚರ್ಚೆಯಿಂದ ಹಿಂದೆ ಸರಿಯುತ್ತಿದೆ ಎಂದು ಅವರು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement