ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೊಪ್ಪಳ: ಇಲ್ಲಿ ಕಾಣುತ್ತಿದೆ ಮತಗಳಿಕೆ ಕಳವಳ

ವಿಧಾನಸಭೆ ಚುನಾವಣೆಯಲ್ಲಿ ಐದು ಬಾರಿ ಮುಖಾಮುಖಿಯಾಗಿರುವ ಸಂಗಣ್ಣ ಕರಡಿ..

Rashmi Kasaragodu
Updated On : 29 Mar 2014, 11:11 am

ವಿಧಾನಸಭೆ ಚುನಾವಣೆಯಲ್ಲಿ ಐದು ಬಾರಿ ಮುಖಾಮುಖಿಯಾಗಿರುವ ಸಂಗಣ್ಣ ಕರಡಿ ಬಿಜಿಪಿಯಿಂದ ಹಾಗೂ ಕೆ. ಬಸವರಾಜ ಹಿಟ್ನಾಳ ಕಾಂಗ್ರೆಸ್ನಿಂದ ಪ್ರಥಮ ಬಾರಿಗೆ ಕಣಕ್ಕೆ ಇಳಿದು ಅಧಿಪತಿಯಾಗಲು ಶ್ರಮಿಸುತ್ತಿದ್ದಾರೆ. ಇನ್ನು ಜೆಡಿಎಸ್ ಕಣದಿಂದ ಹಿಂದೆ ಸರಿದಿದೆ. ಎಎಪಿಯ ಶಿವಕುಮಾರ ತೋಂಟಾಪುರ ಸ್ಪರ್ಧೆಯೊಡ್ಡಿದ್ದಾರೆ. ಈ ಮೂವರೂ ತಮ್ಮ ಅಭಿಪ್ರಾಯಗಳನ್ನು 'ಕನ್ನಡಪ್ರಭ'ದೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.


-ವಿಧಾನಸಭೆ ಚುನಾವಣೆಯಿಂದ ಲೋಕಸಭೆ ಚುನಾವಣೆಗೆ ಜಂಪ್ ಮಾಡಿದ್ಯಾಕೆ?
ಈ ಬಾರಿ ನನಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ಪಕ್ಷ ಲೋಕಸಭೆಗೆ ಟಿಕೇಟ್ ನೀಡಿದೆ. ಹೀಗಾಗಿ, ನಾನು ಪಕ್ಷದ ನಿರ್ದೇಶನದಂತೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದೇನೆ. ಭಾರಿ ಪೈಪೋಟಿಯ ನಡುವೆಯೂ ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿದೆ. ಇದನ್ನು ಉಳಿದೆಲ್ಲಾ ನಾಯಕರು ಸ್ವಾಗತಿಸಿ, ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ.  ಇದು ಪಕ್ಷ ಮಾಡಿರುವ ತೀರ್ಮಾನವೇ ಹೊರತು ನಾನು ಅಥವಾ ಸ್ಥಳೀಯರು ಮಾಡಿರುವ ತೀರ್ಮಾನ ಅಲ್ಲ.

-ಅಲ್ಲಿ ಸಿಗದ ಯಶಸ್ಸು ಇಲ್ಲಿ ಸಿಗುತ್ತ?
ನೂರಕ್ಕೆ ನೂರು ಸಿಗುತ್ತದೆ. ವಿಧಾನಸಭೆ ಚುನಾವಣೆ ಎದುರಿಸುವ ವೇಳೆಯಲ್ಲಿದ್ದ ವಾತಾವರಣವೇ ಬೇರೆ ಈಗ ಇರುವ ವಾತಾವರಣವೇ ಬೇರೆ.  ಅಷ್ಟೇ ಅಲ್ಲದೆ ಲೋಕಸಭೆ ವ್ಯಾಪ್ತಿಯಲ್ಲಿರುವ 8 ವಿಧಾನಸಭೆ ಕ್ಷೇತ್ರಗಳಲ್ಲಿ  ಕಾಂಗ್ರೆಸ್ ಪಕ್ಷದ 6 ಶಾಸಕರಿದ್ದಾರೆ. ಇನ್ನು ಉಳಿದೆರಡು ಕ್ಷೇತ್ರಗಳಲ್ಲಿಯೂ ಪ್ರಭಲವಾಗಿಯೇ ಇದ್ದೇವೆ. ಹೀಗಾಗಿ, ಈ  ಚುನಾವಣೆಯಲ್ಲಿ ನಮಗೆ ಗೆಲವು ಸುಲಭವಾಗಿದೆ.
-ಸಿದ್ದರಾಮಯ್ಯ ಅವರೇ ಸೋತಿರುವ ಕ್ಷೇತ್ರದಲ್ಲಿ ನಿಮಗೆ ಗೆಲವು ಸಾಧ್ಯವೇ ?
ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ, ಕೇಂದ್ರದಲ್ಲಿ ಯುಪಿಎ ಸರ್ಕಾರ ಇದೆ. ಇದೆಲ್ಲವೂ ಪ್ಲಸ್ ಪಾಯಿಂಟ್ ಆಗುವುದರಿಂದ ಆಗಿನ ಸ್ಥಿತಿಯನ್ನು ಈಗ ಹೋಲಿಸಿಕೊಳ್ಳಲು ಆಗುವುದಿಲ್ಲ.

-ಪಕ್ಷದಲ್ಲಿರುವ ಆಂತರಿಕ ಬೇಗುದಿ ಪರಿಣಾಮ ಏನು ?
ಎಲ್ಲೂ ಭಿನ್ನಾಭಿಪ್ರಾಯ ಇಲ್ಲ. ಟಿಕೆಟ್ಗಾಗಿ ಅನೇಕರು ಪ್ರಯತ್ನ ಮಾಡಿದ್ದೂ ಸತ್ಯ. ಹಾಗಂತ ಅದು ಬಂಡಾಯ ಅಥವಾ ಭಿನ್ನಾಭಿಪ್ರಾಯ ಆಗುವುದಿಲ್ಲ. ಇನ್ನು ಟಿಕೆಟ್ ಸಿಕ್ಕಿಲ್ಲ ಎನ್ನುವವರು ಬೇಸರವಾಗಿಲ್ಲ.
-ನಿಮ್ಮದು ಕುಟುಂಬ ರಾಜಕಾರಣ ಅಲ್ಲವೆ ?
ಇದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿರುವುದರಿಂದ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ಪಕ್ಷದ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ನೀಡಿದ್ದಾರೆ. ಇದರಲ್ಲಿ ಕುಟುಂಬ ರಾಜಕಾರಣ ಎಲ್ಲಿಂದ ಬಂತು.?


ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಸರ್ಕಾರ ದೇಶದಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದೆ, ಬಡವರು, ದೀನದಲಿತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಅದನ್ನೇ ಮುಂದಿಟ್ಟುಕೊಂಡು ಮತ ಯಾಚಿಸುವೆ.
-ಕೆ. ಬಸವರಾಜ ಹಿಟ್ನಾಳ್


-ವಿಧಾನಸಭೆ ಚುನಾವಣೆಯಿಂದ ಲೋಕಸಭೆ ಚುನಾವಣೆಗೆ ಜಂಪ್ ಮಾಡಿದ್ಯಾಕೆ?
ಸಂಸದನಾಗಬೇಕು ಎನ್ನುವುದು ಬಹಳ ದಿನದ ಗುರಿಯಾಗಿದೆ. ಅಲ್ಲದೆ ಈಗಾಗಲೇ ಶಾಸಕನಾಗಿ ರಾಜ್ಯ ಸರ್ಕಾರದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಈಗ ಸಂಸದನಾಗಿ ಲೋಕಸಭೆ ವ್ಯಾಪ್ತಿಯಲ್ಲಿಯೂ ಉತ್ತಮ ಕೆಲಸ ಮಾಡುವ ಆಸೆಯಾಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಪಕ್ಷದ ಹೈಕಮಾಂಡ್ ನನ್ನನ್ನು ಈ ಸಾರಿ ಲೋಕಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಯುವಂತೆ ಸೂಚಿಸಿತು.
-ಶಿವರಾಮಗೌಡ ಅವರ ಮುನಿಸು ಮಾರಕವಾಗುವುದಿಲ್ಲವೇ?
ಟಿಕೆಟ್ ಕೈ ತಪ್ಪಿದ್ದರಿಂದ ಹಾಲಿ ಸಂಸದ ಶಿವರಾಮಗೌಡ ಅವರಿಗೆ ಅಸಮಾಧಾನ ಆಗಿರುವುದು ಸತ್ಯ. ಆದರೆ, ಇದು ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ತೀರ್ಮಾನ ಆಗಿರುವುದರಿಂದ ಎಲ್ಲರೂ ಒಪ್ಪಲೇಬೇಕು. ಮೊದ ಮೊದಲು ಅಸಮಾಧಾನಗೊಂಡಿದ್ದ ಶಿವರಾಮಗೌಡ ಅವರು ಈಗ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಪುನಃ- ಕಾರ್ಯಗತವಾಗಿದ್ದಾರೆ. ಪ್ರಚಾರ ಕಾರ್ಯದಲ್ಲೂ ಭಾಗಿಯಾಗಿದ್ದಾರೆ. ಹೀಗಾಗಿ, ಇಗಿಲ್ಲ ಮುನಿಸು.

-ಗೆಲುವಿನ ಲೆಕ್ಕಚಾರಕ್ಕೆ ಆಧಾರವೇನು?
ಯುಪಿಎ ಸರ್ಕಾರದಿಂದ ರೋಸಿ ಹೋಗಿರುವ ಮತದಾರರು ಬಿಜೆಪಿಯತ್ತ ವಾಲಿದ್ದಾರೆ. ಇನ್ನು ನರೇಂದ್ರ ಮೋದಿ ಅವರ ಅಲೆ ಹಾಗೂ ಅವರ ದೇಶಾಭಿಮಾನ ಮತದಾರರಲ್ಲಿ ಬಿಜೆಪಿಯ ಬಗ್ಗೆ ಪ್ರೀತಿ ಹುಟ್ಟಿಸಿದೆ.  

-ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳುತ್ತಾ?
 ಒಂದು ಕಾಲಕ್ಕೆ ಇತ್ತು ಹಾಗೆ. ಈಗ ಬದಲಾಗಿದೆ. ಕಳೆದ ಬಾರಿ ಬಿಜೆಪಿ ಇಲ್ಲಿ ಗೆದ್ದಿದೆ. ಮತದಾರರು ಜಾಗೃತರಾಗಿದ್ದಾರೆ. ಶಿಕ್ಷಣವಂತರಾಗಿದ್ದಾರೆ. ಮೊದಲಿನಂತೆ ಈಗ ಇಲ್ಲ. ಈಗ ಮತದಾರರು ಪ್ರಭುದ್ಧರಾಗಿದ್ದಾರೆ. ಬಿಜೆಪಿಯನ್ನು ಬೆಂಬಲಿಸಲು ಮುಂದಾಗಿದ್ದಾರೆ.

-ಜೆಡಿಎಸ್ ಶಸ್ತ್ರತ್ಯಾಗದ ಪರಿಣಾಮವೇನು?
ಕರಡಿ ಸಂಗಣ್ಣನ ಗೆಲ್ಲುವುದಕ್ಕೆ ಅಡ್ಡಗಾಲು ಹಾಕಬೇಕು ಎಂದೇ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಆದರೆ, ಅವರಂದುಕೊಂಡಂತೆ ಮತದಾರರು ಇಲ್ಲ. ಇವರು ಅಭ್ಯರ್ಥಿಯನ್ನು ಹಾಕದೆ ಬಿಟ್ಟಿದ್ದರಿಂದ ಕಾಂಗ್ರೆಸ್ಗೆ ಅನುಕೂಲವಾಗುತ್ತದೆ ಎನ್ನುವುದು ಸುಳ್ಳು. ಅವರ ತೀರ್ಮಾನ ಅವರಿಗೆ ಭಂಗ ತರುತ್ತದೆ. ಫಲಿತಾಂಶ ಬಂದ ಮೇಲೆ ಎಲ್ಲವೂ ಗೊತ್ತಾಗುತ್ತದೆ.


ಈ ದೇಶದಲ್ಲಿ ಇಂದಿರಾಗಾಂಧಿ, ದೇವೇಗೌಡ ಅಂಥವರೇ ಸೋತಿದ್ದಾರೆ. ಇನ್ನು ನಮ್ಮಂಥವರ ಪಾಡೇನು? ಆಗ ನಡೆದ ಚುನಾವಣೆಯ ವಿಷಯವೇ ಬೇರೆ. ಈಗ ನಡೆಯುತ್ತಿರುವ ಚುನಾವಣೆಯ ವಿಷಯವೇ ಬೇರೆ. ಇದು ರಾಷ್ಟ್ರದ ಪ್ರಶ್ನೆ.
-ಸಂಗಣ್ಣ ಕರಡಿ


- ಕುರುಡು ಕಾಂಚಣದ ಸಮಾಜದಲ್ಲಿ ನಿಜವಾದ ಕುರುಡನ ಕೈ ಹಿಡಿಯುತ್ತಾರಾ?
ಜನರಿಗೆ ಕಾಂಚಾಣ ಕೊಟ್ಟು ಕುರುಡು ಮಾಡಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸಿ, ಅವರನ್ನು ನಿಜವಾದ ಬೆಳಕಿನೆಡೆಗೆ ಕರೆದು ತರಬೇಕು.  ಜಾತಿ, ಹಣ ಮತ್ತು ಭ್ರಷ್ಟಾಚಾರದಿಂದ ಅವರು ಕುರುಡಾಗಿದ್ದಾರೆ. ಅದನ್ನು ಹೋಗಲಾಡಿಸಿದರೇ ಖಂಡಿತವಾಗಿಯೂ ಅವರು ನನ್ನಂತಹ ನಿಜವಾದ ಕುರುಡರನ್ನು ಕೈ ಹಿಡಿದು ನಡೆಸುತ್ತಾರೆ ಎನ್ನುವ ವಿಶ್ವಾಸ ಇದೆ.
-ಮತದಾರರಲ್ಲಿರುವ ಕುರುಡತನಕ್ಕೆ ಕಾರಣರ್ಯಾರು?

ದೇಶದಲ್ಲಿರುವಂಥ ಕೆಟ್ಟ ಪ್ರಜಾಪ್ರಭುತ್ವ ಮತದಾರರನ್ನು ಕುರುಡರನ್ನಾಗಿ ಮಾಡಿದೆ. ಅವರನ್ನು ನೂರು, ಇನ್ನೂರು ರುಪಾಯಿಗೆ ಕೈಚಾಚುವಂತೆ ಮಾಡಿದೆ. 60 ವರ್ಷವಾದರೂ ನಾವು ಇಂಥ ಸ್ಥಿತಿಯಲ್ಲಿರುವುದು ನಿಜಕ್ಕೂ ಶೋಚನೀಯ. ಇಂಥ ಸ್ಥಿತಿಯಲ್ಲಿರುವ ಮತದಾರರನ್ನು ನಿಜವಾಗಿಯೂ ಜಾಗೃತಿ ಮೂಡಿಸಿದ್ದೇ ಆದಲ್ಲಿ, ಅವರಿಗೆ ನಿಜಾರ್ಥ ಗೊತ್ತಾಗುತ್ತದೆ. ಆಗ ಅವರು ತಮ್ಮ ನಾಯಕ ಯಾರಾಗಬೇಕು ಎಂದು ಉತ್ತಮ ತೀರ್ಮಾನ ಮಾಡುತ್ತಾರೆ.
-ನೀವ್ಯಾಕೆ ಚುನಾವಣೆ ಕಣಕ್ಕೆ ಇಳಿದಿರಿ?

ಎರಡು ಕಾರಣ. 1) ಪ್ರಜಾಪ್ರಭುತ್ವ ಎನ್ನುವುದು ಜನಸಾಮಾನ್ಯನಿಂದ ದೂರ ಹೋಗಿದೆ. ಅಲ್ಲಿ ಬರಿ ಬಲಾಢ್ಯ ಜಾತಿಯುಳ್ಳವರು ಇಲ್ಲವೇ ಹಣ ಇದ್ದವರು ಮಾತ್ರ  ಆಯ್ಕೆಯಾಗುತ್ತಾರೆ ಎನ್ನುವ ಭಾವನೆ ಇದೆ. ಹೀಗಾಗಿ, ಸಾಮಾನ್ಯರಿಗೆ ಅಧಿಕಾರವೇ ಸಿಗುತ್ತಿಲ್ಲ. ಕನಿಷ್ಠ ನಾಮಿನೇಷನ್ ಕೂಡ ಆಗುತ್ತಿಲ್ಲ. ಕೇವಲ ಹಣ ಇರುವವರು ಹಾಗೂ ಜಾತಿಯಿಂದ ಬಲಾಢ್ಯರಾಗಿರುವವರು ಮಾತ್ರ ಚುನಾವಣೆಯಲ್ಲಿ ನಿಲ್ಲುವುದಾದರೇ ಅದನ್ನು ಪ್ರಜಾಪ್ರಭುತ್ವ ಎಂದು ಏಕೆ ಕರೆಯಬೇಕು. ಇದರ ವಿರುದ್ಧ ನನ್ನ ಹೋರಾಟ.
2) ಈ ದೇಶಕ್ಕೆ ಸ್ವಾತಂತ್ರ್ಯ ಬಂದು 6 ದಶಕವೇ ಕಳೆದು ಹೋಗಿದೆ. ಆದರೂ ಇದುವರೆಗೂ ಬಹುದೊಡ್ಡ ಸಮುದಾಯವಾಗಿರುವ ವಿಕಲಚೇತರಿ ಸ್ಥಾನಮಾನ ಇಲ್ಲ. ರಾಜಕೀಯವಾಗಿ ಒಂದು ಸ್ಥಾನ ಇಲ್ಲ. ಸಂವಿಧಾನ ರಚನೆ ಮಾಡುವ ವೇಳೆಯಲ್ಲಿ ಇವರನ್ನ ಏಕೆ ಮರತೆರೂ ಎಂಬುದೂ ಗೊತ್ತಿಲ್ಲ. ವಿಕಲಚೇತನರು ಸುಮಾರು ಮೂರು ಕೋಟಿ ಇದ್ದಾರೆ. ಇವರಿಗೂ ಅಧಿಕಾರ ಸಿಗಬೇಕು ಮತ್ತು ಶೇ.1 ರಷ್ಟಾದರೂ ರಾಜಕೀಯ ಮೀಸಲು ನೀಡುವಂತೆ ಸಂವಿಧಾನ ತಿದ್ದುಪಡಿಯಾಗಬೇಕು. ಇದಕ್ಕಾಗಿ ನಾನು ಕಣಕ್ಕೆ ಇಳಿದಿದ್ದೇನೆ.


ನಿಮ್ಮ ವೋಟನ್ನು ಯಾರಿಗಾದರೂ ಕೊಡಿ, ಯಾವುದೇ ಪಕ್ಷಕ್ಕೆ ಕೊಡಿ, ಆದರೆ ಸಾಮಾನ್ಯನಿಗೆ ಕೊಡಬೇಕು. ಪ್ರಜಾಪ್ರಭುತ್ವ ಎನ್ನುವ ಹಣ್ಣನ್ನು ಸಮಾನವಾಗಿ ಹಂಚಿಕೆ ಮಾಡುವಂತಹವ್ಯಕ್ತಿಗೆ ನೀಡಿ ಎಂದು ಮತದಾರರಲ್ಲಿ ಕೇಳಿಕೊಳ್ಳುತ್ತೇನೆ.ಟಿ ಶಿವಕುಮಾರ ತೋಂಟಾಪುರ

ಸಂದರ್ಶನ: ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement