ಮೋದಿ ಬಯ್ಯುವ ಬಗೆ ಬಗೆ ಮಾರ್ಗಗಳ ಹುಡುಕಾಟ
ರಾಕೇಶ್ ಶ್ರೀವಾತ್ಸವ್ 24ರ ಹರೆಯದ ಹುಡುಗ. ಮಾಧ್ಯಮದ ವಿಶ್ಲೇಷಣೆ ಮತ್ತು ಬೌದ್ಧಿಕ...
ರಾಕೇಶ್ ಶ್ರೀವಾತ್ಸವ್ 24ರ ಹರೆಯದ ಹುಡುಗ. ಮಾಧ್ಯಮದ ವಿಶ್ಲೇಷಣೆ ಮತ್ತು ಬೌದ್ಧಿಕ ವಲಯದಲ್ಲಿ ಜಾಗ ಗಿಟ್ಟಿಸಿಕೊಳ್ಳುವುದು ಆತನ ಗುರಿ. ಉದಾರ/ ಜಾತ್ಯತೀತ ಮಾಧ್ಯಮದಲ್ಲಿ ಹೆಸರು ಮಾಡಬೇಕು ಎಂಬ ಅವರ ಆಸೆಗೆ ಈಗ ತೀವ್ರ ಆತಂಕ ಎದುರಾಗಿದೆ. ಅದೇನೆಂಬುದನ್ನು ಅವರ ಮಾತಿನಲ್ಲೇ ಕೇಳಿ.
'ವಿಶ್ಲೇಷಕನಾಗಿ ಗುರುತಿಸಿಕೊಳ್ಳಬೇಕಾದರೆ ನಾನು, ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಹೇಗೆ ಸೂಕ್ತರಲ್ಲ ಎಂಬ ಬಗ್ಗೆ ಲೇಖನ ಬರೆಯಬೇಕಿದೆ. ಮೋದಿಯವರನ್ನು ಇತಿಹಾಸದ ಪಾತ್ರಗಳೊಂದಿಗೆ ಹೋಲಿಸಿ ಹೊಸ ಬೆಳಕನ್ನು ಚೆಲ್ಲಬೇಕಾಗುತ್ತದೆ. ಆದರೆ ಈಗಾಗಲೇ ಸಾಕಷ್ಟು ಸೆಕ್ಯುಲರ್ ಪಂಡಿತರು ಮೋದಿಯವರನ್ನು ಹಿಟ್ಲರ್, ಮಾವೋರಿಗೆಲ್ಲ ಹೋಲಿಸಿಬಿಟ್ಟಿರುವುದರಿಂದ ಹೊಸದಾಗಿ ಬಯ್ಯುವುದು ಬಹಳ ತ್ರಾಸದಾಯಕ ಸಂಗತಿ' ಎಂದು ರಾಕೇಶ್ ಪರಿತಪಿಸಿದ್ದಾರೆ.
ಇದು ಕೇವಲ ರಾಕೇಶ ಒಬ್ಬರ ಸಮಸ್ಯೆ ಎಂದುಕೊಳ್ಳಬೇಡಿ. ಯುವ ಪತ್ರಕರ್ತರಾಗಲು ಇಚ್ಛಿಸುತ್ತಿರುವ ಬಹುತೇಕರ ಗೋಳು ಇದೇ ಆಗಿದೆ. ಅವರು ಹೊಸ ಹೊಸ ಮಾರ್ಗಗಳಿಗಾಗಿ ಹೆಣಗಾಡುತ್ತಿದ್ದಾರೆ. ತನ್ಯ ಶರ್ಮ ಎಂಬ ವಿದ್ಯಾರ್ಥಿನಿ ಹೀಗೆ ಹೇಳುತ್ತಾರೆ- 'ಮೋದಿಯವರನ್ನು ಇಂದಿರಾ ಗಾಂಧಿಯವರಿಗೆ ಹೋಲಿಸುವುದಕ್ಕೆ ನಾನು ಉತ್ಸುಕನಾಗಿದ್ದೇನೆ. ಅವರಂತೆ ಮೋದಿಯವರೂ ಸರ್ವಾಧಿಕಾರಿ ಮನೋಭಾವದವರು ಎಂದು ವಾದಿಸಲಿದ್ದೇನೆ. ಮೋದಿ ಸಹ ಪ್ರಧಾನಿಯಾದರೆ ಭವಿಷ್ಯತ್ತಿನಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಲಿದ್ದಾರೆ ಎಂದು ವಾದಿಸುವುದು ನನಗೇನೂ ಕಷ್ಟವಾಗದು. ಅಲ್ಲದೇ ಈ ಮೂಲಕ ಕಾಂಗ್ರೆಸ್ನಿಂದಲೂ ಅಂತರವನ್ನು ಕಾಯ್ದುಕೊಂಡು ನಿಷ್ಪಕ್ಷಪಾತಿ ಎಂದು ಕರೆಸಿಕೊಳ್ಳುವುದಕ್ಕೂ ಅನುವಾಗುತ್ತದೆ. ನನ್ನ ಆದರ್ಶವಾಗಿರುವ ಅರುಂಧತಿ ರಾಯ್ ಎತ್ತರಕ್ಕೆ ಏರುವಾಸೆ ನನ್ನದು' ಎಂದವರು ಹೇಳಿದ್ದರು.
ಆದರೆ ವಿಧಿ ವೈಪರೀತ್ಯ ನೋಡಿ! ಅದ್ಯಾವ ಅದ್ಭುತ ಕನಸನ್ನು ತನ್ಯ ಆಗಷ್ಟೇ ಆವಿರ್ಭವಿಸಿಕೊಂಡಿದ್ದರೋ, ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹ ಅವರು ಅದನ್ನು ಧೂಳಿಪಟ ಮಾಡಿಬಿಟ್ಟರು. ದಿ ಹಿಂದು ಪತ್ರಿಕೆಯಲ್ಲಿ ಮೋದಿ- ಇಂದಿರಾ ಹೋಲಿಕೆ ಮಾಡಿ ಅವರು ಅಂಕಣವನ್ನೇ ಬರೆದುಬಿಡಬೇಕೇ? ಅಷ್ಟೇ ಅಲ್ಲ ಇದೇ ಜಾಡಿನಲ್ಲಿ ಖ್ಯಾತ ಪತ್ರಕರ್ತೆ ಸಾಗರಿಕಾ ಘೋಷ್ ಅವರು ಲೇಖನ ಬರೆದುಬಿಟ್ಟಿದ್ದಾರೆ. ಬಹುಶಃ ಅವರಿಬ್ಬರೂ ಡಿನ್ನರ್ ಟೇಬಲ್ನಲ್ಲಿ ಮೋದಿಯವರನ್ನು ಬಯ್ಯುವುದು ಹೇಗೆಂದು ಗಂಟೆಗಟ್ಟಲೇ ಚರ್ಚಿಸಿ ನಂತರ ಹೋಗಿ ಟೈಪಿಸಿರಬಹುದು ಎಂದು ಅಂದಾಜಿಸಲಾಗಿದೆ.
ಎಲ್ಲ ಉದಯೋನ್ಮುಖರಿಗೂ ಇಂಥ ನಿರಾಶಾವಾದ ಕಾಡುತ್ತಿದೆ ಅಂತೇನೂ ಇಲ್ಲ. 29 ವರ್ಷದ ನಿರಾಕಾರ ಪಟೇಲ್ ಹೀಗೆ ಹೇಳುತ್ತಾರೆ- 'ಇದುವರೆಗೆ ಮೋದಿಯವರನ್ನು ಬಯ್ದಿರುವ ಎಲ್ಲ ಅಂಕಣಕಾರರೂ ಕೇವಲ 20ನೇ ಶತಮಾನದ ಸರ್ವಾಧಿಕಾರಿ ನಾಯಕರ ಉಪಮೆಯನ್ನು ಮಾತ್ರ ಬಳಸಿದ್ದಾರೆ. ಹಿಟ್ಲರ್, ಮಾವೊ, ಇಂದಿರಾ ಗಾಂಧಿ ಇವರೆಲ್ಲ ಹೆಸರನ್ನು ಆಗಲೇ ಬಳಸಿದ್ದರೆ ಏನಂತೆ? ಅದಕ್ಕೂ ಹಿಂದಿನ ಇತಿಹಾಸ ಪುರುಷರೊಂದಿಗೆ ಮೋದಿಯವರನ್ನು ಹೋಲಿಸಿ ಜರೆಯಲಿದ್ದೇನೆ. ಉದಾಹರಣೆಗೆ ಔರಂಗಜೇಬ. ಮೋದಿಯೂ ಗಡ್ಡ ಬಿಟ್ಟಿದ್ದಾರೆ ಹಾಗೂ ಔರಂಗಜೇಬನೂ ಗಡ್ಡ ಬಿಟ್ಟಿದ್ದ ಎಂಬುದನ್ನು ಗಮನಿಸಬಹುದು' ಎನ್ನುವ ಮೂಲಕ ಹೊಸ ಸಾಧ್ಯತೆಗಳತ್ತ ಆಶಾದಾಯಕ ದೃಷ್ಟಿ ಹರಿಸುತ್ತಾರೆ ನಿರಾಕಾರ್.
ಹೀಗೆ ಹೇಳಿದ ನಿರಾಕಾರರು ಹಲವು ದಿನಗಳಾದರೂ ಇಂಥ ಹೋಲಿಕೆ ಲೇಖನ ಬರೆಯಲಿಲ್ಲವಾದ್ದರಿಂದ ಕಾರಣ ವಿಚಾರಿಸಲಾಯಿತು. 'ಔರಂಗಜೇಬನು ಸೆಕ್ಯುಲರ್ ಎಂದೇ ಪರಿಗಣಿತವಾಗಿರುವುದರಿಂದ ಆತನನ್ನು ಮೋದಿಗೆ ಹೋಲಿಸಿದರೆ ಅಂಕಣಕಾರನ ಜಾತ್ಯತೀತ ವಿಶ್ವಾಸಾರ್ಹತೆಯೇ ಪ್ರಶ್ನೆಗೆ ಒಳಗಾಗಬಹುದು. ಹೀಗಾಗಿ ಇದಕ್ಕೆ ಹಲವು ಸೆಕ್ಯುಲರ್ ಪರ್ಯಾಯಗಳನ್ನು ಹುಡುಕಲಾಗಿದೆ' ಎಂದು ತಿಳಿದು ಬಂದಿದೆ. ಇವಾನ್ ದಿ ಟೆರಿಬಲ್, ಅಟಿಲಾ ದಿ ಹನ್ನಂಥ ಐತಿಹಾಸಿಕ ಸರ್ವಾಧಿಕಾರಿ ನಾಯಕರು ಸೇರಿದಂತೆ ಗಬ್ಬರ್ ಸಿಂಗ್ ಎಂಬ ಸಿನಿಮಾ ಪಾತ್ರಕ್ಕೂ ಮೋದಿಯವರನ್ನು ಹೋಲಿಸಲಾಗಿದೆ. ಮೋದಿ ಸಹ ಗಬ್ಬಾರ್ ಸಿಂಗ್ ರೀತಿಯಲ್ಲೇ ಗಡ್ಡ ಬಿಟ್ಟಿರುವುದನ್ನು ಕಾರಣವಾಗಿ ನೀಡಲಾಗಿದೆ. ಇದಿ ಅಮಿನ್ಗೆ ಮೋದಿಯವರನ್ನು ಹೋಲಿಸುವುದಾದರೆ ಇದಿ-ಮೋದಿ ಎಂದು ಪ್ರಾಸಬದ್ಧವಾಗಿ ಕರೆಯಬಹುದು ಎಂದೂ ಚಿಂತಿಸಲಾಗಿದೆ. ಜೋಕರ್ ಸಹ ಕೆಲವೊಮ್ಮೆ ಮೋದಿಯವರಂತೆ ನಗುವುದಾಗಿ ಭಾಸವಾಗುವುದರಿಂದ ಆ ಪಾತ್ರಕ್ಕೂ ಮೋದಿಯವರನ್ನು ಹೋಲಿಸಿ ತೆಗಳಬಹುದೆಂದು ಅವರು ಹೇಳುತ್ತಾರೆ.
ಇವುಗಳಲ್ಲಿ ಕೆಲ ಪಾತ್ರಗಳು ಕಲ್ಪನಾತ್ಮಕವಾಗಿ ಇವೆಯಲ್ಲ ಎಂಬ ಪ್ರಶ್ನೆಗೆ, 'ಒಂದು ಘನ ಉದ್ದೇಶಕ್ಕೆ ಕೆಲವು ಕಲ್ಪನೆಗಳನ್ನು ತೇಲಿಬಿಡುವುದರಿಂದ ಅಪಚಾರವಾಗದು' ಎಂದು ನಾರಾಕಾರ ಪಟೇಲರು ಸಮರ್ಥಿಸಿಕೊಂಡಿದ್ದಾರೆ.
(ಜನಪ್ರಿಯ ಜಾಲತಾಣ 'ಫೇಕಿಂಗ್ನ್ಯೂಸ್'ನಲ್ಲಿ ಪ್ರಕಟವಾಗಿರುವುದು)