ಕಪ್ಪುಹಣ: ಸರ್ಕಾರಕ್ಕೆ ಝಾಡಿಸಿದ ಸುಪ್ರೀಂ
ವಿದೇಶಗಳಲ್ಲಿ ಇಡಲಾಗಿರುವ ಕಪ್ಪುಹಣ ವಾಪಸ್ ತರಬೇಕೆಂಬ ಕನಿಷ್ಠ ಯೋಚನೆಯನ್ನೂಈ 65...
ನವದೆಹಲಿ: ವಿದೇಶಗಳಲ್ಲಿ ಇಡಲಾಗಿರುವ ಕಪ್ಪುಹಣ ವಾಪಸ್ ತರಬೇಕೆಂಬ ಕನಿಷ್ಠ ಯೋಚನೆಯನ್ನೂಈ 65 ವರ್ಷಗಳಲ್ಲಿ ಯಾರೂ ಮಾಡಿಲ್ಲ. ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಇದನ್ನು ಸರ್ಕಾರ ಪ್ರಾಮಾಣಿಕವಾಗಿ ಮಾಡಿದ್ದರೆ ದೇಶಕ್ಕೆಷ್ಟು ಲಾಭವಾಗುತ್ತಿತ್ತು ಗೊತ್ತೇ?
ಇದು ಸುಪ್ರೀಂ ಕೋರ್ಟ್ ಬುಧವಾರ, ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಪರಿ. ಕಪ್ಪುಹಣದ ಬಗ್ಗೆ ತನಿಖೆಗೆ ವಿಶೇಷ ತನಿಖಾತಂಡ(ಎಸ್ಐಟಿ) ನೇಮಕ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನೂ ಸುಪ್ರೀಂ ತಿರಸ್ಕರಿಸಿತು. ತೆರಿಗೆ ಉಳಿಯುತ್ತಿತ್ತು: ಇದೇ ವೇಳೆ, ಸರ್ಕಾರದ ವೈಫಲ್ಯದಿಂದ ದೇಶಕ್ಕೇ ನಷ್ಟವಾಯಿತು ಎಂದು ನ್ಯಾ. ಎಚ್.ಎಲ್.ದತ್ತು ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿತು. ಕಪ್ಪುಹಣವನ್ನು ವಾಪಸ್ ತಂದಿದ್ದರೆ ತಲಾವಾರು ಆದಾಯ ಹೆಚ್ಚುತ್ತಿತ್ತು, ಜನರು ಪಾವತಿಸುತ್ತಿರುವ ಆದಾಯ ತೆರಿಗೆಯ ದರ ಇಳಿಯುತ್ತಿತ್ತು, ದೇಶದ ಆರ್ಥಿಕತೆಯು ಪ್ರಗತಿ ಕಾಣುತ್ತಿತ್ತು ಎಂದೂ ನ್ಯಾಯಪೀಠ ಹೇಳಿತು. ಆದರೆ ಸರ್ಕಾರ ಕಪ್ಪುಹಣ ವಾಪಸ್ ತರುವ ಪ್ರಯತ್ನವನ್ನೂ ಮಾಡಿಲ್ಲ, ಅಲ್ಲಿ ಹಣ ಇಟ್ಟವರ ಹೆಸರುಗಳನ್ನೂ ಬಹಿರಂಗಪಡಿಸಿಲ್ಲ ಎನ್ನುವ ಮೂಲಕ ಕೋರ್ಟ್ ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.