ಚಿದು ಜಪದೊಂದಿಗೆ ಶಿವಗಂಗಾದಲ್ಲಿ ಕಾರ್ತಿ
ಈ ಬಾರಿ ಕಣದಿಂದ ಹಿಂದೆ ಸರಿದಿರುವ ಕಾಂಗ್ರೆಸ್ ದಿಗ್ಗಜರ ಪೈಕಿ ಪಿ. ಚಿದಂಬರಂ ಅವರ ಹೆಸರು ಪ್ರಮುಖವಾದದ್ದು....
ಈ ಬಾರಿ ಕಣದಿಂದ ಹಿಂದೆ ಸರಿದಿರುವ ಕಾಂಗ್ರೆಸ್ ದಿಗ್ಗಜರ ಪೈಕಿ ಪಿ. ಚಿದಂಬರಂ ಅವರ ಹೆಸರು ಪ್ರಮುಖವಾದದ್ದು. ಹಾಗೆಂದು ಅವರು ಸಾಕು ಸ್ಪರ್ಧೆಯ ಸಹವಾಸ ಎಂದು ಸಂಪೂರ್ಣ ಅಂತರವನ್ನೇನೂ ಕಾಪಾಡಿಕೊಂಡಿಲ್ಲ. ತಮ್ಮ ಕ್ಷೇತ್ರವಾಗಿದ್ದ ಶಿವಗಂಗಾದಲ್ಲಿ ಮಗ ಕಾರ್ತಿ ಚಿದಂಬರಂ ಅವರಿಗೆ ಟಿಕೆಟ್ ಸಿಗುವಂತೆ ನೋಡಿಕೊಂಡಿದ್ದಾರೆ. ಚೊಚ್ಚಲ ಚುನಾವಣೆ ಎದುರಿಸುತ್ತಿರುವ ಕಾರ್ತಿ ಚಿದಂಬರಮ್, ಸಂದರ್ಶನವೊಂದರಲ್ಲಿ ಏನು ಹೇಳಿದ್ದಾರೆ ಗಮನಿಸೋಣ...
ತಂದೆ 23 ವರ್ಷಕ್ಕೆಲ್ಲ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. ನನಗೀಗ 42ರ ಪ್ರಾಯ. ಆದರೂ ಇಂಥ ಅವಕಾಶ ವಿಳಂಬವಾಗಿ ಸಿಕ್ಕಿತು ಎಂದೇನೂ ನನಗೆ ಅನ್ನಿಸುತ್ತಿಲ್ಲ. ಅಪ್ಪನಿಗೆ ಸಹಾಯಕನಾಗಿ ಎರಡನೇ ಹಂತದಲ್ಲಿ ನಿಂತು ಸಾಕಷ್ಟು ಕೆಲಸ ಮಾಡಿದ ಅನುಭವ ನನಗಿದೆ. ನಿಮಗೆ ಗೊತ್ತಿರಲಿ. ನನ್ನ ಆರನೇ ವಯಸ್ಸಿಗೇ ಚುನಾವಣೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದವನು ನಾನು.
ನನಗೆ ಟಿಕೆಟ್ ಸಿಗುವಲ್ಲಿ ಅಪ್ಪನ ವ್ಯಕ್ತಿತ್ವದ ಗುಣಾತ್ಮಕ ಅಂಶ ಕೆಲಸ ಮಾಡಿದೆ. ಶಿವಗಂಗೆಯಿಂದ ಸ್ಪರ್ಧಿಸುವುದಕ್ಕೆ ನನ್ನಷ್ಟೇ ಅರ್ಹರಾದ ಇಪ್ಪತ್ತು ಮಂದಿ ಸಿದ್ಧರಿದ್ದರು. ಕೆಲವರು ವಯಸ್ಸಿನಲ್ಲೂ ನನಗಿಂತ ಚಿಕ್ಕವರು. ಚಿದಂಬರಂ ಮಗ ಎಂಬ ಕಾರಣಕ್ಕೆ ನನಗೆ ಆದ್ಯತೆ ದೊರೆತಿದೆ. ನಾನದನ್ನೂ ಉಳಿಸಿಕೊಳ್ಳಬೇಕಿದೆ. 1996ರಿಂದಲೂ ಚುನಾವಣೆ ಪ್ರಚಾರ ಕಾರ್ಯಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದೆ. ನನಗೊಂದು ಅವಕಾಶ ಬೇಕು ಎಂಬುದು ಮನಸ್ಸಿನಲ್ಲಿ ಇದ್ದೇ ಇತ್ತು. ಸಿಕ್ಕಾಗ ಸಂತೋಷದಿಂದ ಸ್ವೀಕರಿಸಿದ್ದೇನೆ.
ನಿಮಗೆ ಬ್ಯಾಂಕ್ ವಿಭಾಗಗಳು ಹೆಚ್ಚಿ, ಸಾಲ ಸುಸೂತ್ರವಾಗಬೇಕಾದರೆ ನನಗೆ ಮತ ನೀಡಿ ಎಂಬುದು ಸ್ಥಳೀಯರಲ್ಲಿ ನನ್ನ ಉದ್ಘೋಷವಾಗಲಿದೆ. ಮಾರುಕಟ್ಟೆ ಸಹಕಾರಿ ಸಂಘಗಳ ಮೂಲಕ ಅಂಗಡಿಗಳನ್ನು ತೆರೆಯುವುದನ್ನು ಬಿಟ್ಟರೆ ತಮಿಳುನಾಡು ಸರ್ಕಾರ ಇನ್ನೇನೂ ಮಾಡಿಲ್ಲ. ನಿಮಗೆ ಅಂಗಡಿಗಳು ಬೇಕೋ, ಸಾಲ ಸೌಲಭ್ಯವೋ ಎಂದು ನಾನು ಮತದಾರರನ್ನು ಕೇಳುತ್ತೇನೆ. ಕೇಂದ್ರ ಸರ್ಕಾರದ ಯೋಜನೆಯಲ್ಲಿ ಶಿವಗಂಗೆಯ 19 ಸಾವಿರ ವಿದ್ಯಾರ್ಥಿಗಳಿಗೆ ಸಾಲ ಸಿಕ್ಕಿದೆ. ಹಲವು ಬ್ಯಾಂಕ್ಗಳು ಮತ್ತು ತರಬೇತು ಕೇಂದ್ರಗಳು ಶುರುವಾಗಿವೆ. 'ಉದ್ಯಮವಲಯದ ಸಾಮಾಜಿಕ ಜವಾಬ್ದಾರಿ' ಅಡಿಯಲ್ಲೂ ನಾನು ಹಲವು ಕೆಲಸಗಳನ್ನು ಮಾಡಿದ್ದೇನೆ. ಇವೆಲ್ಲ ಅಂಶಗಳನ್ನು ಇಟ್ಟುಕೊಂಡು ಎಐಎಡಿಎಂಕೆಯನ್ನು ಕಟಕಟೆಯಲ್ಲಿ ನಿಲ್ಲಿಸುತ್ತೇನೆ. ಶಿವಗಂಗೆಯಲ್ಲಿ ಸ್ಪರ್ಧೆ ಇರುವುದು ಇದರೊಂದಿಗೇ.
ತಮಿಳುನಾಡಿನಲ್ಲಿ ಯಾವ ಮೋದಿ ಅಲೆಯೂ ಇಲ್ಲ. ಬಿಜೆಪಿ ಅಷ್ಟೊಂದು ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆಯಲ್ಲ? ಅವೆಲ್ಲ ಪಕ್ಷಗಳೇ ಅಲ್ಲ, ತಮಿಳುನಾಡಿನಲ್ಲಿ ಕೇವಲ ಹೆಸರುಗಳಷ್ಟೆ. ಆ ಮೈತ್ರಿಯಲ್ಲೂ ಅಗಾಧ ವಿರೋಧಾಭಾಸಗಳಿವೆ. ಸೇತು ಸಮುದ್ರ ಯೋಜನೆಯನ್ನು ಬಿಜೆಪಿ ವಿರೋಧಿಸುತ್ತಿದೆ. ಅವರ ಮೈತ್ರಿಗೆ ಭಾಜನವಾಗಿರುವ ವೈಕೋ ಆ ಯೋಜನೆಯ ಉಗ್ರ ಪ್ರತಿಪಾದಕರು. ಪ್ರತ್ಯೇಕ ತಮಿಳು ದೇಶದಬೇಡಿಕೆ ಇಟ್ಟವರೂ ಹೌದು. ಬಿಜೆಪಿಗೆ ಬೆಂಬಲಿಸಿರುವ ವಿಜಯಕಾಂತ್, ಇಲ್ಲಿ ಲೋಕಾಯುಕ್ತರನ್ನು ನೇಮಿಸಿಲ್ಲ ಎಂದು ಜಯಾ, ಕರುಣಾ ಮೇಲೆ ಹರಿಹಾಯ್ದವರು. ಅವರಿಗೆ ಗುಜರಾತ್ನಲ್ಲಿ ಲೋಕಾಯುಕ್ತಕ್ಕೆ ಮೋದಿ ಅಡ್ಡಿಯಾಗಿದ್ದು ಗೊತ್ತಿಲ್ಲವೆನಿಸುತ್ತದೆ.
ತಮಿಳುನಾಡಿನಲ್ಲಿ ಕಾಂಗ್ರೆಸ್ ಈ ಬಾರಿ ಏಕಾಂಗಿ ಎಂಬ ವ್ಯಾಖ್ಯಾನ ಸರಿಯಲ್ಲ. ಏಕೆಂದರೆ ಎಐಎಡಿಎಂಕೆ, ಡಿಎಂಕೆಗಳೂ ಏಕಾಂಗಿಯಾಗಿ ಸ್ಪರ್ಧಿಸುತ್ತಿವೆ. ಇನ್ನು, ತಮಿಳುನಾಡು ರಾಜಕೀಯದಲ್ಲಿ ಕಾಂಗ್ರೆಸ್ ಗಟ್ಟಿಯಾಗಬೇಕು ಅಂತಾದರೆ ಪ್ರಬಲ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸಬೇಕು.