ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇಂದೇ ಇತಿಶ್ರೀ ಸಂಭವ, ಬಿಸಿಸಿಐ ಅಧ್ಯಕ್ಷರ ವಿರುದ್ಧ ಸುಪ್ರೀಂ ಖಡಕ್ ನಿಲುವು

ಸುಪ್ರೀಂಕೋರ್ಟ್ ಅಂಗಳದಲ್ಲಿ ಸಂಪೂರ್ಣ ಬೆತ್ತಲಾದ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ವಿಚಾರದಲ್ಲಿ....

Rashmi Kasaragodu
Updated On : 28 Mar 2014, 11:02 am

ನವದೆಹಲಿ: ಸುಪ್ರೀಂಕೋರ್ಟ್ ಅಂಗಳದಲ್ಲಿ ಸಂಪೂರ್ಣ ಬೆತ್ತಲಾದ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ವಿಚಾರದಲ್ಲಿ ಎಷ್ಟೇ ಒತ್ತಡ ಹಾಕಿದರೂ ಸಹ, ಕುರ್ಚಿ ಬಿಡಲು ಒಲ್ಲೆ ಎಂದೇ ಹೇಳಿಕೊಂಡು ಬರುತ್ತಿದ್ದ ಶ್ರೀನಿ ಈಗ ಅನಿವಾರ್ಯವಾಗಿ ಹುದ್ದೆ ಕಳೆದುಕೊಳ್ಳಬೇಕಿದೆ.
ಮಂಗಳವಾರವಷ್ಟೇ ವಿಚಾರಣೆ ನಡೆಸಿದ್ದ ಸುಪ್ರೀಂ, ಅಧ್ಯಕ್ಷ ಗಾದಿ ಬಿಡುವಂತೆ ಶ್ರೀನಿಗೆ ಸೂಚಿಸಿತ್ತು. ಅಲ್ಲದೆ  ಗುರುವಾರ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ರಂಥವರು ಬಿಸಿಸಿಐ ಅಧ್ಯಕ್ಷರಾಗಲಿ ಎಂಬ ಪ್ರಸ್ತಾಪವನ್ನು ಬಿಸಿಸಿಐ ಮುಂದೆ ಇಟ್ಟಿದೆ. ಈ ಕುರಿತು ಶುಕ್ರವಾರ ಬೆಳಗ್ಗೆ ಮಧ್ಯಂತರ ಆದೇಶವನ್ನೂ ನ್ಯಾ. ಎ.ಕೆ. ಪಟ್ನಾಯಕ್ ಅವರ ನೇತೃತ್ವದ ಪೀಠ ಹೊರಡಿಸಲಿದೆ.
ಅವರ ವಿರುದ್ಧದ ಆರೋಪಗಳ ಸಂಬಂಧ ವಿಚಾರಣೆ ನಡೆಯುವಾಗ ಬಿಸಿಸಿಐನ ಅಧ್ಯಕ್ಷರಾಗಿ ಇರುವುದು ಬೇಡ. ಜೊತೆಗೆ ಶ್ರೀನಿವಾಸನ್ ನೇತೃತ್ವದ ಇಂಡಿಯಾ ಸಿಮೆಂಟ್ಸ್ನ ಯಾವೊಬ್ಬ ನೌಕರನೂ ಬಿಸಿಸಿಐನಲ್ಲಿ ಯಾವುದೇ ಪದವಿ ಹೊಂದಿರಬಾರದು ಎಂದು ಸೂಚಿಸಿದೆ.



ಗವಾಸ್ಕರ್ ಹೆಸರು
ಅಚ್ಚರಿ ಎಂಬಂತೆ ಸುಪ್ರೀಂ ಕೋರ್ಟ್ ಬಿಸಿಸಿಐಗೆ ಕೆಲವೊಂದು ಸಲಹೆಗಳನ್ನೂ ನೀಡಿತು. ಕ್ರಿಕೆಟಿಗರೇ ಏಕೆ ಬಿಸಿಸಿಐ ಅಧ್ಯಕ್ಷರಾಗಬಾರದು ಎಂದ ಅದು, ಸುನಿಲ್ ಗವಾಸ್ಕರ್ರಂಥ ನುರಿತ ಕ್ರಿಕೆಟಿಗರನ್ನು ಈ ಸ್ಥಾನಕ್ಕೆ ನೇಮಿಸಬಾರದೇಕೆ ಎಂದಿತು. ಈ ಪ್ರಸ್ತಾಪಕ್ಕೆ ನೀವು ಏನು ಹೇಳುತ್ತೀರಿ ಎಂದು ಬಿಸಿಸಿಐ ಅನ್ನು ಕೇಳಿರುವ ಸುಪ್ರೀಂ, ಶುಕ್ರವಾರ ಬೆಳಗ್ಗೆ ಮಧ್ಯಂತರ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.



ತಂಡಗಳ ತಲೆದಂಡ?
ಸ್ಪಾಟ್ ಫಿಕ್ಸಿಂಗ್ ಕಳಂಕ ಹೊತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು ಈ ಐಪಿಎಲ್ನಿಂದ ಅಮಾನತು ಮಾಡಲು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಈ ಬಗ್ಗೆ ಆದೇಶ ಹೊರಡಿಸಿಲ್ಲ. ಶುಕ್ರವಾರದ ಮಧ್ಯಂತರ ಆದೇಶದಲ್ಲಿ ಈ ಬಗ್ಗೆ ಆದೇಶ ಹೊರಡಿಸಿದಲ್ಲಿ ತಂಡಗಳು ಐಪಿಎಲ್ನಿಂದ ಹೊರಗುಳಿಯಬೇಕಾಗುತ್ತದೆ.



ಸುಳ್ಳು ಹೇಳಿದ ಧೋನಿ
ಪ್ರತಿವಾದಿ ಹರೀಶ್ ಸಾಳ್ವೆ ಪ್ರಕಾರ, ಸಿಎಸ್ಕೆ ನಾಯಕ ಎಂ. ಎಸ್ ಧೋನಿ ಕೂಡ ಈ ಸಂಚಿನ ಪಾಲುದಾರ. ವಿಚಾರಣೆಯಲ್ಲಿ ನ್ಯಾ. ಮುದ್ಗಲ್ ಸಮಿತಿಗೆ ನಿಜ ಹೇಳಿಲ್ಲ ಎಂಬುದು ಸಾಳ್ವೆ ಅವರ ವಾದ.


ಮುದ್ಗಲ್ ವರದಿ

ವಿಚಾರಣೆ ಮುನ್ನವೇ ಮುದ್ಗಲ್ ಸಮಿತಿ ವರದಿಯಂತೆ ಶಿಸ್ತು ಕ್ರಮ ಜಾರಿಗೆ ತರುವುದಾಗಿ ಕೋರ್ಟ್ ಮುಂದೆ ಬಿಸಿಸಿಐ ಒಪ್ಪಿಕೊಂಡಿತು. ವರದಿಯಲ್ಲಿ ಹೇಳಿರುವಂತೆ ತನಿಖೆ ನಡೆಸವುದಾಗಿ ತಿಳಿಸಿತು.

ಶ್ರೀನಿವಾಸನ್ ನಡೆ?
ಸುಪ್ರೀಂನ ಮಾತುಗಳು ಶ್ರೀನಿಗೆ ನುಂಗಲಾರದ ತುತ್ತು. ದಿನವಿಡೀ ಮನೆಯಿಂದ ಆಚೆ ಬರದ ಅವರು, ಕಾನೂನು ತಜ್ಞರ  ಬಳಿ ಮುಂದೇನು ಮಾಡಬೇಕು ಎಂಬ ಸಲಹೆ ಕೇಳುತ್ತಿದ್ದರು.


ಕೊಟ್ರೆ ನಿರ್ವಹಣೆ
ಬಿಸಿಸಿಐ ಅಧ್ಯಕ್ಷ ಸ್ಥಾನ ವಹಿಸಿಕೊಟ್ಟರೆ ಖುಷಿಯಿಂದಲೇ ನಿರ್ವಹಿಸುವುದಾಗಿ ಗವಾಸ್ಕರ್ ಹೇಳಿದ್ದಾರೆ. ಕೋರ್ಟ್ ಹೇಳಿದೆ ಎಂದಾದಲ್ಲಿ ನಾನು ಸಂತಸದಿಂದ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement