ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ಕೊಲ್ಲುವ ಕೈ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ನರಹಂತಕ, ಕೊಲೆಗಡುಕ ಎಂದೆಲ್ಲ ಕರೆದದ್ದಾಯ್ತು. ಈಗ ಉತ್ತರ...

Rashmi Kasaragodu
Updated On : 29 Mar 2014, 11:05 am

ಸಹಾರನ್‌ಪುರ(ಯುಪಿ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ನರಹಂತಕ, ಕೊಲೆಗಡುಕ ಎಂದೆಲ್ಲ ಕರೆದದ್ದಾಯ್ತು. ಈಗ ಉತ್ತರ ಪ್ರದೇಶದ ಲೋಕಸಭಾ ಅಭ್ಯರ್ಥಿಯೊಬ್ಬರು ಮೋದಿ ಅವರನ್ನು ಕೊಚ್ಚಿ ಕೊಲೆ ಮಾಡುವುದಾಗಿ ಹೇಳಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಕ್ಯಾಮೆರಾ ಎದುರೇ ಸಹಾರನ್‌ಪುರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ನೀಡಿದ ಈ ಪ್ರಚೋದನಾತ್ಮಕ ಹೇಳಿಕೆ ಈಗ ಎಲ್ಲರ ಆಕ್ರೋಶಕ್ಕೆ ಗುರಿಯಾಗಿದೆ. ಇದರ ವಿರುದ್ಧ ಬಿಜೆಪಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಈ ದ್ವೇಷದ ಹೇಳಿಕೆಗೆ ಸಂಬಂಧಿಸಿ ವಿವರಣೆ ಕೇಳಿರುವ ಚುನಾವಣಾ ಆಯೋಗ ಇಮ್ರಾನ್ ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಇಂದು ನಿಯೋಗ:  ಇಮ್ರಾನ್ ಮಸೂದ್ ಹೇಳಿಕೆಗೆ ಸಂಬಂಧಿಸಿ ಬಿಜೆಪಿಯ ಉನ್ನತಮಟ್ಟದ ನಿಯೋಗವು ಶನಿವಾರ ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಲು ನಿರ್ಧರಿಸಿದೆ. ಮೋದಿ ವಿರುದ್ಧ ಪದೇ ಪದೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಬಿಜೆಪಿ ತಿಳಿಸಿದೆ.
ರ್ಯಾಲಿ ನಿರಾತಂಕ: ಮೋದಿ ಕುರಿತ ಹೇಳಿಕೆ ತೀವ್ರ ವಿವಾದಕ್ಕೆ ಗುರಿಯಾಗಿದ್ದರೂ ಸಹಾರನ್‌ಪುರದಲ್ಲಿ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಚುನಾವಣಾ ರ್ಯಾಲಿಯನ್ನು ರದ್ದು ಮಾಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.



ಸಹಾರನ್‌ಪುರದಲ್ಲಿ ಹೇಳಿದ್ದು...
ನಾನೊಬ್ಬ ಅಬ್ಬೇಪಾರಿ. ಜನರಿಗಾಗಿ ನನ್ನ ಪ್ರಾಣ ನೀಡಲು, ಪ್ರಾಣ ತೆಗೆಯಲೂ ಹಿಂದೆ ಮುಂದೆ ನೋಡುವವನಲ್ಲ. ಮೋದಿ ಉತ್ತರಪ್ರದೇಶವನ್ನೂ ಗುಜರಾತ್ ಎಂದೇ ಭಾವಿಸಿದ್ದಾರೆ. ಗುಜರಾತ್‌ನಲ್ಲಿರೋದು ಕೇವಲ ಶೇ. 4ರಷ್ಟು ಮುಸ್ಲಿಮರು. ಆದರೆ, ಉತ್ತರಪ್ರದೇಶದಲ್ಲಿ ಶೇ.22ರಷ್ಟು ಮುಸ್ಲಿಮರಿದ್ದಾರೆ. ಮೋದಿಗೆ ತಕ್ಕ ಉತ್ತರ ಹೇಗೆ ನೀಡಬೇಕೆಂಬುದು ನನಗೆ ಚೆನ್ನಾಗಿ ಗೊತ್ತು. ನಾವು ಅವರನ್ನು ಕೊಚ್ಚಿ ಕೊಲ್ಲುತ್ತೇವೆ.



ವಿವಾದ ಬಲಗೊಂಡ ಬಳಿಕ...
ಮೋದಿ ಅವರನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂದ ಮಾತ್ರಕ್ಕೆ ನಾನು ಅವರನ್ನು ಕೊಲ್ಲುತ್ತೇನೆ ಎಂದರ್ಥವಲ್ಲ. ಮೋದಿ ಅವರಿಗೆ ಬುದ್ಧಿ ಕಲಿಸುತ್ತೇನೆ ಎಂಬರ್ಥ. 2002ರ ಗಲಭೆಗೆ ಸಂಬಂಧಿಸಿ ಮೋದಿ ಕ್ಷಮೆ ಕೋರಿದರಷ್ಟೇ ನಾನು ಈ ಹೇಳಿಕೆಗೆ ಕ್ಷಮೆ ಕೋರುತ್ತೇನೆ.


ಇಮ್ರಾನ್ ಹೇಳಿಕೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರ ಮೌತ್ ಕಾ ಸೌದಾಗರ್(ಸಾವಿನ ವ್ಯಾಪಾರಿ) ಹೇಳಿಕೆಯೇ ಇದಕ್ಕೆಲ್ಲ ಮೂಲ.
- ಅರುಣ್ ಜೇಟ್ಲಿ, ಬಿಜೆಪಿ ಹಿರಿಯ ಮುಖಂಡ


ಮೋದಿಯನ್ನು ಕೊಲ್ಲುತ್ತೇವೆ ಎನ್ನುವ ಇಮ್ರಾನ್ ಮಸೂದ್ ಹೇಳಿಕೆಯನ್ನು ಖಂಡಿಸುತ್ತೇನೆ. ಅರಾಜಕತೆ ಸೃಷ್ಟಿಸುವ ವ್ಯಕ್ತಿಯನ್ನು ಹೆದರಿಸಲು ಈ ಹೇಳಿಕೆ ನೀಡಿದ್ದು ಸರಿಯಲ್ಲ.
- ರಾಜ್‌ಬಬ್ಬರ್
ಕಾಂಗ್ರೆಸ್ ಮುಖಂಡ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement