ಸೌಜನ್ಯಾ ಹತ್ಯಾಚಾರ: ಮಾಹಿತಿ ಸಂಗ್ರಹಿಸಿದ ಸಿಬಿಐ ತಂಡ
ಬೆಳ್ತಂಗಡಿ: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗಾಗಿ ಬೆಳ್ತಂಗಡಿಗೆ ಆಗಮಿಸಿದ ಸಿಬಿಐ ಎಸ್ಪಿ ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದ ತಂಡ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬೀಡುಬಿಟ್ಟಿದ್ದ ತಂಡ, ಸೌಜನ್ಯಾ ತಂದೆ ಚಂದಪ್ಪ ಗೌಡ, ತಾಯಿ ಕುಸುಮಾವತಿ, ಅಜ್ಜ ಬಾಬು ಗೌಡ, ಮಾವ ವಿಠಲ, ಜಗದೀಶ ಗೌಡ ಅವರನ್ನು ಕರೆಸಿ ಮಾಹಿತಿ ಪಡೆದುಕೊಂಡಿದೆ. ಪ್ರಕರಣ ನಡೆದ ಸಂದರ್ಭ ಕರ್ತವ್ಯದಲ್ಲಿದ್ದ ಎಸ್‌ಐ ಆಗಮಿಸಿದ್ದರಾದರೂ ಅವರ ಬಳಿ ಮಾಹಿತಿ ಸಂಗ್ರಹಿಸಲಿಲ್ಲ ಎನ್ನಲಾಗಿದೆ. ಕೆಲವು ಅನುಮಾನ ವ್ಯಕ್ತಪಡಿಸಿದ ಸೌಜನ್ಯಾ ಮನೆಯವರು ತಮ್ಮ ಬಳಿ ಇರುವ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಿಬಿಐ ತಂಡದ ಸದಸ್ಯರು ಬಳಿಕ ಸೌಜನ್ಯಾ ಮೃತದೇಹ ಪತ್ತೆಯಾದ ಸ್ಥಳ ಮತ್ತು ಪಾಂಗಳದ ಸೌಜನ್ಯಾ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೆನ್ನೈನಿಂದ ಆಗಮಿಸಿದ ವಿಶೇಷ ತಂಡದಲ್ಲಿ ರಾಜ್ಯದ ಅಧಿಕಾರಿಗಳೂ ಕರ್ತವ್ಯ ನಿರ್ವಹಿಸುತ್ತಿದ್ದು, ಸುಮಾರು 8 ಮಂದಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಾಜ್ಯದ ಸಿಬಿಐ ಎಸ್ಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಸಿಬಿಐ ವಿಶೇಷ ತನಿಖಾ ದಳದ ಮುಖ್ಯಸ್ಥ ಡಿಐಜಿ ಸಂಗತಿರ್, ಎಸ್ಪಿ ಶರವಣನ್, ಡಿವೈಎಸ್ಪಿ ರಾಜಗೋಪಾಲನ್ ಹಾಗೂ ಇನ್ನೊಬ್ಬರು ಡಿವೈಎಸ್ಪಿ ತನಿಖಾ ತಂಡದಲ್ಲಿದ್ದಾರೆ.