ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅದೇ ರಾಗಾ
ಮತ್ತೆ ಅಧಿಕಾರ ಗ್ರಹಿಸುವ ಆಸೆ ಇಟ್ಟುಕೊಂಡಿರುವ ಕಾಂಗ್ರೆಸ್ ಬಡತನ ನಿರ್ಮೂಲನೆಗಾಗಿ...
- ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಮತ್ತೆ ಅಧಿಕಾರ ಗ್ರಹಿಸುವ ಆಸೆ ಇಟ್ಟುಕೊಂಡಿರುವ ಕಾಂಗ್ರೆಸ್ ಬಡತನ ನಿರ್ಮೂಲನೆಗಾಗಿ ಆರೋಗ್ಯ ಹಕ್ಕು, ವಸತಿ ಹಕ್ಕು, ಪಿಂಚಣಿ ಯೋಜನೆ ಸೇರಿದಂತೆ ಆರು ಅಂಶಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಇದರ ಜತೆಗೆ, ಖಾಸಗಿ ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ ಜನಾಂಗದವರಿಗೆ ಮೀಸಲು ಕಲ್ಪಿಸುವ ವಿವಾದಾತ್ಮಕ ವಿಚಾರಕ್ಕೂ ಪ್ರಣಾಳಿಕೆಯಲ್ಲಿ ಜಾಗ ನೀಡಿದೆ. ಶೇ.8ರಷ್ಟು ಸುಸ್ಥಿರ ಆರ್ಥಿಕ ಅಭಿವೃದ್ಧಿ, ಸರಕು ಮತ್ತು ಸೇವೆ ತೆರಿಗೆ ಮತ್ತು ನೇರ ತೆರಿಗೆ ವ್ಯವಸ್ಥೆ ಜಾರಿ, ನೂರು ದಶಲಕ್ಷ ಉದ್ಯೋಗ ಸೃಷ್ಟಿ, ಜತೆಗೆ ಆರ್ಥಿಕ ಅಭಿವೃದ್ಧಿಗೆ ಅತ್ಯಗತ್ಯವಾಗಿರುವ ವಿದೇಶಿ ಬಂಡವಾಳ ಹೂಡಿಕೆಗೆ ಸಂಪೂರ್ಣ ಉತ್ತೇಜನ ನೀಡುವುದಾಗಿ ಹೇಳಿದೆ.
ರಾಹುಲ್ ಗಾಂಧಿ ಐದು ತಿಂಗಳ ಕಾಲ ಸಮಾಜದ ವಿವಿಧ ಸ್ತರಗಳ ಜನರೊಂದಿಗೆ ನಡೆಸಿದ ಸಂವಾದ ಮತ್ತು ಕಾಂಗ್ರೆಸ್ನ ಹಿರಿತಲೆಗಳ ಮತಲಾಭ ತಂತ್ರಗಳನ್ನು ಸಮ್ಮಿಲನಗೊಳಿಸಿ, ಎ.ಕೆ. ಆ್ಯಂಟನಿ ಸಮಿತಿ ಸಿದ್ಧಪಡಿಸಿರುವ ಕಾಂಗ್ರೆಸ್ನ ಪ್ರಣಾಳಿಕೆಯ ಮುಖ್ಯ ಗುರಿ ಸರ್ವಾಂಗೀಣ ಅಭಿವೃದ್ಧಿ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು, ಮೀಸಲಾತಿ ವಂಚಿತ ಸಮುದಾಯ ಗುರುತಿಸಿ ಮೀಸಲು ವ್ಯಾಪ್ತಿಗೆ ತರುವ ಭರವಸೆಯನ್ನೂ ನೀಡಲಾಗಿದೆ. ಆ ಮೂಲಕ ತಮ್ಮ ಮತಬ್ಯಾಂಕ್ನಲ್ಲಿರುವ ಠೇವಣಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರ ಜತೆಗೆ ಬಡ್ಡಿಯನ್ನು ಗಳಿಸುವ ಪ್ರಯತ್ನ ಮಾಡಲಾಗಿದೆ.ಶೇ.50ರಷ್ಟಿರುವ ಮಹಿಳಾ ಮತದಾರರನ್ನು ಸಂತುಷ್ಠಗೊಳಿಸಲು ಅಧಿಕಾರಕ್ಕೆ ಬಂದರೆ ಆದ್ಯತೆ ಮೇಲೆ ಮಹಿಳಾ ಮೀಸಲು ಮಸೂದೆ ಜಾರಿ ಮಾಡುವುದಾಗಿಯೂ ಮತ್ತೆ ಘೋಷಿಸಿದೆ.
ಬುಧವಾರ ಪ್ರಣಾಳಿಕೆ ಬಿಡುಗಡೆ ಮಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರು, ಯುಪಿಎ ಸರ್ಕಾರ ಎರಡು ಅವಧಿಯಲ್ಲೂ ಅತ್ಯುತ್ತಮ ಸಾಧನೆ ಮಾಡಿದೆ ಎಂದರು. ಕಳೆದ ಚುನಾವಣಾ ಪ್ರಮಾಣಳಿಕೆಯಲ್ಲಿ ಘೋಷಿಸಿದ್ದ ಶೇ.90 ರಷ್ಟು ಯೋಜನೆಗಳನ್ನು ಯುಪಿಎ ಸರ್ಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ಸಮರ್ಥಿಸಿಕೊಂಡರು
ನಾಲ್ಕು ಕೋಣೆಗಳ ಮಧ್ಯೆ ಸಿದ್ಧಪಡಿಸಿದ ಪ್ರಣಾಳಿಕೆಯಲ್ಲ. ಇದು ಸಾರ್ವಜನಿಕ ಪ್ರಣಾಳಿಕೆ. ಎಲ್ಲ ಜನರ ಅಭಿಪ್ರಾಯದ ಆಧಾರದ ಮೇಲೆ ಈ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ.
- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ಕಾಂಗ್ರೆಸ್ ಸಿದ್ಧಪಡಿಸಿರುವ ಪ್ರಣಾಳಿಕೆ ಮೋದಿಯ ಐಡಿಯಾಗಳನ್ನು ಕದ್ದಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಮಧ್ಯಮ ವರ್ಗದ ಓಲೈಕೆ ಮತ್ತು ಕೈಗಾರಿಕೆಗಳು ಹಾಗೂ ವಸತಿ ಕುರಿತಂತೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಇವೆಲ್ಲಾ ನಮ್ಮ ಐಡಿಯಾಗಳೇ ಎಂಬುದು ಬಿಜೆಪಿಯವರ ಆರೋಪ.
ಪ್ರಣಾಳಿಕೆ ಮುಖ್ಯಾಂಶಗಳು
ಕಾರ್ಮಿಕರ ಸುರಕ್ಷತೆ
ಕಾರ್ಮಿಕರಿಗೆ ವಿಮೆ ಮತ್ತು ನಿವೃತ್ತಿ ವೇತನ. ವಲಸಿಗ ಕಾರ್ಮಿಕರೆಲ್ಲರಿಗೂ ವರ್ಷದೊಳಗೆ ಆಧಾರ್ ಯೋಜನೆ, ಅಸಂಘಟಿತ ಕಾರ್ಮಿಕರೆಲ್ಲರಿಗೂ ಸಾಮಾಜಿಕ ಸುರಕ್ಷತೆ.
ಉದ್ಯೋಗ, ಮೀಸಲು
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಸಂರಕ್ಷಣೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನಿರುದ್ಯೋಗಿಗಳಿಗೆ ಉತ್ತೇಜನ ಅನುದಾನ, ಮೀಸಲು ವಂಚಿತ ಸಮುದಾಯ ಗುರುತಿಸಲು ಹೊಸ ಆಯೋಗ ರಚನೆ.
ಮಹಿಳಾ ಸಬಲತೆ, ಮಕ್ಕಳ ಸಂರಕ್ಷಣೆ
ಆದ್ಯತೆ ಮೇಲೆ ಮಹಿಳಾ ಮೀಸಲಾತಿ ಮಸೂದೆ ಜಾರಿ, ಬಾಲ ಕಾರ್ಮಿಕ ಪಿಡುಗು ನಿವಾರಣೆ, ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆ. ಪ್ರತಿಯೊಂದು ಆಸ್ಪತ್ರೆಗಳಲ್ಲಿ ಸರ್ವ ಸಮಸ್ಯೆ ನಿವಾರಣಾ ಕೇಂದ್ರ, ಪೊಲೀಸ್ ಠಾಣೆಗಳಲ್ಲಿ ಶೇ.25ರಷ್ಟು ಮಹಿಳೆಯರ ನೇಮಕ.
ಅಲ್ಪಸಂಖ್ಯಾತರ ಸಂರಕ್ಷಣೆ
ಮತೀಯ ಮತ್ತು ದುರುದ್ದೇಶ ಪೂರಿತ ಹಿಂಸೆ ನಿಯಂತ್ರಣ ಕಾಯ್ದೆ ಜಾರಿ, ಮೌಲಾನ ಆಜಾದ್ ಶಿಕ್ಷಣ ಅನುದಾನ ಮಾದರಿಯಲ್ಲಿ ಉದ್ಯಮಶೀಲರಿಗಾಗಿ ಕಾಪುನಿಧಿ ಸ್ಥಾಪನೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು.
ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಪರಿಹಾರ
ವೃದ್ಧರು, ನಿರ್ಗತಿಕರು, ವಿಧವೆಯರಿಗೆ ಪಿಂಚಣಿ ಯೋಜನೆ
125ಕ್ಕಿಂತ ಹೆಚ್ಚು ಜನರಿರುವ ವಸತಿ ಪ್ರದೇಶಕ್ಕೆ ರಸ್ತೆ.
ಪ್ರತಿ ಗ್ರಾಮೀಣ ವಸತಿ ಪ್ರದೇಶದಲ್ಲಿ ಕುಡಿಯುವ ನೀರು.
ಗ್ರಾಮ ಪಂಚಾಯತ್ಗನ ಅನುದಾನ ಹೆಚ್ಚಳ.
ಕೃಷಿ ಯಾಂತ್ರೀಕರಣ, ರಫ್ತಿಗೆ ಉತ್ತೇಜನ, ಖಾಸಗಿ ಸಾರ್ವಜನಿಕ ಸಹಭಾಗಿತ್ವಕ್ಕೆ ಒತ್ತು, ಬೆಳೆ ವಿಮೆ ವಿಸ್ತರಣೆ, ರಿಯಾಯ್ತಿ ಬಡ್ಡಿದರದ ಸಾಲ ಪ್ರಮಾಣ 5 ಲಕ್ಷಕ್ಕೆ ಹೆಚ್ಚಳ.
ಕೈಗಾರಿಕಾ ಬೆಳವಣಿಗೆಗಾಗಿ ರಾಷ್ಟ್ರೀಯ ಉತ್ಪಾದನಾ ನೀತಿ, 2022ರ ವೇಳೆ ಉತ್ಪಾದನಾ ವಲಯದ ಕೊಡುಗೆ ಜಿಡಿಪಿಯ ಶೇ.25ರಷ್ಟಕ್ಕೆ ಹೆಚ್ಚಿಸುವ ಗುರಿ.
ಉದ್ಯೋಗಾಧಾರಿತ ಕೈಗಾರಿಕೆಗಳಿಗೆ ಪ್ರೋತ್ಸಾಹ, ಹೂಡಿಕೆದಾರರಿಗೆ ಇ-ಬಿಜ್ ಪ್ರಾಜೆಕ್ಟ್ ಎಂಬ ಏಕಗವಾಕ್ಷಿ ವೇದಿಕೆ.
ಮೂಲ ಸೌಲಭ್ಯಕ್ಕೆ 60 ಲಕ್ಷ ಕೋಟಿ ವಿನಿಯೋಗ
ದಶಲಕ್ಷ ಜನ ಮೀರಿದ ಎಲ್ಲ ನಗರಕ್ಕೂ ಹೈಸ್ಪೀಡ್ ರೈಲು .
ನಗರಗಳ ಅಭಿವೃದ್ಧಿಗೆ ಹೆಚ್ಚು ಅನುದಾನ, ನಗರಾಡಳಿತಕ್ಕೆ ಹೆಚ್ಚು ಅಧಿಕಾರ, ಪರಿಸರಕ್ಕಾಗಿ ರಾಷ್ಟ್ರೀಯ ಹಸಿರು ಖಾತೆ, ಅಸಾಂಪ್ರದಾಯಿಕ ಶಕ್ತಿಮೂಲಗಳಿಗೆ ಉತ್ತೇಜನ.
ಸರ್ಕಾರದ ವಿವಿಧ ಸಂಸ್ಥೆಗಳಿಗೆ ಭ್ರಷ್ಚಾಚಾರ ನಿಯಂತ್ರಣ ಕಾಯ್ದೆ ಮೂಲಕ ಹೆಚ್ಚಿನ ಅಧಿಕಾರ, ಆಡಳಿತ ಸುಧಾರಣೆ, ಆಂತರಿಕ ಭದ್ರತೆಗೆ ಒತ್ತು. ಮಾಜಿ ಸೈನಿಕರ ಕಲ್ಯಾಣಕ್ಕೆ ಆದ್ಯತೆ.
ಭಯೋತ್ಪಾದನೆ ತಡೆಗಟ್ಟಲು ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಮಾಹಿತಿ ವಿನಿಮಯ.
ಕೆಲವರಿಗೆ ಪ್ರಣಾಳಿಕೆ ಅನ್ನುವುದು ಕೇವಲ ಮತವನ್ನು ಬಾಚಿಕೊಳ್ಳುವ ಸಾಧನ. ಆದರೆ, ಕಾಂಗ್ರೆಸ್ ಹಾಗೆ ಯೋಚಿಸುವುದಿಲ್ಲ. ನಾವು ಎಲ್ಲರಿಗೂ ಸೇರಿದ ಜಾತ್ಯತೀತ ಭಾರತಕ್ಕಾಗಿ ಹೋರಾಟ ನಡೆಸುತ್ತೇವೆ.
- ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
ಎಲ್ಲರನ್ನೂ ಒಳಗೊಳ್ಳುವಂಥ ಬೆಳವಣಿಗೆ ಆಗಲೇಬೇಕಾದ ಕಾರ್ಯ. ಆದರೆ, ವಿವಿಧ ಹಕ್ಕುಗಳನ್ನು ದೇಶದ ಆರ್ಥಿಕ ಆರೋಗ್ಯವನ್ನೇ ಮೂಲಾಧಾರವಾಗಿಟ್ಟುಕೊಂಡು ನೀಡಬೇಕು.
- ಸಿದ್ಧಾರ್ಥ ಬಿರ್ಲಾ, ಎಫ್ಐಸಿಸಿಐ ಅಧ್ಯಕ್ಷ
ಕಾಂಗ್ರೆಸ್ನದು ಪ್ರಣಾಳಿಕೆಯಲ್ಲ. ಅದೊಂದು ವಂಚನೆಯ ದಾಖಲೆಪತ್ರ. ಈ ಮೂಲಕ ದೇಶದ ಜನರಿಗೆ ಅವಮಾನ ಮಾಡಲಾಗುತ್ತಿದೆ. ಅಧಿಕಾರಾವಧಿ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಜನರಿಗೆ ಸುಳ್ಳು ಭರವಸೆಗಳ ಆಮಿಷ ನೀಡುತ್ತಿದೆ.
-ರವಿಶಂಕರ್ ಪ್ರಸಾದ್, ಬಿಜೆಪಿ ವಕ್ತಾರ