ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೃಷ್ಣ ನೇಪಥ್ಯಕ್ಕೂ ಸರಿದಿಲ್ಲ, ನಿವೃತ್ತಿಯೂ ಆಗಲ್ಲ...!

ನಾಟಕದಲ್ಲಿ 'ಕೃಷ್ಣ' ಯಾವತ್ತೂ ನೇಪಥ್ಯಕ್ಕೆ ಸರಿಯುವುದಿಲ್ಲ. ನಟನೊಬ್ಬ ಪ್ರತಿ ದೃಶ್ಯದ ಕೇಂದ್ರ..

Rashmi Kasaragodu
Updated On : 30 Mar 2014, 5:45 am

 'ನನಗಿನ್ನೂ ಸಾಕಷ್ಟು ಶಕ್ತಿ ಇದೆ...' ನಾಟಕದಲ್ಲಿ ನನ್ನ ಪಾತ್ರ ಇನ್ನೂ ಇದೆ, ಯೋಧನಿಗೆ ನಿವೃತ್ತಿ ಇಲ್ಲ, 'ನಿವೃತ್ತಿ' ಪ್ರಕ್ರಿಯೆಯಲ್ಲೇ ನಂಬಿಕೆ ಇಲ್ಲ.  ನನಗೆ ಮಾತ್ರವಲ್ಲ, ಇಡೀ ವಿಶ್ವವೇ ಈ ಚುನಾವಣೆಯತ್ತ ಬೆರಗುಗಣ್ಣಿನಿಂದ ನೋಡುತ್ತಿದೆ. ನನ್ನ ಮಕ್ಕಳು ಅಧಿಕಾರಕ್ಕೆ ಬಂದಿಲ್ಲ. ನಾನು ಅವರ ಮೇಲೆ ಒತ್ತಡವನ್ನೂ ಹಾಕುವುದಿಲ್ಲ. ಆದರೆ ನನ್ನ ಜತೆ ಕೆಲಸ ಮಾಡಿದವರಿಗೆ ಒಳ್ಳೆಯದಾಗಬೇಕೆಂದು ಬಯಸುವುದು ತಪ್ಪಲ್ಲವಲ್ಲ.ಭಿನ್ನ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿರುವುದಕ್ಕೆ ಕಾಂಗ್ರೆಸ್ ಕಾರಣ ಎಂಬುದನ್ನು ಮರೆಯಲಾದೀತೆ..?


ನಾಟಕದಲ್ಲಿ 'ಕೃಷ್ಣ' ಯಾವತ್ತೂ ನೇಪಥ್ಯಕ್ಕೆ ಸರಿಯುವುದಿಲ್ಲ. ನಟನೊಬ್ಬ ಪ್ರತಿ ದೃಶ್ಯದ ಕೇಂದ್ರ ಬಿಂದುವಾಗಿರಲಾರ. ಅಂಕದಿಂದ ಅಂಕಕ್ಕೆ ಕ್ರಮಿಸಬೇಕು. ಎಲ್ಲ ದೃಶ್ಯದಲ್ಲಿ ಒಬ್ಬನೇ 'ರಂಗ'ವನ್ನಾಳುವುದು ಅಸಂಭವ. ರಾಜಕೀಯದಲ್ಲಿ ನನ್ನ ಪಾತ್ರ ಇನ್ನೂ ಬಹಳಷ್ಟಿದೆ. ಕೃಷ್ಣ ನೇಪಥ್ಯಕ್ಕೂ ಸರಿದಿಲ್ಲ, ನಿವೃತ್ತಿಯೂ ಆಗುವುದಿಲ್ಲ...! ಇದು ಕಾಂಗ್ರೆಸ್ನ ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರ 'ರಾಜ್ಯಾಂಕ' ವ್ಯಾಖ್ಯಾನ. 'ಕನ್ನಡಪ್ರಭ'ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಯುಪಿಎ ನಿಲುವುಗಳನ್ನು ಸಮರ್ಥಿಸಿಕೊಂಡರಲ್ಲದೇ ಮೋದಿ ಅಲೆ ಕೃತಕ ಎಂದರು. ನನಗೆ ಅಂತರಂಗ ಮತ್ತು ಬಹಿರಂಗದಲ್ಲಿ ಭಿನ್ನ ಬಯಕೆಗಳಿಲ್ಲ. ವಿದೇಶಾಂಗ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ ಮತ್ತೆ ರಾಜ್ಯದ ಸಾರಥ್ಯ ವಹಿಸುವ ಮಾತು ಕೇಳಿ ಬಂದಿತ್ತು. ಆದರೆ ಪ್ರತಿಕ್ರಿಯಿಸಲಿಲ್ಲ. ಏಕೆಂದರೆ ನನ್ನ ಎಲ್ಲ ಬಯಕೆಗಳೂ ಈಡೇರಿವೆ.  -ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬುದು ಅದಮ್ಯ ಚಲವಾಗಿತ್ತು. ಟೆಕ್ಸಾಸ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಪಾಕಿಸ್ತಾನದ ಶ್ರೇಷ್ಠ ರಾಜತಾಂತ್ರಿಕರಾದ ಜಫ್ರುಲ್ಲಾ ಖಾನ್ ಹಾಗೂ ಭಾರತದ ಬಿ.ಕೆ. ನೆಹರೂ ಬಂದಿದ್ದರು. ಅವರನ್ನು ಕಂಡ ನನಗೆ ವಿದೇಶಾಂಗ ವ್ಯವಹಾರಗಳ ಸಚಿವನಾಗಬೇಕೆಂಬ ಆಸೆ ಚಿಗುರೊಡೆದಿತ್ತು. ಥ್ಯಾಂಕ್ಸ್ ಟು ಸೋನಿಯಾ ಗಾಂಧಿ. ಆ ಎರಡೂ ಈಡೇರಿವೆ. ಇದಕ್ಕಿಂತ ಹೆಚ್ಚಿನದ್ದು ಇಲ್ಲ. ನಾನೀಗ ಆನಂದದ ಬದುಕು ಸಾಗಿಸುತ್ತಿರುವ ಹಿರಿಯ ಮುತ್ಸದ್ಧಿ.




ಪ್ರೊಡಕ್ಟಿವ್ ಇಯರ್ ಅಹೆಡ್
-    ನಿವೃತ್ತಿ ಎಂಬ ಪರಿಭಾಷೆ ಒಪ್ಪಿಕೊಳ್ಳುವುದಿಲ್ಲ. ನನಗೆ ಅದರಲ್ಲಿ ನಂಬಿಕೆ ಇಲ್ಲ. ಜನರಲ್ ಮೆಕಾರ್ಥರ್ ಹೇಳಿದ್ದು ಇನ್ನೂ ನೆನಪಿದೆ. ಒಬ್ಬ ಯೋಧ ಎಂದೂ ನಿವೃತ್ತನಾಗಲಾರ. ನನಗೆ ಇನ್ನೂ ಶಕ್ತಿ ಇದೆ. ಉತ್ಸಾಹವಿದೆ. ನನ್ನ ಬಯಕೆಗಳೆಲ್ಲ ಪೂರ್ಣಗೊಂಡಿದೆ ಎಂದ ಮಾತ್ರಕ್ಕೆ ಸುಮ್ಮನಿರಲಾಗುದು.
-    ಪ್ರತಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವನಾಗಿ ಅಷ್ಟೇ ಏಕೆ 50 ವರ್ಷಗಳ ನನ್ನ ರಾಜಕೀಯ ಅನುಭವವನ್ನು ಬಯಕೆ ತೀರಿದ ತಕ್ಷಣ ಮೂಲೆಗುಂಪು ಮಾಡಿಕೊಳ್ಳಲೇ? ಅದನ್ನು ಪಕ್ಷ ಹಿತಕ್ಕೆ ಧಾರೆ ಎರೆಯುತ್ತೇನೆ. ಅದು ನನ್ನ ಕರ್ತವ್ಯ. ಯೆಸ್ ಐ ಆಮ್ 80 ಇಯರ್ ಓಲ್ಡ್. ಇನ್ನು ಹಲವು ಪ್ರಗತಿದಾಯಕ ವರ್ಷಗಳು ಮುಂದಿವೆ. (ಐ ಸ್ಟಿಲ್ ಫೀಲ್ ಮೆನಿ ಮೆನಿ ಪ್ರೊಡಕ್ಟಿವ್ ಇಯರ್ ಅಹೆಡ್ ಆಫ್ ಮಿ)!



ಪರಮೇಶ್ವರ ಬಳಕೆಯಾಗಲಿ

ಪಕ್ಷ ತೀರಾ ಕಷ್ಟದಲ್ಲಿದ್ದಾಗ ಡಾ.ಜಿ. ಪರಮೇಶ್ವರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದರು. ಶ್ರಮವಹಿಸಿ ಪಕ್ಷ ಕಟ್ಟಿದ್ದಾರೆ. ಪಕ್ಷ ಅಧಿಕಾರಕ್ಕೆ ಬರುವುದರ ಹಿಂದೆ ಅವರ ವಿಶೇಷ ಶ್ರಮವಿದೆ. ದುರದೃಷ್ಟವಶಾತ್ ಸೋತರು. ಆದರೂ ಎದೆಗುಂದದೇ ಪಕ್ಷ ಹಿತಕ್ಕೆ ದುಡಿಯುತ್ತಿದ್ದಾರೆ. ಅವರ ಸೇವೆ ಪಕ್ಷಕ್ಕೆ ಮಾತ್ರವಲ್ಲ ರಾಜ್ಯಕ್ಕೂ ಬೇಕಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಣಯವಾಗುವ ವಿಶ್ವಾಸವಿದೆ.                 


 ಕಾಂಗ್ರೆಸ್ನಲ್ಲಿ ವಂಶಾಡಳಿತ ಇದೆ ಎಂಬುದನ್ನು ಒಪ್ಪುವುದಿಲ್ಲ. ಬಡತನ, ನಿರಕ್ಷರತೆ ಸೇರಿದಂತೆ ಹಲವು ಸಮಸ್ಯೆಗಳಿದ್ದರೂ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿವಿಗೆ ಕಾಂಗ್ರೆಸ್ ಕಾರಣ. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಪರಿಪೂರ್ಣವಾಗಿರಲ್ಲ.
- 129 ವರ್ಷಗಳ ಇತಿಹಾಸದ ಕಾಂಗ್ರೆಸ್, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಿವಾರಣೆಗೆ ಸದಾ ಪ್ರಯತ್ನಿಸುತ್ತಿದೆ. ಹೊರಗಿಂದ ನಿಮಗೆ ಗಾಂಧಿ ಕುಟುಂಬ ಕಾಂಗ್ರೆಸ್ ಮುನ್ನಡೆಸುತ್ತಿದೆ ಎಂದೆನಿಸಬಹುದು. ಆದರೆ ಹಾಗಲ್ಲ. ಇಲ್ಲಿ ಪ್ರಜಾಪ್ರಭುತ್ವದ ಆಶಯವಿದೆ. ಲಕ್ಷಾಂತರ ಕಾಂಗ್ರೆಸಿಗರ ಒಪ್ಪಿಗೆ ಮೇರೆಗೆ ವ್ಯವಸ್ಥೆ ಇದೆ. ಒಪ್ಪಿಗೆಯಾಗದವರಿಗೆ ವ್ಯವಸ್ಥೆಯಿಂದ ಹೋಗುವುದಕ್ಕೂ ಅವಕಾಶವಿದೆ.
ಮೋದಿ ಅಲೆಯಿಲ್ಲ
- ಬಿಜೆಪಿಯವರು ರಾಷ್ಟ್ರದಲ್ಲಿ ಮೋದಿ ಅಲೆ ಇದೆ ಎಂಬ ಭಾವನೆಯನ್ನು ಕೃತಕವಾಗಿ ಮೂಡಿಸುತ್ತಿದ್ದಾರೆ. ಇದು ಅವರ ಸೃಷ್ಟಿ. 2004ರಲ್ಲಿ ವಾಜಪೇಯಿ ಅವರ ಅಲೆ ಇದೆ ಎಂದಿದ್ರು, ಹುಸಿಯಾಯ್ತು. 2009ರಲ್ಲಿ ಆಡ್ವಾಣಿ ಅಂದ್ರು, ಹುಸಿಯಾಗಿದೆ. ಈಗ ಮೋದಿ ಹೇಳುತ್ತಿದ್ದಾರೆ ಅಷ್ಟೆ.
ಸರ್ಕಾರಕ್ಕೆ ಭೇಷ್
- ನಮ್ಮದು ಜನಪ್ರಿಯ ಸರ್ಕಾರ. ಜನಪ್ರಿಯ ಯೋಜನೆ ನೀಡುತ್ತೇವೆ. ಎಲ್ಲವೂ ನಮ್ಮ ಪ್ರಣಾಳಿಕೆಯ ಭಾಗ. ಸಿಎಂ ಸಿದ್ದರಾಮಯ್ಯ ಚೆನ್ನಾಗಿ ಸರ್ಕಾರ ನಡೆಸುತ್ತಿದ್ದಾರೆ. ತಕ್ಷಣಕ್ಕೆ ರಾಜ್ಯದಲ್ಲಿ ಇಂತಿಷ್ಟೇ ಸ್ಥಾನ ಗೆಲ್ಲುತ್ತೇವೆ ಎನ್ನುವುದಿಲ್ಲ. ನಾನಿನ್ನೂ ರಾಜ್ಯ ಪ್ರವಾಸ ಮಾಡಿಲ್ಲ. ಯುಗಾದಿ ಮರುದಿನ ಜಿಲ್ಲಾ ಪ್ರವಾಸ ಆರಂಭಿಸುತ್ತಿದ್ದೇನೆ. ಆಮೇಲೆ ಹೇಳುತ್ತೇನೆ.
ಆತ್ಮಾವಲೋಕನ ಅಗತ್ಯ
- ನನ್ನನ್ನು ಭ್ರಷ್ಟ ಎಂದು ಕರೆಯಬೇಡಿ ಎಂದು ಯಡಿಯೂರಪ್ಪ ಹೇಳಿರುವುದನ್ನು ಓದಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಅವರು ಪ್ರತಿಪಕ್ಷ ನಾಯಕ. ಆಗ ಅವರ ಭಾಷಣ ಇನ್ನೂ ನೆನಪಿದೆ. ಆದರೆ ಸಿಎಂ ನಂತರ ಜೈಲಿಗೆ ಹೋಗಿ ಬರಬೇಕಾಯಿತು. ನಮ್ಮ ರಾಜ್ಯದಲ್ಲಿ ಯಾರಿಗೂ ಈ ಸ್ಥಿತಿ ಬಂದಿರಲಿಲ್ಲ. ಅವರು ಅಂತಮುರ್ಖಿಯಾಗಿ ಆತ್ಮಾವಲೋಕನ ಮಾಡಿಕೊಳ್ಳಲಿ.



ಕೃಷ್ಣಯ್ಯ ಶೆಟ್ಟಿ ಲಾಡು ಕೊಟ್ಟಿಲ್ಲ
ಯಡಿಯೂರಪ್ಪ ಅವರನ್ನು ಜೈಲಿಗೆ ಹೋದವರು ಎಂದು ಹಂಗಿಸುವ ನಿಮ್ಮ ಪಕ್ಷದವರು ಕೃಷ್ಣಯ್ಯ ಶೆಟ್ಟಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ನೈತಿಕವಾಗಿ ಸರಿಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ವಿದೇಶಾಂಗ ಸಚಿವನಾಗಿದ್ದೆ. ಹೀಗಾಗಿ ಸ್ಥಳೀಯ ವಿದ್ಯಮಾನ ಪೂರ್ತಿ ಗೊತ್ತಿರಲಿಲ್ಲ. ಹೀಗಾಗಿ ಅವರ ಪರಿಚಯವಿಲ್ಲ. ಅವರೇನೋ ಗಂಗಾಜಲ ಕೊಟ್ಟರು, ಲಾಡು ಹಂಚಿದರು ಎಂಬ ಸುದ್ದಿ ಓದಿದ್ದೇನೆ. ಆದರೆ ನನಗೆ ಲಾಡು ಕೊಟ್ಟಿಲ್ಲ, ಪರಿಚಯವೂ ಇಲ್ಲ.

- ಸಂದರ್ಶನ: ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement