ರಾಯಚೂರು: ಅಭ್ಯರ್ಥಿಗಳ ಕಸರತ್ತು ಜೋರು
ಬಿಸಿಲ ನಾಡು ರಾಯಚೂರಿನಲ್ಲಿ ಚುನಾವಣೆ ರಂಗು ನಿಧಾನವಾಗಿ ಏರತೊಡಗಿದೆ. ಕಳೆದ ವಿಧಾನ...
ಬಿಸಿಲ ನಾಡು ರಾಯಚೂರಿನಲ್ಲಿ ಚುನಾವಣೆ ರಂಗು ನಿಧಾನವಾಗಿ ಏರತೊಡಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೇವದುರ್ಗದಲ್ಲಿ ಸೋಲನುಭವಿಸಿದ್ದ ಕೆ. ಶಿವನಗೌಡ ನಾಯಕ ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ, ಕಾಂಗ್ರೆಸ್ನಿಂದ ಅವರ ಸಂಬಂಧಿ ಬಿ.ವಿ. ನಾಯಕ ಸ್ಪರ್ಧಿಸುತ್ತಿದ್ದಾರೆ. ಇನ್ನು ಬೆಳಗಾವಿಯ ಡಿ.ವಿ. ನಾಯಕ ಜೆಡಿಎಸ್ ಅಭ್ಯರ್ಥಿಯಾಗಿ ಸೆಣಸಾಡಲು ಸಜ್ಜಾಗಿದ್ದಾರೆ.
* ಮೋದಿ ಅಲೆ ಮೇಲೆಯೇ ಪ್ರಚಾರ ಮಾಡುವುದು ಸರಿಯೇ ?
ಸದ್ಯ ದೇಶಕ್ಕೆ ಸುಭದ್ರ ಸರ್ಕಾರದ ಅವಶ್ಯವಿದೆ. ದೇಶವನ್ನು ಎಲ್ಲ ರೀತಿಯಿಂದಲೂ ಕಾಯುವಂಥ ವ್ಯಕ್ತಿ ನರೇಂದ್ರ ಮೋದಿ. ಅವರು ಉತ್ತಮ ಆಡಳಿತಗಾರರು, ಸಮರ್ಥ ವ್ಯಕ್ತಿ ಎಂಬುದು ಗುಜರಾತ್ನಲ್ಲಿ ಸಾಬೀತಾಗಿದೆ. ಅವರಿಗೆ ಬೆಂಬಲವಾಗಿ ನಿಲ್ಲಲು ಮೋದಿ ಅವರ ನೆರಳಿನಲ್ಲಿಯೇ ಚುನಾವಣೆಯಲ್ಲಿ ಹೋರಾಟ ಮಾಡುತ್ತಿದ್ದೇವೆ.
* ವಿಧಾನಸಭೆ ಚುನಾವಣೆಯಲ್ಲಿ ಸೋತ ನಿಮ್ಮ ಮೇಲೆ ಮತದಾರರ ಒಲವಿದೆಯೇ?
ಮತದಾರರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಿರಸ್ಕರಿಸಿರಬಹುದು. ಆದರೆ, ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಬೇರೆ ಬೇರೆ. ಮತದಾರರು ತಮ್ಮ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ. ದೇವದುರ್ಗದಲ್ಲಿ ಕೋಟ್ಯಂತರ ರೂ. ವೆಚ್ಚದ ಕಾಮಗಾರಿಗಳನ್ನು ಸಚಿವನಾಗಿದ್ದಾಗ ಜಾರಿಗೆ ತಂದಿದ್ದೇನೆ. ಮತದಾರರು ಅದನ್ನು ಕಂಡಿದ್ದಾರೆ. ಸಹಜವಾಗಿಯೇ ನನ್ನನ್ನು ಬೆಂಬಲಿಸಲಿದ್ದಾರೆಂಬ ವಿಶ್ವಾಸವಿದೆ.
* ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಏನೇನಾಗಬೇಕಿದೆ?
ಕ್ಷೇತ್ರದಲ್ಲಿ ಕುಡಿವ ನೀರಿನ ಸಮಸ್ಯೆಯಿದೆ. ವಿದ್ಯುತ್ ಕೊರತೆ, ರೇಲ್ವೆ ಸಂಪರ್ಕ ಎಲ್ಲ ತಾಲೂಕುಗಳಿಗಿಲ್ಲ. ಅದರಿಂದ ಪ್ರಗತಿ ನಿಂತ ನೀರಾಗಿದೆ. ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಕ್ಷೇತ್ರದ ಬಹುಭಾಗ ಸಂಪರ್ಕಿಸಬೇಕಿದೆ. ಐಐಟಿ ಸಂಸ್ಥೆಯ ಸ್ಥಾಪನೆಯಾಗಬೇಕಿದೆ. ಇನ್ನುಳಿದಂತೆ ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿನ ಯಾದಗಿರಿ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಗತಿಯಾಗಿಲ್ಲ. ಅತ್ತ ಗಮನ ಹರಿಸುವುದು ಅವಶ್ಯ.
* ಯಾವ ಆಧಾರದಲ್ಲಿ ಚುನಾವಣೆ ಎದುರಿಸುತ್ತೀರಿ?
ಲೋಕಸಭೆ ಕ್ಷೇತ್ರದ ಹಿಂದುಳಿಯುವಿಕೆಗೆ ಇದುವರೆಗೆ ಕ್ಷೇತ್ರ ಪ್ರತಿನಿಧಿಸಿದ ಎಲ್ಲರೂ ಹೊಣೆಗಾರರು. ಅಧಿಕಾರ ಎಂಬುದು ಈವರೆಗೆ ಒಂದೇ ಕುಟುಂಬದ ಕೈಯಲ್ಲಿತ್ತು. ಹಾಗಾಗಿ ಅಭಿವೃದ್ಧಿ ಎಂಬುದು ಗೌಣ ಎನಿಸಿದೆ. ಈ ಹಿನ್ನೆಲೆಯಲ್ಲಿ ಮತದಾರರಲ್ಲಿ ಉತ್ತಮ ವಿಚಾರ, ಅಭಿವೃದ್ಧಿ ಪರ ಚಿಂತನೆಗಳನ್ನು ಮುಂದಿರಿಸಿ ಮತ ಕೇಳುತ್ತೇನೆ.
ಭ್ರಷ್ಟಾಚಾರದ ಆರೋಪ ಸಹಜ. ಆದರೆ, ಸಾಕ್ಷ್ಯಾಧಾರಗಳಿಲ್ಲದೇ ಮಾಡುವ ಆರೋಪಕ್ಕೆ ಬೆಲೆ ಇರುವುದಿಲ್ಲ. ಸುಳ್ಳು ಆರೋಪ ಹೊರಿಸುವ ಮೂಲಕ ವಾಸ್ತವಾಂಶ ಮುಚ್ಚಿಡಲಾಗದು ಎಂಬ ಸತ್ಯವನ್ನು ವಿರೋಧಿಗಳು ಅರಿಯಬೇಕಿದೆ.
- ಶಿವನಗೌಡ ನಾಯಕ
* ಲೋಕಸಭೆ ಚುನಾವಣೆಗೆ ಮೊದಲ ಬಾರಿ ಸ್ಪರ್ಧೆ ಬಗ್ಗೆ ಏನನಿಸುತ್ತದೆ?
ರಾಜಕೀಯ ಕ್ಷೇತ್ರ ನನಗೆ ಹೊಸದೇನಲ್ಲ. ತಂದೆ ವೆಂಕಟೇಶ ನಾಯಕ ಅವರ ನೆರಳಿನಲ್ಲಿಯೇ ರಾಜಕೀಯದ ಎಲ್ಲ ಏಳು ಬೀಳುಗಳನ್ನು ಕಂಡಿದ್ದೇನೆ. ಕಳೆದ ಬಾರಿ ವಿಧಾನಸಭೆಗೆ ಸ್ಪರ್ಧಿಸಿದಾಗ ಸೋಲಾಗಿತ್ತು. ಲೋಕಸಭೆ ಚುನಾವಣೆಗೆ ಕಣಕ್ಕಿಳಿದಿದ್ದು ದೊಡ್ಡ ಜವಾಬ್ದಾರಿ. ಪಕ್ಷ ಅಂಥ ಅವಕಾಶ ಕೊಟ್ಟಿದೆ. ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಗೆಲವು ಕಾಣುವ ವಿಶ್ವಾಸವಿದೆ.
* ನಿಮ್ಮ ಕುಟುಂಬಕ್ಕೆ ಮತ್ತೆ ಮತ್ತೆ ಸ್ಪರ್ಧೆಗೆ ಪಕ್ಷ ಅವಕಾಶ ನೀಡುತ್ತಿರುವುದು ಸರಿಯೇ?
ಕಾಂಗ್ರೆಸ್ಗೆ ಇಡೀ ಕುಟುಂಬ ನಿಷ್ಠೆ ಮತ್ತು ಪ್ರಾಮಾಣಿಕತೆ ಪ್ರದರ್ಶಿಸಿದೆ. ಹಾಗಾಗಿ ಸಹಜವಾಗಿಯೇ ಅವಕಾಶಗಳು ದೊರೆಯುತ್ತವೆ. ಪಕ್ಷಾಂತರಿಗಳಿಗೆ ಯಾವ ಪಕ್ಷದಲ್ಲಿಯೂ ಇಂಥ ಅವಕಾಶ ದೊರೆಯುವುದಿಲ್ಲ. ಒಂದೇ ಪಕ್ಷದಲ್ಲಿದ್ದರೆ ಉನ್ನತ ಸ್ಥಾನ ಹಾಗೂ ಸ್ಪರ್ಧೆಗೆ ಅವಕಾಶ ದೊರೆಯುತ್ತದೆ ಎಂಬುದಕ್ಕೆ ನಮ್ಮ ಕುಟುಂಬವೇ ಸಾಕ್ಷಿ. ಇದನ್ನು ಕುಟುಂಬ ರಾಜಕಾರಣ ಎನ್ನಲಾಗದು.
* ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಅನುಕಂಪವಿದೆಯೇ?
ಕಳೆದ 2008ರಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ನನಗೆ ಸೋಲಾಗಿತ್ತು. ಆದರೆ, ಅದಕ್ಕೆ ಆಗ ಮತದಾರರು ಆಗಿನ ಆಡಳಿತಾರೂಢ ಸರ್ಕಾರದ ಪರ ಬೆಂಬಲ ವ್ಯಕ್ತಪಡಿಸಿದ್ದರು. ಆನಂತರ ಕ್ಷೇತ್ರದ ಮತದಾರರಲ್ಲಿ ಕಾಂಗ್ರೆಸ್ಪರ ಒಲವು ಮೂಡಿದೆ. ಹಾಗಾಗಿಯೇ ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲವಾಗಿದೆ. ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ಗೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ.
* ಮೋದಿ ಅಲೆಯಿಂದ ಹಿನ್ನಡೆಯಾಗಬಹುದೇ?
ಮೋದಿ ಅಲೆಯೆಂಬುದೇ ಇಲ್ಲ. ಅದು ಬಿಜೆಪಿಯ ಸೃಷ್ಟಿ. ಮತದಾರರಲ್ಲಿ ಮೋದಿ ಅಲೆಯೆಂಬ ಭ್ರಮೆ ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ ಮೋದಿಯ ಪ್ರಭಾವವಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದು, ಮತದಾರರು ಕಾಂಗ್ರೆಸ್ಸನ್ನು ಅಭಿವೃದ್ಧಿ ದೃಷ್ಟಿಯಿಂದ ಬೆಂಬಲಿಸಲಿದ್ದಾರೆ. ರಾಯಚೂರು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪರ ಒಲವಿದೆ. ಯಾವುದೇ ರೀತಿಯ ಹಿನ್ನಡೆಯಾಗದು ಎಂಬುದು ನನ್ನ ವಿಶ್ವಾಸ.
ನಾನು ಸ್ಥಳೀಯನಾಗಿದ್ದು, ಮತದಾರರ ನಿರಂತರ ಸಂಪರ್ಕದಲ್ಲಿರುವುದರಿಂದ ಜನತೆಯ ಸಮಸ್ಯೆಗಳು ಪರಿಹಾರ ಕಾಣಲಿವೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಹುಟ್ಟಿ ಬೆಳೆದಿದ್ದು, ಸಮಸ್ಯೆಗಳ ಅರಿವಿದೆ. ಹಾಗಾಗಿ ಮತದಾರರ ಬೆಂಬಲ ಕೋರುವೆ.
- ಬಿ.ವಿ. ನಾಯಕ
* ಹೊರ ಜಿಲ್ಲೆಯಿಂದ ವಲಸೆ ಬಂದು ಸ್ಪರ್ಧಿಸಿದ್ದೀರಿ. ಈ ಬಗ್ಗೆ ಅಳುಕಿದೆಯೇ?
ಬೆಳಗಾವಿ ಬಿಟ್ಟು ರಾಯಚೂರಿನಲ್ಲಿ ಸ್ಪರ್ಧಿಸಿದ್ದಕ್ಕೆ ಯಾವುದೇ ರೀತಿಯ ಅಳುಕಿಲ್ಲ. ನಾನು ಸರ್ಕಾರಿ ಸೇವೆಯಲ್ಲಿದ್ದಾಗಲೇ ಕೊಪ್ಪಳ, ಬಳ್ಳಾರಿ, ಗುಲ್ಬರ್ಗ ಮತ್ತಿತರೆಡೆ ಸುದೀರ್ಘ ಸೇವೆ ಸಲ್ಲಿಸಿದ್ದು, ಬಹುತೇಕ ಎಲ್ಲರಿಗೂ ಪರಿಚಿತನಾಗಿದ್ದೇನೆ. ಸರ್ಕಾರದ ನಾನಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರಿಂದ ಅನೇಕರ ಪರಿಚಯವಿದೆ. ಹಾಗಾಗಿ ಅಂಥ ಅಳುಕಿಲ್ಲ.
* ಕ್ಷೇತ್ರದಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಹೋರಾಡುತ್ತಿದೆ. ಚುನಾವಣೆ ಹೇಗೆ ಎದುರಿಸುತ್ತೀರಿ?
ಪಕ್ಷಕ್ಕೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಳ್ಳೆಯ ಹೆಸರಿದೆ. ಮಾಜಿ ಪ್ರಧಾನಿ ದೇವೇಗೌಡರಿಂದಾಗಿಯೇ ಕೃಷ್ಣಾ ನೀರಾವರಿ ಯೋಜನೆಯಡಿ ಕ್ಷೇತ್ರದ ಬಹುಭಾಗಕ್ಕೆ ನೀರಾವರಿ ಸೌಲಭ್ಯ ದೊರೆತಿದೆ ಎಂಬುದು ಮತದಾರರಿಗೆ ಗೊತ್ತಿದೆ. ಹಾಗಾಗಿ ಮತದಾರರು ಸಹಜವಾಗಿಯೇ ಜೆಡಿಎಸ್ ಪರವಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಪಕ್ಷದ ನಾಯಕರೂ ಸಮರ್ಥರಿದ್ದು, ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸಲಿದ್ದು, ಮತದಾರರು ಕೈಹಿಡಿಯುವ ಎಲ್ಲ ಸಾಧ್ಯತೆಯಿದೆ ಎಂದು ನಂಬಿದ್ದೇನೆ.
* ಮೋದಿ ಅಲೆ ನಿಮ್ಮ ಹಿನ್ನಡೆಗೆ ಕಾರಣವಾಗಬಲ್ಲುದೇ?
ದೇಶದಲ್ಲಿ ನರೇಂದ್ರ ಮೋದಿ ಎಂಬುದು ಬಿಜೆಪಿಯ ಕಲ್ಪನೆಯಷ್ಟೇ. ವಾಸ್ತವದಲ್ಲಿ ಅಂಥ ಯಾವುದೇ ಅಲೆಯಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿಯೂ ಬಿಜೆಪಿ ಅಭ್ಯರ್ಥಿ ಸಹ ಮೋದಿ ಹೆಸರಿನಲ್ಲಿಯೇ ಪ್ರಚಾರ ಮಾಡುತ್ತಿದ್ದಾರೆಯೇ ವಿನಃ ಹೊಸ ಆಲೋಚನೆಗಳಿಲ್ಲ. ಕಾಂಗ್ರೆಸ್ ಪಕ್ಷವು ಕಳೆದ ಅನೇಕ ದಶಕಗಳಿಂದ ಒಂದೇ ಕುಟುಂಬಕ್ಕೆ ಸ್ಪರ್ಧೆಗೆ ಅವಕಾಶ ನೀಡಿದೆ. ಇಲ್ಲಿ ಮತದಾರರು ಕಾಂಗ್ರೆಸ್ ಮತ್ತು ಬಿಜೆಪಿಯವರನ್ನು ಕಂಡು ಬೇಸತ್ತಿದ್ದು, ಜೆಡಿಎಸ್ಗೆ ಬೆಂಬಲ ನೀಡುವುದು ನಿಶ್ಚಿತ.
* ಕ್ಷೇತ್ರದ ಬಗ್ಗೆ ಪರಿಚಯವಿದೆಯೇ, ಇಲ್ಲಿನ ಸಮಸ್ಯೆಗಳ ಬಗ್ಗೆ ಗೊತ್ತಿದೆಯೇ?
ಈ ಭಾಗಗಳಲ್ಲಿ ಸರ್ಕಾರದ ನಾನಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಆಗಲೇ ಇಲ್ಲಿನ ಸಮಸ್ಯೆಗಳು, ಜನರ ನಾಡಿಮಿಡಿತ ಗೊತ್ತಾಗಿತ್ತು. ಈಗ ಅದು ನೆರವಿಗೆ ಬರಲಿದೆ. ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಗ್ರಾಮೀಣ ಸಂಪರ್ಕದ ತೊಂದರೆಯಂಥ ವಿಚಾರಗಳು ಗೊತ್ತಿವೆ. ಆಯ್ಕೆಯಾದರೆ ಸೇವಾನುಭವ ಹಾಗೂ ಆಡಳಿತದೊಂದಿಗಿನ ಸಂಪರ್ಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ.
ಪಕ್ಷವು ಈ ಮೊದಲು ರಾಜಾ ಅಮರೇಶ್ವರ ನಾಯಕರ ಹೆಸರು ಅಂತಿಮಗೊಳಿಸಿದ್ದು ಗೊತ್ತಿತ್ತು. ಆದರೆ, ಸ್ಪರ್ಧೆಗೆ ಅವರು ನಿರಾಕರಿಸಿದ್ದರಿಂದ ಪಕ್ಷದ ಸೂಚನೆ ಮೇರೆಗೆ ಕಣಕ್ಕಿಳಿದಿರುವೆ. ನಾನು ಪರ್ಯಾಯ ಅಭ್ಯರ್ಥಿಯೇನಲ್ಲ.
- ಡಿ.ವಿ. ನಾಯಕ
ಸಂದರ್ಶನ : ಸೋಮರಡ್ಡಿ ಅಳವಂಡಿ